ಬೆಂಗಳೂರಿನಲ್ಲಿ ಕ್ರಮೇಣವಾಗಿ ಕರೋನಾ ಏರಿಕೆಯಾಗುತ್ತಿದೆ. ನೂರರ ಸರಾಸರಿಯಲ್ಲಿದ್ದ ಪ್ರಕರಣಗಳ ಸಂಖ್ಯೆ ಈಗ 300ಕ್ಕೆ ಬಂದು ನಿಂತಿದೆ. ನಗರದ ಅಪಾರ್ಟ್‌ಮೆಂಟ್ ಗಳಲ್ಲೇ ಕರೋನಾ ಸ್ಫೋಟಗೊಳ್ಳುತ್ತಿದ್ದು ಅಪಾರ್ಟ್‌ಮೆಂಟ್ ಗಳಿಗೆ ವಿಶೇಷ ಗೈಡ್ ಲೈನ್ಸ್ ಬಿಬಿಎಂಪಿಯಿಂದ ಬಿಡುಗಡೆಗೊಳ್ಳುವ ಸಾಧ್ಯತೆ ಇದೆ.
ನಿರ್ಬಂಧ ಹೇರಿದರೂ ಅಪಾರ್ಟ್ಮೆಂಟ್ಗಳಲ್ಲಿ ಕಾರ್ಯಕ್ರಮ ಆಯೋಜನೆ
ಎರಡನೇ ಅಲೆಯಲ್ಲಿ ಆಗಿದ್ದೂ ಇದೆ. ನಗರದ ಅಪಾರ್ಟ್‌ಮೆಂಟ್ ಗಳಲ್ಲಿ ಹೆಚ್ಚೆಚ್ಚು ಕರೋನಾ ಪತ್ತೆಯಾಗಿ ಎರಡನೇ ಅಲೆಯಲ್ಲಿ ಜನರ ಬದುಕು ಸಾವು ಬದುಕಿನ ನಡುವೆ ಹೋರಾಡಿತ್ತು. ಈಗಿನ ಪರಿಸ್ಥಿತಿ ನೋಡಿದರೆ ತಜ್ಞರ ಅಭಿಪ್ರಾಯದಂತೆ ಮೂರನೆ ಅಲೆಯೂ ಬರುತ್ತೆ ಎಂಬ ಅನುಮಾನ ದಿಟವಾಗ ತೊಡಗಿದೆ. ಏಕೆಂದರೆ ಕೋರಮಂಗಲ, ಓಕಳಿಪುರ ಸೇರಿದಂತೆ ನಗರದ ಹಲವು ಅಪಾರ್ಟ್ಮೆಂಟ್ನಲ್ಲಿ ಈಗಾಗಲೇ ಕೊರೋನಾ ಸ್ಫೋಟಗೊಂಡಿದೆ. ಕೋರಮಂಗಲ 3ನೇ ಕ್ರಾಸ್ನ ಅಪಾರ್ಟ್ಮೆಂಟ್ನಲ್ಲಿ ನಾಲ್ವರಲ್ಲಿ ಓಮಿಕ್ರಾನ್ ದೃಢವಾಗಿದೆ. ಓಕಳಿಪುರದ ಇಂದ್ರಪ್ರಸ್ಥ ಅಪಾರ್ಟ್ಮೆಂಟ್ನಲ್ಲಿ 27 ಮಂದಿಯಲ್ಲಿ ಕರೋನಾ ಸೋಂಕು ಪತ್ತೆಯಾಗಿದೆ. ಹೀಗಾಗಿ ಹೊಸ ವರ್ಷಾಚರಣೆ ಹಿನ್ನೆಲೆ ಮತ್ತಷ್ಟು ಕ್ಲಸ್ಟರ್ ರೂಪುಗೊಳ್ಳುವ ಆತಂಕದಲ್ಲಿದೆ ಬಿಬಿಎಂಪಿ.
ಅಪಾರ್ಟ್ಮೆಂಟ್ ಅಸೋಸಿಯೇಶನ್ ಗಳ ಜೊತೆ ಸಭೆಗೆ ನಿರ್ಧರಿಸಿದ ಬಿಬಿಎಂಪಿ
ನಗರದ ಅಪಾರ್ಟ್‌ಮೆಂಟ್ ಗಳಲ್ಲೇ ಹೆಚ್ಚೆಚ್ಚು ಕರೋನಾ ಕೇಸ್ ಗಳು ಬೆಳಕಿಗೆ ಬರುತ್ತಿರುವ ಹಿನ್ನೆಲೆ ಆಯುಕ್ತ ಗೌರವ್ ಗುಪ್ತಾರಿಂದ ಅಪಾರ್ಟ್ಮೆಂಟ್ ಸಂಘದ ಜೊತೆ ಸಭೆ ನಡೆಸಲು ಚಿಂತಿಸಿದ್ದಾರೆ. ಸಭೆಯಲ್ಲಿ ಚರ್ಚೆ ಮಾಡಿ ಅಪಾರ್ಟ್ಮೆಂಟ್ಗಳಿಗೆ ವಿಶೇಷ ಮಾರ್ಗಸೂಚಿ ನೀಡುವ ಸಾಧ್ಯತೆಯೂ ಇದೆ. ಹೀಗೆ ಎರಡನೇ ಅಲೆಯ ಆರಂಭದಲ್ಲೂ ಕೂಡ ಅಪಾರ್ಟ್‌ಮೆಂಟ್ ಫೆಡರೇಷನ್ ಜೊತೆ ಸಭೆ ನಡೆಸಿ ಮಾರ್ಗಸೂಚಿ ಬಿಡುಗಡೆ ಮಾಡಲಾಗಿತ್ತು. ಹೀಗಾಗಿ ಎರಡನೇ ಅಲೆಯ ಮಾರ್ಗಸೂಚಿಯನ್ನೇ ಮತ್ತೆ ಬಿಡುಗಡೆಗೊಳಿಸುವ ಸಾಧ್ಯತೆ ಇದೆ. ಇನ್ನು ಬಿಬಿಎಂಪಿಯ ಕರೋನಾ ಗೈಡ್ಲೈನ್ಸ್ ಪಾಲಿಸಲು ಅಪಾರ್ಟ್ಮೆಂಟ್ ಫೆಡರೇಷನ್ ಕೂಡ ಸಿದ್ಧವಾಗಿದೆ.

ಅಪಾರ್ಟ್ಮೆಂಟ್ ಸಂಭಾವ್ಯ ಮಾರ್ಗಸೂಚಿ
- 50ಕ್ಕಿಂತ ಹೆಚ್ಚಿನ ಜನ ಸೇರುವಿಕೆಗೆ ಬ್ರೇಕ್
- ಅಪಾರ್ಟ್ಮೆಂಟ್ನ ನಿವಾಸಿಗಳಿಗೆ 2 ಡೋಸ್ ಕಡ್ಡಾಯ
- ಕಾರ್ಯಕ್ರಮ ಆಯೋಜಿಸುವ ಮೊದಲು ಪಾಲಿಕೆಗೆ ಮಾಹಿತಿ
- ಸ್ಥಳ ಹಾಗೂ ಸೇರುವ ಜನರ ಬಗೆಗಿನ ಸಂಪೂರ್ಣ ಮಾಹಿತಿ ನೀಡುವುದು
- ಅಪಾರ್ಟ್ಮೆಂಟ್ಗಳಲ್ಲಿ ಐಸೋಲೇಷನ್ ಕೊಠಡಿ ಕಡ್ಡಾಯ
- ಲಸಿಕೆ ಪಡೆಯದವರಿದ್ದರೆ ಅಪಾರ್ಟ್ಮೆಂಟ್ನಲ್ಲೇ ಕ್ಯಾಂಪ್ ಏರ್ಪಡಿಸುವುದು
- ಪಾರ್ಟಿ, ವಿಶೇಷ ಕಾರ್ಯಕ್ರಮ, ಟೂರ್ನಮೆಂಟ್ನಿಂದ ಮಕ್ಕಳು, ವಯಸ್ಕರನ್ನು ದೂರವಿಡುವುದು
- ಸ್ವಿಮ್ಮಿಂಗ್ ಪೂಲ್, ಕ್ರೀಡಾಂಗಣ, ಕಾಮನ್ ಏರಿಯಾಗೆ ನಿವಾಸಿಗಳು ಬಳಸದಂತೆ ಎಚ್ಚರಿಕೆ
ಹೀಗೆ ಅಪಾರ್ಟ್‌ಮೆಂಟ್ ಗಳಲ್ಲಿ ಕರೋನಾ ವಿಸ್ಫೋಟಗೊಳ್ಳುತ್ತಿರುವ ಆರಂಭದ ಹೊತ್ತಲ್ಲೇ ಬಿಬಿಎಂಪಿ ಅಪಾರ್ಟ್‌ಮೆಂಟ್ ಗಳಿಗೆ ವಿಶೇಷ ಗೈಡ್ ಲೈನ್ಸ್ ಗೆ ಚಿಂತಿಸಿದೆ. ಮೂರನೇ ಅಲೆಗೂ ಮುನ್ನವೇ ಅಪಾರ್ಟ್‌ಮೆಂಟ್ ಗಳಲ್ಲಿನ ಪಾರ್ಟಿ, ಕಾರ್ಯಕ್ರಮಗಳಿಗೆ ಬ್ರೇಕ್ ಬಿದ್ದರೆ ಒಂದು ಹಂತಕ್ಕೆ ನಗರದಲ್ಲಿ ಕೊರೋನಾ ಹತೋಟಿಗೆ ತಂದುಕೊಳ್ಳಬಹುದು.












