ಕರೋನಾ ಸದ್ಯಕ್ಕೆ ಮುಗಿಯುವಂಥ ಕಷ್ಟ ಅಲ್ಲ. 2020 ಅನ್ನು ಮರೆತು 2021ರಲ್ಲಾದರೂ ನೆಮ್ಮದಿಯಿಂದ ಕಸುಬು ಮಾಡಬಹುದು, ಕಾಸು, ಕಿಮ್ಮತ್ತು ಗಿಟ್ಟಿಸಬಹುದು ಎಂದುಕೊಂಡರೆ, ಬಸವಳಿರುವ ಜನ-ಜೀವನ ಮತ್ತೆ ಹಳಿ ಮೇಲೆ ನಿರಾತಂಕವಾಗಿ ವಿಹರಿಸಲಿದೆ ಎಂದುಕೊಂಡರೆ ಅದು ಅಷ್ಟು ಸುಲಭವಲ್ಲ. ಕರೋನಾ ಅಬ್ಬರ, ಅಟ್ಟಹಾಸ, ಆರ್ಭಟಗಳು 2021ರಲ್ಲೂ ಮುಂದುವರೆಯಲಿವೆ. ಮುಂದಿನ ವರ್ಷ ಕರೋನಾ ದೇಶದಲ್ಲಿ 2ನೇ ಹಂತದಲ್ಲಿ ಕಾಣಿಸಿಕೊಂಡು ಸುನಾಮಿ ಸ್ವರೂಪ ಪಡೆಯಲಿದೆ. ಹಾಗಂತ ಕೇಂದ್ರ ಸರ್ಕಾರದ ಸ್ಪೆಷಲ್ ಟಾಸ್ಕ್ ಫೋರ್ಸ್ ಸದಸ್ಯ ಡಾ. ರಣದೀಪ್ ಗುಲೇರಿಯಾ ಅವರೇ ಆತಂಕಕಾರಿ ಭವಿಷ್ಯ ನುಡಿದಿದ್ದಾರೆ.
ಕರೋನಾವನ್ನು ನಿಯಂತ್ರಿಸಲು ಏನೇನು ಉಪಕ್ರಮಗಳನ್ನು ತೆಗೆದುಕೊಳ್ಳಬೇಕೆಂದೇ ಕೇಂದ್ರ ಸರ್ಕಾರ ಸ್ಪೆಷಲ್ ಟಾಸ್ಕ್ ಫೋರ್ಸ್ ರಚನೆ ಮಾಡಿದೆ. ಅದರಲ್ಲಿ ದೆಹಲಿಯ ಪ್ರತಿಷ್ಠಿತ ಏಮ್ಸ್ ಆಸ್ಪತ್ರೆಯ ನಿರ್ದೇಶಕರಾದ ಡಾ. ರಣದೀಪ್ ಗುಲೇರಿಯಾ ಕೂಡ ಒಬ್ಬ ಸದಸ್ಯರು. ಅವರೇ ಈಗ 2021ರಲ್ಲೂ ಕರೋನಾ ಕಷ್ಟ ಮುಂದುವರೆಯಲಿದೆ ಅಂತಾ ಹೇಳಿಬಿಟ್ಟಿದ್ದಾರೆ. ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಅವರು, ಯಾವ ಕಾರಣಕ್ಕೆ ಕರೋನಾ ನಿಯಂತ್ರಣಕ್ಕೆ ಬರುವುದಿಲ್ಲ ಎಂಬ ಸಂಗತಿಯನ್ನೂ ವಿವರಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಡಾ. ರಣದೀಪ್ ಗುಲೇರಿಯಾ ಅವರ ಪ್ರಕಾರ ಕರೋನಾ ಸೋಂಕು ಹರಡುವಿಕೆ ಮೊದಲು ದೊಡ್ಡ ದೊಡ್ಡ ನಗರಗಳಲ್ಲಿ ಮಾತ್ರ ಕಂಡುಬರುತ್ತಿತ್ತು. ಈಗ ಎಲ್ಲಾ ಚಿಕ್ಕ-ಪುಟ್ಟ ಪಟ್ಟಣ ಮತ್ತು ಹಳ್ಳಿಗಳಿಗೂ ಪಸರಿಸಿದೆ. ಸಮುದಾಯಕ್ಕೆ ವಿಸ್ತರಿಸಿಕೊಂಡಿದೆ. ಆದುದರಿಂದ ಕರೋನಾ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬರುತ್ತೆ ಎಂದು ಎದೆಯುಬ್ಬಿಸಿ ಹೇಳಲು ಸಾಧ್ಯವಿಲ್ಲ. ಜೊತೆಗೆ ದೇಶದಲ್ಲಿ ತುಂಬಿ ತುಳುಕುತ್ತಿರುವ ಜನಸಂಖ್ಯೆ. ಅಂದರೆ 136 ಕೋಟಿ ಜನರಲ್ಲಿ 1 ಪರ್ಸೆಂಟ್ ಜನರಿಗೆ ಕರೋನಾ ಬಂದು ಹೋಗುತ್ತೆ ಎಂದುಕೊಂಡರೂ 1 ಕೋಟಿ 36 ಲಕ್ಷ ಜನರಿಗೆ ಬರಬೇಕಾಗುತ್ತದೆ. ಸದ್ಯ ದೇಶದಲ್ಲಿ ಕರೋನಾ ಪೀಡಿತರ ಸಂಖ್ಯೆ 40 ಲಕ್ಷ. ಹಾಗಾಗಿ ಇದು ಇನ್ನೂ ಹೆಚ್ಚಾಗಲಿದೆ.
ದೇಶದಲ್ಲಿ ಕರೋನಾ ಬೆಳೆಯುತ್ತಿರುವುದನ್ನು ನೋಡುವುದಾದರೆ ಆಗಸ್ಟ್ 6ರಿಂದ ದಿನನಿತ್ಯ 60 ಸಾವಿರಕ್ಕೂ ಹೆಚ್ಚು ಕರೋನಾ ಸೋಂಕು ಪ್ರಕರಣಗಳು ಕಂಡುಬರುತ್ತಿದ್ದವು. ಆಗಸ್ಟ್ 19ರಿಂದ 70 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿದ್ದವು. ಆಗಸ್ಟ್ 26ರಿಂದ 75 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗತೊಡಗಿದವು. ಸೆಪ್ಟೆಂಬರ್ 2ರಿಂದ 80 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಗೋಚರಿಸುತ್ತಿವೆ. ಹೀಗೆ ವೇಗವಾಗಿ ಕರೋನಾ ಸೋಂಕು ಹರಡುತ್ತಿರುವುದು ಭಾರತದಲ್ಲಿ ಮಾತ್ರ. ಜನವರಿ 30ರಂದು ದೇಶದಲ್ಲಿ ಮೊತ್ತ ಮೊದಲ ಬಾರಿಗೆ ಕರೊನಾ ಎಂಬ ಕ್ರೂರಿ ತನ್ನ ಕರಿನೆರಳು ಬಿಟ್ಟಿತು. ಅಂದಿನಿಂದ ದೇಶದಲ್ಲಿ 10 ಲಕ್ಷ ಸೋಂಕು ಪೀಡಿತರು ಪತ್ತೆಯಾಗಲು ಅದು ತೆಗೆದುಕೊಂಡಿದ್ದು ಬರೊಬ್ಬರಿ 168 ದಿನ. ಆಮೇಲೆ ಕರೋನಾ ತನ್ನ ವೇಗವನ್ನು ಹೆಚ್ಚಿಸಿಕೊಂಡಿತು. ಕೇವಲ 50 ದಿನದಲ್ಲಿ 10 ಲಕ್ಷದಿಂದ 40 ಲಕ್ಷ ಪ್ರಕರಣಗಳು ಕಾಣಿಸಿಕೊಂಡವು. ಈ ಪೈಕಿ 30 ಲಕ್ಷ ಇದ್ದ ಸೋಂಕು ಪೀಡಿತರ ಸಂಖ್ಯೆ 40 ಲಕ್ಷಕ್ಕೆ ಬಡ್ತಿ ಪಡೆದಿದ್ದು ಕೇವಲ 13 ದಿನಗಳ ಅಂತರದಲ್ಲಿ. ಭಾರತದಲ್ಲಿ 10ರಿಂದ 40 ಲಕ್ಷ ಆಗಲು 13 ದಿನಗಳಾದರೆ ಬ್ರಿಜಿಲ್ 10ರಿಂದ 40 ಲಕ್ಷ ಆಗಲು 75 ದಿನ ತೆಗೆದುಕೊಂಡಿದೆ. ಅಮೇರಿಕಾದಲ್ಲಿ 86 ದಿನ ತೆಗೆದುಕೊಂಡಿದೆ.
ಡಾ. ರಂಣದೀಪ್ ಗುಲೇರಿಯಾ ಕರೋನಾ ದೇಶದಲ್ಲಿ 2ನೇ ಹಂತದಲ್ಲಿ ಕಾಣಿಸಿಕೊಳ್ಳುತ್ತದೆ ಎಂಬುದಕ್ಕೆ ರಾಷ್ಟ್ರ ರಾಜಧಾನಿ ದೆಹಲಿಯ ಉದಾಹರಣೆ ನೀಡಿದ್ದಾರೆ. ಮೊದಲು ದೆಹಲಿಯಲ್ಲಿ ಪ್ರತಿದಿನ 4 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಕಂಡುಬರುತ್ತಿದ್ದವು. ದೆಹಲಿ ಸರ್ಕಾರ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಂಡದ್ದರಿಂದ ನಿಯಂತ್ರಣಕ್ಕೆ ಬಂದಿತ್ತು. ಪ್ರತಿದಿನ 600 ರಿಂದ 700 ಪ್ರಕರಣಗಳು ಪತ್ತೆಯಾಗತೊಡಗಿದವು. ಆದರೀಗ ಮತ್ತೆ ಏರಿಕೆಯಾಗುತ್ತಿದೆ. ಸುಮಾರು 3 ಸಾವಿರ ಪ್ರಕರಣಗಳು ವರದಿಯಾಗತೊಡಗಿವೆ. ಹೀಗೆ ಸದ್ಯ ಕಡಿಮೆ ಆಗಿರುವ ರಾಜ್ಯ, ನಗರ, ಪಟ್ಟಣಗಳಲ್ಲಿ ಮತ್ತೊಮ್ಮೆ ಕರೋನಾ ಕಂಗೆಣ್ಣು ಕಾರುವ ಸಾಧ್ಯತೆಗಳು ದಟ್ಟವಾಗಿವೆ.
136 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಸದ್ಯ ಪ್ರತಿದಿನ ಕರೋನಾ ಪರೀಕ್ಷೆ ನಡೆಸುತ್ತಿರುವುದು ಸುಮಾರು 10 ಲಕ್ಷ ಜನರಿಗೆ ಮಾತ್ರ. ಅದರಲ್ಲಿ ಸುಮಾರು 80 ಸಾವಿರ ಪ್ರಕರಣಗಳು ಪತ್ತೆಯಾಗುತ್ತಿವೆ. ಒಂದೊಮ್ಮೆ ಕರೋನಾ ಪರೀಕ್ಷೆ ಸಂಖ್ಯೆಗಳನ್ನು ದ್ವಿಗುಣ-ತ್ರಿಗುಣ ಗೊಳಿಸಿದರೆ ಸೋಂಕು ಪೀಡಿತರ ಸಂಖ್ಯೆಯೂ ದುಪ್ಪಟ್ಟು-ತ್ರಿಪ್ಪಟ್ಟು ಆಗುತ್ತವೆ. ಸಂಖ್ಯೆ ಹೆಚ್ಚಾದರೆ ಕೆಟ್ಟ ಹೆಸರು ಬರುತ್ತದೆ ಎನ್ನುವ ಕಾರಣಕ್ಕೆ ಸರ್ಕಾರ ಪರೀಕ್ಷೆಯನ್ನು ಹೆಚ್ಚಿಸುವ ಧೈರ್ಯ ತೋರುತ್ತಿಲ್ಲ.
ಜಗತ್ತಿಗೆ ಎಷ್ಟು ಬೇಗ ಕರೋನಾ ಲಸಿಕೆ ಸಿಗಬಹುದು ಎಂಬ ಬಗ್ಗೆ ಮಾತನಾಡಿರುವ ಡಾ. ರಣದೀಪ್ ಗುಲೇರಿಯಾ, ಭಾರತದಲ್ಲಿ ಮೂರು ಸಂಸ್ಥೆಗಳು ಲಸಿಕೆಯ ಸಂಶೋಧನೆ ನಡೆಸುತ್ತಿವೆ. ಅವು ಯಾವಾಗ ಬರುತ್ತವೆ ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಬೇಗ ಬರುವ ಸಾಧ್ಯತೆಗಳು ಕಡಿಮೆ ಇದೆ. ರಷ್ಯಾದಲ್ಲಿ ಲಸಿಕೆ ಕಂಡುಹಿಡಿಯಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಅಲ್ಲಿ ಕಡಿಮೆ ಜನರ ಮೇಲೆ ಪ್ರಯೋಗಗಳನ್ನು ಮಾಡಲಾಗಿದೆ. ಆದುದರಿಂದ ಅದರ ಬಗ್ಗೆ ಕೂಡ ತುಂಬಾ ನಿರೀಕ್ಷೆ ಇಟ್ಟುಕೊಳ್ಳುವುದು ತರವಲ್ಲ ಎಂದಿದ್ದಾರೆ.
ಸಾರ್ವತ್ರಿಕ ವ್ಯಾಕ್ಸಿನೇಷನ್ ವಿಷಯಕ್ಕೆ ಬಂದರೆ ದೇಶದಲ್ಲಿ 136 ಕೋಟಿ ಜನರಿಗೆ ಮಾಡಬೇಕೆಂದರೆ ಇದು ಸಾಹಸದ ಕೆಲಸವಾಗಲಿದೆ. ಸದ್ಯ ಕರೋನಾ ಬರದಂತೆ ಹೆಚ್ಚೆಚ್ಚು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಈ ಬಗ್ಗೆ ಜಾಗೃತಿ ಮೂಡಿಸಬೇಕು. ಅನಾವಶ್ಯಕ ಪ್ರವಾಸಗಳನ್ನು ನಿಷೇಧಿಸಬೇಕು. ಬಾರ್‌ಗಳು, ಪಬ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯವಾಗಬೇಕು. ಹೆಚ್ಚೆಚ್ಚು ಸರಳವಾಗಿರಬೇಕು ಎಂಬ ಸಲಹೆಗಳನ್ನೂ ನೀಡಿದ್ದಾರೆ.