ನಾಗಪುರ ; ಮಧ್ಯ ಪ್ರದೇಶದ ನಾಗಪುರದಲ್ಲಿ 82 ವರ್ಷದ ವ್ಯಕ್ತಿಯೊಬ್ಬರು ಹಿಟ್ ಅಂಡ್ ರನ್ನಲ್ಲಿ ಸಾವನ್ನಪ್ಪಿದ ಪ್ರಕರಣದ ತನಿಖೆಯಿಂದ ₹ 300 ಕೋಟಿ ಮೌಲ್ಯದ ಕುಟುಂಬದ ಆಸ್ತಿಗಾಗಿ ಅವರ ಸೊಸೆಯೇ ರೂಪಿಸಿದ್ದ ಭೀಕರ ಕೊಲೆ ಸಂಚು ಬಯಲಾಗಿದೆ. ನಾಗಪುರ ಪಟ್ಟಣ ಯೋಜನಾ ವಿಭಾಗದ ಸಹಾಯಕ ನಿರ್ದೇಶಕಿ ಆಗಿರುವ ಅರ್ಚನಾ ಮನೀಷ್ ಪುಟ್ಟೇವಾರ್ ಅವರನ್ನು ಮಂಗಳವಾರ , ಅವರ ಮಾವ ಪುರುಷೋತ್ತಮ ಪುಟ್ಟೇವಾರ್ ಕೊಲೆಯಾದ ಹದಿನೈದು ದಿನಗಳ ನಂತರ ಪೋಲೀಸರು ಬಂಧಿಸಿದ್ದಾರೆ.
ಅರ್ಚನಾ ಪುಟ್ಟೇವಾರ್ ಅವರು ತಮ್ಮ ಮಾವನನ್ನು ಕೊಲೆ ಮಾಡಲು ಸುಪಾರಿ ನೀಡಿ ಕಿಲ್ಲರ್ ಗಳನ್ನು ನೇಮಿಸಿಕೊಂಡರು ಮತ್ತು ಸುಮಾರು ₹ 1 ಕೋಟಿ ಖರ್ಚು ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದರು. “ತನ್ನ ಮಾವನನ್ನು ಕೊಲ್ಲಲು ಬಳಸಿದ ಕಾರನ್ನು ಖರೀದಿಸಲು ಆರೋಪಿ ಹಣ ನೀಡಿದ್ದಾಳೆ. ಕೊಲೆಯನ್ನು ಅಪಘಾತದಂತೆ ಕಾಣಲು ಇದನ್ನು ಮಾಡಲಾಗಿದೆ. ಇದು ಮಾವನ ಹೆಸರಿನಲ್ಲಿರುವ ₹ 300 ಕೋಟಿ ಆಸ್ತಿಯನ್ನು ಕಬಳಿಸಲು ಆಕೆ ಖತರ್ನಾಕ್ ಪ್ಲಾನ್ ಮಾಡಿದ್ದಾಳೆ ಎಂದು ಅಧಿಕಾರಿ ಹೇಳಿದರು.
53 ವರ್ಷದ ಮಹಿಳೆ ತನ್ನ ಗಂಡನ ಚಾಲಕ ಬಾಗ್ಡೆ ಮತ್ತು ಇತರ ಇಬ್ಬರು ಆರೋಪಿಗಳಾದ ನೀರಜ್ ನಿಮ್ಜೆ ಮತ್ತು ಸಚಿನ್ ಧಾರ್ಮಿಕ್ ಅವರೊಂದಿಗೆ ಕೊಲೆಗೆ ಸಂಚು ರೂಪಿಸಿದ್ದಾಳೆ ಎಂದು ಅಧಿಕಾರಿ ತಿಳಿಸಿದ್ದಾರೆ. ಪೊಲೀಸರು ಅವರ ವಿರುದ್ಧ ಐಪಿಸಿ ಮತ್ತು ಮೋಟಾರು ವಾಹನ ಕಾಯ್ದೆಯಡಿ ಕೊಲೆ ಮತ್ತು ಇತರ ಸೆಕ್ಷನ್ಗಳ ಆರೋಪ ಹೊರಿಸಿದ್ದಾರೆ. ಆರೋಪಿಗಳಿಂದ ಎರಡು ಕಾರು, ಚಿನ್ನಾಭರಣ ಹಾಗೂ ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಘಟನೆ ನಡೆದ ಮೇ 27 ರಂದು ಪುರುಷೋತ್ತಮ ಪುಟ್ಟೇವಾರ್ ಅವರು ಶಸ್ತ್ರ ಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುತ್ತಿದ್ದ ಪತ್ನಿ ಶಕುಂತಲಾ ಅವರನ್ನು ಭೇಟಿಯಾಗಲು ಆಸ್ಪತ್ರೆಗೆ ತೆರಳಿದ್ದರು ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಅವರು ನಡೆದುಕೊಂಡು ಮನೆಗೆ ಹಿಂತಿರುಗುತಿದ್ದಾಗ ಕಾರ್ ಒಂದು ಬೇಕೆಂತಲೇ ಅವರ ಮೇಲೆ ಹರಿದು ಹತ್ಯೆ ಮಾಡಿರುವುದು ಸಿಸಿ ಟಿವಿ ಫೂಟೇಜ್ ನಿಂದ ಧೃಢಪಟ್ಟಿತ್ತು. ಪೋಲೀಸರೂ ಸೇರಿದಂತೆ ಎಲ್ಲರೂ ಇದನ್ನು ಮೊದಲು ಕಾರು ಅಪಘಾತ ಎಂದೇ ಭಾವಿಸಿಕೊಂಡಿದ್ದರು. ಆದರೆ ಅಂಗಡಿಯವನೊಬ್ಬನ ಸಿಸಿ ಟಿವಿಯಲ್ಲಿ ಬೇಕೆಂತಲೇ ಕಾರು ಹರಿಸಿರುವುದು ಪತ್ತೆ ಆಗಿತ್ತು. ಮೃತರ ಮಗ ಮತ್ತು ಅರ್ಚನಾ ಅವರ ಪತಿ ಮನೀಶ್ ಅವರು ವೈದ್ಯರಾಗಿದ್ದಾರೆ.
ಈ ನಡುವೆ ಕೊಲೆ ಪ್ರಕರಣದ ತನಿಖೆಯಲ್ಲಿ ಪಟ್ಟಣ ಯೋಜನಾ ವಿಭಾಗದಲ್ಲಿ ಎಂಎಸ್ ಪುಟ್ಟೇವಾರ್ ಅವರ ಕೆಲಸದಲ್ಲಿ ಭಾರಿ ಅಕ್ರಮಗಳು ಕಂಡುಬಂದಿವೆ. ಹಲವು ದೂರುಗಳು ಬಂದಿದ್ದರೂ ಆಕೆಯ ರಾಜಕೀಯ ಸಂಬಂಧದಿಂದಾಗಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ತನಿಖೆಯಿಂದ ತಿಳಿದುಬಂದಿದೆ. ನಿಯಮ ಉಲ್ಲಂಘಿಸಿ ಅಕ್ರಮ ಬಡಾವಣೆಗಳನ್ನು ಸಕ್ರಮಗೊಳಿಸಿದ ಆರೋಪ ಅವರ ಮೇಲಿದೆ. ಆಕೆಯ ಬಂಧನ ದಿಂದ ಟೌನ್ ಪ್ಲಾನಿಂಗ್ ನಲ್ಲಿ ನಡೆದಿರುವ ಮತ್ತಷ್ಟು ಅಕ್ರಮಗಳು ಬಯಲಿಗೆ ಬರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.