ನವದೆಹಲಿ: ಕೇರಳ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದ್ದಾರೆ.
ಕೇಂದ್ರ ಸರ್ಕಾರದಿಂದ ಕೇರಳಕ್ಕೆ 21,253 ರೂಗಳ ನೆರವಿನ ಪ್ಯಾಕೇಜ್ ಬಿಡುಗಡೆ ಮಾಡಲಾಗಿದೆ. ಈ ವಿಷಯವನ್ನು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ (Rajeev Chandrashekhar) ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.
ಕೇಂದ್ರದ ಸಹಾಯ ಧನವನ್ನು ಸರಿಯಾಗಿ ವಿನಿಯೋಗಿಸಿ ಎಂದು ಕೇರಳ ಸಿಎಂ ಪಿಣಾರಯಿ ವಿಜಯನ್ ರನ್ನು ಆಗ್ರಹಿಸಿದ್ದಾರೆ. ಕೇರಳದ ಆರ್ಥಿಕ ಬಿಕ್ಕಟ್ಟಿನ ಸಮಸ್ಯೆ ಬಗೆಹರಿಸಲು ಕೇಂದ್ರ ಸರ್ಕಾರ ನೆರವಾಗಿದೆ. 2024ರವರೆಗೆ 21,253 ಕೋಟಿ ರೂಗಳವರೆಗೆ ಸಾಲಗಳನ್ನು ಸರ್ಕಾರ ಮಂಜೂರು ಮಾಡಿದೆ. ಈ ಹಣವನ್ನು ಯಾವ ಭ್ರಷ್ಟಾಚಾರ, ಸೋರಿಕೆ ಇಲ್ಲದೇ ಕೇರಳ ಜನರ ಕಲ್ಯಾಣಕ್ಕೆ ಸರಿಯಾಗಿ ವಿನಿಯೋಗಿಸಬೇಕು ಎಂದು ರಾಜೀವ್ ಚಂದ್ರಶೇಖರ್ ಬರೆದುಕೊಂಡಿದ್ದಾರೆ.
ಕೇರಳ ಸಾರಿಗೆ ಸಂಸ್ಥೆಯ ಉದ್ಯೋಗಿಗಳು ಸೇರಿದಂತೆ ಇಲ್ಲಿನ ಸರ್ಕಾರಿ ನೌಕರರಿಗೆ ತಿಂಗಳುಗಳಿಂದ ಸರಿಯಾಗಿ ಸಂಬಳ ಆಗಿಲ್ಲ. ಇವರಿಗೆ ಸಂಬಳ ಮತ್ತು ಪಿಂಚಣಿ ಒದಗಿಸಿ. ಕರಾವಳಿ ರಕ್ಷಣೆ ಮತ್ತು ಮಿನಿ ಹಾರ್ಬರ್ ಪ್ರಾಜೆಕ್ಟ್ ಪೂರ್ಣಗೊಳಿಸಿ. ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಎಂದು ಕೂಡ ರಾಜೀವ್ ಚಂದ್ರಶೇಖರ್ ಬರೆದುಕೊಂಡಿದ್ದಾರೆ.
ತಿರುವನಂತಪುರಂ ನಗರದಲ್ಲಿ ಪ್ರವಾಹ ನಿಯಂತ್ರಣ ವ್ಯವಸ್ಥೆ ನಿರ್ಮಿಸಲು 200 ಕೋಟಿ ರೂ ಯೋಜನೆಗೆ ಕೇಂದ್ರ ಸರ್ಕಾರ ನೆರವು ನೀಡುತ್ತಿದೆ. ಕರ್ನಾಟಕ, ತಮಿಳುನಾಡು ಸರ್ಕಾರಗಳಂತೆ ಕೇರಳ ಸರ್ಕಾರ ಕೂಡ ಕೇಂದ್ರ ಸರ್ಕಾರದ ತೆರಿಗೆ ಹಂಚಿಕೆ ನೀತಿ ಬಗ್ಗೆ ಅಸಮಾಧಾನಗೊಂಡಿದೆ. ಕೇರಳದಿಂದ ಕೇಂದ್ರ ಸರ್ಕಾರಕ್ಕೆ ಹೋಗುತ್ತಿರುವ ಹಣ 11 ಪಟ್ಟು ಹೆಚ್ಚಾಗಿದೆ. ಹೀಗಾಗಿ ನಮ್ಮ ಪಾಲಿನ ಹಣ ನೀಡಿ ಎಂದು ಕೂಡ ಕೇರಳ ಕೇಳುತ್ತಿದೆ.