ಕಳೆದ ಮೂರೂವರೆ ವರ್ಷಗಳ ಭಾರೀ ಸರ್ಕಸ್ ಬಳಿಕ ಕೊನೆಗೂ ಎಡತಾಕಿ ಐರೋಪ್ಯ ಒಕ್ಕೂಟದಿಂದ ಅಧಿಕೃತವಾಗಿ ಹೊರಬಂದಿರುವ ಬ್ರಿಟನ್ ಇದೀಗ ಹೊಸ ಆರ್ಥಿಕ ಹಾಗೂ ಸಾಮಾಜಿಕ ಸವಾಲುಗಳನ್ನು ಎದುರಿಸುತ್ತಿದೆ.
ಐರೋಪ್ಯ ಒಕ್ಕೂಟದ ಮುಕ್ತ ವಲಸೆ ಹಾಗೂ ವೀಸಾ ನೀತಿಗಳನ್ನು ವಿರೋಧಿಸುತ್ತಲೇ ಬಂದಿದ್ದು ಬ್ರಿಟನ್, ಇದೀಗ ಆರ್ಥಿಕ, ವಾಣಿಜ್ಯ, ವ್ಯಾಪಾರ ಹಾಗೂ ಸಾಮಾಜಿಕ ಸ್ಥರಗಳಲ್ಲಿ ಸ್ವತಂತ್ರ ನಿಲುವನ್ನು ತಳೆಯುವ ಸ್ವಾತಂತ್ರ‍್ಯ ಹೊಂದಿದೆ. ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ಬಿಗ್ ಬೆನ್, ತನ್ನ ಉದ್ಯೋಗ ಮಾರುಕಟ್ಟೆಯ ವಿಸ್ತಾರವನ್ನು ಸಾಧ್ಯವಾದದಷ್ಟು ಬಳಸಿಕೊಂಡು ತನ್ನದೇ ಸಾಮಾಜಿಕ ಸಮಸ್ಯೆಗಳಲ್ಲಿ ಒಂದಾದ ನಿರುದ್ಯೋಗದವನ್ನು ಸರಿ ಪಡಿಸಿಕೊಳ್ಳಲು ನೋಡುತ್ತಿದೆ.
ಜನವರಿ 1, 2021ರಿಂದ ಜಾರಿಗೆ ಬರಲಿರುವ ಈ ನೂತನ ವಲಸೆ ವ್ಯವಸ್ಥೆಯಡಿ, ಭಾರತ ಸೇರಿದಂತೆ ವಿದೇಶಗಳಿಂದ ವಲಸೆ ಬರುವ highly skilled ವಲಸಿಗರಿಗೆ, ಅವರ ಕೌಶಲ್ಯಗಳು, ಶೈಕ್ಷಣಿಕ ಅರ್ಹತೆಗಳು, ವೇತನ, ವೃತ್ತಿ ಹಾಗೂ ವೀಸಾಗಳ ಮೇಲೆ ಪಾಯಿಂಟ್‌ಗಳನ್ನು ನೀಡಲಾಗುವುದು. ವಿಜ್ಞಾನಿಗಳು ಹಾಗೂ ಸಂಶೋಧಕರಿಗೆ ಯಾವುದೇ ಜಾಬ್ ಆಫರ್ ಇಲ್ಲದೇ ಬರಲು ಈ ಹೊಸ ವೀಸಾ ನೀತಿಯಡಿ ಅವಕಾಶ ನೀಡಲಾಗಿದೆ.
ಬ್ರಿಕ್ಸಿಟ್ ನಂತರದ ಈ ಅಂಕಾಧರಿತ ವಲಸೆ ವ್ಯವಸ್ಥೆಯು ಭಾರತ ಸೇರಿದಂತೆ ಯಾವುದೇ ಐರೋಪ್ಯೇತರ ದೇಶಗಳಿಗೂ ಐರೋಪ್ಯ ದೇಶಗಳಿಗೂ ಒಂದೇ ರೀತಿ ಕಾಣುತ್ತದೆ. ಇದೇ ವಿಚಾರವಾಗಿ ಮಾತನಾಡಿದ ಗೃಹ ಕಾಯದರ್ಶಿ ಪ್ರೀತಿ ಪಟೇಲ್, “ಜಗತ್ತಿನಾದ್ಯಂತ brightest and best ಜನರನ್ನೇ ಆಯ್ಕೆ ಮಾಡಿಕೊಂಡು ನಮ್ಮಲ್ಲಿಗೆ ಕರೆತರುತ್ತೇವೆ. ಈ ಮೂಲಕ ದೇಶದ ಆರ್ಥಿಕತೆಗೆ ಚೈತನ್ಯ ನೀಡಿ, ದೇಶದ ಸಂಪೂರ್ಣ ಸಾಮರ್ಥ್ಯವನ್ನು ಒರೆಗೆ ಹಚ್ಚಲಿದ್ದೇವೆ,” ಎನ್ನುತ್ತಾರೆ.
“ಬ್ರಿಟನ್‌ನಲ್ಲಿ 16 – 64 ವಯೋಮಾನದ ಸುಮಾರು 80 ಲಕ್ಷ ಜನ ಆರ್ಥಿಕವಾಗಿ ’ಜಡ’ವಾಗಿದ್ದು, ಹೊಸ ಪಾಯಿಂಟ್ಸ್ ಆಧರಿತ ವ್ಯವಸ್ಥೆ ಬಂದ ಪರಿಣಾಮ ಹೆಚ್ಚಿನ ಮಾನವ ಶಕ್ತಿ ಬೇಡುತ್ತಿರುವ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಈ ಮಂದಿಗೆ ತರಬೇತಿ ನೀಡಬಹದು,” ಎಂದಿದ್ದಾರೆ ಪಟೇಲ್.
ಬ್ರಿಟನ್‌ಗೆ ಬರಲಿಚ್ಛಿಸುವವರು ಸ್ಪಷ್ಟವಾಗಿ ಇಂಗ್ಲಿಷ್ ಮಾತನಾಡಲು ಬರಬೇಕಿದ್ದು, ಕೌಶಲ್ಯ ಬೇಡುವ ಕೆಲಸದ ಆಫರ್ ಜೊತೆಗೆ ಸ್ಪಾನ್ಸರ್‌ಗಳಿಂದ ಅನುಮತಿ ಪಡೆದುಕೊಳ್ಳಬೇಕು . ಹೀಗಾದಲ್ಲಿ ಅವರಿಗೆ ಈ ವ್ಯವಸ್ಥೆಯಡಿ 50 ಅಂಕಗಳನ್ನು ನೀಡಬಹುದಾಗಿದೆ. ಶೈಕ್ಷಣಿಕ ಅರ್ಹತೆ, salary offer ಹಾಗೂ ಆದ್ಯತೆಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಆಧಾರದ ಮೇಲೆ ಇನ್ನಷ್ಟು ಅಂಕಗಳನ್ನು ಸೇರಿಸಲಾಗುವುದು. ಬ್ರಿಟನ್‌ನಲ್ಲಿ ಕೆಲಸ ಮಾಡಬೇಂದಕಲ್ಲಿ ಕನಿಷ್ಠ 70 ಅಂಕಗಳನ್ನಾದರೂ ಪಡೆದುಕೊಳ್ಳಬೇಕಿದೆ.
ಕೌಶಲ್ಯ ಬೇಡುವ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಬ್ರಿಟನ್ ಸರ್ಕಾರ ಇಟ್ಟಿರುವ ಮಾನದಂಡಗಳನ್ನು ಪೂರೈಸಲು ಅಲ್ಲಿರುವ EU ವಲಯದ ವಲಸಿಗರ ಪೈಕಿ 70% ಮಂದಿ ವಿಫಲರಾಗುತ್ತಾರೆ ಎನ್ನಲಾಗಿದೆ.
ಅನ್ಯ ದೇಶಗಳಿಂದ ದೊರಕುತ್ತಿದ್ದ ಅಗ್ಗದ ಕಾರ್ಮಿಕ ಪೂರೈಕೆಗೆ ಅಂತ್ಯ ಹಾಡಿ, ಇನ್ನಷ್ಟು ಹೆಚ್ಚಿನ ಭದ್ರತೆಯೊಂದಿಗೆ ಒಟ್ಟಾರೆ ವಲಸೆಯ ಮೇಲೊಂದು ನಿಯಂತ್ರಣ ತರಬೇಕೆಂದು ಕೋರಿ 2016ರಲ್ಲಿ ಬ್ರೆಕ್ಸಿಟ್ ಪರವಾಗಿ ಬಂದ ಜನಮತಗಣನೆಗೆ ಗೌರವ ನೀಡಲು ಈ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎನ್ನುತ್ತದೆ ಬ್ರಿಟನ್ ಸರ್ಕಾರ.
ಕೃಷಿಕ, ಆತಿಥ್ಯ, ಆರೈಕೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಮುಂದಿನ ದಿನಗಳಲ್ಲಿ ಗಂಭೀರವಾದ ಕಾರ್ಮಿಕ ಕೊರತೆ ನೆಲೆಸಲಿದೆ ಎನ್ನಲಾಗಿದೆ. ಆದರೂ ಸಹ ಸರ್ಕಾರದ ನಿಲುವನ್ನು ಸಮರ್ಥನೆ ಮಾಡಿಕೊಂಡ ಪ್ರೀತಿ, “ಉದ್ಯೋಗ ಮಾರುಕಟ್ಟೆಗೆ ಈ ಮಂದಿಯನ್ನು ತರಬೇತುಗೊಳಿಸಿ, ಅವರಲ್ಲಿ ಕೌಶಲ್ಯ ವೃದ್ಧಿಸಬೇಕಿದೆ,” ಎಂದಿದ್ದಾರೆ.
“ಕೌಶಲ್ಯದ ಕೊರತೆ ಇದ್ದವರು ಬ್ರಿಟನ್‌ಗೆ ಇನ್ನು ಮುಂದೆ ಬರಲು ಸಾಧ್ಯವಿಲ್ಲ,” ಎಂದಿರುವ ಪ್ರೀತಿ, ನಿರ್ಮಾಣ ಕಾಮಗಾರಿಗಳಿಗೆಂದು ವಲಸೆ ಬರುತ್ತಿರುವ ಮಂದಿಗೆ ಇದು the end ಆಗಲಿದೆಯಾ ಎಂಬ ಪ್ರಶ್ನೆಗೆ ನಕಾರವೆತ್ತಿದ್ದಾರೆ. ಸ್ವಯಂ ಉದ್ಯೋಗದ ಬದಲಿಗೆ ನಿರ್ಮಾಣ ಕ್ಷೇತ್ರದಲ್ಲಿ ವಲಸಿಗರಿಗೆ ತೊಡಗಿಸಿಕೊಳ್ಳಲು ಅವಕಾಶ ಇರಲಿದೆ ಎನ್ನುತ್ತಾರೆ ಈ ಉನ್ನತ ಅಧಿಕಾರಿ.
ಇದೇ ವೇಳೆ, ಖುದ್ದು ತಮ್ಮದೇ ಪೋಷಕರು ಪೂರ್ವ ಆಫ್ರಿಕಾದಿಂದ ಬ್ರಿಟನ್‌ಗೆ ಬಂದು ಶಾಪ್ ಒಂದನ್ನು ಇಟ್ಟುಕೊಂಡು ಬದುಕು ಕಟ್ಟಿಕೊಂಡ ಬಗ್ಗೆ ಬೆಳಕು ಚೆಲ್ಲಿದ ಪ್ರೀತಿ, ಹಿಂಸಾಚಾರಕ್ಕೆ ತುತ್ತಾಗಿದ್ದ ಕಾರಣ ಅವರಿಗೆ ಇಲ್ಲಿ ಬಂದು ನೆಲೆಸಲು ಅನುಮತಿ ಇತ್ತು ಎನ್ನುತ್ತಾರೆ.
ಸರ್ಕಾರದ ಇಂಥ ದೂರದೃಷ್ಟಿಯಿಲ್ಲದ ನೀತಿಗಳಿಂದ ’ದುರಂತಮಯ’ ಸನ್ನಿವೇಶಗಳು ಸೃಷ್ಟಿಯಾಗಲಿದ್ದು, ಕೈಗಾರಿಕೆಗಳು ಮುಚ್ಚಬೇಕಾದ ಪರಿಸ್ಥಿತಿ ನೆಲೆಸಿ, ಭಾರೀ ಪ್ರಮಾಣದಲ್ಲಿ ಉದ್ಯೋಗ ಕಡಿತಗಳು ಸಂಭವಿಸಬಹುದು ಎನ್ನುತ್ತಾರೆ ಬ್ರಿಟನ್‌ನ ದೊಡ್ಡ ಉದ್ಯಮಿಗಳು.
ಪೋಲೆಂಡ್ ಹಾಗೂ ರೊಮಾನಿಯಾದಂಥ ಐರೋಪ್ಯದ ಒಕ್ಕೂಟದ ಇತರ ದೇಶಗಳ ವಲಸಿಗರಿಗೆ ತನ್ನಲ್ಲಿ ಬಂದು ಸ್ವಯಂ ಉದ್ಯೋಗ ತೆರೆದುಕೊಳ್ಳುವ ಹಾದಿಯನ್ನೇ ಬಂದ್ ಮಾಡುತ್ತಿರುವ ಬ್ರಿಟನ್‌ನ, ಫ್ರಾನ್ಸ್ ಹಾಗೂ ಇಟಲಿಯಂಥ ದೇಶಗಳ ಗುರುತಿನ ಚೀಟಿಗಳನ್ನು ಗಡಿ ನಿಯಂತ್ರಣದ ಹೆಸರಿನಲ್ಲಿ ಮಾನ್ಯ ಮಾಡುವುದನ್ನು ನಿಲ್ಲಿಸಲು ನಿರ್ಧರಿಸಿದೆ.
ರಾಷ್ಟ್ರೀಯ ಗುರುತಿನ ಚೀಟಿಗಳನ್ನು ತಂದು ಬ್ರಿಟನ್‌ನಲ್ಲಿ ಪ್ರಯಾಣ ಮಾಡುವ ಅವಕಾಶವನ್ನು ರದ್ದು ಮಾಡಲಿರುವ ಬ್ರಿಟನ್, ಡಿಸೆಂಬರ್ 31, 2020ರ ವೇಳೆ ಬ್ರಿಟನ್‌ನಲ್ಲಿ ನೆಲೆಸಿರುವ EU ಪ್ರಜೆಗಳು ಅಲ್ಲಿಯೇ ನೆಲೆಸಲು ಇಚ್ಛಿಸಿದಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಬಹುದಾಗಿದೆ.
1947ರಲ್ಲಿ ತರಾತುರಿಯ ಸ್ವಾಯತ್ತತೆ ಕೊಡುವ ಹಾದಿಯಲ್ಲಿ ಉಪಖಂಡದಲ್ಲಿ ಕೋಟ್ಯಂತರ ಜನರ ನೆತ್ತರಿನ ಮೇಲೆ ಅವೈಜ್ಞಾನಿಕ ಮಾನದಂಡಗಳ ಮೇಲೆ ಗಡಿಗಳನ್ನು ಎಳೆದು ಅಖಂಡ ಭಾರತವನ್ನು ಇಬ್ಭಾಗ ಮಾಡಿದ್ದ ಬ್ರಿಟನ್, ಇಂದು ತನ್ನದೇ ಖಂಡದೊಂದಿಗೆ ಹೊಂದಿಕೊಂಡು ಹೋಗಲು ಹೆಣಗಾಡುತ್ತಿದೆ. ಯಾವ ಪಾಕಿಸ್ತಾನದೊಂದಿಗೆ ನಮಗೆ ಗಡಿ ಹಾಗೂ ವಲಸೆ ಸಂಬಂಧ ಕಲಹಗಳಿವೆಯೋ, ಯಾವ ಬಾಂಗ್ಲಾದೇಶದ ವಲಸಿಗರು ಬಂದು ನಮ್ಮಲ್ಲಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಂಡು ಜೀವನ ಸಾಗಿಸಲು ಹೆಣಗಾಡುತ್ತಿದ್ದಾರೋ, ಅಂಥದ್ದೇ ಸಮಸ್ಯೆಗಳ ಆಗರವಾಗುತ್ತಿದೆ ಬ್ರಿಟನ್.
ಹೆಚ್ಚಿನ ಕೌಶಲ್ಯವಿರುವ ವಿದೇಶೀ ಪ್ರಜೆಗಳಿಗೆ ಮಣೆ ಹಾಕಿ, ಕೌಶಲ್ಯರಹಿತ ನೌಕರರ ವಲಸೆ ಮೇಲೆ ಮಿತಿಯನ್ನು ಹೇರುತ್ತಿದೆ ಬ್ರಿಟನ್. ಇಂಥ ವಿವೇಚನಾ ಶೂನ್ಯ ನಡೆಗಳಿಂದ ಐರೋಪ್ಯ ಒಕ್ಕೂಟದ ದೇಶಗಳ ಕೆಲಸಗಾರರನ್ನೇ ಹೆಚ್ಚಾಗಿ ಅವಲಂಬಿಸಿರುವ ಆಹಾರ ಸಂಸ್ಕರಣಾ ಉದ್ಯಮದಲ್ಲಿ ಕೆಲಸ ಮಾಡಲು ಜನರಿಲ್ಲದೇ, ಇಲ್ಲಿನ ಮಾಂಸದಂಗಡಿಗಳು ಖಾಲಿ ಶೆಲ್ಫ್‌ಗಳನ್ನು ನೋಡಬೇಕಾಗುತ್ತದೆ ಎಂದು ಉದ್ಯಮಿಗಳು ಎಚ್ಚರಿಸುತ್ತಿದ್ದಾರೆ.
“ಕಡಿಮೆ ಕೌಶಲ್ಯದ ಕೆಲಸಗಳೆಂದು ಸರ್ಕಾರ ಯಾವ ಕೆಲಸಗಳನ್ನು ಪಡಿಗಣಿಸಿದೆಯೋ, ಆ ಕೆಲಸಗಳೇ ಬ್ಯುಸಿನೆಸ್ ವೃದ್ಧಿಸಿಕೊಂಡು ದೇಶದ ಒಟ್ಟಾರೆ ಒಳಿತಿಗೆ ಪೂರಕವಾದಂಥವು. ಇಂಥ ನಿರ್ಧಾರಗಳಿಂದ ನಾವು ಸಾರ್ವಜನಿಕರಿಗೆ ಒದಗಿಸುವ ಸೇವೆಗಳ ಮೇಲೇ ಪರಿಣಾಮ ಬೀರಲಿವೆ. ಇಲ್ಲಿನ ಹಿರಿಯರ ಆರೈಕೆ ಮಾಡಲು, ಮನೆಗಳನ್ನು ಕಟ್ಟಲು ಹಾಗೂ ಅರ್ಥ ವ್ಯವಸ್ಥೆ ಚಾಲನೆಯಲ್ಲಿ ಇರುವಂತೆ ನೋಡಿಕೊಳ್ಳಲು ನಮಗೆ ಕಾರ್ಮಿಕರ ಅಗತ್ಯವಿದೆ,” ಎನ್ನುತ್ತಾರೆ ಉದ್ಯೋಗ ಪೂರೈಕೆದಾರ ಸಂಸ್ಥೆಯೊಂದರ ನಿದೇರ್ಶದ ಟಾಮ್ ಹ್ಯಾಡ್ಲಿ.
ಖುದ್ದು ತನ್ನದೇ ಯೂನಿಯನ್ ಜಾಕ್ ಕೆಳಗಿರುವ ಸ್ಕಾಟ್ಲೆಂಡ್ ಹಾಗೂ ಉತ್ತರ ಐರ್ಲೆಂಡ್‌ಗಳಲ್ಲಿ ಸ್ವಾತಂತ್ರ‍್ಯದ ಕೂಗುಗಳು ತೂಕ ಪಡೆದುಕೊಳ್ಳುತ್ತಿದ್ದು, ಈ ಎರಡೂ ದೇಶಗಳು ಯುನೈಟೆಡ್ ಕಿಂಗ್‌ಡಮ್‌ನಿಂದ ಸಂಪೂರ್ಣ ಸ್ವತಂತ್ರ‍್ಯ ಪಡೆದುಕೊಳ್ಳಬೇಕೆಂಬ ವಾದಕ್ಕೆ ಸಾಕಷ್ಟು ಪುಷ್ಟಿ ಸಿಗುತ್ತಿವೆ. ಬರೀ ಬ್ರೆಕ್ಸಿಟ್ ಒಂದಕ್ಕೇ ತನ್ನದೇ ಜನರಲ್ಲಿ ಗಣನೀಯವಾದ ವಿಶ್ವಾಸ ಪಡೆದುಕೊಳ್ಳಲು ಎಡವಿ, ಕಳೆದ 3-4 ವರ್ಷಗಳ ಅವಧಿಯಲ್ಲಿ ಮೂರು ಪ್ರಧಾನಿಗಳನ್ನು ಕಂಡಿರುವ ಬ್ರಿಟನ್ ಇದೀಗ ಗೊಂದಲದ ಗೂಡಾಗಿದೆ.
ಜನಸಾಮಾನ್ಯರ ದೈನಂದಿನ ಸೇವೆಗಳನ್ನು ದಿನಂಪ್ರತಿ ಮುಂದುವರೆಸಿಕೊಂಡು ಹೋಗಬೇಕಾದಲ್ಲಿ ಅತ್ಯಗತ್ಯವಾಗಿ ಬೇಕಾಗಿರುವ ಈ ಕೌಶಲ್ಯರಹಿತ ಕೆಲಸಗಳನ್ನು ಅಗ್ಗವಾಗಿ ಕಾಣುತ್ತಿರುವ ತನ್ನ ಪಾರಂಪರಿಕ ಧಿಮಾಕನ್ನು ಇಂದಿನ ಪರಿಸ್ಥಿತಿಯಲ್ಲೂ ಮುಂದುವರೆಸುತ್ತಿರುವ ಬ್ರಿಟನ್ ತನ್ನ ತಪ್ಪುಗಳಿ ಗೆ ಭಾರೀ ಬೆಲೆ ತರಬೇಕಾದ ದಿನಗಳು ದೂರವಿಲ್ಲ.
ಮೊದಲೇ ಕೌಶಲ್ಯಾಧರಿತ ಕೆಲಸಗಾರರಿಗೆ ಅನ್ಯ ದೇಶಗಳತ್ತ ನೋಡುತ್ತಿರುವ ಬ್ರಿಟನ್, ತನ್ನ ಆರ್ಥಿಕತೆಯ ಅಗ್ರ ಕ್ಷೇತ್ರಗಳು ಹಾಗೂ ವಲಯಗಳನ್ನೇ ಅನ್ಯ ದೇಶಗಳ ಬುದ್ಧಿವಂತರ ಕೈಗೆ ಕೊಟ್ಟು, ತನ್ನದೇ ಜನರು ಇವರ ದಾಸ್ಯಕ್ಕೆ ಗುರಿಯಾಗುವುದನ್ನು ನೋಡಬೇಕಿದೆ. ಚೆನ್ನಾಗಿ ಇಂಗ್ಲಿಷ್ ಮಾತನಾಡಬಲ್ಲ, ಕೌಶಲ್ಯಭರಿತ ಮಾನವ ಸಂಪನ್ಮೂಲವನ್ನು ಇತ್ತಿಚಿನ ದಿನಗಳಲ್ಲಿ ಚೆನ್ನಾಗಿಯೇ ಬೆಳೆಸುತ್ತಿರುವ ಭಾರತೀಯರಿಗೆ ಬ್ರಿಟನ್‌ನ ಬ್ರೆಕ್ಸಿಟ್ ನಂತರದ ನೀತಿಗಳು ಹೇಳಿ ಮಾಡಿಸಿದಂತೆಯೇ ಕಾಣುತ್ತಿವೆ. ಯಾರಿಗೆ ಗೊತ್ತು? ಕರ್ಮದ ಚಕ್ರ ತನ್ನ ಅರ್ಧ ಸುತ್ತನ್ನು ಸುತ್ತಿರಲೂಬಹುದು!