ಕೇಂದ್ರ ಸರ್ಕಾರವು 20 ಯೂಟ್ಯೂಬ್ ಚಾನೆಲ್ ಮತ್ತು ಎರಡು ಸುದ್ದಿ ವೆಬ್‌ಸೈಟ್ ಗಳನ್ನು ನಿಷೇಧ ಮಾಡಿದೆ. ದೇಶದ ಸಾರ್ವಭೌಮತೆ ಮತ್ತು ಸಮಗ್ರತೆಗೆ ಧಕ್ಕೆಯಾಗುತ್ತಿರುವ ನೆಪವೊಡ್ಡಿ ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್ ನಿಯಮದಡಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ ಎಂದು ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ.
ಮಾಹಿತಿ ಮತ್ತು ಪ್ರಸಾರ ಇಲಾಖೆಯ ಕಾರ್ಯದರ್ಶಿ ಅಪೂರ್ವ ಚಂದ್ರ ಈ ಬಗ್ಗೆ ಯೂಟ್ಯೂಬ್ ಮುಖ್ಯಸ್ಥರಿಗೆ ಪತ್ರ ಬರೆದಿದ್ದು, 20 ಯೂಟ್ಯೂಬ್ ಚಾನೆಲ್ ಹೆಸರು ಉಲ್ಲೇಖಿಸಿ ಇವರಿಂದ ದೇಶದ ಸಾರ್ವಭೌಮತೆ ಮತ್ತು ಸಮಗ್ರತೆಗೆ ಧಕ್ಕೆಯಾಗುತ್ತಿದೆ. ಹೀಗಾಗಿ ಈ ಎಲ್ಲಾ ಯೂಟ್ಯಬ್ ಚಾನೆಲ್‌ಗಳ ಮೇಲೆ ನಿರ್ಬಂಧ ಹೇರುವಂತೆ ಕೇಳಿಕೊಂಡಿದ್ದಾರೆ. ಜೊತೆಗೆ ಈ ಎಲ್ಲಾ ಯೂಟ್ಯೂಬ್ ಚಾನೆಲ್‌ಗಳಿಗೆ ಪಾಕಿಸ್ತಾನದ ಕುಮ್ಮಕ್ಕಿದೆ ಎಂದು ಆರೋಪಿಸಿದ್ದಾರೆ.
ಅಯೋಧ್ಯೆ ಬಗ್ಗೆ ಸುಳ್ಳು ಸುದ್ದಿ, ಕೃಷಿ ಕಾಯ್ದೆ ಬಗ್ಗೆ ಅಪಪ್ರಚಾರ, ಕಾಶ್ಮೀರದ ಬಗ್ಗೆ ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿದ್ದ ನಯಾ ಪಾಕಿಸ್ತಾನ್ ಎಂಬ ಎರಡು ಮಿಲಿಯನ್ ಸಬ್‌ಸ್ಕ್ರೈಬರ್‌ಗಳನ್ನು ಹೊಂದಿದ್ದ ಚಾನೆಲ್ ಅನ್ನು ನಿಷೇಧಿಸಲಾಗಿದೆ. ಇದರ ಜೊತೆಗೆ ದಿ ನೇಕ್ಡ್ ಟ್ರೂತ್, ಜುನೈದ್ ಹಲೀಮ್ ಅಫೀಶಿಯಲ್, 48 ನ್ಯೂಸ್ ಎಂಬ ಹೆಸರಿನ ಯೂಟ್ಯೂಬ್ ಚಾನೆಲ್ ಮೇಲೆ ನಿರ್ಬಂಧ ಹೇರಲಾಗಿದೆ. ಇದರ ಜೊತೆಗೆ ನೂತನ ನಿಯಮ ಮುಂದಿಟ್ಟು ಕೊಂಡು ಎರಡು ನ್ಯೂಸ್ ವೆಬ್‌ಸೈಟ್‌ಗಳನ್ನೂ ಬ್ಯಾನ್ ಮಾಡಲಾಗಿದೆ.
ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಗುಪ್ತಚರ ಇಲಾಖೆಯಿಂದ ಮಾಹಿತಿ ಪಡೆದುಕೊಂಡು, ದೇಶದ್ರೋಹದ ಮಾದರಿಯಲ್ಲಿ ಸುದ್ದಿ ಹಾಗೂ ಸುದ್ದಿ ವಿಷಯಗಳನ್ನು ಇಲ್ಲಿ ಪ್ರಸಾರ ಮಾಡಲಾಗುತ್ತಿತ್ತು ಎಂದು ಈ ವೇಳೆ ದೃಢವಾಗಿದೆ ಎಂದು ಅಪೂರ್ವ ಚಂದ್ರ ಹೇಳಿದ್ದಾರೆ. ಅಲ್ಲದೆ ಈ ಎಲ್ಲಾ ವೆಬ್ ಸೈಟ್‌ಗಳು ಹಾಗೂ ಯೂಟ್ಯೂಬ್ ಚಾನೆಲ್‌ಗಳಿಗೆ ಪಾಕಿಸ್ತಾನದಿಂದ ಹಣಕಾಸಿನ ನೆರವು ಕೂಡ ಹರಿದು ಬರುತ್ತಿದ್ದು, ಇದು ದೇಶದ ಘನತೆ, ಶಾಂತಿ ಹಾಗೂ ಭದ್ರತೆಗೆ ಧಕ್ಕೆಯಾಗುತ್ತಿತ್ತು ಎಂದೂ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮೋದಿ ಸರ್ಕಾರ ನೂತನವಾಗಿ ಜಾರಿಗೆ ತಂದ ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್ ನಿಯಮದ ಮೂಲಕ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಡಿಜಿಟಲ್ ಮಾಧ್ಯಮಗಳನ್ನು ನಿಷೇಧಿಸಿರುವುದು ಗಮನಿಸಬೇಕಾದ ಸಂಗತಿ.

ಕೇಂದ್ರ ಸರ್ಕಾರ ಮಾಧ್ಯಮಗಳಿಗೆ ಕೊಟ್ಟಿರುವ ಮಾಹಿತಿಗಳ ಪ್ರಕಾರ ಈ 20 ಯೂಟ್ಯೂಬ್ ಚಾನೆಲ್‌ಗಳು ಒಟ್ಟಾರೆಯಾಗಿ 500 ಮಿಲಿಯನ್ ನೋಡುಗರನ್ನು ಹಾಗೂ ಒಟ್ಟಾರೆ 3.5 ಮಿಲಿಯನ್ ಚಂದಾದಾರನ್ನೂ ಹೊಂದಿದ್ದವು. ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸಿದ ಅನಿರ್ದಿಷ್ಟಾವಧಿ ಹೋರಾಟದ ಬಗ್ಗೆ ಸುದ್ದಿಗಳು ಪ್ರಸಾರವಾದಾಗ ಮೊದಲ ಬಾರಿಗೆ ಈ ಎಲ್ಲಾ ಯೂಟ್ಯೂಬ್ ಚಾನೆಲ್‌ಗಳು ಗುಪ್ತಚರ ಇಲಾಖೆಯ ಗಮನಕ್ಕೆ ಬಿದ್ದಿದೆ. ಅದಾದ ಬಳಿಕ ಈ ಎಲ್ಲಾ ಸುದ್ದಿ ತಾಣಗಳ ಮೇಲೆ ನಿಗಾ ಇಡಲಾಗಿದ್ದು, ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡಿರುವುದು ಗೊತ್ತಾಗಿ, ದೇಶದ ಭದ್ರತೆಯ ಮೇಲೆ ಪರಿಣಾಮ ಬೀರಲಿದೆ ಎಂದು ದೃಷ್ಟಿಯಿಂದ ಕೇಂದ್ರ ಸರ್ಕಾರ ಈ ನಿರ್ಧಾರ ತಗೆದುಕೊಂಡಿದೆ.
ಸುಳ್ಳು ಸುದ್ದಿ ಅಥವಾ ದೇಶ ದ್ರೋಹ ಪ್ರೇರಿಪಿಸುವಂತಹ ಪೋಸ್ಟ್‌ಗಳು, ಸುದ್ದಿಗಳು ಅಥವಾ ವೀಡಿಯೋ ಫೂಟೇಜ್‌ಗಳ ಮೇಲೆ ನಿಗಾ ಇಡಲು ಮೋದಿ ಸರ್ಕಾರ ರೂಪಿಸಿದ ಕಾನೂನೇ ಈ ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್. ಇದು 2021ರ ಫೆಬ್ರವರಿ ತಿಂಗಳಿನಲ್ಲಿ ಸಂಸತ್ತಿನಲ್ಲಿ ಮಂಡನೆಯಾಗಿ ಅಂಗೀಕರಾವಾಗಿದೆ. ಈ ಮೂಲಕ ಮುದ್ರಣ ಮಾಧ್ಯಮ ಹಾಗೂ ದೃಶ್ಯ ಮಾಧ್ಯಮ ರೀತಿಯಲ್ಲೇ ಡಿಜಿಟಲ್ ಮಾಧ್ಯಮದ ಮೇಲೂ ಕೇಂದ್ರ ಸರ್ಕಾರ ಹಿಡಿತ ಸಾಧಿಸಿಕೊಂಡಿದೆ. ಈ ಕಾನೂನು ವಿರೋಧಿಸಿ ದೇಶದ ವಿವಿಧ ಹೈ ಕೋರ್ಟ್‌ಗಳಲ್ಲಿ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೂ ಸಲ್ಲಿಕೆಯಾಗಿದ್ದವು. ಇನ್ನೂ ಇದು ಇತ್ಯರ್ಥಗೊಳ್ಳದೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.