ಕರೋನಾ ಸೋಂಕು ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಅನಾಹುತ ಸೃಷ್ಟಿ ಮಾಡುತ್ತಿದೆ. ಕೇವಲ ಸೋಂಕಿಗಷ್ಟೇ ಸೀಮಿತವಾಗದ ಕರೋನಾ ಜಗತ್ತಿನ ಆರ್ಥಿಕತೆಯ ಬೆನ್ನೆಲುಬನ್ನೂ ಮುರಿದು ಹಾಕಿದೆ. ಅದರಲ್ಲೂ ಮುಂದುವರೆಯುತ್ತಿರುವ ಮತ್ತು ಈಗಾಗಲೇ ಆರ್ಥಿಕ ಕುಸಿತದ ಅಧಪತನಕ್ಕಿಳಿಯುತ್ತಿರುವ ಭಾರತಕ್ಕಂತೂ ಇದು ದೊಡ್ಡ ಛಡಿಯೇಟೇ ಸರಿ. ದೇಶದಲ್ಲಿ ಮೊದಲೇ ನಿರುದ್ಯೋಗದ ಸಮಸ್ಯೆ ಇದ್ದು, ಅದು ದುಪಟ್ಟಟ್ಟಾಗುವ ಸಾಧ್ಯತೆಯಿದೆ. ಜೊತೆಗೆ ಕರೋನಾ ಸೋಂಕಿನಿಂದ ಮುಚ್ಚಿರುವ ಸಣ್ಣಪುಟ್ಟ ಕಂಪೆನಿಗಳಿಗೂ ಆತಂಕನೇ ಸರಿ. ಇದಲ್ಲದೇ ದಿನಗೂಲಿ ನೌಕರರದ್ದಂತೂ ಹೇಳತೀರದ ಪಾಡು. ಈಗಾಗಲೇ ಅವರ ಬದುಕು ದುಸ್ತರವಾಗಿದೆ.
“ಎರಡನೇ ಮಹಾಯುದ್ಧದ ನಂತರ ಜಗತ್ತು ಕಾಣುತ್ತಿರುವ ಅತ್ಯಂತ ದೊಡ್ಡ ಜಾಗತಿಕ ಬಿಕ್ಕಟ್ಟು ಇದಾಗಿದೆ” ಎಂದು ಅಂತರಾಷ್ಟ್ರೀಯ ಕಾರ್ಮಿಕ ಸಂಘ(ILO) ತಿಳಿಸಿದೆ. ಭಾರತವು 40 ಕೋಟಿಯಷ್ಟು ವಿವಿಧ ವಿಭಾಗಗಳಲ್ಲಿ ಉದ್ಯೋಗಿಗಳನ್ನು ಹೊಂದಿದ್ದು ಅವರೆಲ್ಲರ ಬದುಕು ಕರೋನಾ ಬಿಕ್ಕಟ್ಟಿನಿಂದ ಸಂಕಷ್ಟಕ್ಕೆ ಇಳಿಯುವ ಸಾಧ್ಯತೆ ಇದೆ. ಅದರಲ್ಲೂ 2020-21 ರ ಆರ್ಥಿಕ ವರುಷದ ಎರಡನೇ ತ್ರೈಮಾಸಿಕದ ವೇಳೆಗೆ ಶೇಕಡಾ 6.7 ರಷ್ಟು ಮಂದಿಯ ಉದ್ಯೋಗಕ್ಕೆ ಕುತ್ತು ಬರುವ ಸಾಧ್ಯತೆ ಇದೆ ಎಂದು ILO ಅಂದಾಜಿಸಿದೆ. ಇದು ಸುಮಾರು 195 ಮಿಲಿಯನ್ ಪೂರ್ಣಾವಧಿ ಕಾರ್ಮಿಕರ ಬದುಕಿಗೆ ಆಘಾತ ನೀಡುವ ಸಾಧ್ಯತೆ ಇರುವುದನ್ನು ಕಾರ್ಮಿಕ ಸಂಘ ಹೇಳಿದೆ.
ಇದರಿಂದಾಗಿ ಕಾರ್ಮಿಕರು ಮತ್ತು ವ್ಯಾಪಾರಗಳು ಅತ್ಯಂತ ಕ್ಲಿಷ್ಟಕರ ಸ್ಥಿತಿಯನ್ನು ಎದುರಿಸಬೇಕಾಗಿದೆ. ಮುಂದುವರೆಯುತ್ತಿರುವ ರಾಷ್ಟ್ರ ಮಾತ್ರವಲ್ಲದೇ ಮುಂದುವರೆದ ಅಮೆರಿಕಾ, ಚೀನಾದಂತಹ ರಾಷ್ಟ್ರಗಳು ಕೂಡಾ ಈ ಸಂಕಷ್ಟದಿಂದ ಸುಲಭವಾಗಿ ಪಾರಾಗುವ ಸಾಧ್ಯತೆಗಳು ತೀರಾ ಕಡಿಮೆ. ಆದ್ದರಿಂದ ಅತ್ಯಂತ ವೇಗವಾಗಿ, ನಿರ್ಣಾಯಕವಾಗಿ ಮತ್ತು ಒಗ್ಗಟ್ಟಾಗಿ ಸಾಗಿದ್ದಲ್ಲಿ ಮಾತ್ರ ಕುಸಿತದ ಪರಿಣಾಮದಿಂದ ಪಾರಾಗಬಹುದು ಅಂತಾ ILO ಮಹಾ ನಿರ್ದೇಶಕ ಗೈ ರೈಡರ್ ಅಭಿಪ್ರಾಯಪಟ್ಟಿದ್ದಾರೆ.
ಜಗತ್ತಿನಾದ್ಯಂತ 2 ಬಿಲಿಯನ್ ಜನರು ಅನೌಪಚಾರಿಕ (ಸೂಕ್ಷ್ಮ) ಆರ್ಥಿಕ ವಲಯದಲ್ಲಿ ಕೆಲಸ ಮಾಡುತ್ತಿದ್ದು ಅವರ ಉದ್ಯೋಗವೆನ್ನುವುದು ಅಪಾಯವನ್ನು ಎದುರಿಸುವಂತಾಗಿದೆ. ಮಾತ್ರವಲ್ಲದೇ ಈ ರೀತಿ ಅನೌಪಚಾರಿಕ ವಲಯದಲ್ಲಿರುವ ಸುಮಾರು 1 ಕೋಟಿ ಕಾರ್ಮಿಕರ ಉದ್ಯೋಗದ ಮೇಲೆ ಈ ಬಿಕ್ಕಟ್ಟು ನೇರ ಪರಿಣಾಮ ಬೀರುತ್ತಿದೆ ಎಂದು ILO ತಿಳಿಸಿದೆ.
ಅದರಲ್ಲೂ ಭಾರತ, ನೈಜೀರಿಯಾ, ಬ್ರೆಝಿಲ್ ಇಂತಹ ದೇಶಗಳ ಕಾರ್ಮಿಕರ ಸಂಖ್ಯೆ ಅಧಿಕ ಸಂಖ್ಯೆಯಲ್ಲಿದೆ. ಆದ್ದರಿಂದ ಜಗತ್ತಿನ ಕೆಲವು ದೇಶಗಳು ತೀರಾ ಸಂಕಷ್ಟಕ್ಕೀಡಾಗಲಿದೆ. ಇನ್ನು ಪರಸ್ಪರ ಜಾಗತಿಕ ಸಹಕಾರಗಳಿಗೆ ಸಂಬಂಧಿಸಿ ಕಳೆದ 75 ವರುಷಗಳಲ್ಲೇ ಜಗತ್ತಿಗೆ ಎದುರಾದ ಅತೀ ದೊಡ್ಡ ಅಗ್ನಿಪರೀಕ್ಷೆ ಇದಾಗಿದೆ. ಇಲ್ಲಿ ಯಾವುದಾದರೂ ಒಂದು ದೇಶ ಎಡವಿದರೂ, ಮಿಕ್ಕೆಲ್ಲಾ ರಾಷ್ಟ್ರಗಳು ಕೂಡಾ ಪರಿಣಾಮ ಎದುರಿಸಬೇಕಾಗುತ್ತದೆ. ಆದ್ದರಿಂದ ಜಾಗತಿಕ ಮಟ್ಟದಲ್ಲಿ ಎಲ್ಲಾ ವರ್ಗಗಳಿಗೆ ಅದರಲ್ಲೂ ವಿಶೇಷವಾಗಿ ದುರ್ಬಲರಿಗೆ ಸಹಾಯ ಹಸ್ತ ನೀಡುವ ಅಗತ್ಯತೆ ಇದೆ ಎಂದು ರೈಡರ್ ಹೇಳುತ್ತಾರೆ.
ಸದ್ಯ ತಲೆದೋರಿರುವ ಬಿಕ್ಕಟ್ಟು ನೇರವಾಗಿ ಕೋಟ್ಯಂತರ ಜನರ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಆದ್ದರಿಂದ ಸಮರ್ಪಕವಾದ, ಯೋಜನಾಬದ್ಧವಾದ ಕ್ರಮಗಳನ್ನ ಕೈಗೊಳ್ಳಬೇಕಿದೆ. ಮತ್ತೆ ಹೊಸದಾಗಿ ವ್ಯವಸ್ಥೆಯನ್ನು ಕಟ್ಟುವ ಕೆಲಸಕ್ಕೆ ನಾವೆಲ್ಲರೂ ಇಳಿಯಬೇಕಿದೆ. ಆ ನೂತನ ವ್ಯವಸ್ಥೆ ಯಾವುದೇ ಕಾರಣಕ್ಕೂ ಗೋಜಲು ಗೋಜಲಾಗಿರದೆ ಸುರಕ್ಷಿತ, ಉತ್ತಮ ಮತ್ತು ಅಷ್ಟೇ ಸಮರ್ಥನೀಯವಾಗಿರಬೇಕು ಅನ್ನೋದನ್ನು ರೈಡರ್ ಅಭಿಪ್ರಾಯಪಡುತ್ತಾರೆ.
ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಉದ್ಯೋಗಗಳು ಕಡಿತವಾಗುವ ಮುನ್ಸೂಚನೆ ಸಿಕ್ಕಿದೆ ಎಂದಿರುವ ILO ,ಆ ರೀತಿ ಏನಾದರೂ ಆದರೆ ಗಲ್ಫ್ ರಾಷ್ಟ್ರಗಳಲ್ಲಿ ಶೇಕಡಾ 8.1 ರಷ್ಟು ಜನರ ಉದ್ಯೋಗಕ್ಕೆ ಕುತ್ತು ಬರಲಿದೆ. ಅಂದರೆ ಸರಿಸುಮಾರು ಪೂರ್ಣ ಅವಧಿಯಲ್ಲಿ ದುಡಿಯುವ 50 ಲಕ್ಷ ಮಂದಿಯ ಉದ್ಯೋಗಕ್ಕೆ ಕತ್ತರಿ ಗ್ಯಾರಂಟಿ. ಭಾರತ ಹಾಗೂ ಗಲ್ಫ್ ರಾಷ್ಟ್ರಗಳಿಗೆ ನೇರವಾದ ಸಂಬಂಧವಿದ್ದು, ಭಾರತದ ಲಕ್ಷಾಂತರ ಮಂದಿ ಗಲ್ಫ್ ನ ವಿವಿಧ ರಾಷ್ಟ್ರಗಳಲ್ಲಿ ಉದ್ಯೋಗದಲ್ಲಿರುವ ಭಾರತೀಯರಿಗೂ ಇದರಿಂದ ಸಂಕಷ್ಟ ಎದುರಾಗುವ ಸಾಧ್ಯತೆ ಬಹುತೇಕ ಖಚಿತ. ಅಂತೆಯೇ ಯೂರೋಪ್ ರಾಷ್ಟ್ರಗಳಲ್ಲಿ ಶೇಕಡಾ 7.8 ಅಂದ್ರೆ ಸುಮಾರು 12 ಮಿಲಿಯನ್ ಹಾಗೂ ಏಷ್ಯಾ ಮತ್ತು ಪೆಸಿಫಿಕ್ ರಾಷ್ಟ್ರಗಳಲ್ಲಿ ಶೇಕಡಾ 7 ಅಂದ್ರೆ ಸರಿಸುಮಾರು 10 ಕೋಟಿ ಜನರ ಉದ್ಯೋಗಕ್ಕೆ ಕುತ್ತು ಎದುರಾಗುವ ಸಾಧ್ಯತೆ ಇದೆ.
ಸದ್ಯ ಎದುರಾಗಿರುವ ಬಿಕ್ಕಟ್ಟು 2008-09 ರಲ್ಲಾದ ಆರ್ಥಿಕ ಬಿಕ್ಕಟ್ಟಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಎದುರಾಗಲಿದ್ದು, ವಿಶೇಷವಾಗಿ ದೊಡ್ಡ ಉದ್ದಿಮೆ ಹಾಗೂ ಮಧ್ಯಮ ಉದ್ದಿಮೆದಾರರಿಗೆ ಇದು ನೇರವಾದ ಹೊಡೆತ ನೀಡಲಿದೆ. ಮಾತ್ರವಲ್ಲದೇ ಕರೋನಾ ಬಿಕ್ಕಟ್ಟು ಭವಿಷ್ಯದಲ್ಲಿ ಉದ್ಯೋಗಿಗಳ ಮೇಲೆ ಹೆಚ್ಚಿನ ಒತ್ತಡವನ್ನೂ ಹೇರುವ ಸಾಧ್ಯತೆಯಿದೆ. ಕಾರಣ, ಜರೂರಾಗಿ ಆಗಬೇಕಾದ ಕೆಲಸದ ಒತ್ತಡ ಆತನ ಕೆಲಸದ ಅವಧಿ ಮೇಲೆ ಪರಿಣಾಮ ಬೀರಿದರೆ, ಅದೇ ಇನ್ನೊಂದೆಡೆ ಕೆಲ ನೌಕರರಿಗೆ ವೇತನದಲ್ಲಿ ಭಾರೀ ಕಡಿತವನ್ನೂ ಎದುರಿಸಬೇಕಾಗಿ ಬರಬಹುದು ಎಂದು ILO ಅಂದಾಜಿಸಿದೆ.
ಜೊತೆಗೆ ವಸತಿ, ಆಹಾರ, ಉತ್ಪಾದನೆ, ವ್ಯಾಪಾರ ಇದೆಲ್ಲದರ ಮೇಲೂ ಭವಿಷ್ಯದಲ್ಲಿ ಬಹುದೊಡ್ಡ ಪರಿಣಾಮವನ್ನ ಈ ಕರೋನಾ ಸೋಂಕು ಬೀರಲಿದೆ. ಆದ್ದರಿಂದ ಭವಿಷ್ಯದಲ್ಲಿ ಜಾಗತಿಕ ಮಟ್ಟದಲ್ಲಿ ಆಗಬಹುದಾದ ಬದಲಾವಣೆ ಹಾಗೂ ಅಭಿವೃದ್ಧಿಯ ಸೂತ್ರದ ಮೇಲೆಯೇ ನಿರುದ್ಯೋಗದ ಲೆಕ್ಕಾಚಾರ ಸ್ಪಷ್ಟವಾಗಬಹುದು. ಯಾಕೆಂದರೆ ಇನ್ನೂ ಜಾಗತಿಕ ಮಟ್ಟದಲ್ಲಿ ಕರೋನಾ ಸೋಂಕು ಸಂಪೂರ್ಣವಾಗಿ ನಿಂತಿಲ್ಲ. ಹಾಗಾಗಿ ಸದ್ಯ ಎದುರಾಗಿರುವ ಬಿಕ್ಕಟ್ಟಿನ ಮೇಲೆಯೇ ಅಂಕಿಅಂಶಗಳು ವ್ಯಕ್ತವಾಗುತ್ತಿದೆ. ಹಾಗಂತ ಇದನ್ನೇ ಅಂತಿಮ ಎಂದೂ ಭಾವಿಸುವಂತಿಲ್ಲ. ಹೆಚ್ಚೂ ಆಗಬಹುದು, ಅದೃಷ್ಟವಶಾತ್ ಕಡಿಮೆನೂ ಆಗಬಹುದು. ಆದ್ದರಿಂದ 2020 ವರ್ಷಾಂತ್ಯ ಅನ್ನೋದು ಜಗತ್ತಿಗೆ ಅತೀ ಕಠಿಣವಾದ ಸವಾಲು.
ILO ಲೆಕ್ಕಚಾರ ಪ್ರಕಾರ, ಸದ್ಯ ಜಗತ್ತಿನಾದ್ಯಂತ ಸಂಪೂರ್ಣ ಇಲ್ಲವೇ ಭಾಗಶಃ ಕಂಪೆನಿಗಳ ಮುಚ್ಚುಗಡೆಯಿಂದ 3.3 ಬಿಲಿಯನ್ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಅರ್ಥಾತ್ ಶೇಕಡಾ 81 ರಷ್ಟು ಮಂದಿ ಉದ್ಯೋಗ ಕಳೆದುಕೊಳ್ಳುವಂತಾಗಿದೆ. ಇನ್ನೂ ಸೂಕ್ಷ್ಮವಾಗಿ ಹೇಳಬೇಕೆಂದರೆ ಪ್ರತಿ ಐವರಲ್ಲಿ ನಾಲ್ವರು ಉದ್ಯೋಗವಿಲ್ಲದೇ ಅನಿವಾರ್ಯವಾಗಿ ಮನೆ ಸೇರುವಂತಾಗಿದೆ.
ವರದಿಯೊಂದರ ಪ್ರಕಾರ, 1.25 ಬಿಲಿಯನ್ ಉದ್ಯೋಗಿಗಳು ಸದ್ಯ ಅತ್ಯಂತ ಅಪಾಯಕಾರಿ ಸ್ಥಿತಿಯನ್ನ ಎದುರಿಸುವಂತಾಗಿದೆ. ಇಂತಹವರ ಉದ್ಯೋಗ ಇಲ್ಲವೇ ವೇತನದ ಮೇಲೆ ಹೆಚ್ಚಿನ ಪ್ರತಿಕೂಲ ಪರಿಣಾಮ ಎದುರಾಗುವ ಸಾಧ್ಯತೆ ಬಗ್ಗೆ ಅಂದಾಜಿಸಲಾಗಿದೆ. ಅದರಲ್ಲೂ ಕಡಿಮೆ ವೇತನ ಪಡೆಯುವವರು ಹಾಗೂ ಸಾಮನ್ಯ ಕೆಲಸ ಮಾಡುವವರ ವೇತನದಲ್ಲಿ ಬದಲಾವಣೆ ಆದರೆ ಅದು ಇಡೀ ಕುಟಂಬ ವ್ಯವಸ್ಥೆ ಮೇಲೆ ಪರಿಣಾಮ ಬೀರಬಹುದು ಎನ್ನಲಾಗಿದೆ.
ಅದರಲ್ಲೂ ಅಮೆರಿಕಾ ಈ ರೀತಿಯ ಬಿಕ್ಕಟ್ಟಿನ ಪ್ರಭಾವದಿಂದ ಶೇಕಡಾ 43 ರಷ್ಟು ಮತ್ತು ಆಫ್ರಿಕಾದಲ್ಲಿ ಶೇಕಡಾ 26 ರಷ್ಟು ಪ್ರಭಾವ ಬೀರಲಿದೆ. ಆದರೆ ವಿಶೇಷವಾಗಿ ಆಫ್ರಿಕಾ ದೇಶದಲ್ಲಿ ಸಾಮಾಜಿಕ ರಕ್ಷಣೆ ಕೊರತೆ, ಹೆಚ್ಚಿನ ಜನಸಾಂದ್ರತೆ ಹಾಗೂ ದುರ್ಬಲ ಸಾಮರ್ಥ್ಯ, ಆರೋಗ್ಯ ಮತ್ತು ಆರ್ಥಿಕ ಚಾಲೆಂಜ್ ಇವುಗಳೆಲ್ಲವೂ ಆ ದೇಶಗಳ ಮೇಲೆ ಅಗಾಧ ಪರಿಣಾಮವೂ ಬೀರಲಿದೆ. ಭವಿಷ್ಯದಲ್ಲಿ ಅಲ್ಲಿನ ಸರಕಾರಗಳು ತೆಗೆದುಕೊಳ್ಳಲು ನಿರ್ಧಾರಗಳ ಮೇಲೆ ಅವಲಂಬಿತವಾಗಿರುತ್ತದೆ.
ಇಂತಹ ಪರಿಸ್ಥಿತಿ ಭಾರತದಲ್ಲೂ ತಲೆದೋರಲಿದೆ ಅನ್ನೋದರಲ್ಲಿ ಸಂಶಯವಿಲ್ಲ. ಈಗಾಗಲೇ ಆರ್ಥಿಕ ಕುಸಿತದಿಂದ ಕಂಗೆಟ್ಟ ದೇಶಕ್ಕೆ ಕರೋನಾ ಸೋಂಕು ಅನ್ನೋದು ಭಾರತದ ಎಲ್ಲಾ ಅಭಿವೃದ್ಧಿ ಚಟುವಟಿಕೆಗಳಿಗೂ ಅಡ್ಡಗಾಲು ಇಡಲಿದೆ. ಕಾರ್ಮಿಕರ ಗೋಳು, ವ್ಯಾಪಾರಸ್ಥರ ಅಳಲು ಅರಣ್ಯ ರೋದನವಾಗುವ ಸಾಧ್ಯತೆಗಳಿವೆ. ಆದ್ದರಿಂದ ಕೇಂದ್ರ ಸರಕಾರ ಭವಿಷ್ಯದಲ್ಲಾಗಬಹುದಾದ ಅನಾಹುತಗಳಿಗೆ ಈಗಲೇ ಯೋಜನೆ ರೂಪಿಸಿಕೊಳ್ಳಬೇಕಿದೆ. ಕರೋನಾ ಸೋಂಕು ಕಡಿಮೆಯಾಗುತ್ತಿದ್ದಂತೆಯೇ ಆರ್ಥಿಕ ಕ್ಷೇತ್ರ ಬಲಪಡಿಸಲು ಪಕ್ಷ ಭೇದ ತೊರೆದು ರಾಷ್ಟ್ರ ನಿರ್ಮಾಣದ ಬಗ್ಗೆ ನೈಜ ಕಾಳಜಿ ತೋರಿಸಲೇಬೇಕಾಗಿದೆ.