ಯೋಧರ ಜಿಲ್ಲೆ ಕೊಡಗಿಗೆ ಜನರಲ್ ತಿಮ್ಮಯ್ಯ ಮ್ಯೂಸಿಯಂನ ಉದ್ಘಾಟನಾ ಕಾರ್ಯಕ್ರಮಕ್ಕಾಗಿ ದೇಶದ ಪ್ರಥಮ ಪ್ರಜೆಯಾದ, ರಕ್ಷಣಾ ಪಡೆಗಳ ಮುಖ್ಯಸ್ಥರೂ ಆಗಿರುವ ರಾಷ್ಟಪತಿ ರಾಮನಾಥ್ ಕೋವಿಂದ್ ಅವರ ಆಗಮನದ ಹಿನ್ನೆಲೆಯಲ್ಲಿ ಸಕಲ ಸಿದ್ದತೆಗಳೂ ನಡೆಯುತ್ತಿವೆ. ತಾ. 6 ರಂದು ರಾಷ್ಟಪತಿ ರಾಮನಾಥ್ ಕೋವಿಂದ್, ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್ ಸೇರಿದಂತೆ ಗಣ್ಯಾತಿಗಣ್ಯರ ಆಗಮನವಾಗುತ್ತಿದ್ದು, ಈ ಕಾರ್ಯಕ್ರಮದ ಯಶಸ್ಸಿಗಾಗಿ ಜಿಲ್ಲಾಡಳಿತ ಹಗಲಿರುಳೂ ಶ್ರಮಿಸುತ್ತಿದೆ. ರಾಷ್ಟಪತಿಗಳು ಕೊಡಗಿನ ಪವಿತ್ರ ತೀರ್ಥ ಕ್ಷೇತ್ರವಾದ ತಲಕಾವೇರಿಗೂ ಭೇಟಿ ನೀಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಮಡಿಕೇರಿ, ತಲಕಾವೇರಿ, ಭಾಗಮಂಡಲ ವ್ಯಾಪ್ತಿಯಲ್ಲಿ ಸೂಕ್ತ ಮುಂಜಾಗ್ರತಾ ಕ್ರಮಗಳು ಮಾತ್ರವಲ್ಲ ಇನ್ನಿತರ ಅಗತ್ಯ ವ್ಯವಸ್ಥೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸೇರಿದಂತೆ ಇತರ ಸಂಘ – ಸಂಸ್ಥೆಗಳ ಮೂಲಕವೂ ಬಿರುಸಿನ ಕೆಲಸ ಕಾರ್ಯಗಳು ಜರುಗುತ್ತಿವೆ .ರಾಷ್ಟ್ರಪತಿ ಹಾಗೂ ಸೇನಾ ಮುಖ್ಯಸ್ಥರ ಭೇಟಿಯ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯ ಕಾರಣದಿಂದಾಗಿ ಈಗಾಗಲೇ ರಕ್ಷಣಾ ಪಡೆಗೆ ಸಂಬಂಧಿಸಿದ ‘ಹೆಲಿಕಾಪ್ಟರ್’ಗಳ ಹಾರಾಟ ಒಂದೆಡೆಯಾದರೆ, ಎಲ್ಲಡೆ ಕಟ್ಟೆಚ್ಚರ ವಹಿಸುವ ನಿಟ್ಟಿನಲ್ಲಿ ರಾಜ್ಯ ಪೊಲೀಸ್ ಇಲಾಖೆಯೂ ಕರ್ತವ್ಯನಿರತವಾಗಿದೆ. ಚೆಟ್ಟಿಮಾನಿ, ಭಾಗಮಂಡಲ ಹಾಗೂ ಮಡಿಕೇರಿಯಲ್ಲಿ ಹೆಲಿಪ್ಯಾಡ್ಗಳನ್ನು ಗುರುತಿಸಲಾಗಿದೆ. ರಾಷ್ಟಪತಿಗಳ ತಂಡದ ವಾಹನಗಳ ಓಡಾಟಕ್ಕೆ ಸಂಬಂದಿಸಿದಂತೆ ರಾಜ್ಯದ ಕಾನೂನು ಸುವ್ಯವಸ್ಥೆ ವಿಭಾಗದ ಎ.ಡಿ.ಜಿ.ಪಿ.ಯಾಗಿರುವ ಪ್ರತಾಪ್ ರೆಡ್ಡಿ , ಐಜಿಪಿ ಪ್ರವೀಣ್ ಮಧುಕರ್ ಪವಾರ್, ಜಿಲ್ಲಾ ಎಸ್ಪಿ ಕ್ಷಮಾಮಿಶ್ರಾ ಅವರುಗಳನ್ನು ಒಳಗೊಂಡಂತೆ ಸಭೆಯನ್ನು ನಡೆಸಿದ್ದು, ಸೂಕ್ತ ಕ್ರಮ ಅನುಸರಿಸಲಾಗುತ್ತಿದೆ. ಇಂದು ಪೊಲೀಸ್ ತಂಡ ಹಲವೆಡೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ರಾಷ್ಟಪತಿಗಳು ಹೆಲಿಕಾಪ್ಟರ್ನಲ್ಲಿ ಬಂದಿಳಿಯುವ ಸ್ಥಳ, ಅಲ್ಲಿಂದ ಅವರು ಸಂಚರಿಸುವ ಮಾರ್ಗ, ನಿಗದಿತ ಕಾರ್ಯಕ್ರಮಗಳು ಇರುವ ಪ್ರದೇಶಗಳಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗುತ್ತಿದೆ. ಈಗಾಗಲೇ ಕಾನ್ವಾಯ್ ತೆರಳುವ ಮಾರ್ಗದಲ್ಲಿ ರಸ್ತೆ ಬದಿಯಲ್ಲಿ ವಾಹನ ನಿಲುಗಡೆಗಳ ನಿಷೇಧ, ಅಂಗಡಿ ಮುಂಗಟ್ಟುಗಳನ್ನು ಗಣ್ಯರು ಆಗಮಿಸುವ ಮುಂಚಿತವಾಗಿ ಆರಂಭಿಸಿ ಅವರು ಹಿಂತಿರುಗುವವರೆಗೂ ಮುಚ್ಚುವಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಕೂಡ ಆದೇಶ ಹೊರಡಿಸಿದ್ದಾರೆ.
ಅಂಗಡಿ ಮುಚ್ಚಲು ಜಿಲ್ಲಾಡಳಿತ ಆದೇಶ: ಆಕ್ರೋಶ ವ್ಯಕ್ತ
ಆದರೆ ರಾಷ್ಟ್ರಪತಿಗಳು ಸಂಚರಿಸುವ ಮಾರ್ಗದುದ್ದಕ್ಕೂ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಜಿಲ್ಲಾಡಳಿತ ಹೊರಡಿಸಿರುವ ಆದೇಶಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಸಾಮಾಜಿಕ ತಾಣಗಳಾದ ಫೇಸ್ ಬುಕ್ , ವಾಟ್ಸ್ ಅಪ್ ನಲ್ಲಿ ಈ ಆದೇಶವನ್ನು ವಿರೋಧಿಸಿ ನೂರಾರು ಕಮೆಂಟ್ ಗಳು ಬರುತ್ತಿವೆ. ಬರುತ್ತಿರುವುದು ರಾಷ್ಟ್ರಪತಿಯೋ ಅಥವಾ ಹಿಟ್ಲರೋ ಎಂದು ಒಬ್ಬರು ಕಮೆಂಟಿಸಿದ್ದು ಮತ್ತೊಬ್ಬರು ಈ ಹಿಂದೆ ರಾಜ ಮಹಾರಾಜರು ಬರುತಿದ್ದಾಗ ಜನರೆಲ್ಲ ಮನೆ ಮುಂದೆ ರಂಗೋಲಿ ಇಟ್ಟು ಅವರು ಹಾದು ಹೋಗುವಾಗ ಹೂವು ಚೆಲ್ಲಿ ನಮಸ್ಕರಿಸುತಿದ್ದರು. ಇದಾವ ರೀತಿಯ ದಿಗ್ಭಂಧನ ಎಂದು ಕಮೆಂಟಿಸಿದ್ದಾರೆ. ಅಲ್ಲದೆ ಈ ಮಾರ್ಗದಲ್ಲಿ ಜನರ ಓಡಾಟ , ವಾಹನಗಳ ಓಡಾಟಕ್ಕೂ ನಿರ್ಬಂಧ ವಿಧಿಸಲಾಗಿದೆ. ಇದಕ್ಕೂ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಕೊರೋನಾ ಕಾರಣದಿಂದ ಲಾಕ್ ಡೌನ್ ಅಗಿದ್ದು ಈಗ ವಹಿವಾಟು ಒಂದಷ್ಟು ಚೇತರಿಸಿಕೊಳ್ಳುತ್ತಿದೆ. ಅದರಲ್ಲೂ ಜಿಲ್ಲೆಗೆ ವೀಕೆಂಡ್ ಗಳಲ್ಲಿ ಮಾತ್ರ ಪ್ರವಾಸಿಗರು ಆಗಮಿಸುತಿದ್ದು ಶನಿವಾರ ಬಂದ್ ಮಾಡಿದರೆ ವಾರಾಂತ್ಯದ ವ್ಯಾಪಾರ ಇಲ್ಲದಂತಾಗುತ್ತದೆ ಎಂದು ಫ್ಯಾನ್ಸಿ ಸ್ಟೋರ್ ಅಂಗಡಿ ಮಾಲೀಕರೊಬ್ಬರು ಹೇಳಿದರು. ಅಂಗಡಿಗಳನ್ನೆಲ್ಲ ಮುಚ್ಚಿದರೆ ರಾಷ್ಟ್ರಪತಿಗಳಿಗೆ ನಗರ ಹೇಗಿದೆ ಎಂಬ ಪರಿಚಯವೇ ಆಗುವುದಿಲ್ಲ. ಈ ಹಿಂದೆ ಎಪಿಜೆ ಕಲಾಂ ಅವರೂ ಜಿಲ್ಲೆಗೆ ಆಗಮಿಸಿದ್ದರು. ಆಗ ಈ ರೀತಿಯ ನಿರ್ಬಂಧ ವಿಧಿಸಿರಲಿಲ್ಲ ಎಂದು ಮತ್ತೊಬ್ಬ ವ್ಯಾಪಾರಿ ಹೇಳಿದರು.
ಮತ್ತೊಂದೆಡೆ ಕಾರ್ಯಕ್ರಮದ ಪ್ರಮುಖ ಕೇಂದ್ರವಾಗಿರುವ ಮ್ಯೂಸಿಯಂ ಸ್ಥಳವಾದ ಸನ್ನಿಸೈಡ್ ಆವರಣ ಇದೀಗ ನವವಧುವಿನಂತೆ ಶೃಂಗಾರಗೊಳ್ಳುತ್ತಿದೆ. ಸೇನೆಗೆ ಸಂಬಂಧಿಸಿದ ವಿಚಾರ ಧಾರೆಗಳನ್ನು ಪ್ರತಿಬಿಂಬಿಸುವ ಕೇಂದ್ರ ಇದಾಗಿರುವದರಿಂದ ಈಗಾಗಲೇ ಎಂ.ಇ.ಜಿ. ತಂಡದ ಹಲವು ಸಿಬ್ಬಂದಿಗಳು ಎಂಟತ್ತು ದಿವಸಗಳಿಂದ ಜಿಲ್ಲೆಯಲ್ಲೇ ಕರ್ತವ್ಯಕ್ಕೆ ನಿಯೋಜಿತರಾಗಿದ್ದಾರೆ. ಈ ತಂಡದ ಸದಸ್ಯರು ಇಡೀ ಸನ್ನಿಸೈಡ್ ಅನ್ನು ಸುಂದರವಾಗಿಸುತ್ತಿದ್ದಾರೆ. ಯುದ್ಧ ವಿಮಾನ, ಟ್ಯಾಂಕರ್ಗಳಿಗೆ ಪೈಂಟಿಂಗ್ ಮಾಡುತ್ತಿರುವದು, ಒಳಾಂಗಣದ ಸ್ವಚ್ಛತೆ ಅಲಂಕಾರ ಮತ್ತಿತರ ಕೆಲಸಗಳು ಈ ತಂಡದಿಂದ ನಿರ್ವಹಿಸಲ್ಪಡುತ್ತಿದೆ.
ರಾಷ್ಟಪತಿ ರಾಮನಾಥ್ ಕೋವಿಂದ್ ಆಗಮನದ ಹಿನ್ನೆಲೆಯಲ್ಲಿ ಅವರು ಸಂಚರಿಸುವ ಮಾರ್ಗದಲ್ಲಿನ ಎಲ್ಲಾ ಅಂಗಡಿಗಳು ಸೇರಿದಂತೆ ರಸ್ತೆ ಬದಿಯ ಮನೆಗಳೂ ಮುಚ್ಚಬೇಕಾಗಿ ಶಿಷ್ಟಾಚಾರ ಇರುವುದಾಗಿ ನಗರಸಭೆ ಪೌರಾಯುಕ್ತ ರಾಮ್ದಾಸ್ ಅವರು ಮಾಹಿತಿ ನೀಡಿದರು. ರಾಷ್ಟಪತಿಗಳು ಸಂಚರಿಸುವ ಸಂದರ್ಭ ಈ ಮಾರ್ಗದಲ್ಲಿನ ಅಂಗಡಿಗಳು ಮುಚ್ಚಿರಬೇಕಾಗುತ್ತದೆ. ಅದೇ ರೀತಿ ರಸ್ತೆ ಬದಿಯ ಮನೆಗಳ ಪ್ರವೇಶದ ಬಾಗಿಲು ರಸ್ತೆಗೆ ಮುಖ ಮಾಡಿದ್ದರೆ, ರಾಷ್ಟಪತಿಗಳು ರಸ್ತೆಯಲ್ಲಿ ಸಂಚರಿಸುವ ವೇಳೆ ನಿವಾಸಿಗಳು ಮನೆಯ ಹಿಂಭಾಗದ ಪ್ರವೇಶ ಬಳಸಬೇಕಾಗುತ್ತದೆ. ರಸ್ತೆ ಮುಖಿಯಾಗಿ ಒಂದೇ ಭಾಗಿಲಿದ್ದಲ್ಲಿ ರಾಷ್ಟಪತಿ ಹಿಂತೆರಳುವವರೆಗೆ ಇದನ್ನು ಬಳಸಬಾರದು. ಅವರುಗಳ ಆಗಮನದ ಸಮಯ ಕುರಿತು ಧ್ವನಿವರ್ಧಕಗಳ ಮುಖೇನ ಸಂದೇಶ ನೀಡಲಾಗುವುದಾಗಿ ಪೌರಾಯುಕ್ತ ರಾಮ್ದಾಸ್ ಅವರು ಮಾಹಿತಿ ನೀಡಿದರು. ರಾಷ್ಟಪತಿಗಳು ಸಂಚರಿಸುವ ಮಾರ್ಗದಲ್ಲಿ ಬೀಡಾಡಿ ದನಗಳು ಸೇರಿದಂತೆ ನಾಯಿಗಳು ಇರಬಾರದೆಂದು ಪೊಲೀಸ್ರು ಸೂಚನೆ ನೀಡಿರುವುದಾಗಿ ರಾಮ್ದಾಸ್ ಅವರು ಹೇಳಿದರು.