ವಿಜಯಪುರ: ಕ್ಯಾಂಟರ್ ಅಡ್ಡಗಟ್ಟಿ ಚಾಲಕ ಹಾಗೂ ಕ್ಲೀನರ್ ಮೇಲೆ ಹಲ್ಲೆ ನಡೆಸಿ 32 ಲಕ್ಷ ರೂ. ದರೋಡೆ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣದ ಹಿಂದಿನ ಸಂಚನ್ನೂ ಕೂಡ ಪೊಲೀಸರು ಬೇಧಿಸಿದ್ದಾರೆ.
ಜಿಲ್ಲೆಯ ಕೊಲ್ಹಾರ ಪಟ್ಟಣದ ಹೊರವಲಯದಲ್ಲಿ ಇತ್ತೀಚೆಗೆ ಈ ಘಟನೆ ನಡೆದಿತ್ತು. ವಿಜಯಪುರ ಪೊಲೀಸರು (Vijayapur Police) ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದರೋಡೆಯಲ್ಲಿ ವಾಹನ ಚಾಲಕನ ಪಾತ್ರ ಇರುವುದು ಕೂಡ ಬೆಳಕಿಗೆ ಬಂದಿದೆ.
ಬಂಧಿತ ಆರೋಪಿಗಳನ್ನು ಮಹಾಂತೇಶ್ ತಳವಾರ, ಧರೇಶ್ ದಳವಾಯಿ, ಶಿವಪ್ಪ ಮಾಶ್ಯಾಳ, ಸುನೀಲ್ ವಡ್ಡರ, ಶಿವಾನಂದ್ ದಳವಾಯಿ ಎಂದು ಗುರುತಿಸಲಾಗಿದೆ. ಆರೋಪಿಗಳು ಶನಿವಾರದ ದಿನ ಕ್ಯಾಂಟರ್ ವಾಹನ ತಡೆದು, ಚಾಲಕ ಮತ್ತು ಕ್ಲೀನರ್ ಮೇಲೆ ಹಲ್ಲೆ ಮಾಡಿ ಹಣ ದೋಚಿ ಪರಾರಿಯಾಗಿದ್ದರು. ಆದರೆ, ಈಗ ಟ್ವಿಸ್ಟ್ ಸಿಕ್ಕಿದ್ದು, ಚಾಲಕನೂ ಈ ಪ್ರಕರಣದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.
ಜೀವರ್ಗಿಯ ಹತ್ತಿ ವ್ಯಾಪಾರಿ ಚಂದ್ರಕಾಂತ್ ಕುಂಬಾರ ಎಂಬವರಿಗೆ ಸೇರಿದ ಹತ್ತಿಯನ್ನು ಧಾರವಾಡದಲ್ಲಿ ಮಾರಾಟ ಮಾಡಿ ವಾಪಸ್ ಹಣ ತೆಗೆದುಕೊಂಡು ತೆರಳುತ್ತಿದ್ದ ಈ ವೇಳೆ ಈ ಘಟನೆ ನಡೆದಿತ್ತು.