ಭಾರತದಲ್ಲಿ 18 ವರ್ಷ ವಯಸ್ಸಿನ ಮೇಲ್ಪಟ್ಟವರಲ್ಲಿ ಸುಮಾರು 5.6% ಜನ ಈಗಾಗಲೇ ಕರೋನಾ ಲಸಿಕೆಯ ಎರಡೂ ಡೋಸ್ ಪಡೆದಿದ್ದಾರೆ. ಕಳೆದ ಒಂದು ವಾರದಲ್ಲಿ 3.91 ಕೋಟಿ ಡೋಸ್ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದ್ದು, ಈವರೆಗಿನ ಅತೀ ಹೆಚ್ಚು ಪ್ರಮಾಣ ಇದಾಗಿದೆ.
ಸುಪ್ರಿಂಕೋರ್ಟ್ ಗೆ ನಿಡಿರುವ ಅಫಿಡವಿಟ್ ನಲ್ಲಿ ಕೇಂದ್ರ ಸರ್ಕಾರವು ಲಸಿಕಾ ಅಭಿಯಾನದ ಕುರಿತು ಸವಿಸ್ತಾರವಾದ ಮಾಹಿತಿ ನೀಡಿದೆ. ಈ ವರ್ಷಾಂತ್ಯಕ್ಕೆ 188 ಕೋಟಿ ಡೋಸ್ ಲಸಿಕೆಯನ್ನು ವಿತರಿಸುವ ಗುರಿಯನ್ನು ಕೇಂದ್ರ ಹೊಂದಿದೆ. ಜುಲೈ 31ರ ವರೆಗೆ 51.6 ಕೋಟಿ ಲಸಿಕೆಗಳು ವಿತರಣೆಗೆ ಲಭ್ಯವಾಗುವಂತೆ ಮಾಡಲಾಗುವುದು, ಎಂದು ಹೇಳಿದೆ.
ಈಗಾಗಲೇ ಲಸಿಕೆ ಪಡೆದಿರುವವರಲ್ಲಿ 54% ಪುರುಷರು ಹಾಗೂ 46% ಮಹಿಳೆಯರಿದ್ದಾರೆ. ಈ ಅಂತರವನ್ನು ಮುಂದಿನ ದಿನಗಳಲ್ಲಿ ಸರಿದೂಗಿಸಬೇಕಾಗಿದೆ. ಇಲ್ಲವಾದರೆ, ಲಸಿಕಾ ಅಭಿಯಾನಕ್ಕೆ ತೊಂದರೆ ಉಂಟಾಗುವುದು ಎಂದು ರಾಷ್ಟ್ರೀಯ ತಜ್ಞರ ಸಮಿತಿಯ ಮುಖ್ಯಸ್ಥರಾದ ವಿ ಕೆ ಪೌಲ್ ಅವರು ಹೇಳಿದ್ದಾರೆ.
ದಾಖಲೆ ಮಟ್ಟದ ಲಸಿಕಾ ಅಭಿಯಾನದ ಕುರಿತು ಟ್ವೀಟ್ ಮೂಲಕ ಹರ್ಷ ವ್ಯಕ್ತಪಡಿಸಿರುವ ಕೇಂದ್ರ ಆರೋಗ್ಯ ಇಲಾಖೆ, ದೇಶದಲ್ಲಿ ಈಗಾಗಲೇ ಲಸಿಕೆ ಪಡೆದಿರುವವರ ಸಂಖ್ಯೆ ಕೆನಾಡ, ಮಲೇಷಿಯಾ ಮತ್ತು ಸೌದಿ ಅರೇಬಿಯಾ ದೇಶಗಳ ಒಟ್ಟು ಜನಸಂಖ್ಯೆಯನ್ನೇ ಮೀರಿಸಿದೆ, ಎಂದು ಹೇಳಿದೆ.
ಇನ್ನು, ಅತ್ಯಂತ ಅಪಾಯಕಾರಿಯಾಗಿರುವ ಡೆಲ್ಟಾ ಪ್ಲಸ್ ಮಾದರಿಯ ವೈರಾಣು ಕುರಿತು ಕೇಂದ್ರ ಸರ್ಕಾರವು, ಈ ಮಾದರಿಯ ವೈರಸ್ ಈಗಾಗಲೇ 12 ದೇಶಗಳಲ್ಲಿ ವರದಿಯಾಗಿದೆ. ಭಾರತದಲ್ಲಿ ಕೆಲವು ಕಡೆಗಳಲ್ಲಿ ಮಾತ್ರವೇ ಈ ಮಾದರಿ ಪತ್ತೆಯಾಗಿದೆ. ಇದರ ಕುರಿತು ಐಸಿಎಂಆರ್ ಪ್ರಯೋಗಾಲಯದಲ್ಲಿ ಅಧ್ಯಯನ ನಡೆಸಲಾಗುತ್ತಿದೆ, ಎಂದು ಹೇಳಿದೆ.
ಕಳೆದ 24 ಗಂಟೆಯಲ್ಲಿ ದೇಶದಲ್ಲಿ 46,148 ಹೊಸ ಕರೋನಾ ಪ್ರಕರಣಗಳು ವರದಿಯಾಗಿದೆ. ಮೇ ತಿಂಗಳಿಗೆ ಹೋಲಿಸಿದರೆ ಈ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಯಾಗಿದೆ. ಇದು ಕೋವಿಡ್ ಎರಡನೇ ಅಲೆ ಕೊನೆಗೊಳ್ಳುವ ಸೂಚನೆ ಎಂದು ತಜ್ಞರು ಹೇಳಿದ್ದಾರೆ. ಕೋವಿಡ್ ಸಾವುಗಳ ಸಂಖ್ಯೆಯಲ್ಲಿಯೂ ಇಳಿಕೆಯಾಗಿದ್ದು ಕಳೆದ 24 ಗಂಟೆಯಲ್ಲಿ 979 ಜನರು ಕೋವಿಡ್ ನಿಂದ ಮೃತಪಟ್ಟಿದ್ದಾರೆ. ಎರಡನೇ ಅಲೆಯ ವಿರುದ್ದದ ನಡೆದ ಕಠಿಣ ಸಮರದ ಬಳಿಕ, ಈಗ ಬಹುತೇಕ ರಾಜ್ಯಗಳ: ಅನ್ಲಾಕ್ ಮಾಡುವತ್ತ ಮುಖ ಮಾಡಿವೆ.