ರಾಜ್ಯ ಸರ್ಕಾರ ಹಾಗು ಶಿಕ್ಷಣ ಇಲಾಖೆ 5, 8 ಮತ್ತು 9ನೇ ತರಗತಿ ಬೋರ್ಡ್ ಪರೀಕ್ಷೆ ನಡೆಸಿದ್ದು ಸರಿಯಲ್ಲ ಎಂದು ಸುಪ್ರೀಂಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಇಂದಿನ ಫಲಿತಾಂಶಕ್ಕೂ ಸುಪ್ರೀಂಕೋರ್ಟ್‌ನಿಂದ ತಡೆ ಬಿದ್ದಿದೆ. ಇಂದು ಪರೀಕ್ಷಾ ಫಲಿತಾಂಶ ಪ್ರಕಟ ಮಾಡಲು ಮೌಲ್ಯ ನಿರ್ಣಯ ಮಂಡಲಿ ತಯಾರಿ ನಡೆಸಿತ್ತು. ಆದರೆ ಪರೀಕ್ಷೆಯನ್ನ ಅಸಿಂಧುಗೊಳಿಸಿ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಪರೀಕ್ಷೆ ವಿಚಾರಕ್ಕೆ ಹೈಕೋರ್ಟ್ ದ್ವಿಸದ್ಯಸ ಪೀಠ ನೀಡಿದ್ದ ಆದೇಶಕ್ಕೂ ಸುಪ್ರೀಂಕೋರ್ಟ್ ತಡೆ ನೀಡಿದೆ.

ನ್ಯಾ. ಬೇಲಾ ತ್ರಿವೇದಿ, ನ್ಯಾ. ಪಂಕಜ್ ಮಿತ್ತಲ್ ಪೀಠದಲ್ಲಿ ಅರ್ಜಿ ವಿಚಾರಣೆಗೆ ಬಂದಿದ್ದು, ಸುಪ್ರೀಂಕೋರ್ಟ್ ಆದೇಶದಿಂದ ರಾಜ್ಯ ಸರ್ಕಾರಕ್ಕೆ ಭಾರೀ ಮುಖಭಂಗ ಆದಂತಾಗಿದೆ. 5, 8 ಮತ್ತು 9ನೇ ತರಗತಿ ಫಲಿತಾಂಶ ಬಿಡುಗಡೆಗೆ ಸುಪ್ರೀಂಕೋರ್ಟ್ ತಡೆ ನೀಡಿದ್ದು, ಏಪ್ರಿಲ್ 23ಕ್ಕೆ ಅಂತಿಮ ತೀರ್ಪು ನೀಡುವುದಾಗಿದೆ ಸುಪ್ರೀಂಕೋರ್ಟ್ ಪೀಠ ತಿಳಿಸಿದೆ. ಅದಕ್ಕೂ ಮೊದಲು ಏಪ್ರಿಲ್ 23 ರ ಒಳಗಾಗಿ ಸ್ಪಷ್ಟನೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.





ಈ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಎನ್. ಮಂಜುಶ್ರೀ ಪ್ರತಿಕ್ರಿಯೆ ನೀಡಿದ್ದು, ಈಗಾಗಲೇ ಪರೀಕ್ಷೆ ಫಲಿತಾಂಶ ಅನೌನ್ಸ್ ಆಗಿದೆ. ಸರ್ಕಾರ, ಶಿಕ್ಷಣ ಇಲಾಖೆಯ ಆದೇಶದಂತೆ ಇಂದು ಬೆಳಗ್ಗೆ 9 ರಿಂದ 10 ಗಂಟೆಯ ಒಳಗೆ ಫಲಿತಾಂಶ ಪ್ರಕಟವಾಗಿದೆ. ಮುಂದಿನ ಕ್ರಮದ ಬಗ್ಗೆ ಸರ್ಕಾರದ ಆದೇಶಕ್ಕೆ ಕಾಯುತ್ತಿದ್ದೇವೆ ಎಂದಿದ್ದಾರೆ.

ಈಗ ಮತ್ತೊಮ್ಮೆ 5, 8 ಮತ್ತು 9ನೇ ತರಗತಿ ಪರೀಕ್ಷೆ ನಡೆಸಬೇಕಾ..? ಅಥವಾ ಇಲ್ಲೀವರೆಗೂ ಮಾಡಿದ್ದ ಟೆಸ್ಟ್ ಹಾಗು ಶಾಲಾ ಪರೀಕ್ಷೆಗಳ ಆಧಾರದಲ್ಲೇ ಫಲಿತಾಂಶ ಬಿಡುಗಡೆ ಮಾಡಬೇಕಾ..? ಬೋರ್ಡ್ ಎಕ್ಸಾಂ ಬೇಡ ಎನ್ನುತ್ತಿರುವುದು ಯಾಕೆ ಅನ್ನೋ ಬಗ್ಗೆ ಸುಪ್ರೀಂಕೋರ್ಟ್ ಏಪ್ರಿಲ್ 23ರ ಅಂತಿಮ ಆದೇಶದಲ್ಲಿ ತಿಳಿಸುವ ಸಾಧ್ಯತೆಯಿದೆ.