ವಾಯು ಮಾಲಿನ್ಯವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಇ ವೆಹಿಕಲ್ ನ್ನು ಉತ್ತೇಜಿಸಲು ಕರ್ನಾಟಕದಲ್ಲಿ ಎರಡು ಲಿಥಿಯಂ ಬ್ಯಾಟರಿ ಉತ್ಪಾದನಾ ಘಟಕ ಸ್ಥಾಪಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಸಿ ಎನ್ ಅಶ್ವಥ್ ನಾರಾಯಣ್ ಅವರು ಹೇಳಿದ್ದಾರೆ.
ರಾಜ್ಯವು ಅನುಕರಣೀಯ ಸಂಪನ್ಮೂಲ ನೀತಿ ರೂಪಿಸುವ ಪ್ರಯತ್ನದಲ್ಲಿದೆ ಎಂದ ಅವರು ರೋಟರಿ ಕ್ಲಬ್ ಆಯೋಜಿಸಿದ್ದ ಇ ವೆಹಿಕಲ್ ರ‌್ಯಾಲಿ ಉದ್ಘಾಟಿಸಿ ಹೇಳಿದರು. ಚಿಕ್ಕಬಳ್ಳಾಪುರದಲ್ಲಿ ಒಂದು ಘಟಕ ಮತ್ತು ಹುಬ್ಬಳ್ಳಿಯಲ್ಲಿ ಇನ್ನೊಂದು ಘಟಕ ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು.
2018ರಲ್ಲಿ ರಾಜ್ಯವು ಇ ವೆಹಿಕಲ್ ಪಾಲಿಸಿ ಅನುಷ್ಠಾನ ಗೊಳಿಸಿದ್ದು, ಕರ್ನಾಟಕವು ಇ-ವೆಹಿಕಲ್ ಪಾಲಿಸಿ ರೂಪಿಸಿದ ದೇಶದ ಮೊದಲ ರಾಜ್ಯವಾಗಿದೆ. ವ್ಯವಹಾರದ ಉದ್ದೇಶಕ್ಕಾಗಿ ಪ್ರಸ್ತುತ ಪ್ರತಿ ಯುನಿಟ್ ವಿದ್ಯುತ್‌ಗೆ 9 ರೂಪಾಯಿ ವಿಧಿಸಲಾಗುತ್ತಿದೆ ಆದರೆ ಇ-ವೆಹಿಕಲ್ ಬಳಕೆದಾರರಿಗೆ ರಿಯಾಯಿತಿ ದರದಲ್ಲಿ ಅಂದರೆ ಪ್ರತಿ ಯುನಿಟಿಗೆ 5 ರೂಪಾಯಿಯಂತೆ ಶುಲ್ಕ ವಿಧಿಸಲಾಗುತ್ತಿದೆ.
“ಪೆಟ್ರೋಲ್ ಟ್ಯಾಂಕ್ ಮತ್ತು ಡಿಸೆಲ್ ಟ್ಯಾಂಕ್ ಗಳಿಲ್ಲದ ವಾಹನಗಳನ್ನು ಉತ್ಪಾದಿಸುವ ದಿನಗಳು ದೂರವಿಲ್ಲ. ಗ್ರಾಹಕರು ಮೊದಲೇ ಚಾರ್ಜ್ ಮಾಡಿಟ್ಟ ಬ್ಯಾಟರಿಗಳನ್ನು ಬಾಡಿಗೆಗೆ ಬಳಸಬಹುದು” ಎಂದು ಮಾಹಿತಿ ನೀಡಿದರು.
ಸಾಂಪ್ರದಾಯಿಕ ಪೆಟ್ರೋಲ್ ಪಂಪ್‌ಗಳು ಕಾರ್ಯ ನಿರ್ವಹಿಸುವಂತೆ ಬ್ಯಾಟರಿ ಬ್ಯಾಂಕ್‌ಗಳು ರಾಜ್ಯಾದ್ಯಂತ ಕಾರ್ಯ ನಿರ್ವಹಿಸಲಿವೆ. ಇ-ವೆಹಿಕಲ್ ಉತ್ಪಾದನಾ ಘಟಕಗಳು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಉದ್ಯಮವಾಗಿದ್ದು ಮುಂದಿನ ಹತ್ತು ವರ್ಷಗಳಲ್ಲಿ ಪೆಟ್ರೋಲ್ ಮತ್ತು ಡಿಸೇಲ್‌ನಿಂದ ಓಡುವ ವಾಹನಗಳೇ ಇಲ್ಲವಾಗಬಹುದು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಬೆಸ್ಕಾಂ ಸಹಯೋಗದೊಂದಿಗೆ ರಾಜ್ಯ ಸರ್ಕಾರವು ಇ- ವೆಹಿಕಲ್ ಉದ್ಯಮವನ್ನು ಉತ್ತೇಜಿಸುತ್ತಿದ್ದು ಬೆಂಗಳೂರಿನಾದ್ಯಂತ ಚಾರ್ಜಿಂಗ್ ಸ್ಟೇಷನ್‌ಗಳನ್ನು ನಿರ್ಮಿಸಲಿವೆ.
ಬೆಸ್ಕಾಂ ಈಗಾಗಲೇ 150 ಸ್ಟೇಷನ್‌ಗಳಣ್ಣು ತೆರೆದಿದ್ದು NTPC ಸಹಯೋಗದೊಂದಿಗೆ ಇನ್ನೂ ನೂರೈವತ್ತು ಸ್ಟೇಷನ್‌ಗಳನ್ನು ತೆರೆಯಲಿದೆ ಎಂದು ಅವರು ಹೇಳಿದರು.