ಅಗ್ನಿಪಥ್ ವಿರುದ್ಧದ ಪ್ರತಿಭಟನೆಯಲ್ಲಿ ಸೇನೆಯ ಆಕಾಂಕ್ಷಿಗಳಿಗೆ ಬೆಂಬಲ ನೀಡಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಯೋಜನೆಯನ್ನು ತಕ್ಷಣವೇ ಹಿಂತೆಗೆದುಕೊಳ್ಳುವಂತೆ ಶುಕ್ರವಾರ ಕೇಂದ್ರಕ್ಕೆ ಒತ್ತಾಯಿಸಿದ್ದಾರೆ. ಹೊಸ ಯೋಜನೆಯು ಸೈನಿಕರಿಗೆ ಅವಮಾನ ಮಾಡುವಂತಿದ್ದು, ಹೆಚ್ಚು ಯೋಚಿಸದೆ ಇದನ್ನು ಪ್ರಾರಂಭಿಸಲಾಗಿದೆ ಎಂದು ಕಿಡಿಕಾರಿದ್ದಾರೆ. ಸೇನೆಯ ಆಕಾಂಕ್ಷಿಗಳ ವ್ಯಾಪಕ ಪ್ರತಿಭಟನೆಗಳು ಯೋಚಿಸದೆ ತೆಗೆದುಕೊಂಡ ನಿರ್ಧಾರದ ಪರಿಣಾಮವಾಗಿದೆ ಎಂದು ಅಭಿಪ್ರಯಾ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಕೇಂದ್ರ ಸಚಿವ ಸಂಪುಟದಿಂದ ಅನುಮೋದನೆ ಪಡೆದ ಅಗ್ನಿಪಥ್ ಎಂಬ ಹೊಸ ಯೋಜನೆ ವಿರುದ್ಧ ದೇಶಾದ್ಯಂತ ವ್ಯಾಪಕ ವಿರೋದ ವ್ಯಕ್ತ ವಾಗಿದೆ. ಯುಪಿ, ಬಿಹಾರ, ಹರಿಯಾಣ ಮತ್ತು ತೆಲಂಗಾಣದಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದು ಹಿಂಸಾತ್ಮಕ ಕೃತ್ಯಕ್ಕೆ ದಾರಿ ಮಾಡಿಕೊಟ್ಟಿದೆ.

ಮೋದಿ ಸರ್ಕಾರಕ್ಕೆ ಸೇನೆಯ ಬಗ್ಗೆ ಗೌರವವಿಲ್ಲ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಯೋಜನೆಯ ವಿರುದ್ಧ ಮಾತನಾಡಿದ್ದಾರೆ. ಅಗ್ನಿಪಥ್ ಯೋಜನೆಯನ್ನು ಟೀಕಿಸಿದ ಗಾಂಧಿ, ಹೊಸ ಕಾರ್ಯಕ್ರಮದಡಿಯಲ್ಲಿ ನೇಮಕಗೊಂಡ ಸೈನಿಕರಿಗೆ ನಾಲ್ಕು ವರ್ಷಗಳ ನಂತರ ಯಾವುದೇ ಶ್ರೇಣಿ, ಪಿಂಚಣಿ ಮತ್ತು ಸ್ಥಿರ ಭವಿಷ್ಯವಿರುವುದಿಲ್ಲ ಅವರು ನಿರುದ್ಯೋಗಿಗಳಾಗುತ್ತಾರೆ ಎಂದು ಹೇಳಿದರು.





