ಮಕ್ಕಳ ಕಳ್ಳರೆಂದು ಅನುಮಾನದ ಮೇಲೆ ನಾಲ್ವರು ಸಾಧುಗಳ ಮೇಲೆ ಹಲ್ಲೆ ನಡೆದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, ಈ ಸಂಬಂಧ 6 ಮಂದಿಯನ್ನು ಬಂಧಿಸಲಾಗಿದೆ.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಲಾವಣ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕಾರಿನಲ್ಲಿ ಕುಳಿತಿದ್ದ ನಾಗಾ ಸಾಧುಗಳನ್ನು ಎಳೆದು ಸ್ಥಳೀಯರು ಹಲ್ಲೆ ನಡೆಸುತ್ತಿರುವ ವೀಡಿಯೋ ವೈರಲ್ ಆಗಿದೆ.
ಕೆಲವರು ಕಾರಿನಲ್ಲಿ ಕುಳಿತಿದ್ದ ನಾಗಾ ಸಾಧುಗಳ ಆಧಾರ್ ಕಾರ್ಡ್ ಪರಿಶೀಲಿಸುತ್ತಿದ್ದರೆ, ಇನ್ನು ಕೆಲವರು ಸಾಧುಗಳ ಕಾಲು ಹಿಡಿದು ಕಾರಿನಿಂದ ಹೊರಗೆಳೆದು ಬೆಲ್ಟ್ ನಿಂದ ಹಲ್ಲೆ ಮಾಡಲಾಗಿದೆ.

ಕರ್ನಾಟಕದ ಬಿಜಾಪುರ ಬಳಿಯ ಪಂಡರಾಪುರ ದೇವಸ್ಥಾನಕ್ಕೆ ಹೊರಟ್ಟಿದ್ದ ಈ ನಾಲ್ವರು ಸಾಧುಗಳು ಸ್ಥಳೀಯ ಬಾಲಕನ ಬಳಿ ದಾರಿ ಕೇಳುತ್ತಿದ್ದರು. ಈ ಸಾಧುಗಳು ದೊಡ್ಡವರ ಬಳಿ ಮಾತನಾಡದೇ ಬಾಲಕನ ಬಳಿ ಕೇಳಿದ್ದು ಸ್ಥಳೀಯರಿಗೆ ಮಕ್ಕಳ ಕಳ್ಳರೆಂದು ಅನುಮಾನ ಮೂಡಿಸಿದೆ.
ಸಾಧುಗಳು ಉತ್ತರ ಪ್ರದೇಶ ಮೂಲದವರಾಗಿದ್ದು ಅಖಂಡ ಸಂಘಟನೆಯ ಸದಸ್ಯರಾಗಿದ್ದಾರೆ. ಇವರು ದೇವಸ್ಥಾನದಿಂದ ಮರಳುತ್ತಿದ್ದಾಗ ಗುಂಪು ಸೇರಿದ ಜನರು ಇವರನ್ನು ವಿಚಾರಿಸಿದ್ದು, ಹಲ್ಲೆ ನಡೆಸಿದ್ದಾರೆ. ಪ್ರಕರಣದಲ್ಲಿ ಈಗಾಗಲೇ 6 ಮಂದಿಯನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.