ಭಾರತೀಯ ನ್ಯಾಯಮೂರ್ತಿಗಳ ಕಾರ್ಯ ಕೇವಲ ನ್ಯಾಯ ನಿರ್ಣಯಕ್ಕಷ್ಟೇ ಸೀಮಿತವಾಗಿಲ್ಲ. ಅವರ ಕಾರ್ಯವ್ಯಾಪ್ತಿ ನ್ಯಾಯಾಲಯವನ್ನೂ ಮೀರಿದ್ದು. ಹಾಗಾಗಿಯೇ ಭಾರತೀಯ ನ್ಯಾಯಾಲಯದಲ್ಲಿ ಮೂವತ್ತು ಲಕ್ಷದಷ್ಟು ಕೇಸುಗಳು ಇತ್ಯರ್ಥವಾಗದೇ ಬಾಕಿಯಾಗಿವೆ. ನ್ಯಾಯಮೂರ್ತಿಗಳ ಕಾರ್ಯಭಾರದಲ್ಲಿ ನ್ಯಾಯ ನಿರ್ಣಯ, ನ್ಯಾಯಾಲಯಗಳ ನಿರ್ವಹಣೆಗಳು ಮಾತ್ರ ಸೇರಿರದೆ ಕಾನೂನಿನ ನೆರವು ನೀಡುವುದು ಸೇರಿದೆ.
ಸರಿಸುಮಾರು 20,000 ಟ್ರಯಲ್ ಕೋರ್ಟ್‌ಗಳಲ್ಲಿ ಮೂವತ್ತು ಲಕ್ಷಕ್ಕಿಂತಲೂ ಅಧಿಕ ವ್ಯಾಜ್ಯಗಳು ನ್ಯಾಯಕ್ಕಾಗಿ ಕಾಯುತ್ತಿವೆ. ಅತಿಯಾದ ಕಾರ್ಯದೊತ್ತಡದಲ್ಲಿರುವ ಪ್ರತಿಶತ 38ರಷ್ಟು ನ್ಯಾಯಮೂರ್ತಿಗಳು ತಮ್ಮಸಮಯವನ್ನು ವಿವಾದಗಳ ತೀರ್ಪು, ಕೋರ್ಟ್ ಕಾರ್ಯಕಲಾಪ, ಕೇಸ್‌ಗಳ ವಿಂಗಡನೆ ಮತ್ತು ಕಾನೂನಿನ ನೆರವು ಎಂದು ಹಂಚಬೇಕಾಗಿದೆ. ಹಾಗಾಗಿಯೇ ಕಾನೂನಿನ ನೆರವು ಕಡಿಮೆ ಪ್ರಾಶಸ್ತ್ಯ ಪಡೆದುಕೊಳ್ಳುತ್ತಲಿದೆ. ಈಗಿನ ಜಡ್ಜ್‌ಗಳ ಕೆಲಸದ ಚೌಕಟ್ಟು ಜಿಲ್ಲಾ ನ್ಯಾಯಮೂರ್ತಿಗಳ ಮೇಲೆ ಹೆಚ್ಚಿನ ಹೊರೆಯನ್ನು ಹೊರಿಸುತ್ತದೆ. ಸೂಕ್ತ ಸಿಬ್ಬಂದಿಗಳೂ ಲಭ್ಯವಿಲ್ಲದಿರುವ ಜಿಲ್ಲಾ ನ್ಯಾಯಮೂರ್ತಿಗಳು ಕಾನೂನು ಸೇವೆಯ ವಾರದ ವರದಿಯನ್ನು ರಾಜ್ಯದ ಪ್ರತಿನಿಧಿಗಳಿಗೆ ಸಲ್ಲಿಸಬೇಕು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸಮಯ ಮತ್ತು ಸೌಲಭ್ಯಗಳ ಕೊರತೆ ಮಾತ್ರವಲ್ಲದೆ ಭಾರತದ ಜಡ್ಜ್‌ಗಳಿಗೆ ನಿರ್ವಹಣಾ ಸಾಮರ್ಥ್ಯದ ಕೊರತೆಯೂ ಇದೆ. ಬದಲಾವಣೆಗಳನ್ನು ಪರಿಗಣಿಸುವುದಾದರೆ ಈ ಸಮಸ್ಯೆಯ ಬಗ್ಗೆ ಹೆಚ್ಚು ಒತ್ತು ಕೊಡಬೇಕಾಗುತ್ತದೆ. ಸಾಮಾಜದ ಕಲ್ಯಾಣಕ್ಕಾಗಿ ಯಾವೆಲ್ಲಾ ಅಂಶಗಳು ಬೇಕು ಎಂದು ನಿರ್ಣಯಿಸುವ ಕೌಶಲ್ಯವೂ ಹಲವು ಜಡ್ಜ್‌ಗಳಿಗಿಲ್ಲ.
ಸದ್ಯದ ಕಾನೂನಿನ ನೆರವು ಘಟಕವು ಪರಿಣಾಮಕಾರಿ ಮೇಲ್ವಿಚಾರಣೆ, ಮೌಲ್ಯಮಾಪಣ, ಪ್ರತಿಕ್ರಿಯಾತ್ಮಕ ಕಾರ್ಯವಿಧಾನಗಳನ್ನು ಒಳಗೊಂಡಿಲ್ಲ. ಫಲಾನುಭವಿಗಳು ಇದರ ಪ್ರಯೋಜನವನ್ನು ಪಡೆದುಕೊಂಡಿದ್ದಾರಾ ಎಂದು ಪರಿಶೀಲಿಸಲೂ ಶಕ್ತವಾಗಿಲ್ಲ. ಕಾನೂನು ಮೌಲ್ಯಮಾಪನ ತಂಡದ ರಚನೆ ಮತ್ತು ನಿಯಮಿತವಾಗಿ ಅವರಿಂದ ವರದಿ ತರಿಸಿಕೊಳ್ಳುವುದನ್ನು ಕಡ್ಡಾಯ ಮಾಡುತ್ತದೆ.
ಅಧ್ಯಯನಗಳ ಪ್ರಕಾರ ಪ್ರತಿಶತ 60ರಷ್ಟು ಜಿಲ್ಲಾಮಟ್ಟದ ಕೋರ್ಟ್‌ಗಳು ಮೌಲ್ಯಮಾಒನ ತಂಡವನ್ನು ರಚಿಸಿದ್ದು, ಅವುಗಳಲ್ಲಿ 25 ಪ್ರತಿಶತಕ್ಕಿಂತಲೂ ಕಡಿಮೆ ಕೋರ್ಟ್‌ಗಳು ಕಾನೂನು ನೆರವಿನ ಕೇಸ್‌ಗಳ ಪ್ರಗತಿಯನ್ನು ಪರಿಶೀಲಿಸಲು ರಿಜಿಸ್ಟರ್ ಪುಸ್ತಕ ಮಾಡಿಟ್ಟುಕೊಂಡಿವೆ.
ಜಡ್ಜ್‌ಗಳ ಹೆಗಲ ಮೇಲಿರುವ ಕಾನೂನಿನ ನೆರವಿನ ಜವಾಬ್ದಾರಿಯನ್ನು ಬದ್ಧತೆಯುಳ್ಳ ಆಡಳಿತ ಸಂಸ್ಥೆಗೆ ವರ್ಗಾಯಿಸುವುದರಿಂದ ಈ ಸಮಸ್ಯೆ ಪರಿಹಾರವಾಗಬಹುದು. ನ್ಯಾಯಾಂಗದ ಅಧಿಕಾರಿಯೊಬ್ಬರು ಸಂಸ್ಥೆಯ ಚಟುವಟಿಕೆಯ ಮೇಲೆ ಮೇಲ್ವಿಚಾರಣೆ ನಡೆಸಬಹುದು. ಆದರೆ ಸಂಸ್ಥೆಯ ದಿನ ನಿತ್ಯದ ಆಗುಹೋಗುಗಳನ್ನು ಒಬ್ಬ ನುರಿತ, ಅನುಭವಿ ವ್ಯವಸ್ಥಾಪಕ ಸಿಬ್ಬಂದಿಗಳೇ ನೋಡಿಕೊಳ್ಳುವಂತಾಗಬೇಕು. ಕೋರ್ಟ್‌ಗಳ ಡಿಜಿಟಲೀಕರಣ ಮಾಡುವುದರ ಮೂಲಕ ವ್ಯಾಜ್ಯಗಳ ಮೌಲ್ಯಮಾಪನವೂ ಸುಲಭವಾಗುತ್ತದೆ. ಪ್ರಕರಣವೊಂದು ಯಾವ ಹಂತದಲ್ಲಿದೆ, ವಿಚಾರಣೆಯ ದಿನಾಂಕ, ಪ್ರಕರಣದ ವಕೀಲ ಯಾರು ಎಂಬ ಎಲ್ಲಾ ಮಾಹಿತಿಗಳು ಈಗ ಆನ್‌ಲೈನ್‌ನಲ್ಲಿ ಲಭ್ಯವಿದೆ. ಹಾಗಾಗಿ ಕಾನೂನು ನೆರವಿನ ಪ್ರಕರಣಗಳೂ ಕಾಗದ ಆಧಾರಿತ ಕಾರ್ಯವಿಧಾನದಿಂದ ಡಿಜೀಟಲೀಕರಣದತ್ತ ಸಾಗಬೇಕು. ಕಾನೂನು ಸೇವಾ ಪ್ರಾಧಿಕಾರದ ಉಸ್ತುವಾರಿ ವಹಿಸಿಕೊಂಡಿರುವವರು ಕೇಸಿನ ಪ್ರಗತಿಯನ್ನು ಮೌಲ್ಯಮಾಪನ ಮಾಡುವಂತಹ ತಾಂತ್ರಿಕತೆಯನ್ನು ಅಭಿವೃದ್ಧಿ ಪಡಿಸಿ ಅವನ್ನು ಕೋರ್ಟಿನೊಂದಿಗೆ ಜೋಡಿಸಬೇಕು. ಹೀಗಾದಾಗ ಜಿಲ್ಲಾ ನ್ಯಾಯಮೂರ್ತಿಗಳಿಗೆ ಮಾಹಿತಿಗಳನ್ನು ಸಂಯೋಜಿಸಿ ರಾಜ್ಯದ ಪ್ರತಿನಿಧಿಗಳಿಗೆ ಕಳುಹಿಸುವುದೂ ಸುಲಭವಾಗುತ್ತದೆ.
ಭಾರತದ ನ್ಯಾಯ ತೀರ್ಮಾನ ಪದ್ಧತಿ ಅಸಮಾನತೆ, ವಿಳಂಬತೆಯನ್ನು ತೊಡೆದು ಹಾಕಬೇಕಾದರೆ ನೀತಿ ನಿಯಮಗಳ ಚೌಕಟ್ಟನ್ನು ಅಮೂಲಾಗ್ರವಾಗಿ ಬದಲಾಯಿಸಬೇಕು. ಭಾರತದಂತಹಲಹ ರಾಷ್ಟ್ರದಲ್ಲಿ ಅತ್ಯಂತ ಪರಿಣಾಮಕಾರಿ, ಪ್ರಾಮಾಣಿಕ ಮತ್ತು ತ್ವರಿತ ನ್ಯಾಯತೀರ್ಮಾನವಾಗಬಲ್ಲ ನ್ಯಾಯ ವ್ಯವಸ್ಥೆ ಇರುವುದು ಅನಿವಾರ್ಯ. ಕಾನೂನಾತ್ಮಕ ಸಹಾಯದ ಮೌಲ್ಯಮಾಪನವು ಸುಲಭವಾದಂತೆ ನ್ಯಾಯ ವ್ಯಸಸ್ಥೆಯು ಪರಿಣಾಮಕಾರಿಯಾಗಿ ನ್ಯಾಯವನ್ನು ಒದಗಿಸುತ್ತದೆಯೋ ಎಂಬುವುದನ್ನು ಪರಿಶೀಲಿಸುವುದೂ ಸುಲಭವಾಗುತ್ತದೆ. ಜನಸಾಮಾನ್ಯರ ಮೊಕದ್ದಮೆಗಳು ಮತ್ತು ಹೈ ಪ್ರೊಫೈಲ್ ಕೇಸುಗಳು ಅನ್ನಿಸಿಕೊಳ್ಳುವ ವ್ಯಾಜ್ಯಗಳು ಸಮಾನ ಆದ್ಯತೆ ಪಡೆದುಕೊಂಡಾಗಷ್ಟೇ ಇಡೀ ನ್ಯಾಯ ವ್ಯವಸ್ಥೆ ಅರ್ಥಪೂರ್ಣ ಅನಿಸೀತು.