ಕರೋನಾದಂತಹ ಕಡುಕಷ್ಟದ ಕಾಲದಲ್ಲೂ ರಾಜ್ಯ ಬಿಜೆಪಿ ಸರ್ಕಾರ ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದೆ. ಆಸ್ಪತ್ರೆಗಳಲ್ಲಿ ಪ್ರವೇಶ ಸಿಗದೆ, ಹಾಸಿಗೆ ಸಿಗದೆ, ಸೂಕ್ತ ಚಿಕಿತ್ಸೆಯೂ ಇಲ್ಲದೆ ಜನ ಸಾಯುತ್ತಿದ್ದರೆ ಜನರ ಸಾವನ್ನೇ ಬಂಡವಾಳ ಮಾಡಿಕೊಂಡು ಕೋಟಿ ಕೋಟಿ ರೂಪಾಯಿ ಲೂಟಿ ಮಾಡುತ್ತಿದೆ ಎಂಬ ಆರೋಪಗಳ ಬಗ್ಗೆ ‘ಲೆಕ್ಕ ಕೊಡಿ’ ಚಳವಳಿ ಆರಂಭಿಸಿರುವ ಮಾಜಿ ಮುಖ್ಯಮಂತ್ರಿಗಳೂ ಆದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇಂದು ಇನ್ನಷ್ಟು ಗಟ್ಟಿದನಿಯಲ್ಲಿ ‘ವೈದ್ಯಕೀಯ ಉಪಕರಗಳ ಖರೀದಿಯಲ್ಲಿ ನಡೆದಿರುವ ಅಪಾರ ಪ್ರಮಾಣದ ಭ್ರಷ್ಟಾಚಾರದ ಬಗ್ಗೆ ಲೆಕ್ಕ ಕೊಡಲೇಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾಹಿತಿ ನೀಡುವಂತೆ ಸಿದ್ದರಾಮಯ್ಯ ಅವರು ಜೂನ್ 9ರಂದು ಮೊದಲ ಬಾರಿಗೆ ರಾಜ್ಯ ಬಿಜೆಪಿ ಸರ್ಕಾರಕ್ಕೆ ಪತ್ರಬರೆದು ಲೆಕ್ಕ ಕೇಳಿದ್ದರು. ನಂತರ ಜುಲೈ 3 ಮತ್ತು 10ರಂದು ಮತ್ತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದರು. ಪತ್ರ ಬರೆದುದಷ್ಟೇಯಲ್ಲದೇ ಆಗಲೇ ಪತ್ರಿಕಾಗೋಷ್ಠಿ ಕರೆದು ಲೆಕ್ಕ ಕೊಡಬೇಕೆಂದು ಯಡಿಯೂರಪ್ಪ ಅವರಿಗೆ ಆಗ್ರಹಿಸಿದ್ದರು. ಎರಡನೇ ಪತ್ರ ಬಳಿಕ ಮಾತನಾಡಿದ ಯಡಿಯೂರಪ್ಪ ’24 ಗಂಟೆಯಲ್ಲಿ ಲೆಕ್ಕ ಕೊಡುತ್ತೇನೆ’ ಎಂದು ಗುಡುಗಿದರು. ಆದರೆ ಯಾವುದೇ ಲೆಕ್ಕವನ್ನು ಕೊಟ್ಟಿರಲಿಲ್ಲ.
ಛಲ ಬಿಡದ ತ್ರಿವಿಕ್ರಮನಂತೆ ಸಿದ್ದರಾಮಯ್ಯ ಪದೇ ಪದೇ ರಾಜ್ಯ ಸರ್ಕಾರಕ್ಕೆ ಲೆಕ್ಕಕೊಡುವಂತೆ ಒತ್ತಾಯಿಸುತ್ತಲೇ ಬಂದಿದ್ದರು. ಕ್ರಮೇಣ ಕಾಂಗ್ರೆಸ್ ಪಕ್ಷ ಕೂಡ ಸಿದ್ದರಾಮಯ್ಯ ಅವರೊಂದಿಗೆ ದನಿ ಗೂಡಿಸಿತು. ಇದರಿಂದ ಪೀಕಲಾಟಕ್ಕೆ ಸಿಲುಕಿದ ಸಿಎಂ ಯಡಿಯೂರಪ್ಪ, ಸಂಬಂಧಪಟ್ಟ ಸಚಿವರಿಂದ ಲೆಕ್ಕ ಕೊಡಿಸಲು ಮುಂದಾದರು. ಆದರೆ ಯಾವ ವೈದ್ಯಕೀಯ ಶಿಕ್ಷಣ ಇಲಾಖೆಯ ಮೇಲೆ ಆರೋಪ ಕೇಳಿಬಂದಿದೆಯೋ ಅದೇ ಇಲಾಖೆಯ ಸಚಿವ ಡಾ. ಸುಧಾಕರ್ ಸುದ್ದಿಗೋಷ್ಟಿಯಿಂದ ತಪ್ಪಿಸಿಕೊಂಡರು. ಉಪ ಮುಖ್ಯಮಂತ್ರಿ ಡಾ. ಅಶ್ವಥನಾರಾಯಣ್ ಮತ್ತು ಆರೋಗ್ಯ ಸಚಿವ ಬಿ. ಶ್ರೀರಾಮುಲು ಸಂಪೂರ್ಣವಾದ ಲೆಕ್ಕಕೊಡಲಾಗದೆ ತಡಬಡಾಯಿಸಿದರು. ಅದೂ 24 ಗಂಟೆಯಲ್ಲಿ ಲೆಕ್ಕ ಕೊಡುತ್ತೇನೆ ಎಂದು ಯಡಿಯೂರಪ್ಪ ಹೇಳಿದ 17 ದಿನಗಳ ಬಳಿಕ.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸಿದ್ದರಾಮಯ್ಯ ಇಂದು ಮತ್ತೆ ಪತ್ರಿಕಾಗೋಷ್ಠಿ ನಡೆಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜುಲೈ 3ನೇ ತಾರೀಖು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ 2 ಸಾವಿರ ಕೋಟಿ ರೂಪಾಯಿಗಳ ಅವ್ಯವಹಾರ ಆಗಿದೆ ಎಂದು ಆರೋಪ ಮಾಡಿದ್ದೆ. ಆದರೆ ಈವರೆಗೂ ಸರ್ಕಾರದಿಂದ ಯಾವುದೇ ಅಧಿಕೃತ ಉತ್ತರ ಬರಲಿಲ್ಲ. 17 ದಿನಗಳ ನಂತರ ಜುಲೈ 20ರಂದು ಸುದ್ದಿಗೋಷ್ಟಿ ನಡೆಸಿದ ಡಿಸಿಎಂ ಮತ್ತು ಆರೋಗ್ಯ ಸಚಿವರು, ಸರ್ಕಾರ 324 ಕೋಟಿ ರೂಪಾಯಿಗೆ ಮಾತ್ರ ವೈದ್ಯಕೀಯ ಉಪಕರಣಗಳ ಖರೀದಿ ಮಾಡಿದೆ ಎಂದು ಹೇಳಿ ಜಾರಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಉಳಿದ ಅವ್ಯವಹಾರದ ಬಗ್ಗೆ ಏಕೆ ಇಲ್ಲಿಯವರೆಗೆ ಉತ್ತರ ಕೊಟ್ಟಿಲ್ಲ? ಈ ಉತ್ತರ ಕೊಡಲು ಇಷ್ಟು ದಿನ ಬೇಕಾ? ನೀವು ಪ್ರಮಾಣಿಕವಾಗಿದ್ದರೆ ಪಾರದರ್ಶಕವಾಗಿಯೂ ಇರುತ್ತಿದ್ದಿರಿ. ನೀವು ಸುಳ್ಳು ಹೇಳುವ ಮೂಲಕ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಆಗಿರುವ ಭ್ರಷ್ಟಾಚಾರವನ್ನು ಒಪ್ಪಿಕೊಳ್ಳುತ್ತಿದ್ದೀರಿ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರಕ್ಕೆ ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಒಟ್ಟು 20 ಪತ್ರ ಬರೆದಿದ್ದೇನೆ. ಅವರ ನನ್ನ ಒಂದು ಪತ್ರಕ್ಕೂ ಉತ್ತರ ಕಳುಹಿಸಿಲ್ಲ. ಇವರು ನಿಜಕ್ಕೂ ಪ್ರಾಮಾಣಿಕವಾಗಿದ್ದರೆ ಉತ್ತರ ಕೊಡುತ್ತಿಲ್ಲ ಏಕೆ? ನಾನು ಅಧಿಕೃತವಾದ ವಿರೋಧ ಪಕ್ಷದ ನಾಯಕ. ಸರ್ಕಾರ ನನಗೇ ಮಾಹಿತಿ ಕೊಡುವುದಿಲ್ಲ ಎಂದರೆ ಹೇಗೆ? ಇನ್ನು ನಿಮ್ಮನ್ನು ಜನ ನಂಬುವುದಾದರೂ ಹೇಗೆ? ಎಂದು ಸಿದ್ದರಾಮಯ್ಯ ಖಡಕ್ ಆಗಿ ಪ್ರಶ್ನಿಸಿದ್ದಾರೆ.
ಕರೋನಾ ಶುರುವಾದಾಗ ವಿರೋಧ ಪಕ್ಷವಾಗಿ ನಾವು ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡಿದ್ದೆವು. ಈಗಲೂ ಜನರ ಜೀವ ಉಳಿಸೋಕೆ ನಮ್ಮ ಸಹಕಾರ ಇದ್ದೇ ಇದೆ. ಆದರೆ ಇಂತ ದುಸ್ಥಿತಿಯನ್ನು ದುರುಪಯೋಗ ಮಾಡಿಕೊಂಡು ಲೂಟಿ ಹೊಡೆಯೋದಾದರೆ ಸುಮ್ಮನೆ ಇರುವುದಿಲ್ಲ. ರಾಜ್ಯದ ಜನ ‘ಲೆಕ್ಕ ಕೊಡಿ’ ಎಂದು ಪ್ರಶ್ನೆ ಮಾಡುತ್ತಿದ್ದಾರೆ, ನಮ್ಮದೂ ಇದೇ ಪ್ರಶ್ನೆ; ಯಾವ್ಯಾವುದಕ್ಕೆ ಎಷ್ಟು ಖರ್ಚು ಮಾಡಿದ್ದೀರಿ? ಲೆಕ್ಕ ಕೊಡಿ ಎಂದು ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರ ಈ ಕೆಟ್ಟ ಪರಿಸ್ಥಿತಿಯಲ್ಲೂ ಭ್ರಷ್ಟಾಚಾರ ನಡೆಸುತ್ತಿದೆ. ಇದನ್ನು ನಾವು ತಿಳಿಸದಿದ್ದರೆ ಜನದ್ರೋಹವಾಗುತ್ತದೆ. ಜನರು ಕೂಡ ಇದನ್ನು ಅರ್ಥ ಮಾಡಿಕೊಳ್ಳಬೇಕು. ಸರ್ಕಾರ ಕೇವಲ 350 ಕೋಟಿ ರೂಪಾಯಿಗೆ ಲೆಕ್ಕ ಕೊಟ್ಟಿದೆ. ಆದರೆ ಆರೋಗ್ಯ ಇಲಾಖೆಯೊಂದರಲ್ಲೇ 750 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಬಿಬಿಎಂಪಿಯೊಂದೇ 200 ಕೋಟಿ ರೂಪಾಯಿ ಖರ್ಚು ಮಾಡಿದೆ. ಕಾರ್ಮಿಕ ಇಲಾಖೆಯಲ್ಲಿ 1 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿದೆ. ಶಿಕ್ಷಣ ಇಲಾಖೆ 815 ಕೋಟಿ ರೂಪಾಯಿ ಖರ್ಚು ಮಾಡಿದೆ. ಜಿಲ್ಲಾಡಳಿತಗಳು 740 ಕೋಟಿ ರೂಪಾಯಿ ಖರ್ಚು ಮಾಡಿವೆ. ಈ ಬಗ್ಗೆ ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಆಯೋಗದ ಮುಂದೆ 2 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಹೇಳಿದ್ದಾರೆ. ಸಮಾಜಕಲ್ಯಾಣ, ಮಹಿಳಾ ಕಲ್ಯಾಣ, ಗೃಹ ಇಲಾಖೆಗಳಿಂದ 500 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಹಾಸಿಗೆ, ದಿಂಬು ಖರೀದಿಗಾಗಿಯೇ 150 ಕೋಟಿ ರೂಪಾಯಿ ಖರ್ಚಾಗಿದೆ. ಒಟ್ಟು 4,167 ಕೋಟಿ ಹಣವನ್ನು ಸರ್ಕಾರ ಖರ್ಚು ಮಾಡಿದೆ. ಈ ಬಗ್ಗೆ ಲೆಕ್ಕ ಕೊಡಲೇಬೇಕು ಎಂದು ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಹೇಳಿದ್ದಾರೆ.
ನೋಟ್ ಬ್ಯಾನ್ ಮಾಡಿದಾಗ ಪ್ರಧಾನಿ ಮೋದಿ ’21 ದಿನಗಳಲ್ಲಿ ಭ್ರಷ್ಟಾಚಾರವನ್ನು ತೊಡೆದುಹಾಕುತ್ತೇವೆ ಎಂದಿದ್ದರು. ಇದೇನಾ ಭ್ರಷ್ಟಾಚಾರ ತೊಡೆದುಹಾಕಿದ್ದು? ವಲಸೆ ಕಾರ್ಮಿಕರಿಗೆ ಕಳಪೆ ಊಟ ಕೊಟ್ಟು ಅದರಲ್ಲಿ ದುಡ್ಡು ಹೊಡೆದಿದ್ದಾರೆ. ಇಂಥ ಭ್ರಷ್ಟ ಸರ್ಕಾರ ರಾಜ್ಯದಲ್ಲಿ ಯಾವತ್ತೂ ಇರಲಿಲ್ಲ. ಆರೋಗ್ಯ ಇಲಾಖೆಗೆ 10,032 ಕೋಟಿ ರೂಪಾಯಿ ಬಿಡುಗಡೆ ಆಗಿದೆ. ಅದರಲ್ಲಿ 3,322 ಕೋಟಿ ಹಣ ಖರ್ಚು ಮಾಡಲಾಗಿದೆ. ತಮಿಳುನಾಡು ಸರ್ಕಾರ 1 ವೆಂಟಿಲೇಟರ್ ಗೆ 4 ಲಕ್ಷ ರೂಪಾಯಿ ಕೊಟ್ಟು ಖರೀದಿಸಿದೆ. ರಾಜ್ಯ ಸರ್ಕಾರ ಮಾರ್ಚ್ 22ರಂದು 1ವೆಂಟಿಲೇಟರ್ ಗೆ 5,60,000 ರೂಪಾಯಿ ಕೊಟ್ಟು ಖರೀದಿಸಿದೆ. ನಂತರ 12,32,000 ರೂಪಾಯಿ ಕೊಟ್ಟು ಖರೀದಿಸಿದೆ. ಇದಾದ ಬಳಿಕ 18,23,000 ರೂಪಾಯಿ ಕೊಟ್ಟು ಖರೀದಿಸಿದೆ ಎಂದು ರಾಜ್ಯ ಸರ್ಕಾರದ ಭ್ರಷ್ಟಾಚಾರವನ್ನು ಬಿಚ್ಚಿಟ್ಟಿದ್ದಾರೆ.
ಮಾರುಕಟ್ಟೆಯಲ್ಲಿ 1 ಪಿಪಿಎ ಕಿಟ್ ಗೆ 330 ಖರೀದಿ ರೂಪಾಯಿ ಇದೆ. ಈ ರೀತಿ 9,65,000 ಪಿಪಿಎ ಕಿಟ್ ಖರೀದಿಸಲಾಗಿದೆ. ವೈದ್ಯರು ಕಳಪೆ ಕಿಟ್ ಎಂದು ಆರೋಪಿಸಿರುವ ಮಹಾರಾಷ್ಟ್ರದ ಬ್ಲಾಸ್ಟ್ ಸರ್ಜಿ ಕಂಪನಿಯಿಂದ ಮೂರುವರೆ ಲಕ್ಷ ಕಿಟ್ ಗಳನ್ನು ಖರೀದಿ ಮಾಡಲಾಗಿದೆ. ಅದರಲ್ಲಿ ಒಂದೂವರೆ ಲಕ್ಷ ಕಿಟ್ ವಾಪಸ್ ನೀಡಲಾಗಿದೆ. ಒಂದೊಂದು ಕಿಟ್ ಗೆ 2,117 ರೂಪಾಯಿ ನೀಡಲಾಗಿದೆ. ಮೇಕ್ ಇನ್ ಇಂಡಿಯಾ ಅಂತ ಭಾಷಣ ಹೊಡೆಯುತ್ತಾರೆ. ಚೀನಾದಿಂದ ಪಿಪಿಎ ಕಿಟ್ ಗಳನ್ನು ಆಮದು ಮಾಡಿಕೊಂಡಿದ್ದಾರೆ. ಒಟ್ಟು 94,22,57,520 ರೂಪಾಯಿ ಕೊಟ್ಟು ವೆಂಟಿಲೇಟರ್ ಖರೀದಿಸಿದ್ದಾರೆ ಎಂದು ಸರ್ಕಾರದ ಭ್ರಷ್ಟಾಚಾರವನ್ನು ಸಿದ್ದರಾಮಯ್ಯ ವಿವರಿಸಿದ್ದಾರೆ.
ರಾಜ್ಯ ಸರ್ಕಾರ ಸೆಂಕೆಂಡ್ ಹ್ಯಾಂಡ್ ವೆಂಟಿಲೇಟರ್ ಖರೀದಿ ಮಾಡಿದೆ ಎಂದು ಬಿಜೆಪಿ ನಾಯಕರಾದ ಸಾರ್ವಭೌಮ ಬಗಲಿಯವರೇ ಹೇಳಿದ್ದಾರೆ. ಈ ಬಗ್ಗೆ ಲೋಕಾಯುಕ್ತದಲ್ಲೂ ದೂರು ದಾಖಲಿಸಿದ್ದಾರೆ. ಸ್ವತಃ ವೈದ್ಯರಾಗಿರುವ ಬಗಲಿಯವರೇ ಆರೋಪಿಸಿರುವ ಬಗ್ಗೆಯಾದರೂ ಸರ್ಕಾರ ಉತ್ತರ ಕೊಡಬೇಕು.
116 ರೂಪಾಯಿಯಿಂದ 150 ರೂಪಾಯಿ ಹಣ ನೀಡಿ 10 ಲಕ್ಷ ಮಾಸ್ಕ್ ಖರೀದಿಸಲಾಗಿದೆ. 2 ಸಾವಿರ ರೂಪಾಯಿ ಮೌಲ್ಯದ ಥರ್ಮಲ್ ಸ್ಕ್ಯಾನರ್ ಅನ್ನು 3
5,941 ರೂಪಾಯಿ ಕೊಟ್ಟು ಖರೀದಿ ಮಾಡಲಾಗಿದೆ. 100 ರೂಪಾಯಿ ಮೌಲ್ಯದ ಸ್ಯಾನಿಟೈಸರ್ ಅನ್ನು ಆರೋಗ್ಯ ಇಲಾಖೆ 500 ರೂಪಾಯಿ ಕೊಟ್ಟು ಖರೀದಿಸಿದೆ. ಅದೇ ಸ್ಯಾನಿಟೈಸರ್ ಅನ್ನು ಸಮಾಜಕಲ್ಯಾಣ ಇಲಾಖೆ 600 ರೂಪಾಯಿ ಕೊಟ್ಟು ಖರೀದಿಸಿದೆ. ಬಳ್ಳಾರಿಯಲ್ಲಿ ಕರೋನಾದಿಂದ ಸತ್ತವರನ್ನು ಅಮಾನವೀಯವಾಗಿ ಅಂತ್ಯಸಂಸ್ಕಾರ ಮಾಡಿದ್ದಾರೆ. ಕೋವಿಡ್ 19 ಉಪಕರಣಗಳಲ್ಲಿ ಸುಮಾರು ಎರಡು ಸಾವಿರ ಲಂಚ ಹೊಡೆದಿದ್ದಾರೆ. ಈ ಹಗರಣದ ಬಗ್ಗೆ ಹೈಕೋರ್ಟಿನ ಹಾಲಿ ನ್ಯಾಯಾಧೀಶರಿಂದ ತನಿಖೆಯಾಗಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.