ಮೈಸೂರು: ಹುಣಸೂರು(Hunasuru) ನಗರದ ಬಸ್ ನಿಲ್ದಾಣದ ಹಿಂದಿರುವ ‘ಸ್ಕೈ ಗೋಲ್ಡ್ ಅಂಡ್ ಡೈಮಂಡ್’ ಚಿನ್ನಾಭರಣ ಮಳಿಗೆಯಲ್ಲಿ ಸಿನಿಮಾ ಶೈಲಿಯ ಭೀಕರ ದರೋಡೆ ನಡೆದಿದೆ. ಬೈಕ್‌ಗಳಲ್ಲಿ ಬಂದಿದ್ದ ಐವರು ಮುಸುಕುದಾರಿಗಳು ಮಳಿಗೆಗೆ ನುಗ್ಗಿ, ಮ್ಯಾನೇಜರ್ ಮೇಲೆ ದಾಳಿ ನಡೆಸಿ ಸುಮಾರು 4 ರಿಂದ 5 ಕೋಟಿ ರೂಪಾಯಿ ಮೌಲ್ಯದ ಚಿನ್ನ ಹಾಗೂ ವಜ್ರಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.

ಶನಿವಾರ ಮಧ್ಯಾಹ್ನದ ವೇಳೆಗೆ ಈ ಘಟನೆ ನಡೆದಿದ್ದು, ಮಳಿಗೆಯೊಳಗೆ ಗ್ರಾಹಕರು ಹಾಗೂ ಸಿಬ್ಬಂದಿ ಇದ್ದ ಸಮಯದಲ್ಲೇ ದುಷ್ಕರ್ಮಿಗಳು ದಾಳಿ ನಡೆಸಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ. ಮುಖಕ್ಕೆ ಮಾಸ್ಕ್ ಹಾಗೂ ಹೆಲ್ಮೆಟ್ ಧರಿಸಿದ್ದ ಐವರು ಆರೋಪಿಗಳು ಎರಡು ಬೈಕ್‌ಗಳಲ್ಲಿ ಸ್ಥಳಕ್ಕೆ ಆಗಮಿಸಿ, ಏಕಾಏಕಿ ಮಳಿಗೆ ಒಳಗೆ ಪ್ರವೇಶಿಸಿದ್ದಾರೆ. ಮಳಿಗೆಯ ಮ್ಯಾನೇಜರ್ ತಡೆಯಲು ಯತ್ನಿಸಿದ ವೇಳೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಗುಂಡೇಟಿನಿಂದ ಗಾಯಗೊಂಡ ಅಜ್ಗರ್ ಅವರನ್ನು ತಕ್ಷಣ ಹುಣಸೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಗುಂಡಿನ ಶಬ್ದ ಕೇಳುತ್ತಿದ್ದಂತೆ ಮಳಿಗೆಯೊಳಗಿದ್ದ ಸಿಬ್ಬಂದಿ ಹಾಗೂ ಗ್ರಾಹಕರು ಭಯಭೀತರಾಗಿ ಅಲ್ಲಿಂದ ಓಡಿಹೋಗಿದ್ದಾರೆ. ಈ ಸಂದರ್ಭವನ್ನು ಬಳಸಿಕೊಂಡ ದುಷ್ಕರ್ಮಿಗಳು ಚಿನ್ನ ಹಾಗೂ ವಜ್ರಾಭರಣಗಳನ್ನೊಳಗೊಂಡ ಬ್ಯಾಗ್‌ಗಳನ್ನು ತುಂಬಿಕೊಂಡು ಪರಾರಿಯಾಗಿದ್ದಾರೆ. ಘಟನೆಯ ಮಾಹಿತಿ ದೊರೆಯುತ್ತಿದ್ದಂತೆ ಹುಣಸೂರು ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೈಸೂರಿನಿಂದ ಹಿರಿಯ ಪೊಲೀಸ್ ಅಧಿಕಾರಿಗಳೂ ಭೇಟಿ ನೀಡಿ, ಮಳಿಗೆಯ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ.












