ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿದ್ದ ಗೃಹಲಕ್ಷ್ಮೀ ಯೋಜನೆಗೆ ಇಂದು ಮೈಸೂರಿನಲ್ಲಿ ಚಾಲನೆ ನೀಡಲಾಗ್ತಿದೆ. ಈ ಮೊದಲು ಬೆಳಗಾವಿಯಲ್ಲಿ ಕಾರ್ಯಕ್ರಮ ಮಾಡುವುದಕ್ಕೆ ಸಿದ್ಧತೆ ನಡೆದಿತ್ತಾದರೂ ಅಂತಿಮವಾಗಿ ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿ ಅದ್ಧೂರಿ ಕಾರ್ಯಕ್ರಮದ ಮೂಲಕ ರಾಜ್ಯದ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಧನಸಹಾಯ ನೀಡುವ ಯೋಜನೆಗೆ ಚಾಲನೆ ಸಿಗಲಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಮುಖ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದ್ದು ಒಂದೂವರೆ ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಮಹಿಳೆಯರಿಗೂ ಮುನ್ನ ನಾಡದೇವಿಗೆ 2 ಸಾವಿರ ಅರ್ಪಣೆ..!
ವಿಧಾನಸಭಾ ಚುನಾವಣೆ ವೇಳೆ ಗೃಹಲಕ್ಷ್ಮೀ ಯೋಜನೆ ಘೋಷಣೆ ವೇಳೆ ಮೈಸೂರಿಗೆ ಭೇಟಿ ನೀಡಿದ್ದ ಡಿ.ಕೆ ಶಿವಕುಮಾರ್ ಹಾಗು ಸಿದ್ದರಾಮಯ್ಯ, ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಪೂಜೆ ಮಾಡಿಸಿ, ಮಹಿಳೆಯರನ್ನು ಶಸಕ್ತರನ್ನಾಗಿ ಮಾಡುವ ಘೋಷಣೆ ಮಾಡಿದ್ದರು. ಇದೀಗ ಯೋಜನೆ ಜಾರಿಗೂ ಮುನ್ನ ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಮೊದಲಿಗೆ ಚಾಮುಂಡಿ ದೇವಿಗೆ 2 ಸಾವಿರ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಅರ್ಪಣೆ ಮಾಡಿದ್ದಾರೆ. ಜೊತೆಗೆ ಹೂವು, ಸೀರೆ, ಬಳೆ ನೀಡಿ ಪೂಜೆ ಸಲ್ಲಿಸಿ ಹರಕೆ ತೀರಿಸಿದ್ದಾರೆ. ಚಾಮುಂಡಿ ದೇವಿಗೆ ಸಿಎಂ ಸಿದ್ದರಾಮಯ್ಯ ಹಾಗು ಡಿಸಿಎಂ ಡಿ.ಕೆ ಶಿವಕುಮಾರ್ ಈಡುಗಾಯಿ ಒಡೆದಿದ್ದಾರೆ. ಆ ಬಳಿಕ ಮಾತನಾಡಿದ ಸಿಎಂ ಬಡವರ ಹತ್ರ ಹಣ ಇದ್ದರಷ್ಟೇ ಬೆಲೆ ಎಂದು ಬಡವರ ಪರ ನಮ್ಮ ನಿಲುವು ಅಚಲ ಎಂದಿದ್ದಾರೆ.
ಯಾವಾಗ ಮಹಿಳೆಯರ ಖಾತೆಗೆ ಹಣ ಜಮೆ ಆಗಲಿದೆ..?
ಬಿಪಿಎಲ್, ಎಪಿಎಲ್ ಕಾರ್ಡ್ ಹೊಂದಿರುವ ಎಲ್ಲಾ ಕುಟುಂಬದ ಮುಖ್ಯಸ್ಥ ಹೆಣ್ಣು ಮಗಳ ಹೆಸರಿಗೆ ಖಾತೆಗೆ ಹಣ ವರ್ಗಾವಣೆ ಆಗಲಿದೆ ಎನ್ನಲಾಗಿದ್ದು, ಇಂದು ರಾಹುಲ್ ಗಾಂಧಿ ಕಾರ್ಯಕ್ರಮದಲ್ಲಿ ಚಾಲನೆ ಕೊಟ್ಟ ಬಳಿಕ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಲಿದೆ ಎನ್ನಲಾಗಿದೆ. ರಾಜ್ಯಾದ್ಯಂತ 2 ಸಾವಿರ ಬಸ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಆಸಕ್ತರನ್ನು ಮೈಸೂರಿನ ಕಾರ್ಯಕ್ರಮಕ್ಕೆ ಕರೆತರುವ ವ್ಯವಸ್ಥೆ ಮಾಡಲಾಗಿದೆ. ಇಷ್ಟು ಮಾತ್ರವಲ್ಲದೆ ರಾಜ್ಯಾದ್ಯಂತ 10 ಸಾವಿರ 400 ಕೇಂದ್ರಗಳಲ್ಲಿ LED ಸ್ಕ್ರೀನ್, ಪ್ರೊಜೆಕ್ಟರ್ ವ್ಯವಸ್ಥೆ ಮಾಡಲಾಗಿದ್ದು, ಜನರು ತಮ್ಮ ಗ್ರಾಮ ಪಂಚಾಯ್ತಿ ಕೇಂದ್ರಗಳು, ಪಾಲಿಕೆ, ನಗರಸಭೆ, ಪುರಸಭೆಗಳಲ್ಲೂ ವೀಕ್ಷಣೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ರಾಜ್ಯದಲ್ಲಿ ಒಟ್ಟು 1 ಕೋಟಿ 10 ಲಕ್ಷ ಗೃಹಿಣಿಯರ ಖಾತೆಗೆ ಹಣ ಜಮೆಯಾಗಲಿದ್ದು, ₹17 ಸಾವಿರ 500 ಕೋಟಿ ಮೀಸಲು ಇಡಲಾಗಿದೆ.
ಹಳೇ ಮೈಸೂರು ಭಾಗದಲ್ಲಿ ಹಿಡಿತ ಸಾಧಿಸಲು ಆರೋಪ..!
ಈ ಮೊದಲು ಬೆಳಗಾವಿಯಲ್ಲಿ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಅಂತಿಮ ದಿನಗಳಲ್ಲಿ ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಕಾರ್ಯಕ್ರಮ ಮಾಡುವಂತೆ ಸೂಚನೆ ಕೊಟ್ಟರು ಎನ್ನಲಾಗ್ತಿದೆ. ಆದರೆ ಸಿದ್ದರಾಮಯ್ಯ ಚಾಮರಾಜನಗರ, ಮೈಸೂರು ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಈ ರೀತಿ ಮಾಡಿದ್ದಾರೆ ಎನ್ನುವುದು ವಿರೋಧ ಪಕ್ಷಗಳ ಆರೋಪ. ಯತೀಂದ್ರ ಸಿದ್ದರಾಮಯ್ಯಗೆ ಮೈಸೂರು ಕೊಡಗು ಲೋಕಸಭಾ ಚುನಾವಣಾ ಟಿಕೆಟ್ ನೀಡುವ ಉದ್ದೇಶ ಸಿದ್ದರಾಮಯ್ಯ ಅವರದ್ದು, ಮಗನನ್ನು ಗೆಲ್ಲಿಸಿಕೊಳ್ಳುವುದು ಅವರ ಗುರಿ ಎಂದು ಟೀಕಿಸಿದ್ದಾರೆ. ಆದರೆ 2024 ಲೋಕಸಭಾ ಚುನಾವಣೆಯಲ್ಲಿ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವ ಗುರಿ ಹೊಂದಿರುವ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್, ವಿರೋಧಿಗಳು ಏನಾದರೂ ಟೀಕೆ ಮಾಡಲಿ. ನಮ್ಮನ್ನು ಟೀಕಿಸಿದಷ್ಟೂ ನಾವು ಒಟ್ಟಾಗಿ ಒಗ್ಗಟ್ಟಾಗಿ ಇರ್ತೇವೆ ಎಂದಿದ್ದಾರೆ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್.
ಕೃಷ್ಣಮಣಿ