ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮುಂದಿನ ಕರ್ನಾಟಕದ ಮುಖ್ಯಮಂತ್ರಿ ಆಗಬೇಕೆಂದು ರಾಜ್ಯದ ಅತ್ಯಧಿಕ ಜನರು ಬಯಸುತ್ತಿದ್ದಾರೆ ಎಂದು ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಕಳೆದ ಹಲವು ವರ್ಷಗಳಲ್ಲಿ ಸಿಎಂ ಖುರ್ಚಿಯಲ್ಲಿ ಐದು ವರ್ಷ ಪೂರ್ಣಾವಧಿಯಾಗಿ ಅಧಿಕಾರ ನಡೆಸಿರುವ ಸಿದ್ದರಾಮಯ್ಯ ಪರ ಜನಾಭಿಪ್ರಾಯ ಇದೆ ಎಂದು ಸಮೀಕ್ಷೆ ಹೇಳಿದೆ.
ಸಮೀಕ್ಷೆಯ ಪ್ರಕಾರ ಬಿಜೆಪಿಯ ಬಸವರಾಜ್ ಬೊಮ್ಮಾಯಿ ಎರಡನೇ ಸ್ಥಾನದಲ್ಲಿದ್ದಾರೆ ಎಂದು ಲೋಕನೀತಿ-ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ (ಸಿಎಸ್ಡಿಎಸ್) ಸಹಭಾಗಿತ್ವದಲ್ಲಿ ಎನ್ಡಿಟಿವಿ ವಿಶೇಷ ಸಮೀಕ್ಷೆ “ಪಬ್ಲಿಕ್ ಒಪಿನಿಯನ್” ಬಹಿರಂಗಪಡಿಸಿದೆ. .
ಮೇ 10ರಂದು ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಹಲವು ವಿಷಯಗಳನ್ನು ಆಧರಿಸಿ ರಾಜ್ಯದ ಸಾರ್ವಜನಿಕರ ಅಭಿಪ್ರಾಯಗಳನ್ನು ಅಳೆಯುವ ಉದ್ದೇಶದಿಂದ ಈ ಸಮೀಕ್ಷೆ ಕೈಗೊಳ್ಳಲಾಗಿತ್ತು. ಹಿರಿಯ ಮತದಾರರ ಪೈಕಿ ಸಿದ್ದರಾಮಯ್ಯ, ಬೊಮ್ಮಾಯಿಯವರಿಗಿಂತ ಹೆಚ್ಚು ಜನಪ್ರಿಯರಾಗಿದ್ದರೆ, ಬೊಮ್ಮಾಯಿ ಯುವ ಮತದಾರರ ಅಧಿಕ ಒಲವನ್ನು ಗಳಿಸಿಕೊಂಡಿದ್ದಾರೆ.
ಜಾತ್ಯತೀತ ಜನತಾದಳದ ಮುಖಂಡ ಎಚ್.ಡಿ.ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ನ ಡಿ.ಕೆ.ಶಿವಕುಮಾರ್ ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿದ್ದಾರೆ. ನಾಲ್ಕು ಬಾರಿ ಸಿಎಂ ಹುದ್ದೆ ಅಲಂಕರಿಸಿದ್ದ ಬಿಜೆಪಿಯ ಹಿರಿಯ ಮುಖಂಡ ಬಿ.ಎಸ್.ಯಡಿಯೂರಪ್ಪ 5ನೇ ಸ್ಥಾನದಲ್ಲಿದ್ದಾರೆ.
ಎನ್ಡಿಟಿವಿಯ ಲೋಕನೀತಿ-ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ (ಸಿಎಸ್ಡಿಎಸ್) ನಡೆಸಿದ ಸಮೀಕ್ಷೆಯಲ್ಲಿ ಶೇಕಡಾ 40 ರಷ್ಟು ಜನರು ಸಿದ್ದರಾಮಯ್ಯ ಅವರನ್ನು ಅತ್ಯಂತ ಜನಪ್ರಿಯ ಸಿಎಂ ಅಭ್ಯರ್ಥಿ ಎಂದು ಹೇಳಿದ್ದಾರೆ. ಇದೇ ವೇಳೆ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಕೇವಲ ಶೇ.22, ಜೆಡಿಎಸ್ ನ ಎಚ್.ಡಿ.ಕುಮಾರಸ್ವಾಮಿಗೆ ಶೇ.15, ಡಿ.ಕೆ.ಶಿವಕುಮಾರ್ ಗೆ ಶೇ.4, ಬಿ.ಎಸ್.ಯಡಿಯೂರಪ್ಪಗೆ ಶೇ.5, ಇತರರಿಗೆ ಶೇ.12ರಷ್ಟು ಜನ ಒಲವು ತೋರಿದ್ದಾತೆ. ಹಿರಿಯ ಮತದಾರರಲ್ಲಿ ಸಿದ್ದರಾಮಯ್ಯ ಅವರೇ ಮೊದಲ ಆಯ್ಕೆಯಾಗಿದ್ದು, ಯುವ ಮತದಾರರು ಬೊಮ್ಮಾಯಿ ಅವರ ಆಯ್ಕೆ ಎಂದಿದ್ದಾರೆ.
ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇಕಡ 56ರಷ್ಟು ಮಂದಿ ಮತ ಹಾಕುವ ವೇಳೆ ಅಭ್ಯರ್ಥಿಗಿಂತ ಪಕ್ಷ ಮುಖ್ಯ ಎಂದು ಅಭಿಪ್ರಾಯಪಟ್ಟಿದ್ದರೆ, ಶೇಕಡ 38ರಷ್ಟು ಮಂದಿ ಅಭ್ಯರ್ಥಿಯೇ ಮುಖ್ಯ ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಲಾದ ವ್ಯಕ್ತಿಗಳ ಆಧಾರದಲ್ಲಿ ಮತ ಹಾಕುವುದಾಗಿ ಕೇವಲ ಶೇಕಡ 4ರಷ್ಟು ಮಂದಿ ಸ್ಪಷ್ಟಪಡಿಸಿದ್ದಾರೆ. ಜೆಡಿಎಸ್ ಅಥವಾ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದಾಗಿ ಹೇಳಿರುವವರಲ್ಲಿ ಬಹುತೇಕ ಮಂದಿ ಪಕ್ಷವನ್ನು ಪ್ರಮುಖ ಎಂದು ಪರಿಗಣಿಸಿದ್ದರೆ, ಬಿಜೆಪಿ ಬೆಂಬಲಿಗರು ಈ ವಿಚಾರದಲ್ಲಿ ವಿಭಜನೆಯಾಗಿದ್ದಾರೆ. ಪ್ರಮುಖ ಮ್ಯಾಟ್ರಿಕ್ಗಳಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿಗಿಂತ ಮುಂದಿದೆ ಎನ್ನುವುದು ಸಮೀಕ್ಷೆಯಿಂದ ದೃಢಪಟ್ಟಿದೆ.
ಬಿಜೆಪಿ ಹೆಚ್ಚು ಭ್ರಷ್ಟ ಎಂದು ಶೇಕಡ 59ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದರೆ, ಕಾಂಗ್ರೆಸ್ (ಶೇಕಡ 35) ಹಾಗೂ ಜೆಡಿಎಸ್ (3) ನಂತರದ ಸ್ಥಾನಗಳಲ್ಲಿವೆ. ಅಂತೆಯೇ ವಂಶ ಪಾರಂಪರ ರಾಜಕಾರಣದ ಬಗ್ಗೆ ರಾಷ್ಟ್ರದಲ್ಲಿ ಚರ್ಚೆ ನಡೆಯುತ್ತಿರುವ ನಡುವೆ, ಬಿಜೆಪಿ ಹೆಚ್ಚು ಸ್ವಜನ ಪಕ್ಷಪಾತಿ ಎಂದು ಶೇಕಡ 59ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಹೆಚ್ಚು ಸ್ವಜನ ಪಕ್ಷಪಾತಿ ಎಂದು ಕ್ರಮವಾಗಿ ಶೇಕಡ 30 ಹಾಗೂ ಶೇಕಡ 8ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮೈಸೂರಿನ ವರುಣಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಶಿಗ್ಗಾಂವ ಕ್ಷೇತ್ರದಿಂದ ಬಸವರಾಜ ಬೊಮ್ಮಾಯಿ ಕಣದಲ್ಲಿದ್ದಾರೆ. ಇದು ತಮ್ಮ ಕೊನೆಯ ಚುನಾವಣೆ ಎಂದು ಚುನಾವಣಾ ಪ್ರಚಾರದ ವೇಳೆ ಸಿದ್ದರಾಮಯ್ಯ ಹೇಳಿದ್ದರು. ಇದಾದ ನಂತರ ರಾಜಕೀಯ ತೊರೆಯಲಿದ್ದಾರೆ.