ಹಾಸನ: ಮಳೆ ಕೈಕೊಟ್ಟ ಪರಿಣಾಮ ಅಕ್ಕಿ, ಧವಸ, ಧಾನ್ಯದ ಬೆಲೆ ದಿನದಿಂದ ದಿನಕ್ಕೆ ಗಗನಮುಖಿಯಾಗುತ್ತಲೇ ಇದೆ. ಕಳೆದ ಮೂರು ತಿಂಗಳಿಂದ ಅಕ್ಕಿ ಬೆಲೆ ಕ್ವಿಂಟಾಲ್‌ಗೆ 300 ರೂ.ತನಕ ಏರಿಕೆ ಕಂಡಿದೆ. ರಾಜಮುಡಿ ಅಕ್ಕಿ ಕೆಜಿಯೊಂದಕ್ಕೆ 80 ರೂ.ಗೆ ತಲುಪಿದ್ದು, ಪರಿಸ್ಥಿತಿ ಹೀಗೆ ಮುಂದುವರಿದರೆ ಶತಕ ಬಾರಿಸಿದರೂ ಆಶ್ಚರ್ಯಪಡಬೇಕಿಲ್ಲ ಎಂಬ ಸಂಗತಿ ಮಧ್ಯಮ ವರ್ಗದ ಜನತೆಯನ್ನು ಚಿಂತೆಗೀಡು ಮಾಡಿದೆ.
ಮಳೆಬಾರದೆ ಜಲಾಶಯಗಳು ಖಾಲಿಯಾಗಿದೆ. ಎರಡನೇ ಬೆಳೆಗೆ ಮಳೆಬರುವ ಯಾವ ಲಕ್ಷಣಗಳು ಇಲ್ಲವಾಗಿದೆ. ಭೂಮಿ ಒಣಗುತ್ತಿದ್ದು, ಕೊಳವೆಬಾವಿಗಳಲ್ಲಿ ಅಂತರ್ಜಲಮಟ್ಟ ಕುಸಿಯುತ್ತಿದೆ. ವಿದ್ಯುತ್ ಕಣ್ಣಾಮುಚ್ಚಾಲೆ ಆಟ ಮುಂದಿನ ದಿನದಲ್ಲಿ ಇನ್ನಷ್ಟು ಸಮಸ್ಯೆ ಸೃಷ್ಟಿಸುವ ಸುಳಿವನ್ನು ಸರಕಾರವೇ ನೀಡುತ್ತಿದೆ. ಹೀಗಾಗಿ ಮುಂದೇನು ಎಂಬ ಆತಂಕ ಕಾಡಲಾರಂಭಿಸಿದೆ.