ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ಚುನಾವಣೆ ಗೆಲ್ಲಲು ಆಡಳಿತರೂಢ ಬಿಜೆಪಿ, ಬಿಎಸ್‌ಪಿ, ಕಾಂಗ್ರೆಸ್ ಸೇರಿದಂತೆ ಮಾಜಿ ಸಿಎಂ ಮುಲಾಯಂ ಸಿಂಗ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷವೂ ಮುಂದಾಗಿದೆ. ವಿಧಾನಸಭಾ ಚುನಾವಣೆಗೆ ಬೇಕಾದ ಅಗತ್ಯ ತಯಾರಿಗಳನ್ನು ಈಗಾಗಲೇ ನಡೆಸಿಕೊಂಡಿರುವ ಎಸ್ಪಿ, ಹಲವು ಕಾರ್ಯ ತಂತ್ರಗಳನ್ನು ರೂಪಿಸುತ್ತಿದೆ. ಇದರ ಭಾಗವಾಗಿಯೇ ಬಿಹಾರದ ಮಾಜಿ ಸಿಎಂ ಮತ್ತು ಆರ್ಜೆಡಿ ವರಿಷ್ಠ ಲಾಲೂ ಪ್ರಸಾದ್ ಯಾದವ್ ಅವರನ್ನು ಭೇಟಿ ಮಾಡಿ ಮುಲಾಯಂ ಸಿಂಗ್ ಮತ್ತು ಪುತ್ರ ಅಖಿಲೇಶ್ ಯಾದವ್ ಮಹತ್ವದ ಚರ್ಚೆ ನಡೆಸಿದ್ದಾರಂತೆ.
ಮುಲಾಯಂ ಸಿಂಗ್ ಭೇಟಿ ಬೆನ್ನಲ್ಲೇ ಲಾಲು ಪ್ರಸಾದ್ ಯಾದವ್ ಟ್ವೀಟ್ ಮಾಡಿದ್ದರು. ದೇಶದ ಹಿರಿಯ ಸಮಾಜವಾದಿ ಮಿತ್ರ ಶ್ರೀ ಮುಲಾಯಂ ಸಿಂಗ್ ಜೀ ನನ್ನ ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಈ ವೇಳೆ ದೇಶದ ಮಹತ್ವದ ರಾಜಕೀಯ ವಿಚಾರಗಳನ್ನು ಚರ್ಚಿಸಿದ್ದೇವೆ. ಇಂದು ದೇಶಕ್ಕೆ ಸಮಾನತೆ ಮತ್ತು ಸಮಾಜವಾದ ಬೇಕೇ ಹೊರತು ಬಂಡವಾಳಶಾಹಿ, ಕೋಮುವಾದವಲ್ಲ. ದೇಶಕ್ಕಾಗಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಬರೆದುಕೊಂಡಿದ್ದರು.
ಸದ್ಯ ಲಾಲು ಪ್ರಸಾದ್ ಮತ್ತು ಮುಲಾಯಂ ಸಿಂಗ್ ಭೇಟಿ ರಾಷ್ಟ್ರ ರಾಜಕೀಯದಲ್ಲಿ ಭಾರೀ ಕುತೂಹಲ ಮೂಡಿಸಿದೆ. ಎಂದೂ ತಮ್ಮ ಸೈದ್ದಾಂತಿಕ ನಿಲುವಿನಲ್ಲಿ ರಾಜಿ ಮಾಡಿಕೊಳ್ಳದ ಈ ಹಿರಿಯ ನಾಯಕರು ಮುಂದಿನ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ನೇತೃತ್ವದ ಬಿಜೆಪಿ ವಿರುದ್ಧ ಜಂಟಿ ಹೋರಾಟ ಮಾಡಲಿದ್ದಾರಂತೆ. ಹೀಗಾಗಿ ಮುಂದಿನ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಮೇಲೆ ಫೋಕಸ್ ಮಾಡಿದ್ದಾರಂತೆ. ಹೇಗಾದರೂ ಸರಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿಯನ್ನು ಸೋಲಿಸಿ ಎಸ್ಪಿ ಅಧಿಕಾರಕ್ಕೆ ಬರಲು ಲಾಲು ಪ್ರಸಾದ್ ಬಳಿ ಸಲಹೆಗಳನ್ನು ಪಡೆದುಕೊಂಡಿದ್ದಾರೆ ಮುಲಾಯಂ ಸಿಂಗ್.
ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಸೋಲು ಗ್ಯಾರಂಟಿ. ಕರೋನಾ ನಿರ್ವಹಣೆ ವಿಚಾರದಲ್ಲಿ ಯೋಗಿ ಆದಿತ್ಯನಾಥ್ ವಿರುದ್ದ ಜನರಿಗೆ ತೀವ್ರ ಅಸಮಾಧಾನ ಇದೆ. ಬಿಜೆಪಿಯ ಪ್ರಮುಖ ವೋಟ್ ಬ್ಯಾಂಕ್ ಆದ ಬ್ರಾಹ್ಮಣ ಸಮುದಾಯವೂ ಮುಂದಿನ ಚುನಾವಣೆಯಲ್ಲಿ ಪರ್ಯಾಯ ಪಕ್ಷಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಬ್ರಾಹ್ಮಣರೊಂದಿಗೆ ಯಾದವ್ ಸಮುದಾಯವನ್ನು ಒಟ್ಟುಗೂಡಿಸಿ ಚುನಾವಣೆ ಗೆಲ್ಲಬೇಕು. ಅದಕ್ಕಾಗಿ ನಿಮ್ಮ ಸಹಕಾರ ಬೇಕು ಎಂದು ಮುಲಾಯಂ ಸಿಂಗ್ ಲಾಲುಗೆ ಮನವಿ ಮಾಡಿದ್ದಾರೆ. ಇದಕ್ಕೆ ಲಾಲು ಪ್ರಸಾದ್ ಯಾದವ್ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ.
ಎಸ್ಪಿ ಮಾತ್ರವಲ್ಲದೇ ಎಲ್ಲಾ ರಾಜಕೀಯ ಪಕ್ಷಗಳು ಉತ್ತರಪ್ರದೇಶದ 2022ರ ವಿಧಾನಸಭಾ ಚುನಾವಣೆಗೆ ಪೂರ್ವಭಾವಿ ಸಭೆಗಳನ್ನು ನಡೆಸಲು ಆರಂಭಿಸಿದೆ. ಎಸ್ಪಿಯಂತೂ ಒಂದು ಹೆಜ್ಜೆ ಮುಂದೆ ಹೋಗಿ ಸ್ಥಳೀಯ ಮಟ್ಟದಲ್ಲಿ ಪಕ್ಷ ಗಟ್ಟಿಗೊಳಿಸುವ ಕಾರ್ಯ ಮಾಡುತ್ತಿದೆ.
ಕಳೆದ 50 ದಿನಗಳಲ್ಲಿ ಉತ್ತರ ಪ್ರದೇಶ ಹಲವು ಜಿಲ್ಲೆಗಳಲ್ಲಿ 40ಕ್ಕೂ ಹೆಚ್ಚು ಸಭೆಗಳನ್ನು ಎಸ್ಪಿ ನಡೆಸಿದೆ. ತನ್ನ ಸರ್ಕಾರದ ಅವಧಿಯಲ್ಲಿ ಮಾಡಿದ ಕಲ್ಯಾಣ ಯೋಜನೆಗಳ ಬಗ್ಗೆ ಜನರಿಗೆ ತಿಳಿಸುತ್ತಿದೆ. ಉತ್ತರ ದೇಶದಲ್ಲಿ ಕೊರೋನಾ ನಿರ್ವಹಣೆ ವಿಚಾರದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಎಡವಿದ್ದು ಹೇಗೆ ಎಂದು ವಿವರಿಸುತ್ತಿದೆ.
ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಮರಳುವ ಆಶಯದಲ್ಲಿರುವ ಸಮಾಜವಾದಿ ಪಕ್ಷ ಮುಂದಿನ ವಾರ ರಣಾಸಿ ಮತ್ತು ಪಕ್ಕದ ಪ್ರದೇಶಗಳಲ್ಲಿ ಮಾತ್ರ ಸುಮಾರು 20 ಸಭೆಗಳನ್ನು ಆಯೋಜಿಸಲು ಮುಂದಾಗಿದೆ. ಈ ಬಗ್ಗೆ ಮಾತಾಡಿರುವ ಅಖಿಲೇಶ್ ಯಾದವ್, ”2022ರ ಚುನಾವಣೆಗೆ ಸಜ್ಜಾಗುತ್ತಿದ್ದೇವೆ. ರಾಜ್ಯದ ಎಲ್ಲಾ ಲ್ಲೆಗಳಲ್ಲಿ ಜಿಲ್ಲಾ ಪರಿಷತ್ ಮುಖ್ಯಸ್ಥರನ್ನು ಭೇಟಿ ಮಾಡಿದ್ದೇನೆ. ಬಲ್ಲಿಯಾ, ಅಜಮ್ಗಢ, ಭಾದೋಹಿ ಮತ್ತು ಮಿರ್ಜಾಪುರದಲ್ಲಿ ಹಲವಾರು ಸಭೆಗಳು ನಡೆದಿವೆ,” ಎಂದು ತಿಳಿಸಿದರು.
ಹಿಂದುಳಿದ ವರ್ಗ ಮತ್ತು ಪರಿಶಿಷ್ಟ ಜಾತಿ ಮತದಾರರು 50ಕ್ಕೂ ಹೆಚ್ಚು ಸ್ಥಾನಗಳಲ್ಲಿ ನಿರ್ಣಾಯಕ ಪಾತ್ರ ವಹಿಸುವ 10 ಜಿಲ್ಲೆಗಳಲ್ಲಿ ಸಭೆ ನಡೆಸಿದ್ದೇವೆ. ರಾಜಕೀಯ ತಜ್ಞರು ಹೇಳುವಂತೆ ಒಬಿಸಿ ಸಮುದಾಯ ಮತ್ತು ದಲಿತರು ಈ ಪ್ರದೇಶದ ಜನಸಂಖ್ಯೆಯ ಸುಮಾರು ಶೇ.60 ರಷ್ಟಿದ್ದಾರೆ. ನಾವು ಈ ಸಮುದಾಯದ ಬೆಂಬಲವನ್ನು ಗಳಿಸಲು ಪ್ರಯತ್ನಿಸುತ್ತಿದ್ದೇವೆ ಎಂದರು ಅಖಿಲೇಶ್.
ಉತ್ತರಪ್ರದೇಶದಲ್ಲಿ ರಾಜಕೀಯ ಪಕ್ಷಗಳು ತಮ್ಮ ನೆಲೆಯನ್ನು ವಿಸ್ತರಿಸಲು ಪ್ರಯತ್ನಿಸುತ್ತಿವೆ. ಒಬಿಸಿ ಮತ್ತು ಎಸ್ಸಿ ಸಮುದಾಯದತ್ತ ರಾಜಕೀಯ ಪಕ್ಷಗಳು ಗಮನ ಹರಿಸುತ್ತಿವೆ. 2017 ರ ವಿಧಾನಸಭಾ ಚುನಾವಣೆಗೆ ಮುಂಚೆಯೇ ಬಿಜೆಪಿ ಕಾರ್ಯತಂತ್ರ ರೂಪಿಸಿ ಗೆಲುವು ತನ್ನದಾಗಿಸಿಕೊಂಡಿದೆ. ಈ ಪ್ರದೇಶದಲ್ಲಿ ಬಲವಾದ ಬೆಂಬಲವನ್ನು ಹೊಂದಿರುವ ಎಸ್ಪಿ ಖಂಡಿತವಾಗಿಯೂ ಈ ಬಾರಿ ಹೆಚ್ಚಿನ ಸ್ಥಾನ ಪಡೆಯಲಿದೆ ಎಂಬುದು ರಾಜಕೀಯ ತಜ್ಞರ ಅಭಿಪ್ರಾಯ.