ಕೋವಿಡ್-19 ಸೋಂಕಿನ ವಿರುದ್ದ ಹೋರಾಡಲು ಇಡೀ ದೇಶವೇ ಒಂದಾಗಿದೆ. ವಾಣಿಜ್ಯ ವಹಿವಾಟು ನೆಲಕಚ್ಚಿದ್ದು ದೇಶದ ಜಿಡಿಪಿ ಶೂನ್ಯದತ್ತ ಸಾಗುತ್ತಿದೆ. ಇಡೀ ದೇಶದ ಬಡವರು ಮತ್ತು ಮದ್ಯಮ ವರ್ಗದವರು ತೀರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಮಯದಲ್ಲಿ ಸರ್ಕಾರ ಅನಿವಾರ್ಯವಾಗಿ ಜನರ ನೆರವಿಗೆ ಧಾವಿಸಲೇಬೇಕಿತ್ತು. ಅದರಂತೆ ಪ್ರಧಾನ ಮಂತ್ರಿ ನರೇಂಧ್ರ ಮೋದಿ ಅವರು ಒಟ್ಟು 20 ಲಕ್ಷ ರೂಪಾಯಿಗಳ ಪ್ಯಾಕೇಜ್ ಘೋಷಿಸಿದ್ದಾರೆ. ಈ ರೀತಿ ಪ್ಯಾಕೇಜ್ ಘೋಷಣೆ ಕೇಂದ್ರದ ಎನ್‌ಡಿಎ ಸರ್ಕಾರಕ್ಕೆ ಹೊಸತೇನಲ್ಲ. ಈ ಹಿಂದೆ ಕೂಡ ವರ್ಷಕ್ಕೆ 20 ಲಕ್ಷ ಕೋಟಿ ರೂಪಾಯಿಗಳಂತೆ 5 ವರ್ಷಗಳವರೆಗೆ ಒಟ್ಟು ಒಂದು ಕೋಟಿ ಲಕ್ಷ ರೂಪಾಯಿಗಳ ಪ್ಯಾಕೇಜ್‌ನ್ನೂ ಘೋಷಣೆ ಮಾಡಲಾಗಿತ್ತು. ಆದರೆ ಇದರಲ್ಲಿ ಎಷ್ಟು ಅನುಷ್ಠಾನ ಆಯ್ತೋ ಎಂಬ ಬಗ್ಗೆ ಸರ್ಕಾರ ಮಾಹಿತಿ ಬಿಡುಗಡೆ ಮಾಡಿಲ್ಲ.

ಬುಧವಾರ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಕಟಿಸಿದ 20 ಲಕ್ಷ ಕೋಟಿ ಪ್ಯಾಕೇಜಿನ ವಿವರಗಳಲ್ಲಿ ವಿಸ್ತೃತ ಮಾಹಿತಿ ಇರಲಿಲ್ಲ. ಹಾಗಾಗಿ ಇನ್ನೂ ಹೆಚ್ಚಿನ ಮಾಹಿತಿ ನೀಡುವುದಕ್ಕೆ ಗುರುವಾರ ಸಂಜೆಯೂ ಪತ್ರಿಕಾಗೋಷ್ಠಿ ಕರೆದು ಮಾಹಿತಿ ನೀಡಿದ್ದಾರೆ. ನಿರ್ಮಲಾ ಅವರು ಮಾತನಾಡುತ್ತಾ, ದೇಶಕ್ಕೆ ಲಾಕ್ ಡೌನ್ ಘೋಷಿಸಿದ ಕೆಲವೇ ಘಂಟೆಗಳಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜನ್ನು ಕೂಡ ಘೋಷಿಸಲಾಯಿತು ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ಪಡಿತರ ಕಾರ್ಡ್ ರಹಿತರಿಗೆ ಪಡಿತರವನ್ನೂ ಸರಬರಾಜು ಮಾಡಲಾಗಿದ್ದು ಉಜ್ವಲ ಅನಿಲ ಯೋಜನೆಯ ಮೂಲಕ ಅನಿಲ ಸಂಪರ್ಕಗಳನ್ನೂ ತ್ವರಿತವಾಗಿ ನೀಡಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ಜನ ಧನ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಮಾಡಲಾದ ಬಗ್ಗೆಯೂ ಹೇಳಿದ್ದಾರೆ.
ಅಲ್ಲದೆ ಆದಾಯ ತೆರಿಗೆದಾರರಿಗೆ 18 ಸಾವಿರ ಕೋಟಿ ರೂಪಾಯಿ ಹಣವನ್ನು ರೀಫಂಡ್ ಮಾಡಿರುವುದರಿಂದ ದೇಶದ 14 ಲಕ್ಷ ತೆರಿಗೆದಾರರು ಲಾಭ ಪಡೆದಿದ್ದಾರೆ ಎಂದು ಅವರು ಒತ್ತಿ ಹೇಳಿದ್ದಾರೆ. ಆದರೆ ಆದಾಯ ತೆರಿಗೆ ರೀಫಂಡ್ ಮಾಡಿದ ಹಣವನ್ನೂ ಕೂಡ ಪ್ಯಾಕೇಜ್ ನಲ್ಲಿ ಸೇರಿಸಿಕೊಂಡಿರುವುದಕ್ಕೆ ಪ್ರತಿಪಕ್ಷಗಳ ನಾಯಕರು ಮತ್ತು ಸೋಷಿಯಲ್ ಮೀಡಿಯಾ ಬಳಕೆದಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏಕೆಂದರೆ ಈ ರೀಫಂಡ್ ಹಣವು ವಿಶೇಷ ಪ್ಯಾಕೇಜ್ ಘೋಷಣೆ ಮಾಡದೇ ಇದ್ದರೂ ಕೂಡ ತೆರಿಗೆದಾರರಿಗೆ ನೀಡಲೇ ಬೇಕಾಗಿದ್ದ ಹಣವಾಗಿತ್ತು.
ಈ ಕುರಿತು ಟ್ವೀಟ್ ಮಾಡಿರುವ ಸಿಪಿಎಂ ನ ನಾಯಕ ಸೀತಾರಾಮ್ ಯಚೂರಿ ಅವರು ರೀಫಂಡ್ ಮಾಡುತ್ತಿರುವುದು ಜನರ ಸ್ವಂತ ಹಣ . ಅದು ಸರ್ಕಾರದ ಹೊಣೆಯಾಗಿದ್ದು ಬಾಕಿ ಉಳಿಸಿಕೊಂಡಿದ್ದನ್ನು ಪಾವತಿ ಮಾಡಿದರೆ ಅದು ಹೇಗೆ ಪ್ಯಾಕೇಜ್ ಆಗುತ್ತದೆ ಎಂದು ಟೀಕಿಸಿದ್ದಾರೆ. ಕೇಂದ್ರದ ನರೇಂದ್ರ ಮೋದಿ ಸರ್ಕಾರದ ‘ಸುಂದರ ಪ್ಯಾಕೇಜ್’ ಇದು ಎಂದು ಟೀಕಿಸಿರುವ ಅವರು ರಾಜ್ಯ ಸರ್ಕಾರಗಳು ಇಂದು ಕೋವಿಡ್-19 ವಿರುದ್ದ ಹೋರಾಟದಲ್ಲಿ ಮುಂಚೂಣಿಯಲ್ಲಿವೆ. ರಾಜ್ಯ ಸರ್ಕಾರಗಳಿಗೆ ಕೋವಿಡ್ ವಿರುದ್ದ ಹೋರಾಟಕ್ಕೆ ಕೇಂದ್ರ ಯಾವುದೇ ಹಣ ನೀಡಿಲ್ಲ , ಜತೆಗೇ ರಾಜ್ಯಗಳಿಗೆ ನೀಡಬೇಕಾದ ಅವುಗಳ ಪಾಲಿನ ಹಣವನ್ನೂ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Will wait to see details of 'package'. We hope this money will go in the pockets of the poor and the hungry, not to help more defaulters. https://t.co/m6N6s3sfwM
— Sitaram Yechury (@SitaramYechury) May 12, 2020
ಸೋಷಿಯಲ್ ಮೀಡಿಯಾಗಳಲ್ಲೂ ಬಳಕೆದಾರರು ಸರ್ಕಾರವನ್ನು ಹಿಗ್ಗಾ ಮುಗ್ಗಾ ಜಾಡಿಸಿದ್ದಾರೆ. ಟ್ವಿಟರ್ ನಲ್ಲಿ ಜೈವೀರ್ ಶೇರ್ಗಿಲ್ ಎಂಬ ಬಳಕೆದಾರರು 20 ಲಕ್ಷ ಕೋಟಿ ಪ್ಯಾಕೇಜ್ ‘ಸಾಲ ಮಾರುಕಟ್ಟೆಯ ಬ್ರೋಚರ್’ ಎಂದು ಕರೆದಿದ್ದು ಇದು ಜನರನ್ನು ಅಪಾಯದಿಂದ ಪಾರು ಮಾಡುವ ರಿಲೀಫ್ ಪ್ಯಾಕೇಜ್ ಅಲ್ಲ ಎಂದಿದ್ದಾರೆ. ಈ ಪ್ಯಾಕೇಜ್ ಸಾಲವನ್ನು ಸೃಷ್ಟಿಸುತ್ತಿದೆಯೇ ಹೊರತು ಬೇಡಿಕೆಯನ್ನು ಸೃಷ್ಟಿಸುತ್ತಿಲ್ಲ , ತೆರಿಗೆ ರೀಫಂಡ್ ನ್ನೂ ಪ್ಯಾಕೇಜಿನಲ್ಲಿ ಸೇರಿಸಿಕೊಂಡಿರುವುದು ತಪ್ಪು ದಾರಿಗೆಳೆದಂತಾಗಿದೆ ಎಂದು ಹೇಳಿದ್ದಾರೆ.
₹20Lac Cr Package announced by FM is a “Loans Marketing Brochure” rather than a “Relief Oriented Rescue Plan”; Focus of package is “debt creation” & not “demand creation”-clearing of receivables & tax refunds is not stimulus-Govt misleading by Repackaging loans & dues as Relief
— Jaiveer Shergill (@JaiveerShergill) May 13, 2020
ಅತುಲ್ ಎಂಬ ಟ್ವಿಟರ್ ಬಳಕೆದಾರರು ತೆರಿಗೆ ರೀಫಂಡ್ ನ್ನೂ ಸೇರಿಸಿಕೊಂಡಿರುವುದಕ್ಕೆ ʼಮಾಸ್ಟರ್ ಸ್ಟ್ರೋಕ್ ʼಎಂದು ವ್ಯಂಗವಾಡಿದ್ದಾರೆ. ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿ ಕಾರ್ಮಿಕರಿಗೆ ಏನೂ ಕೊಟ್ಟಿಲ್ಲ, ಕಾರ್ಮಿಕ ಕಾಯ್ದೆಯ ಸುಧಾರಣೆಯ ನೆಪದಲ್ಲಿ ಗರಿಷ್ಟ ಕೆಲಸ ಮತ್ತು ಕನಿಷ್ಟ ವೇತನ ನೀಡಲು ಸಿದ್ದತೆ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.
So PM's 8pm was about a new slogan: 'Self reliant India'. Promises of a 20LCr package& new Lockdown rules. Let us wait& see if there are substantial cash transfers to the poor or if most of the 20LCr is by way of tax holidays to corporates. And if 'Reforms'are to drop Labour laws
— Prashant Bhushan (@pbhushan1) May 12, 2020

ಗುರುವಾರವೂ 20 ಲಕ್ಷ ಕೋಟಿ ಪ್ಯಾಕೇಜ್ ಬಗ್ಗೆ ವಿವರ ನೀಡಿದ ನಿರ್ಮಲಾ ಸೀತಾರಾಮನ್ ಅವರು ಸಣ್ಣ , ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ವಲಯಕ್ಕೆ ಯಾವುದೇ ಭದ್ರತೆ ಇಲ್ಲದೆ 3 ಲಕ್ಷ ಕೋಟಿ ರೂಪಾಯಿ ಸಾಲ ನೀಡುವುದಾಗಿ ಪ್ರಕಟಿಸಿದ್ದಾರೆ. ಸಾಲ ಮರು ಪಾವತಿಗೆ ನಾಲ್ಕು ವರ್ಷಗಳ ಅವಧಿ ನೀಡಲಾಗಿದ್ದು ಮೊದಲ 12 ತಿಂಗಳು ಸಾಲ ಮರು ಪಾವತಿ ಕಂತಿಗೆ ವಿನಾಯ್ತಿ ನೀಡಲಾಗಿದೆ ಎಂದರು. ಇದರಿಂದ ದೇಶದ ಎರಡು ಲಕ್ಷ ಎಮ್‍ಎಸ್‍ಎಮ್‍ಇ ಘಟಕಗಳು ಪ್ರಯೋಜನ ಪಡೆಯಲಿವೆ ಎಂದರು. ಸ್ವದೇಶಿ ಕಂಪೆನಿಗಳಿಗೆ ಒತ್ತು ನೀಡಲು 200 ಕೋಟಿ ರೂಪಾಯಿಗಳವರೆಗಿನ ಖರೀದಿ ಪ್ರಕ್ರಿಯೆಯಲ್ಲಿ ಜಾಗತಿಕ ಟೆಂಡರ್ ಕೈಬಿಡುವುದಾಗಿಯೂ ಪ್ರಕಟಿಸಿದರು. ಸುಮಾರು 72.5 ಲಕ್ಷ ಕಾರ್ಮಿಕರಿಗೆ ಜೂನ್ ನಿಂದ ಆಗಸ್ಟ್ ವರೆಗಿನ 3 ತಿಂಗಳ ಭವಿಷ್ಯ ನಿಧಿಯನ್ನು ಕೇಂದ್ರ ಸರ್ಕಾರ ಪಾವತಿಸಲಿದೆ ಎಂದೂ ಅವರು ಹೇಳಿದ್ದಾರೆ. ಹಣಕಾಸು ಸಚಿವರು ಏನೇ ಘೋಷಣೆ ಮಾಡಿದ್ದರೂ ಇವೆಲ್ಲವೂ ಅನುಷ್ಠಾನವಾದಾಗ ಮಾತ್ರ ನಂಬಬಹುದು.











