ಮತ್ತೆ ಸಚಿವ ಸಂಪುಟ ವಿಸ್ತರಣೆ ವಿಚಾರ ಮುನ್ನಲೆಗೆ ಬಂದಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸ್ವಿಜರ್ಲೆಂಡ್ ನ ದಾವೋಸ್ ನಿಂದ ವಿಶ್ವ ಆರ್ಥಿಕ ಸಮ್ಮೇಳನ ಮುಗಿಸಿಕೊಂಡು ವಾಪಸಾಗುತ್ತಿದ್ದಂತೆ ಸಂಪುಟ ವಿಸ್ತರಣೆ ಗರಿಗೆದರಿದೆ. ಸಂಪುಟ ವಿಸ್ತರಣೆ ಈಗಾಗಲೇ ವಿಳಂಬವಾಗಿದೆ. ಇನ್ನು ಮೂರ್ನಾಲ್ಕು ದಿನಗಳೊಳಗೆ ಈ ಕಾರ್ಯ ಪೂರ್ಣಗೊಳಿಸುತ್ತೇನೆ ಎಂದು ಮುಖ್ಯಮಂತ್ರಿಗಳು ಬೆಂಗಳೂರಿಗೆ ಕಾಲಿಡುತ್ತಿದ್ದಂತೆ ಘೋಷಣೆಯನ್ನೂ ಮಾಡಿದ್ದಾರೆ. ಈ ವಿಚಾರಕ್ಕಾಗಿ ಮತ್ತೆ ದೆಹಲಿಗೆ ಹೋಗುವುದಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿದ್ದಾರೆ.
ಈ ಮಧ್ಯೆ ಸಂಪುಟ ವಿಸ್ತರಣೆ ಕುರಿತಂತೆ ಗೊಂದಲಗಳ ಮಧ್ಯೆಯೂ ಒಂದು ವಿಚಾರ ಸ್ಪಷ್ಟವಾಗಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಉರುಳಿಸಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣಕರ್ತರಾದರೂ ಉಪ ಚುನಾವಣೆಯಲ್ಲಿ ಸೋತವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಇಲ್ಲ. ಅಷ್ಟೇ ಅಲ್ಲ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹಗೊಂಡರೂ ಉಪ ಚುನಾವಣೆಯಲ್ಲಿ ಸ್ಪರ್ಧಿಸದೆ ತಮ್ಮ ಕ್ಷೇತ್ರ ಬಿಟ್ಟುಕೊಟ್ಟ ಮಾಜಿ ಸಚಿವ ಆರ್.ಶಂಕರ್ ಅವರಿಗೂ ಸದ್ಯ ಸಚಿವರಾಗುವ ಭಾಗ್ಯವಿಲ್ಲ. ಇದರ ಪರಿಣಾಮ ಯಡಿಯೂರಪ್ಪ ಅವರು ದಾವೋಸ್ ಗೆ ತೆರಳುವವರೆಗೆ ಒಗ್ಗಟ್ಟಾಗಿದ್ದ ಉಪ ಚುನಾವಣೆಯಲ್ಲಿ ಸೋತ ಮತ್ತು ಗೆದ್ದ 16 ಮಂದಿಯಲ್ಲೇ ಈಗ ಅಪಸ್ವರ ಶುರುವಾಗಿದೆ.
ಈ ಮಧ್ಯೆ ಗೆದ್ದವರಿಗೆ ಮಾತ್ರ ಸಚಿವ ಸ್ಥಾನ ಎಂಬ ಯಡಿಯೂರಪ್ಪ ಅವರ ಹೇಳಿಕೆಗೆ ಈಗಾಗಲೇ ಎಚ್.ವಿಶ್ವನಾಥ್ ಮತ್ತು ಆರ್.ಶಂಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೈತ್ರಿ ಸರ್ಕಾರ ಉರುಳಿಸಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದ ಎಲ್ಲರಿಗೂ ಸಚಿವ ಸ್ಥಾನ ನೀಡುವುದಾಗಿ ಯಡಿಯೂರಪ್ಪ ಹೇಳಿದ್ದರು. ಅದರಂತೆ ನಡೆದುಕೊಳ್ಳದಿದ್ದರೆ ಕೊಟ್ಟ ಮಾತು ತಪ್ಪಿದರು ಎಂಬ ಅಪವಾದ ಎದುರಿಸಬೇಕಾಗುತ್ತದೆ ಎಂಬ ಪರೋಕ್ಷ ಎಚ್ಚರಿಕೆಯನ್ನೂ ನೀಡಿದ್ದಾರೆ. ಜತೆಗೆ ಸೋತವರಿಗೂ ಸಚಿವ ಸ್ಥಾನ ನೀಡಬೇಕು ಎಂಬ ಬಗ್ಗೆ ಸೋತ ಮತ್ತು ಗೆದ್ದ ಎಲ್ಲಾ 17 ಶಾಸಕರು ಒಟ್ಟಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚರ್ಚಿಸುವುದಾಗಿ ತಿಳಿಸಿದ್ದಾರೆ.
ಆದರೆ, ಅಷ್ಟರಲ್ಲಾಗಲೇ ಗೆದ್ದವರು ಮತ್ತು ಸೋತವರ ಮಧ್ಯೆ ಅಪಸ್ವರ ಉಂಟಾಗಿದೆ. ಗೆದ್ದವರಿಗೆ ಸಚಿವ ಸ್ಥಾನ ನೀಡುವುದಾಗಿ ಯಡಿಯೂರಪ್ಪ ಹೇಳಿದ್ದಾರೆ. ಸೋತವರ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎನ್ನುವ ನೂತನ ಶಾಸಕ ಬಿ.ಸಿ.ಪಾಟೀಲ್ ಹೇಳಿಕೆ ಉಪ ಚುನಾವಣೆಯಲ್ಲಿ ಸೋತ ಎಚ್.ವಿಶ್ವನಾಥ್, ಎಂ.ಟಿ.ಬಿ.ನಾಗರಾಜ್ ಮತ್ತು ಸಚಿವರಾಗಿ ಅಧಿಕಾರ ಸ್ವೀಕರಿಸಿ ನಂತರ ವಿಧಾನ ಪರಿಷತ್ ಪ್ರವೇಶಿಸುವ ಕನಸು ಕಾಣುತ್ತಿರುವ ಆರ್.ಶಂಕರ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಈ ಕುರಿತು ರಮೇಶ್ ಜಾರಕಿಹೊಳಿ ಅವರಿಗೆ ತಮ್ಮ ಅಸಮಾಧಾನವನ್ನು ಹೇಳಿಕೊಂಡಿದ್ದಾರೆ. ಆದರೆ, ರಮೇಶ್ ಜಾರಕಿಹೊಳಿ ಕಡೆಯಿಂದಲೂ ನಿರೀಕ್ಷಿತ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಸೋತವರ ಸಚಿವರಾಗುವ ಹಪಹಪಿಗೆ ತಣ್ಣೀರೆರಚಿದಂತಾಗಿದೆ.
ದೆಹಲಿ ಭೇಟಿ ರದ್ದಾಗಲು ಕಾರಣವೇನು
ಕಳೆದ ವಾರ ಅಮಿತ್ ಶಾ ಅವರು ರಾಜ್ಯಕ್ಕೆ ಬಂದಿದ್ದಾಗ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಂಪುಟ ವಿಸ್ತರಣೆ ಕುರಿತಂತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ ಯಾರಿಗೆಲ್ಲಾ ಸಚಿವ ಸ್ಥಾನ ನೀಡಬೇಕು ಎಂಬ ಬಗ್ಗೆ ಚರ್ಚಿಸಿ ಬಹುತೇಕ ಅಂತಿಮಗೊಳಿಸಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮುಂದಿಟ್ಟಿರುವ ಪಟ್ಟಿಗೆ ಅಮಿತ್ ಶಾ ಅವರು ಸಮ್ಮತಿ ಸೂಚಿಸಿದ್ದರು. ಆದರೆ, ಉಪಮುಖ್ಯಮಂತ್ರಿ ಸ್ಥಾನದ ಗೊಂದಲ ಬಗೆಹರಿಯದ ಕಾರಣ ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗುತ್ತಿರುವ ಜೆ.ಪಿ.ನಡ್ಡಾ ಅವರೊಂದಿಗೆ ಒಂದು ಬಾರಿ ಮಾತುಕತೆ ನಡೆಸಿ ಎಂದು ಅಮಿತ್ ಶಾ ಅವರು ಯಡಿಯೂರಪ್ಪ ಅವರಿಗೆ ಸಲಹೆ ಮಾಡಿದ್ದರು.
ಆದರೆ, ಸಂಪುಟ ವಿಸ್ತರಣೆ ಈಗಾಗಲೇ ವಿಳಂಬವಾಗಿರುವುದು ಮತ್ತು ಸಚಿವರಾಗಲು ಹೆಚ್ಚುತ್ತಿರುವ ಒತ್ತಡದ ಹಿನ್ನೆಲೆಯಲ್ಲಿ ಮತ್ತು ಅಮಿತ್ ಶಾ ಮತ್ತೆ ಬೆಂಗಳೂರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಜೆ.ಪಿ.ನಡ್ಡಾ ಅವರೊಂದಿಗೆ ದೂರವಾಣಿ ಮೂಲಕವೇ ಚರ್ಚಿಸಿ ಅಮಿತ್ ಶಾ ಸಮ್ಮುಖದಲ್ಲೇ ಅಂತಿಮ ತೀರ್ಮಾನ ಕೈಗೊಳ್ಳಲು ಯಡಿಯೂರಪ್ಪ ತೀರ್ಮಾನಿಸಿದ್ದಾರೆ. ಮೂಲಗಳ ಪ್ರಕಾರ, ಈಗಾಗಲೇ ಸಂಪುಟ ವಿಸ್ತರಣೆ ವಿಳಂಬವಾಗಿದೆ. ಸಾಮಾನ್ಯವಾಗಿ ವಿಳಂಬ ಧೋರಣೆ ಅನುಸರಿಸಿದಾಗ ಪರಿಸ್ಥಿತಿ ಸುಧಾರಿಸಿ ಸಮಸ್ಯೆಯ ತೀವ್ರತೆ ಕಡಿಮೆಯಾಗುತ್ತಿತ್ತು. ಆದರೆ, ಈ ಬಾರಿ ವಿಳಂಬವಾಗುತ್ತಿದ್ದಂತೆ ಸಮಸ್ಯೆಯ ತೀವ್ರತೆ ಹೆಚ್ಚುತ್ತಿದ್ದು, ಒತ್ತಡವೂ ತೀವ್ರಗೊಳ್ಳುತ್ತಿದೆ. ಮತ್ತಷ್ಟು ವಿಳಂಬ ಮಾಡಿದರೆ ಸಮಸ್ಯೆ ಬಿಗಡಾಯಿಸಬಹುದು ಎಂಬ ಕಾರಣಕ್ಕೆ ದೆಹಲಿ ಭೇಟಿ ರದ್ದುಗೊಳಿಸಬೇಕಾದ ಅನಿವಾರ್ಯ ಪರಿಸ್ಥಿತಿಯನ್ನು ಯಡಿಯೂರಪ್ಪ ಅವರು ವರಿಷ್ಠರಿಗೆ ವಿವರಿಸಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲೇ ಸಂಪುಟಚ ವಿಸ್ತರಣೆ ವಿಚಾರ ಇತ್ಯರ್ಥಗೊಳಿಸಲಾಗುತ್ತಿದೆ.
ಉಪಮುಖ್ಯಮಂತ್ರಿ ಹುದ್ದೆ ಕುರಿತಷ್ಟೇ ಚರ್ಚೆ
ಯಾರಿಗೆಲ್ಲಾ ಸಚಿವ ಸ್ಥಾನ ಎಂಬುದು ಈಗಾಗಲೇ ನಿರ್ಧಾರವಾಗಿರುವುದರಿಂದ ಅಮಿತ್ ಶಾ ಅವರೊಂದಿಗೆ ಉಪಮುಖ್ಯಮಂತ್ರಿ ಸ್ಥಾನದ ಕುರಿತಂತೆ ಮಾತ್ರ ಚರ್ಚೆ ನಡೆದು ಅಂತಿಮ ನಿರ್ಧಾರ ಕೈಗೊಳ್ಳಬೇಕಾಗಿದೆ. ಈಗಾಗಲೇ ಮೂವರು ಉಪಮುಖ್ಯಮಂತ್ರಿಗಳಿದ್ದಾರೆ. ಇನ್ನೂ ಕನಿಷ್ಠ ಎರಡು ಉಪಮುಖ್ಯಮಂತ್ರಿಗಳು ಬೇಕು ಎಂಬ ಒತ್ತಡ ತೀವ್ರಗೊಳ್ಳುತ್ತಿದೆ. ಈಗಿರುವ ಮೂರು ಉಪಮುಖ್ಯಮಂತ್ರಿ ಸ್ಥಾನದ ಜತೆ ಮತ್ತೆರಡು ಸ್ಥಾನಗಳನ್ನು ಸೃಷ್ಟಿಸಿ ಅದನ್ನು ಬಿ.ಶ್ರೀರಾಮುಲು ಮತ್ತು ರಮೇಶ್ ಜಾರಕಿಹೊಳಿ ಅವರಿಗೆ ಹಂಚಿಕೆ ಮಾಡಿದರೆ ಹಿರಿಯ ಶಾಸಕರಲ್ಲಿ ಅಸಮಾಧಾನ ಹೆಚ್ಚಾಗಬಹುದು. ಮೇಲಾಗಿ ಮುಖ್ಯಮಂತ್ರಿಗಳು ಸಮರ್ಥರಿಲ್ಲ. ಅದಕ್ಕಾಗಿ ಹೆಚ್ಚು ಉಪಮುಖ್ಯಮಂತ್ರಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ ಎಂಬ ಟೀಕೆ ವ್ಯಕ್ತವಾಗುತ್ತದೆ.
ಹೀಗಾಗಿ ಉಪಮುಖ್ಯಮಂತ್ರಿ ಹುದ್ದೆಗಳನ್ನು ಈಗಿರುವಂತೆ ಮೂರು ಮಾತ್ರ ಉಳಿಸಿಕೊಳ್ಳುವುದೇ? ಇನ್ನೂ ಇಬ್ಬರು ಉಪಮುಖ್ಯಮಂತ್ರಿಗಳನ್ನು ನೇಮಕ ಮಾಡಬೇಕೇ ಅಥವಾ ಉಪಮುಖ್ಯಮಂತ್ರಿ ಹುದ್ದೆಯೂ ಬೇಡ, ಈ ಕುರಿತು ವಿವಾದವೂ ಬೇಡ ಎಂದು ಹಾಲಿ ಇರುವ ಮೂರು ಹುದ್ದೆಗಳನ್ನೂ ರದ್ದುಗೊಳಿಸಬೇಕೇ? ಎಂಬ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಮಿತ್ ಶಾ ಅವರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಸದ್ಯ ಉಪಮುಖ್ಯಮಂತ್ರಿ ಹುದ್ದೆ ಬೇಕು ಎನ್ನುವವರಿಗಿಂತ ಬೇಡ ಎನ್ನುವವರ ಸಂಖ್ಯೆಯೇ ಹೆಚ್ಚಾಗಿರುವುದರಿಂದ ಮುಖ್ಯಮಂತ್ರಿಗಳು ಮತ್ತು ಅಮಿತ್ ಶಾ ನಡುವೆ ಚರ್ಚೆಯಾಗಿ ಹೊರಬರುವ ನಿರ್ಧಾರದ ಕುರಿತು ಹಾಲಿ ಮೂವರು ಉಪಮುಖ್ಯಮಂತ್ರಿಗಳಲ್ಲಿ ಆತಂಕ ಸೃಷ್ಟಿಯಾಗಿದೆ. ಈಗಾಗಲೇ ಅವರು ಮುಖ್ಯಮಂತ್ರಿಯವರೊಂದಿಗೆ ಈ ಬಗ್ಗೆ ಮಾತನಾಡಿದ್ದಾರೆ. ಆದರೆ, ಅಮಿತ್ ಶಾ ಏನು ಹೇಳುತ್ತಾರೋ ನೋಡೋಣ ಎಂಬ ಉತ್ತರ ಮುಖ್ಯಮಂತ್ರಿಗಳಿಂದ ಬಂದಿದ್ದು, ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಷ್ಟೆ.