ಕರೋನಾ ಸೋಂಕಿಗೆ ಲಸಿಕೆ ಮುಂದಿನ ಒಂದು ವರ್ಷ ಲಭ್ಯವಾಗುವುದು ಸಾಧ್ಯವಿಲ್ಲವೆಂದು ಸಂಸತ್ ವಿಜ್ಞಾನ ತಂತ್ರಜ್ಞಾನ ಕುರಿತ ಸ್ಥಾಯಿ ಸಮಿತಿ ಸಭೆಯಲ್ಲಿ ಹೇಳಿದೆ. 2021 ರ ಬಳಿಕವೇ ವಾಣಿಜ್ಯೀಕರಣವಾಗಿ ಭಾರತದಲ್ಲಿ ಕರೋನಾ ಲಸಿಕೆ ಸಿಗಬಹುದೆಂದು ಸಭೆಯಲ್ಲಿ ತಜ್ಞರು ಹೇಳಿದ್ದಾರೆ.
ಆಗಸ್ಟ್ 15 ರ ಒಳಗೆ ಕರೋನಾಗೆ ಲಸಿಕೆ ಸಿಗಬಹುದೆಂದು ICMR ಹೇಳಿತ್ತು. ICMR ಹೇಳಿಕೆಯನ್ನು ಹಲವು ತಜ್ಞರು ತಳ್ಳಿ ಹಾಕಿದ್ದರು. ಈ ಹಿನ್ನಲೆಯಲ್ಲಿ ಕರೋನಾ ಲಸಿಕೆ ಲಭ್ಯತೆಯ ಕುರಿತು ಹಲವು ಗೊಂದಲಗಳು ಎದ್ದಿದ್ದವು. ಸಂಸದೀಯ ಸ್ಥಾಯಿ ಸಮಿತಿಯೇ ICMR ನೀಡಿರುವ ಕಾಲಮಿತಿಯೊಳಗೆ ಕರೋನಾ ಲಸಿಕೆ ಭಾರತದಲ್ಲಿ ದೊರೆಯುವುದಿಲ್ಲ ಎಂದು ಹೇಳುವುದರೊಂದಿಗೆ ಭಾರತದ ಸರ್ಕಾರ ಸಂಸ್ಥೆಗಳ ನಡುವಿನ ಹೊಂದಾಣಿಕೆ ಕೊರತೆ ಮತ್ತೊಮ್ಮೆ ಬಯಲಾಗಿದೆ.
ಆಗಸ್ಟ್ 15 ರೊಳಗೆ ಕರೋನಾಗೆ ಲಸಿಕೆ ದೊರೆಯುತ್ತದೆಂಬ ICMR ಹೇಳಿಕೆ, ಮುಂಬರುವ ಬಿಹಾರ ಚುನಾವಣೆಗೆ ಕೇಂದ್ರ ಸರ್ಕಾರದ ಮಾನ ಉಳಿಸುವ ತಂತ್ರವೆಂಬ ರಾಜಕೀಯ ಟೀಕೆಗೆ ಸಂಸತ್ ಸ್ಥಾಯಿ ಸಮಿತಿಯ ಹೇಳಿಕೆ ಇಂಬು ನೀಡಿದೆ.
ಭಾರತ ಅಥವಾ ಯಾವುದೇ ಬೇರೆ ದೇಶ ಲಸಿಕೆಯನ್ನು ಅಭಿವೃದ್ಧಿಪಡಿಸಿದರೂ 2021 ರ ವರೆಗೆ ಭಾರತದಲ್ಲಿ ಸಾರ್ವಜನಿಕ ಬಳಕೆಗೆ ಲಸಿಕೆ ದೊರೆಯುವುದಿಲ್ಲ. ಸದ್ಯ ಕರೋನಾ ಎದುರಿಸಲು ರಕ್ಷಣಾತ್ಮಕ ತಂತ್ರಗಳನ್ನು ನಾವು ಬಳಸಬೇಕು. ಲಸಿಕೆಗೆ ಕಾಯಬಾರದು, ಕಡಿಮೆ ವೆಚ್ಚದ ವೆಂಟಿಲೇಟರ್ ತಯಾರಿಸುವುದು, ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಪರಿಕರಗಳನ್ನು ತಯಾರಿಸುವ ಕಡೆಗೆ ಇಲಾಖೆಗಳು ಹಾಗೂ ಸಂಸ್ಥೆಗಳು ಗಮನ ಹರಿಸಬೇಕೆಂದು ಜಯರಾಂ ರಮೇಶ್ ನೇತೃತ್ವದ ಸ್ಥಾಯಿ ಸಮಿತಿ ಹೇಳಿದೆ.
