ಕರೋನಾ ಸಂಕಷ್ಟದಲ್ಲಿ ಲಾಕ್ಡೌನ್ 4 ಮಾಡಲಾಗಿದೆ. ಆದರೆ ಯಾವುದಕ್ಕೂ ನಿಯಂತ್ರಣವಿಲ್ಲದೆ ಎಲ್ಲಾ ವ್ಯವಹಾರವನ್ನೂ ಮುಕ್ತ ಮಾಡಲಾಗಿದೆ. ಆದರೆ ಲಾಕ್ಡೌನ್ ಮಾಡಲೇಬೇಕು ಎನ್ನುವ ಕಾರಣಕ್ಕೆ ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆ ತನಕ ಯಾವುದೇ ವ್ಯವಹಾರ ನಡೆಯಬಾರದು, ರಸ್ತೆಯಲ್ಲಿ ವಾಹನ ಸಂಚಾರ ಇರಬಾರದು ಎಂದು ರಾಜ್ಯ ಸರ್ಕಾರ ನೂತನ ನಿಯಮವೊಂದನ್ನು ಮಾಡಿಕೊಂಡಿತ್ತು. ಅದಾದ ಬಳಿಕ ಭಾನುವಾರ ಮಾತ್ರ ಇಡೀ ರಾಜ್ಯವೇ ಲಾಕ್ಡೌನ್ ಆಗಲಿದ್ದು, ಯಾವುದೇ ವ್ಯವಹಾರ, ಸಂಚಾರ, ಏನೂ ಇರುವುದಿಲ್ಲ. ಕಟ್ಟುನಿಟ್ಟಿನ ಲಾಕ್ಡೌನ್ ಮಾಡಲಾಗುವುದು. ಶನಿವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಗ್ಗೆ 7 ಗಂಟೆ ತನಕ ಲಾಕ್ಡೌನ್ ಕರ್ಫ್ಯೂ ಜಾರಿಯಲ್ಲಿ ಇರಲಿದೆ ಎಂದು ಸಿಎಂ ಬಿ ಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದರು. ಆದರೆ ಆ ಮಾತಿನಲ್ಲೇ ನೂರಾರು ಗೊಂದಲಗಳಿದ್ದು, ನಾಳೆಯ ಕರ್ಫ್ಯೂ ಯಾವ ರೀತಿ ಇರಲಿದೆ ಎನ್ನುವುದು ಹಲವು ಟೀಕೆಗಳಿಗೆ ಕಾರಣವಾಗಿದೆ.
ಭಾನುವಾರ ಏನೇನಿರುತ್ತೆ..?
ಭಾನುವಾರ ಹಣ್ಣು ತರಕಾರಿ, ಮೊಟ್ಟೆ, ಮಾಂಸ, ದಿನಸಿ ಪದಾರ್ಥ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಆಸ್ಪತ್ರೆ, ಮೆಡಿಕಲ್, ವೈದ್ಯರು, ದಾದಿಯರು, ಆಂಬುಲೆನ್ಸ್ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಅನಾರೋಗ್ಯ ಸಮಸ್ಯೆ ಇದ್ದವರು ಯಾವುದೇ ಸಮಸ್ಯೆ ಇಲ್ಲದೆ ಆಸ್ಪತ್ರೆಗೆ ತೆರಳಬಹುದು. ಗರ್ಭಿಣಿ ಸ್ತ್ರೀಯರು ತಪಾಸಣೆಗೆ ಹೋಗಲು ಸಮಸ್ಯೆ ಇಲ್ಲ.
ಭಾನುವಾರ ಏನೇನಿರಲ್ಲ..?
ಸಾರ್ವಜನಿಕರ ಸಂಚಾರ ನಿರ್ಬಂಧ ಮಾಡಲಾಗಿದೆ. ಅಗತ್ಯ ವಸ್ತು ಹೊರತುಪಡಿಸಿ ಉಳಿದ ಅಂಗಡಿ ಮುಗಟ್ಟು ಬಂದ್ ಮಾಡಲಾಗುತ್ತದೆ. ನಗರವನ್ನು ಸಂಪರ್ಕ ಮಾಡಲು ಎಲ್ಲಾ ಪ್ರಮುಖ ರಸ್ತೆಗಳನ್ನು ಬಂದ್ ಮಾಡಲಾಗುತ್ತದೆ. ಬಾರ್, ಸಲೂನ್, ಫ್ಯಾನ್ಸಿ ಸ್ಟೋರ್, ಗಾರ್ಮೆಂಟ್ಸ್ ಫ್ಯಾಕ್ಟರಿ, ಎಲ್ಲಾ ರೀತಿಯ ಕಾರ್ಖಾನೆಗಳು, ಕಂಪನಿಗಳು ಬಂದ್. ಇನ್ನೂ ಪಾರ್ಕ್ನಲ್ಲಿ ಬೆಳಗ್ಗೆ ಸಂಜೆ ಅವಕಾಶ ಕೊಡಲಾಗಿತ್ತು. ಆದರೆ ಭಾನುವಾರ ರಜೆ. ಜಾಗಿಂಗ್ ಇಲ್ಲ, ವಾಕಿಂಗ್ ಕೂಡ ಸಾಧ್ಯವಿಲ್ಲ. ಆಟೋ, ಟ್ಯಾಕ್ಸಿ, ಕ್ಯಾಬ್ ಸೇವೆ ಇರಲ್ಲ. ಸಾರಿಗೆ ಬಸ್ಗಳ ಓಡಾಟ ಇರಲ್ಲ, ಖಾಸಗಿ ವಾಹನಗಳಲ್ಲಿ ರಸ್ತೆಗೆ ಇಳಿದರೆ ಸೀಜ್ ಮಾಡಲಾಗುತ್ತದೆ.
ಶುಕ್ರವಾರ ಮಾಧ್ಯಮಗಳಿಗೆ ಮಾಹಿತಿ ಕೊಟ್ಟಿರುವ ಬೆಂಗಳೂರು ಪೊಲೀಸ್ ಕಮೀಷನರ್ ಭಾಸ್ಕರ್ ರಾವ್, ಲಾಕ್ಡೌನ್ 4ನೇ ಹಂತದಲ್ಲಿ ರಾಜ್ಯ ಸರ್ಕಾರ ಸಡಿಲಿಕೆ ಮಾಡಿ ಆದೇಶಿಸಿದೆ. ಆದರೆ ಭಾನುವಾರ ಕಂಪ್ಲೀಟ್ ಲಾಕ್ಡೌನ್ ಇರುತ್ತೆ. ಕರ್ಪ್ಯೂ ವಾತಾವರಣ ನಿರ್ಮಾಣ ಮಾಡಲಾಗುತ್ತದೆ. ಎಲ್ಲರೂ ಪಾಲನೆ ಮಾಡಬೇಕು. ಆದರೆ ಫಿಕ್ಸ್ ಆಗಿರೋ ಮದುವೆಗಳಿಗೆ ಅವಕಾಶ ಕೊಡಲಾಗುತ್ತದೆ. ಮದುವೆಯಲ್ಲಿ ಐವತ್ತು ಜನ ಮಾತ್ರ ಇರ್ಬೇಕು ಎಂದಿದ್ದಾರೆ. ಮಾಂಸದ ಅಂಗಡಿಗಳನ್ನು ಓಪನ್ ಮಾಡಲು ಅವಕಾಶ ಇದೆ. ಭಾನುವಾರವೂ ರಾಜ್ಯದಿಂದ ಶ್ರಮಿಕ್ ರೈಲು ಹೋಗುತ್ತೆ. ಯಾವುದೇ ಸಮಸ್ಯೆ ಇರೋದಿಲ್ಲ. ಆದರೆ ಶನಿವಾರ ಸಂಜೆ 7 ರಿಂದ ಸೋಮವಾರ ಬೆಳಗ್ಗೆ 7 ರವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತೆ ಎಂದಿದ್ದಾರೆ.
ಲಾಕ್ಡೌನ್ ಒಂದು ಮತ್ತು ಎರಡನೇ ಹಂತದಲ್ಲಿದ್ದ ನಿಯಮಗಳು ಭಾನುವಾರ ಜಾರಿಯಲ್ಲಿರುತ್ತದೆ. ಅನಗತ್ಯವಾಗಿ ಯಾರೂ ಕೂಡ ಹೊರಗೆ ಓಡಾಡಬಾರದು. ಬ್ಯಾರಿಕೇಡ್ ಹಾಕಿ ರಸ್ತೆಗಳನ್ನು ಕ್ಲೋಸ್ ಮಾಡಲಾಗುತ್ತೆ. ಸುಖಾಸುಮ್ಮನೆ ಓಡಾಡುವವರಿಗೆ ಲಾಕ್ಡೌನ್ ಅವಧಿಯಲ್ಲಿ ತೆಗೆದುಕೊಂಡಂತೆ ಕ್ರಮ ತೆಗೆದುಕೊಳ್ಳಲಾಗುತ್ತೆ. ತರಕಾರಿ ಮೊಟ್ಟೆ ಮಾಂಸ ಖರೀದಿಗೆ ವಾಹನ ಬಳಸಬಹುದು. ಏರ್ಪೋರ್ಟ್ ರಸ್ತೆ, ಹೆಬ್ಬಾಳ ಮೇಲ್ಸೇತುವೆ, ಮೈಸೂರು ರೋಡ್, ಎಲೆಕ್ಟ್ರಾನಿಕ್ ಸಿಟಿ ರೋಡ್ ಸೇರಿದಂತೆ ನಗರದ ಪ್ರಮುಖ ಜಂಕ್ಷನ್ಗಳುನ್ನು ಬಂದ್ ಮಾಡುತ್ತೇವೆ. ಅನಾವಶ್ಯಕವಾಗಿ ರಸ್ತೆಗೆ ಇಳಿದ್ರೆ ಕೇಸ್ ಹಾಕ್ತೀವಿ ಎಂದಿದ್ದಾರೆ.
ಭಾನುವಾರ ರಾಜ್ಯಾದ್ಯಂತ ಸಂಪೂರ್ಣ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಆದರೆ ನೂರಾರು ಗೊಂದಲಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಸರ್ಕಾರಿ ಸಾರಿಗೆ ಬಸ್ ಸೌಲಭ್ಯ ಇರುವುದಿಲ್ಲ. ಜನರು ಬಸ್ ನಿಲ್ದಾಣಕ್ಕೆ ಬರುವುದಿಲ್ಲ. ಆದರೆ, ಮದುವೆಗಳಿಗೆ ಅವಕಾಶ ಕೊಡಲಾಗಿದೆ. ಜನರು ತಮ್ಮ ಸ್ವಂತ ವಾಹನದಲ್ಲಿ ಮದುವೆಗೆ ತೆರಳಬಹುದು. ತರಕಾರಿ, ಮೊಟ್ಟೆ ಮಾಂಸ ಮಾರಾಟಕ್ಕೆ ಅವಕಾಶ ಕೊಡಲಾಗಿದೆ. ಜನರು ತಮ್ಮ ವಾಹನಗಳಲ್ಲಿ ಖರೀದಿ ಮಾಡಲು ಹೋಗಬಹುದು. ಆದರೆ ರಸ್ತೆಗಳನ್ನು ಬಂದ್ ಮಾಡಿರುತ್ತಾರೆ. ಅನಗತ್ಯವಾಗಿ ಸಂಚಾರ ಮಾಡಿದ್ರೆ ಕೇಸ್ ಹಾಕುತ್ತಾರೆ. ಆದರೆ ಅನಗತ್ಯವಾಗಿ ಮೋಜು ಮಾಡಲು ಬಂದವನು ತರಕಾರಿ, ಮಾಂಸ, ಮೊಟ್ಟೆ, ತರಕಾರಿ ಖರೀದಿಗೆ ಬಂದಿದ್ದೇನೆ ಎಂದರೆ ಪೊಲೀಸರು ಯಾವ ಕ್ರಮ ಕೈಗೊಳ್ತಾರೆ ಎನ್ನುವ ಪ್ರಶ್ನೆಗಳಿಗೆ ಸರ್ಕಾರವೇ ಉತ್ತರಿಸಬೇಕು.
ಬೆಂಗಳೂರಿನಲ್ಲಿ ಭಾನುವಾರದ ಲಾಕ್ಡೌನ್ ಬಗ್ಗೆ ಮಾತನಾಡಿರುವ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್, ಸಿಎಂ ಬಿ ಎಸ್ ಯಡಿಯೂರಪ್ಪ ಆದೇಶ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಸಂಪೂರ್ಣ ಲಾಕ್ಡೌನ್ ಜಾರಿಯಲ್ಲಿರಲಿದೆ. ವಾಹನ ಸಂಚಾರ ಸಂಪೂರ್ಣ ಸ್ಥಬ್ಧವಾಗಲಿದೆ. ಜೀವನಾವಶ್ಯಕ ವಸ್ತು ಬಿಟ್ಟರೆ ಬೇರೆ ಅಂಗಡಿ ಮುಂಗಟ್ಟು ತೆರೆಯುವಂತಿಲ್ಲ. ಮೆಡಿಕಲ್ ಎಮರ್ಜೆನ್ಸಿ, ಕಿರಾಣಿ ಅಂಗಡಿ ತೆರೆಯಲಿದೆ. ಮಾರ್ಕೆಟ್ ಬಂದ್ ಆಗಲಿದೆ ಎಂದಿದ್ದಾರೆ.
ಗೊಂದಲವೇನು?
ಸರ್ಕಾರದ ಗೊಂದಲಕಾರಿ ಲಾಕ್ಡೌನ್ ಬಗ್ಗೆ ಮಾಜಿ ಸಚಿವ ಯು ಟಿ ಖಾದರ್ ಟ್ವಿಟರ್ನಲ್ಲಿ ಲೇವಡಿ ಮಾಡಿದ್ದಾರೆ. ಹಾಲು, ತರಕಾರಿ, ಮಾಂಸ ಮಾರಾಟಕ್ಕೆ ಅವಕಾಶ ಕೊಟ್ಟು ಜನರನ್ನು ಮಾತ್ರ ಓಡಾಡಬೇಡಿ ಅಂದ್ರೆ ಹೇಗೆ..? ಕರ್ಫ್ಯೂ ಜಾರಿಯಲ್ಲಿದೆ ಅಂತಾ ಪೊಲೀಸರು ಹೇಳ್ತಾರೆ, 144 ಸೆಕ್ಷನ್ ಕೂಡ ಇದೆ ಅಂತಾನೂ ಪೊಲೀಸರು ಹೇಳಿದ್ದಾರೆ. ಸಂಡೇ ಲಾಕ್ಡೌನ್ನ ವೈಜ್ಞಾನಿಕತೆಯೇ ಅರ್ಥವಾಗುತ್ತಿಲ್ಲ ಎಂದು ಯು ಟಿ ಖಾದರ್ ಲೇವಡಿ ಮಾಡಿದ್ದಾರೆ.
ನಾಳೆ ಲಾಕ್ಡೌನ್ ಎನ್ನುವ ಕಾರಣಕ್ಕೆ ಈಗಾಗಲೇ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬೆಂಗಳೂರಿನಿಂದ ತುಮಕೂರು, ಹಾಸನದ ಕಡೆಗೆ ವಾಹನಗಳು ಸಾಲುಗಟ್ಟಿ ನಿಂತಿದೆ. ಸಂಜೆ 7 ಗಂಟೆ ಮೇಲೆ ಕರ್ಫ್ಯೂ ಜಾರಿ ಎಂದ ಮೇಲೆ ಈಗಲೇ ಪೊಲೀಸರು ತಡೆಯಬೇಕಿತ್ತು. ಆರಂಭದಲ್ಲೇ ಲಾಕ್ಡೌನ್ ಕರ್ಫ್ಯೂ ಉಲ್ಲಂಘನೆ ಜಗಜ್ಜಾಹೀರಾಗಿದೆ. ಇನ್ನೂ ನಾಳೆಯ ಗೊಂದಲಕಾರಿ ಲಾಕ್ಡೌನ್ ಇನ್ನು ಏನೇನು ಅವಾಂತರ ಸೃಷ್ಟಿ ಮಾಡುತ್ತದೆಯೋ ಎನ್ನುವ ಕೌತುಕವಂತೂ ಜನಸಾಮಾನ್ಯರಲ್ಲೂ ಇದೆ.