ಅಮೆರಿಕಾದಲ್ಲಿ ಮತ್ತೆ ಬಂದೂಕುಧಾರಿಗಳು ಅಟ್ಟಹಾಸ ಮೆರೆದಿದ್ದು, ಲೆವಿಸ್ಟನ್ ಪ್ರಾಂತ್ಯದ ಮೈನೆಯಲ್ಲಿ ಬುಧವಾರ ರಾತ್ರಿ ಬಂದೂಕುಧಾರಿಯೊಬ್ಬ ಸಾಮೂಹಿಕ ಗುಂಡಿನ ದಾಳಿ ನಡೆಸಿದ್ದಾನೆ. ಭೀಕರ ದಾಳಿಯಲ್ಲಿ 22 ಮಂದಿ ಸಾವನ್ನಪ್ಪಿದ್ದಾರೆ.
ಸಿಟಿ ಕೌಬೌಲಿಂಗ್ ಅಲ್ಲೆ ರೆಸ್ಟೋರೆಂಟ್ ಮತ್ತು ಬಾರ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ 50-60 ಮಂದಿ ಗಾಯಗೊಂಡಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ, ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ವರದಿಯಾಗಿವೆ.
ಈ ನಡುವೆ ಆಂಡ್ರೊಸ್ಕೊಗಿನ್ ಕೌಂಟಿ ಶೆರಿಫ್ ಕಚೇರಿಯು ದಾಳಿಯ ಶಂಕಿತನ ಎರಡು ಛಾಯಾಚಿತ್ರಗಳನ್ನು ಪೋಸ್ಟ್ ಮಾಡಿದೆ. ಚಿತ್ರದಲ್ಲಿ ಆರೋಪಿ ಸ್ಥಳದಲ್ಲಿ ರೈಫಲ್ ಹಿಡಿದು ನಿಂತಿರುವುದು ಕಂಡು ಬಂದಿದೆ. ಈತ ಸದ್ಯ ತಲೆಮರೆಸಿಕೊಂಡಿದ್ದಾನೆ. ಅಧಿಕಾರಿಗಳು ಚಿತ್ರದಲ್ಲಿರುವ ಶಂಕಿತನನ್ನು ಗುರುತಿಸಲು ಸಾರ್ವಜನಿಕರ ಸಹಾಯವನ್ನು ಕೇಳಿದ್ದಾರೆ.
ಲೆವಿಸ್ಟನ್ ನಗರದಲ್ಲಿ ಶೂಟರ್ ಸಕ್ರಿಯವಾಗಿದ್ದು, ಯಾರೂ ಮನೆಯಿಂದ ಹೊರಗಡೆ ಬರಬೇಡಿ. ಬಾಗಿಲು ಹಾಕಿಕೊಂಡು ಒಳಗಡೆ ಇರಿ. ಕಾನೂನು ಜಾರಿ ಅಧಿಕಾರಿಗಳಿಗೆ ಸಹಾಯ ಮಾಡಿ. ನೀವು ಯಾವುದೇ ಅನುಮಾನಾಸ್ಪದ ಚಟುವಟಿಕೆ ಅಥವಾ ವ್ಯಕ್ತಿಗಳನ್ನು ನೋಡಿದರೆ ದಯವಿಟ್ಟು 911 ಗೆ ಕರೆ ಮಾಡಿ ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
2017ರಲ್ಲಿ ಲಾಸ್ ವೇಗಾಸ್‌ನಲ್ಲಿ ಕಿಕ್ಕಿರಿದ ಸಂಗೀತೋತ್ಸವದ ಮೇಲೆ ಬಂದೂಕುಧಾರಿಯೊಬ್ಬ ಗುಂಡು ಹಾರಿಸಿ ಸುಮಾರು 60 ಜನರನ್ನು ಕೊಂದ ಬಳಿಕ ನಡೆದ ಅತಿದೊಡ್ಡ ಗುಂಡಿನ ದಾಳಿಯು ಇದಾಗಿದೆ.
ಯುನೈಟೆಡ್ ಸ್ಟೇಟ್ಸ್‌ನಲ್ಲಿ ಗನ್ ಹಿಂಸೆಯು ಸಾಮಾನ್ಯವಾಗಿದೆ. ಯುನೈಟೆಡ್ ಸ್ಟೇಟ್ಸ್ ಈ ವರ್ಷ 500 ಕ್ಕೂ ಹೆಚ್ಚು ಸಾಮೂಹಿಕ ಗುಂಡಿನ ದಾಳಿಗಳನ್ನು ನಡೆದಿದೆ.