ಟಿ ಆರ್ ಪಿ, ಸರ್ಕ್ಯಲೇಷನ್, ಪೇಜ್ ವಿವ್ಸ್ ಗಳ ಅಬ್ಬರವನ್ನೇ ಪತ್ರಿಕೋದ್ಯಮವೆಂದು ಬಿಂಬಿಸುತ್ತಿರುವ ಕಾಲಘಟ್ಟದಲ್ಲಿ ಇಂದು ನಾವಿದ್ದೇವೆ. ವ್ಯವಹಾರ ಕೇಂದ್ರಿತ ಪತ್ರಿಕೋದ್ಯಮದಿಂದ ಉಮಟಾಗುತ್ತಿರುವ ಅನಾಹುತಗಳು ನಮ್ಮ ಕಣ್ಣ ಮುಂದಿವೆ. ಇಂತಹ ಹೊತ್ತಿನಲ್ಲಿ ಯಾವುದೇ ಒತ್ತಡಗಳಿಗೆ ಬಗ್ಗದೆ, ರಾಜಕೀಯ ಪಕ್ಷಗಳನ್ನು ಓಲೈಸುವ ಅಥವಾ ಜಾಹಿರಾತುಗಳ ಹಂಗಿಲ್ಲದೆ ಜನಪರವಾದ ಜನಮನಕ್ಕೆ ದನಿಯಾಗುವಂತಹ ನಿರ್ಭೀತ ಮತ್ತು ನ್ಯಾಯಪರ ಮಾಧ್ಯಮಗಳ ಅವಶ್ಯಕತೆ ಇಂದು ಹಿಂದೆಂದಿಗಿಂತಲೂ ಕಾಡುತ್ತಿದೆ.
ಕನ್ನಡ ಮಾಧ್ಯಮದಲ್ಲಿ ಕೂಡಾ ಹಲವು ಸುದ್ದಿಗಳಿಗೆ ಹುಟ್ಟಿದ ಮರುಕ್ಷಣವೇ ಜಾಹಿರಾತು ಎಂಬ ವಿಷವನ್ನು ಉಣಿಸಿ ಕೊಲ್ಲಲಾಗುತ್ತದೆ. ಇದು ಎಲ್ಲರಿಗೂ ತಿಳಿದಿರುವ ಸಂಗತಿ. ವಿದ್ಯುನ್ಮಾನ ಚಾನೆಲ್’ಗಳನ್ನು ಹಾಗೂ ಪತ್ರಿಕೆಗಳನ್ನು ನಡೆಸಲು ತಗಲುವ ವೆಚ್ಚ ಭರಿಸಲು ಜಾಹಿರಾತುಗಳೇ ಪ್ರಮುಖ ದಾರಿ. ಆದರೆ, ಈ ಜಾಹಿರಾತುಗಳೇ ಪತ್ರಿಕೋದ್ಯಮದ ನೈಜ ಆಶಯವನ್ನು ಉಸಿಗಟ್ಟಿಸಿ ಕೊಲ್ಲುವಂತಾಗಬಾರದು. ಜಾಹಿರಾತುಗಳು ಸುದ್ದಿ ಮಾಧ್ಯಮಗಳನ್ನು ಇನ್ನೊಬ್ಬರ ಹಂಗಿಗೆ ತಳ್ಳಬಾರದು. ಯಾರ ಹಂಗಿಲ್ಲದೆ, ಜಾಹಿರಾತುಗಳ ಗೊಡವೆಯಿಲ್ಲದೆ ಜನರಿಂದಲೇ ನಡೆಯುತ್ತಿರುವ ಬೆರಳೆಣಿಕೆಯಷ್ಟು ಮಾಧ್ಯಮ ಸಂಸ್ಥೆಗಳ ಪೈಕಿ ಪ್ರತಿಧ್ವನಿಯೂ ಒಂದು.
ಪ್ರತಿಧ್ವನಿಗೆ ಇಂದು ಮೂರರ ಸಂಭ್ರಮ. ಕಳೆದ ಮೂರು ವರ್ಷಗಳಿಂದ ಕರುನಾಡಿನ ಜನತೆಗೆ ರಾಜಕೀಯ, ಶಿಕ್ಷಣ, ಆರ್ಥಿಕ, ಸಿನಿಮಾ, ಕ್ರೀಡೆ ಮುಂತಾದ ಕ್ಷೇತ್ರಗಳ ಪ್ರಮುಖ ವಿಚಾರಗಳ ಕುರಿತು ಅತ್ಯಂತ ಸರಳ ಹಾಗೂ ಸ್ಥೂಲ ವಿಶ್ಲೇಷಣೆಯನ್ನು ಪ್ರತಿಧ್ವನಿ ನೀಡುತ್ತಿದೆ. ಕರೋನಾದಂತಹ ಕಷ್ಟ ಕಾಲದಲ್ಲಿ ಸಣ್ಣಪುಟ್ಟ ಸುದ್ದಿ ಮಾಧ್ಯಮಗಳು ನಷ್ಟವನ್ನು ಭರಿಸಲಾಗದೆ ತಮ್ಮ ಸೇವೆ ಸ್ಥಗಿತಗೊಳಿಸಿದ ಸಂದರ್ಭದಲ್ಲಿಯೂ, ಪ್ರತಿಧ್ವನಿ ಕರ್ನಾಟಕದ ಮೂಲೆ ಮೂಲೆಗೂ ತಲುಪಿ ಜನರ ಸಂಕಷ್ಟಗಳನ್ನು ಪ್ರಭುತ್ವದ ಗಮನಕ್ಕೆ ತರುವಂತಹ ಕೆಲಸ ಮಾಡಿದೆ.
ಸುದ್ದಿಯಲ್ಲಿ ಗ್ಲಾಮರ್, ರೋಚಕತೆ ಇಲ್ಲದಿದ್ದರೆ ಜನರು ಓದುವುದಿಲ್ಲ, ಜನರ ಬೆಂಬಲ ದಕ್ಕುವುದಿಲ್ಲ ಎಂಬ ಕಪೋಲಕಲ್ಪಿತ ಸಿದ್ಧಾಂತವನ್ನು ಪ್ರತಿಧ್ವನಿ ಸುಳ್ಳು ಎಂದು ನಿರೂಪಿಸಿದೆ. ಇಲ್ಲಿ ಪ್ರಸಾರವಾಗುವ ವೀಡಿಯೋ ಸುದ್ದಿಗಳಲ್ಲಿ ಆರ್ಭಟವಿಲ್ಲ, ಕೂಗುಮಾರಿ ಆ್ಯಂಕರ್’ಗಳಿಲ್ಲ. ಇಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ದ್ವೇಷ ಹರಡುವ ಅಥವಾ ರೋಚಕ ತಲೆಬರಹಗಳಿಂದ ಜನರನ್ನು ಮೂರ್ಖರಾಗಿಸುವ ಮನಸ್ಥಿತಿಯಿಲ್ಲ. ವಸ್ತುನಿಷ್ಟವಾದ ಮಾಹಿತಿಯನ್ನು ಜನರಿಗೆ ಯಥಾವತ್ತಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನವಷ್ಟೇ ಇಲ್ಲಿ ಕಾಣಬಹುದು. ಈ ಪ್ರಯತ್ನಕ್ಕೆ ಕರ್ನಾಟಕದ ಜನರು ಕೈ ಹಿಡಿದಿದ್ದಾರೆ. ಜನರಿಗೆ ವಸ್ತುನಿಷ್ಟ ಸುದ್ದಿಯ ಅಗತ್ಯತೆಯ ಅರಿವಾಗಿದ್ದೇ ಈ ಬದಲಾವಣೆಗೆ ಕಾರಣ ಎಂಬುದು ನಮ್ಮ ಬಲವಾದ ನಂಬಿಕೆ.
ಪ್ರತಿಧ್ವನಿಯು Truth Pro Foundation India ಎಂಬ ಸರ್ಕಾರೇತರ ಸಂಸ್ಥೆಯ ಅಂಗ ಸಂಸ್ಥೆ. ಗ್ರಾಮೀಣ ಭಾಗಗಳ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಸದುದ್ದೇಶವನ್ನು ಹೊಂದಿದೆ ಸಂಸ್ಥೆ TPFI. ಹಲವು ವರ್ಷಗಳ ಕಾಲ ಶಿಕ್ಷಣ ಕ್ಷೇತ್ರವನ್ನೇ ಗುರಿಯಾಗಿಸಿ ಸೇವೆ ಸಲ್ಲಿಸುತ್ತಿದ್ದ ಸಂಸ್ಥೆ, ಮಾಧ್ಯಮ ಕ್ಷೇತ್ರದಲ್ಲಿ ಆಗುತ್ತಿರುವ ಅಮೂಲಾಗ್ರ ಬದಲಾವಣೆಗಳನ್ನು ಕಂಡು, ಈ ಕ್ಷೇತ್ರದಲ್ಲಿ ನಿಜವಾದ ಹಾಗೂ ಪ್ರಾಯೋಗಿಕವಾದ ಬದಲಾವಣೆಯನ್ನು ತರುವ ಸಲುವಾಗಿ ಪ್ರತಿಧ್ವನಿ ಎಂಬ ಸುದ್ದಿ ಸಂಸ್ಥೆಯನ್ನು ಆರಂಭಿಸಿದೆ.
ಜಾಹಿರಾತುಗಳಿಲ್ಲದೆ ಸುದ್ದಿ ಸಂಸ್ಥೆ ನಡೆಸುವುದರ ಬಗ್ಗೆ ಭಾಷಣ ಬಿಗಿಯುವುದು ಸುಲಭ ಆದರೆ, ಪ್ರಾಯೋಗಿಕವಾಗಿ ನಡೆಸುವುದು ಕಷ್ಟ ಎಂಬ ವಾದಕ್ಕೆ ಅಪವಾದವಾಗಿ ಇಂದು ಪ್ರತಿಧ್ವನಿ ಬೆಳೆದು ನಿಂತಿದೆ. ಜನರ ಕಷ್ಟಗಳಿಗೆ ದನಿಯಾಗಿ, ಪ್ರತಿಭಟನೆಗಳನ್ನು ಹತ್ತಿಕ್ಕುತ್ತಿರುವ ಪ್ರಭುತ್ವದ ವಿರುದ್ಧ ಶಾಶ್ವತ ವಿರೋಧ ಪಕ್ಷದಂತೆ ಪ್ರತಿಧ್ವನಿಯು ಕಾರ್ಯ ನಿರ್ವಹಿಸುತ್ತಿದೆ.
ಜಾಹಿರಾತಿನ ಹಂಗಿಗೆ ಬಿದ್ದು ಸತ್ಯಪರ ವಾಸ್ತವ ಸುದ್ದಿಗಳನ್ನು ಜನರಿಗೆ ತಲುಪಿಸಲು ವಿಫಲರಾಗುತ್ತಿರುವ ಸುದ್ದಿ ಮಾಧ್ಯಮಗಳ ನಡುವೆ ಸುದ್ದಿಗಳ ವಸ್ತುನಿಷ್ಟ ವಿಶ್ಲೇಷಣೆಯನ್ನು ಜನರಿಗೆ ತಲುಪಿಸುತ್ತಿರುವ ಪ್ರತಿಧ್ವನಿ ತಲೆ ಎತ್ತಿ ನಿಲ್ಲಬೇಕಿದೆ. ಇದಕ್ಕಾಗಿ ನಮಗೆ ಜನರ ಬೆಂಬಲ ಮತ್ತಷ್ಟು ಅಗತ್ಯವಿದೆ. ನಿಮ್ಮ ಬೆಂಬಲವೇ ನಮಗೆ ಬಂಡವಾಳ.
ನಮಗೆ ಬೇಕಾದ ಮಾಹಿತಿ ಪಡೆಯುವುದು ನಮ್ಮ ಹಕ್ಕು. ಈ ಹಕ್ಕನ್ನು ಚಲಾಯಿಸಲು ಸ್ವತಂತ್ರ ಸುದ್ದಿ ಮಾಧ್ಯಮವಾದ ಪ್ರತಿಧ್ವನಿಗೆ ಮತ್ತಷ್ಟು ಹುರುಪು ತುಂಬುವ ಕೆಲಸವಾಗಬೇಕಿದೆ. ಸುದ್ದಿಯ ವಸ್ತುನಿಷ್ಟ ವಿಶ್ಲೇಷಣೆಗಾಗಿ ಪ್ರತಿಧ್ವನಿ ನಮ್ಮ ಆಯ್ಕೆಯಾಗಿರಲಿ.
ಮೂರನೇ ವರ್ಷವನ್ನು ಯಶಸ್ವಿಯಾಗಿ ಪುರೈಸುತ್ತಿರುವ ಪ್ರತಿಧ್ವನಿಗೆ ಶುಭಾಶಯಗಳು. ಈ ಮೈಲಿಗಲ್ಲು ಸಾಧಿಸಲು ಕಾರಣೀಕರ್ತರಾದ ಓದುಗರಿಗೆ ಧನ್ಯವಾದಗಳು.