ದೇಶದಲ್ಲಿ ಕರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚು ಉಲ್ಬಣಗೊಳ್ಳುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಲಸಿಕೆ, ಔಷಧಿ ಕೊರತೆಯ ಸಮಸ್ಯೆಯೂ ಎದುರಾಗಿ ಅಮಾಯಕ ಜೀವಗಳು ಬಲಿಯಾಗುತ್ತಿವೆ. ಇದರ ಮಧ್ಯೆಯೇ ನಕಲಿ ಔಷಧಿ, ವರದಿ ತಯಾರಿಸುವ ಜಾಲವು ಹುಟ್ಟಿಕೊಂಡಿದೆ. ಈ ಸಂಬಂಧ ಕೋವಿಡ್ ನಕಲಿ ವರದಿ ತಯಾರಿಸುತ್ತಿದ್ದ 5 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಗುಪ್ತ ಮಾಹಿತಿ ಮೇರೆಗೆ ದೆಹಲಿಯಲ್ಲಿ ಪೊಲೀಸರು ಪರೀಕ್ಷಾ ಲ್ಯಾಬ್ಯೊಂದರ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಇಬ್ಬರು ಲ್ಯಾಬ್ ಟೆಕ್ನಿಶಿಯನ್ಸ್, ಮತ್ತು ಪ್ರಯೋಗಾಲಯದ ವೈದ್ಯರು ಹಾಗು ಅಪ್ಲಿಕೇಶನ್ ವಿಜ್ಞಾನಿಗಳು ಸೇರಿದಂತೆ ಒಟ್ಟು ಐದು ಜನರನ್ನು ಬಂಧಿಸಲಾಗಿದೆ.

ಬಂಧಿತರು ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯದಲ್ಲಿ ಯಾರಿಗೂ ಪ್ರವೇಶ ನೀಡದೆ ಪರೀಕ್ಷೆ ನಡೆಸುತ್ತಿದ್ದರು. ಪರೀಕ್ಷೆಯಲ್ಲಿ ನಕಲಿ ವಿಧಾನ ಬಳಸಿಕೊಂಡು ಕೋವಿಡ್19 ವರದಿಯನ್ನು ತಯಾರಿಸುತ್ತಿದ್ದರು, ನಂತರ ನಕಲಿ ಲೆಟರ್ಹೆಡ್ನಲ್ಲಿ ವರದಿ ಮುದ್ರಿಸುತ್ತಿದ್ದರು ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ಕೆಲವು ದಿನದ ಹಿಂದೆ ಕರ್ನಾಟಕದಲ್ಲಿಯೂ ಇಂತದ್ದೆ ಘಟನೆ ನಡೆದಿದ್ದು, ಶಿವು ಎಂಬ ಯುವಕನನ್ನು ಬಂಧಿಸಲಾಗಿತ್ತು. ಹೊಸಪೇಟೆ ನಗರದ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದ ಪಕ್ಕದ ರಸ್ತೆಯಲ್ಲಿ ಜೆರಾಕ್ಸ್ ಮಳಿಗೆ ಇಟ್ಟಿದ್ದ, ಈತ ಕೋವಿಡ್ ಪೋರ್ಟಲ್ ಮೂಲಕ ಕೋವಿಡ್ ನೆಗೆಟೀವ್ ಬಂದವರ ಐಡಿ ಬಳಸಿ ಸಾರ್ವಜನಿಕರಿಗೆ ನಕಲಿ ವರದಿ ಕೊಡುತ್ತಿದ್ದಾನೆಂದು ತಾಲ್ಲೂಕು ವೈದ್ಯಾಧಿಕಾರಿ ದೂರಿನ ಮೇರೆಗೆ ಪೊಲೀಸರು ಬಂಧಿಸಿ ವಿಚಾರಣೆಗೊಳ ಪಡಿಸಲಾಗಿತ್ತು.








