ಮುಂದಿನ ವರ್ಷ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್ ಗೆ 25 ಡಾಲರ್ ಗೆ ಕುಸಿಯಲಿದೆಯೇ? ರಷ್ಯಾ ಕೇಂದ್ರೀಯ ಬ್ಯಾಂಕ್ (ಸೆಂಟ್ರಲ್ ಬ್ಯಾಂಕ್ ಆಫ್ ರಷ್ಯಾ) ಇತ್ತೀಚೆಗೆ ಮಾಡಿರುವ ಜಾಗತಿಕ ಆರ್ಥಿಕತೆಯ ಮುನ್ನಂದಾಜಿನಲ್ಲಿ ಕಚ್ಚಾ ತೈಲ ಬೆಲೆ 25 ಡಾಲರ್ ಗೆ ಕುಸಿಯಬಹುದು ಎಂದು ಹೇಳಿದೆ. ಅದಕ್ಕೆ ಗವರ್ನರ್ ಎಲ್ವಿರಾ ಸಖಿಸದೊವ್ನಾ ನಬಿವುಲಿನಾ ಅವರು ನೀಡಿರುವ ಕಾರಣಗಳೆಂದರೆ- ಜಾಗತಿಕ ಬೃಹದಾರ್ಥಿಕತೆಯು ಕುಸಿತದ ಹಾದಿಯಲ್ಲಿದ್ದು, ವಿಶ್ವಾದ್ಯಂತ ತೈಲ ಮತ್ತು ತೈಲ ಉತ್ಪನ್ನಗಳ ಬೇಡಿಕೆ ಕುಸಿಯುವ ಸಾಧ್ಯತೆ ಇದೆ. ಹೀಗಾಗಿ ಕಚ್ಚಾ ತೈಲ ಬೆಲೆ ಕಸಿಯಬಹುದು.
ಕಚ್ಚಾ ತೈಲ ಬೆಲೆ ಒಂದು ವೇಳೆ 25 ಡಾಲರ್ ಗೆ ಕುಸಿದರೆ ರಷ್ಯಾದ ಹಣದುಬ್ಬರ ಶೇ.7-8ಕ್ಕೆ ಜಿಗಿಯುವ ಸಾಧ್ಯತೆ ಇದೆ. ಜತೆಗೆ ರಷ್ಯಾದ ಜಿಡಿಪಿ ಶೇ.1.5 ರಿಂದ 2ರಷ್ಟು ಕುಸಿಯಬಹುದು. ತೈಲ ಬೆಲೆ ಕುಸಿತವು ರಷ್ಯಾದ ಆರ್ಥಿಕತೆಗೆ ಅನುಕೂಲಕರ ಅಲ್ಲದಿದ್ದರೂ, ಕಚ್ಚಾ ತೈಲ ಕುಸಿತದ ಜತೆಗೆ ರಷ್ಯಾದ ರೂಬೆಲ್ ಮೌಲ್ಯವು ಕುಸಿಯುತ್ತದೆ. ಹೀಗಾಗಿ ರಷ್ಯಾದ ರಫ್ತು ಉತ್ಪನ್ನಗಳಿಗೆ ಹೆಚ್ಚಿನ ಲಾಭವಾಗುತ್ತದೆ. ತೈಲ ಉತ್ಪಾದಿಸುವ ಕಂಪನಿಗಳು ರಷ್ಯಾ ಸರ್ಕಾರಕ್ಕೆ ತೈಲವನ್ನೇ ತೆರಿಗೆ ರೂಪದಲ್ಲಿ ನೀಡುತ್ತವೆ. ಅಲ್ಲದೇ ರಫ್ತು ಮಾಡುವ ತೈಲಕ್ಕೆ ಡಾಲರ್ ರೂಪದಲ್ಲಿ ಸ್ವೀಕೃತಿ ಪಡೆಯುವುದರಿಂದ ಕಂಪನಿಗಳಿಗೆ ಹೆಚ್ಚಿನ ಲಾಭವಾಗುತ್ತದೆ ಮತ್ತು ಸರ್ಕಾರಕ್ಕೆ ಹೆಚ್ಚಿನ ತೆರಿಗೆ ಸಂದಾಯವಾಗುತ್ತದೆ. ಅದರ ಹೊರತಾಗಿ ರಷ್ಯಾ ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚಿನ ಸ್ಪರ್ಧೆ ನೀಡುವುದು ಕಷ್ಟವೇ.
ಇತ್ತ ರಷ್ಯಾ 2020ಕ್ಕೆ ಕಚ್ಚಾ ತೈಲ ದರ 25 ಡಾಲರ್ ಗೆ ಕುಸಿಯಬಹುದು ಎಂದು ಅಂದಾಜು ಮಾಡುತ್ತಿದ್ದರೆ, ಅತ್ತ ಮೆಕ್ಸಿಕೊ ಕಚ್ಚಾ ತೈಲ ದರವನ್ನು ಹೇಗಾದರೂ ಮಾಡಿ ಯಥಾಸ್ಥಿತಿ ಕಾಯ್ದುಕೊಳ್ಳುವ ಅಥವಾ ಕನಿಷ್ಠ 50 ಡಾಲರ್ ಆಜುಬಾಜಿನಲ್ಲಿ ಸ್ಥೀರಿಕರಿಸುವ ಹರಸಾಹಸ ಮಾಡುತ್ತಿದೆ. ಅದಕ್ಕಾಗಿ ಮೆಕ್ಸಿಕೋದಲ್ಲಿರುವ ಜಗತ್ತಿನ ತೀವ್ರಚಟುವಟಿಕೆ ಇರುವ ಸಾವರಿನ್ ಆಯಿಲ್ ವಹಿವಾಟು ತಾಣದಲ್ಲಿ ಮೆಕ್ಸಿಕೋ ಹೆಡ್ಜರ್ ಗಳು (ಫ್ಯೂಚರ್ ಮಾರುಕಟ್ಟೆಯಲ್ಲಿ ಖರೀದಿ- ಮಾರಾಟ ಮಾಡುವವರು) ಈಗಾಗಲೇ ಸಕ್ರಿಯರಾಗಿದ್ದಾರೆ. ಮೆಕ್ಸಿಕೊ ಸರ್ಕಾರದ ಬೆಂಬಲದೊಂದಿಗೆ ಈ ಹೆಡ್ಜರ್ ಗಳು ಕಚ್ಚಾ ತೈಲ ದರ ಯಥಾಸ್ಥಿತಿ ಕಾಪಾಡಲು ಈಗಾಗಲೇ ಒಂದು ಬಿಲಿಯನ್ ಡಾಲರ್ ಮೌಲ್ಯದಷ್ಟು ಮುನ್ನಂದಾಜು ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆ. ಅಂದರೆ, ಮುಂಬರುವ ದಿನಗಳಲ್ಲಿ ಫ್ಯೂಚರ್ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಯಲ್ಲಿ ಖರೀದಿ ಮುನ್ನಂದಾಜು ಒಪ್ಪಂದ ಮಾಡಿಕೊಂಡಿದ್ದರೆ, ತೈಲದರದ ತೀವ್ರ ಏರಿಳಿತವನ್ನು ತಪ್ಪಿಸಬಹುದಾಗಿರುತ್ತದೆ. ಅಲ್ಲದೇ, ಫ್ಯೂಚರ್ ಮಾರುಕಟ್ಟೆಯಲ್ಲಿನ ದರವನ್ನಾಧರಿಸಿ ನಿತ್ಯದ ವಹಿವಾಟು ನಡೆಯುತ್ತದೆ.
ಪ್ರಸ್ತುತ ವೆಸ್ಟ್ ಟೆಕ್ಸಾಸ್ ಇಂಟರ್ಮಿಡಿಯೇಟ್ (ಡಬ್ಲ್ಯೂಟಿಐ) ಕಚ್ಚಾ ತೈಲ ಪ್ರತಿ ಬ್ಯಾರೆಲ್ ಗೆ 54.50 ಡಾಲರ್ ಗಳಿದ್ದರೆ, ಬ್ರೆಂಟ್ ಕ್ರೂಡ್ 60 ಡಾಲರ್ ಗಳಷ್ಟಿದೆ. ಸೌದಿ ತೈಲ ಕ್ಷೇತ್ರ ಮತ್ತು ಸಂಸ್ಕರಣಾ ವ್ಯವಸ್ಥೆ ಮೇಲೆ ಡ್ರೋಣ್ ದಾಳಿ ನಡೆದ ನಂತರ ಕಚ್ಚಾ ತೈಲ ದರ ಸುಮಾರು ಶೇ.15ರಷ್ಟು ತ್ವರಿತ ಏರಿಕೆ ಕಂಡಿದೆ. ಡ್ರೋಣ್ ದಾಳಿಯಿಂದ ನಿತ್ಯ 6 ದಶಲಕ್ಷ ಬ್ಯಾರೆಲ್ ಉತ್ಪಾದನೆ ಕುಂಠಿತಗೊಂಡಿತ್ತು. ಆದರೆ, ಆರಾಮ್ಕೊ ಕಂಪನಿಯು ತ್ವರಿತವಾಗಿ ಸ್ಥಾವರಗಳನ್ನು ಸುಸ್ಥಿತಿಗೆ ತಂದಿದ್ದು, ಶೀಘ್ರವೇ ಉತ್ಪಾದನೆ ಪುನಾರಂಭಿಸಲಿದೆ. ಅದಾದ ನಂತರ ತೈಲ ಸರಬರಾಜು ಹೆಚ್ಚಾಗುವುದರಿಂದ ಬೆಲೆ ಕುಸಿಯುವ ನಿರೀಕ್ಷೆ ಅಂತಾರಾಷ್ಟ್ರೀಯ ಮಾರುಕಟ್ಟೆ ತಜ್ಞರಲ್ಲಿದೆ. ಡ್ರೋಣ್ ದಾಳಿಯ ನಂತರ ಡೊನಾಲ್ಡ್ ಟ್ರಂಪ್ ಆಡಳಿತವು ಸೌದಿ ತೈಲ ಕ್ಷೇತ್ರದ ರಕ್ಷಣೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಜೆಟ್ ಫೈಟರ್ ಗಳು ಮತ್ತು ಕ್ಷಿಪಣಿ ನಿರ್ಬಂಧ ಸೌಲಭ್ಯಗಳೊಂದಿಗೆ 2000 ರಕ್ಷಣಾ ಸಿಬ್ಬಂದಿಯನ್ನು ನಿಯೋಜಿಸಿದೆ.
ಡ್ರೋಣ್ ದಾಳಿ ಪ್ರಕರಣ ಹೊರತು ಪಡಿಸಿದಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಯ 2018ರ ಅಕ್ಟೋಬರ್ ತಿಂಗಳಿಂದ ಕಚ್ಚಾ ತೈಲದರ ಇಳಿಜಾರಿನಲ್ಲಿ ಸಾಗಿದೆ. ಆಗ 77 ಡಾಲರ್ ಇದ್ದ ಡಬ್ಲ್ಯುಟಿಐ ಕಚ್ಚಾ ತೈಲ ಕುಸಿತದ ಹಾದಿಯಲ್ಲಿ 42.50 ಡಾಲರ್ ಗೆ ಇಳಿದಿತ್ತು. ಡ್ರೋಣ್ ದಾಳಿಯ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಏರಿಕೆ ಕಂಡಿದೆ.
ಯಥಾಸ್ಥಿತಿ ಕಾಯ್ದುಕೊಳ್ಳಬೇಕಾದ ಅನಿವಾರ್ಯ ಸ್ಥಿತಿಯಲ್ಲಿರುವ ಮೆಕ್ಸಿಕೋ ಫ್ಯೂಚರ್ ಮಾರುಕಟ್ಟೆಯಲ್ಲಿ ಮುನ್ನಂದಾಜು ಬೆಲೆ ಸ್ಥಿರತೆಗಾಗಿ ಸಿಟಿಗ್ರೂಪ್, ಗೋಲ್ಡ್ಮನ್ ಸ್ಯಾಚ್ಸ್ ಗ್ರೂಪ್, ಎನ್ಪಿ ಪರಿಬಾಸ್ ಎಸ್ಎ, ಮತ್ತು ಜೆಪಿ ಮೋರ್ಗಾನ್ ಚೇಸ್ ಆಂಡ್ ಕಂಪನಿಗಳ ನೆರವನ್ನು ಪಡೆದಿದೆ. ಹೇಗಾದರೂ ಸರಿ ಕನಿಷ್ಠ 49-50 ಡಾಲರ್ ಕಾಯ್ದುಕೊಳ್ಳುವುದು ಮೆಕ್ಸಿಕೋ ಉದ್ದೇಶ.
ಬ್ಯಾಂಕ್ ಆಫ್ ರಷ್ಯಾ ಮುನ್ನಂದಾಜು ಮಾಡಿದಂತೆ 2020ಕ್ಕೆ ಕಚ್ಚಾ ತೈಲ ಬೆಲೆ 25 ಡಾಲರ್ ಗೆ ಕುಸಿದರೆ ಜಗತ್ತಿನಲ್ಲಿ ಅತಿ ಹೆಚ್ಚು ಖುಷಿ ಪಡುವ ವ್ಯಕ್ತಿ ಅಂದರೆ ಭಾರತ ಸರ್ಕಾರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್! ಪ್ರಸ್ತುತ ಆರ್ಥಿಕ ಹಿಂಜರಿತ, ಆಮದು ಹೆಚ್ಚಳ ಮತ್ತು ರಫ್ತು ಇಳಿಕೆಯ ಅಂತಾರಾಷ್ಟ್ರೀಯ ವ್ಯಾಪಾರದಲ್ಲಿನ ಅಸಮತೋಲನ, ವಿತ್ತೀಯ ಕೊರತೆ ಮತ್ತು ಚಾಲ್ತಿ ಖಾತೆ ಕೊರತೆಯಿಂದಾಗಿ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಕಚ್ಚಾ ತೈಲ ದರ ಇಳಿಯುವ ಸುದ್ಧಿ ಅತ್ಯಂತ ಆಹ್ಲಾದದಾಯಕವಾದುದು.
ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್ ಗೆ ಒಂದು ಡಾಲರ್ ಹೆಚ್ಚಳವಾದಂತೆ ಭಾರತದ ತೈಲ ಬಿಲ್ ಮೇಲೆ 1.50 ಬಿಲಿಯನ್ ಡಾಲರ್ ಹೆಚ್ಚಿನ ಹೊರೆಯಾಗುತ್ತದೆ. ಅಂದರೆ ಕಚ್ಚಾ ತೈಲ ದರ ಒಂದು ಡಾಲರ್ ಏರಿದರೆ ವಾರ್ಷಿಕ 10,000 ಕೋಟಿ ರುಪಾಯಿ ಹೆಚ್ಚಿನ ಹೊರೆಬೀಳುತ್ತದೆ. ಪ್ರಸ್ತುತ 55 ಡಾಲರ್ ಆಜುಬಾಜಿನಲ್ಲಿರುವ ಡಬ್ಲ್ಯುಟಿಐ ಕ್ರೂಡ್ 25 ಡಾಲರ್ ಗೆ ಕುಸಿದರೆ ಪ್ರತಿ ಡಾಲರ್ ಗೆ ಕುಸಿತಕ್ಕೆ 10000 ಕೋಟಿ ರುಪಾಯಿ ಉಳಿತಾಯವಾಗುತ್ತದೆ ಎಂದಾದರೆ, ಒಟ್ಟಾರೆ 3,00,000 (ಮೂರು ಲಕ್ಷ ಕೋಟಿ ರುಪಾಯಿ) ಕೋಟಿ ರುಪಾಯಿ ಉಳಿತಾಯವಾದಂತಾಗುತ್ತದೆ. ಆದರೆ, 25 ಡಾಲರ್ ಗೆ ಕುಸಿದ ತೈಲ ದರ ಅಲ್ಲೇ ಸ್ಥಿರವಾಗಿ ನಿಲ್ಲುವುದಿಲ್ಲ. ಕಾಲ ಕ್ರಮೇಣ ಏರುಹಾದಿಯಲ್ಲಿ ಸಾಗಬಹುದು. ಆದರೆ, ಎಲ್ಲಿಯವರೆಗೆ ಕಚ್ಚಾ ತೈಲ 50 ಡಾಲರ್ ಗಿಂತ ಕೆಳಮಟ್ಟದಲ್ಲಿ ವಹಿವಾಟು ನಡೆಸುತ್ತಿರುತ್ತದೋ ಅಲ್ಲಿಯವರೆಗೂ ಭಾರತ ಸರ್ಕಾರದ ಪಾಲಿಗೆ ಹೊರೆಯೇನೂ ಅಲ್ಲ.
ಒಂದು ವೇಳೆ 25 ಡಾಲರ್ ಗೆ ಕಚ್ಚಾತೈಲ ಕುಸಿದಾಗ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಗಣನೀಯವಾಗಿ ಇಳಿಯುತ್ತದೆಯೇ? ಗ್ರಾಹಕರು ಅಂತಹ ನಿರೀಕ್ಷೆ ಇಟ್ಟುಕೊಳ್ಳುವ ಅಗತ್ಯವಿಲ್ಲ. ಏಕೆಂದರೆ ಭಾರತ ಸರ್ಕಾರದ ಆರ್ಥಿಕ ಸ್ಥಿತಿ ಹೇಗಿದೆ ಎಂದರೆ ಅದೆಷ್ಟೇ ಲಕ್ಷ ಕೋಟಿ ರುಪಾಯಿ ಬೊಕ್ಕಸಕ್ಕೆ ಬಂದರೂ ಅದನ್ನು ಗ್ರಾಹಕರಿಗೆ ವರ್ಗಾಹಿಸುವ ಸ್ಥಿತಿಯಲ್ಲಿ ಇಲ್ಲ. ಬೃಹದಾಕಾರವಾಗಿ ಬೆಳೆದಿರುವ ವಿತ್ತೀಯ ಕೊರತೆ ಮತ್ತು ಚಾಲ್ತಿ ಖಾತೆ ಕೊರತೆಯನ್ನು ಸರಿದೂಗಿಸಲು ಬಳಸಲಿದೆ.