ದೀಪಾವಳಿ ಅಂದ್ರೆ ಬಾಳಿನ ಕತ್ತಲೆಯನ್ನ ಕಳೆದು ಬೆಳಕು ನೀಡುವ ಹಬ್ಬ. ಬೆಳಕಿನ ಸಂಕೇತವಾಗಿ ಆಚರಿಸೋ ಈ ಹಬ್ಬದಲ್ಲಿ ಪಟಾಕಿ ಹಾವಳಿ ಕೂಡ ಸೇರಿಬಿಟ್ಟಿದೆ. ಚಿಕ್ಕವರಿಂದ ದೊಡ್ಡವರವರೆಗೂ ದೀಪಾವಳಿ ಅಂದ್ರೆ ಪಟಾಕಿ ಥಟ್ ಅಂತಾ ನೆನಪಿಗೆ ಬರುತ್ತೆ. ಇದೇ ಪಟಾಕಿ ಇದೀಗ ಬಾಳಿನ ಬೆಳಕು ನಂದಿಸೋ ಸ್ಥಿತಿ ನಿರ್ಮಾಣವಾಗಿಬಿಟ್ಟಿದೆ.
ಪಟಾಕಿ ಅವಘಡಕ್ಕೆ ಬೆಂಗಳೂರಿನಲ್ಲಿ 25ಕ್ಕೂ ಅಧಿಕ ಮಂದಿಯ ಕಣ್ಣಿಗೆ ಗಂಭೀರ ಗಾಯ
ದೀಪಾವಳಿ ಅಂದ್ರೆ ಎಂತವರಿಗೂ ಖುಷಿ ತರುವ ಬೆಳಕಿನ ಹಬ್ಬ. ಅದರಲ್ಲೂ ಚಿಕ್ಕಮಕ್ಕಳಿಗೆ ದೀಪಾವಳಿ ಬಂದ್ರೆ ಪಟಾಕಿಗಳು ಸಿಗುತ್ತೆ ಅನ್ನೋ ಖುಷಿಯೋ ಖುಷಿ. ಆದ್ರೆ ಇದೇ ಹಬ್ಬ ಹಲವು ಮಕ್ಕಳ ಪಾಲಿಗೆ ಅಂಧಕಾರ ತಂದುಬಿಟ್ಟಿದೆ. ಪ್ರತಿ ವರ್ಷ ದೀಪಾವಳಿಗೆ ಒಂದಿಲ್ಲೊಂದು ಪಟಾಕಿ ದುರಂತ ನಡೆದು ಅದೆಷ್ಟೋ ಮಂದಿ ಕಣ್ಣಿನ ದೃಷ್ಟಿಯನ್ನೇ ಕಳೆದುಕೊಂಡು ಬಿಡ್ತಾರೆ. ಸದ್ಯ ಸಿಲಿಕಾನ್ ಸಿಟಿಯಲ್ಲಿ ಹಬ್ಬದ ಆರಂಭದಲ್ಲೇ 25 ಜನರ ಪಾಲಿಗೆ ಪಟಾಕಿ ಸಂಕಷ್ಟ ತಂದೊಡ್ಡಿದೆ. ಮಿಂಟೋ ಆಸ್ಪತ್ರೆಯಲ್ಲಿ ಇದುವರೆಗೆ 19 ಪ್ರಕರಣ ದಾಖಲಾಗಿದ್ದು, ಮೂವರು ಚಿಕಿತ್ಸೆ ಪಡೆದು ಮನೆಗೆ ತೆರಳಿದ್ರೆ, ಉಳಿದಂತೆ 16 ಮಂದಿಯ ಪೈಕಿ 7 ವರ್ಷದ ಬಾಲಕ ಆದಿತ್ಯ ಐಸಿಯುನಲ್ಲಿ ಬದುಕಿನ ಹಾದಿ ಹುಡುಕುತ್ತಿದ್ದಾನೆ. ಮತ್ತೊಬ್ಬ ಬಾಲಕ ತನ್ನ ಗೆಳೆಯರು ಪಟಾಕಿ ಹೋಡೆಯುತ್ತಿದನ್ನು ನೋಡುತ್ತಿರುವಾಗ ರಾಕೆಟ್ ಸಿಡಿದು ತನ್ನ ಮುಖ ಸುಟ್ಟುಕೊಂಡು ಮಿಂಟೋ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಪಟಾಕಿ ಸಿಡಿದು ದೃಷ್ಟಿ ಕಳೆದುಕೊಂಡ ಬೆಂಗಳೂರಿನ 19 ವರ್ಷದ ಯುವಕ
ಆತನ ಹೆಸರಿನಲ್ಲೇ ಬೆಳಕಿದೆ. ಆದರೆ ಇನ್ಮುಂದೆ ಆತನ ಬದುಕಿನಲಿ ಬೆಳಕಿಲ್ಲ. ಮುಂದಿನ ಬದುಕು ಸಂಪೂರ್ಣ ಕತ್ತಲಾಗಲಿದೆ. ಹೌದು, ಮೈಸೂರು ರಸ್ತೆ ಬಳಿ ನಿವಾಸಿಯಾಗಿರುವ ಜಯಸೂರ್ಯ ಎಂಬ 19 ವರ್ಷದ ಹುಡುಗ ತನ್ನ ದೃಷ್ಟಿ ನಷ್ಟ ಮಾಡಿಕೊಂಡಿದ್ದಾನೆ. ನಿನ್ನೆ ರಾತ್ರಿ 10:30ರ ಸುಮಾರಿಗೆ ಲಕ್ಷ್ಮಿ ಬಾಂಬ್ ಸಿಡಿಸುವ ವೇಳೆ ಮುಖಕ್ಕೆ ಪಟಾಕಿ ಸಿಡಿದಿತ್ತು. ಈ ವೇಳೆ ಕೂಡಲೇ ಮಿಂಟೋ ಆಸ್ಪತ್ರೆಗೆ ದಾಖಲಾಗಿದ್ದ ಜಯಸೂರ್ಯಗೆ ಚಿಕಿತ್ಸೆಗೆ ಒಳಪಡಿಸಿದ್ದಾರೂ ನಿನ್ನೆಯೇ ಒಂದು ಕಣ್ಣು ದೃಷ್ಟಿ ಕಳೆದುಕೊಂಡಿತ್ತು. ಈಗ ಸಂಪೂರ್ಣವಾಗಿ ಕಣ್ಣಿನ ಕಾರ್ಣಿಯ ಹಾಗೂ ಗುಡ್ಡೆಗೆ ಡ್ಯಾಮೇಜ್ ಆಗಿದ್ದು, ಜಯಸೂರ್ಯಾಗೆ ಎರಡೂ ಕಣ್ಣಿನ ದೃಷ್ಟಿ ಸಂಪೂರ್ಣ ನಷ್ಟವಾಗಿದೆ.
ಇನ್ನು ನಗರದಲ್ಲಿ ಒಟ್ಟಾರೆ 25ಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದೆ. ಈ ಪೈಕಿ 19 ಸರ್ಕಾರಿ ಕಣ್ಣಾಸ್ಪತ್ರೆ ಮಿಂಟೋದಲ್ಲಿ ಹಾಗೂ ಉಳಿದಂತೆ 6 ಪ್ರಕರಣಗಳು ನಗರದ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿವೆ. ದೀಪಾವಳಿ ಹಬ್ಬದ ಜೋಶ್ ಇನ್ನೂ ಒಂದುವಾರಗಳ ಕಾಲ ಇರಲಿದ್ದು, ಆದಷ್ಟು ಪಟಾಕಿಯಿಂದ ಮಕ್ಕಳನ್ನು ದೂರವಿಡುವಂತೆ ಹಿರಿಯ ವೈದ್ಯರು ಮನವಿ ಮಾಡಿಕೊಂಡಿದ್ದಾರೆ. ಒಟ್ಟಾರೆ ಬೆಳಕಿನ ಹಬ್ಬದಲ್ಲಿ ಪಟಾಕಿಗಳ ಹಾವಳಿಗೆ ಸ್ವಲ್ಪವಾದ್ರೂ ಬ್ರೇಕ್ ಹಾಕುವ ಅವಶ್ಯಕತೆ ಇದೆ. ಸದ್ಯ ಹಸಿರು ಪಟಾಕಿ ಅನ್ನೋ ಕಾನ್ಸೆಪ್ಟ್ ಬಂದ ಬಳಿಕ ಪಟಾಕಿಗಳ ಹಾವಳಿಗೆ ಕೊಂಚ ಬ್ರೇಕ್ ಬಿದ್ದಿದೆ. ಆದ್ರೆ ಪಟಾಕಿಗಳನ್ನ ಹಚ್ಚುವ ಕ್ರೇಜ್ನಲ್ಲಿ ಅದೆಷ್ಟೋ ಮಕ್ಕಳು ತಮ್ಮ ದೃಷ್ಟಿಯನ್ನೇ ಕಳೆದುಕೊಳ್ಳುತ್ತಿದ್ದಾರೆ. ಇತ್ತ ಯಾರೋ ಪಟಾಕಿ ಹಚ್ಚಿ ಮತ್ಯಾರೋ ನೋವು ಪಡುವ ಪ್ರಸಂಗಗಳು ಕೂಡ ನಡೆದಿವೆ. ಹಬ್ಬದ ಹೆಸರಲ್ಲಿ ಒಂದು ಕ್ಷಣದ ಸಂತಸಕ್ಕೆ ಇಡೀ ಬದುಕೇ ಕತ್ತಲಾಗದಿರಲಿ. ಪಟಾಕಿ ಬದಲು ದೀಪ ಹಚ್ಚಿ ಬೆಳಕನ್ನ ಪಸರಿಸುವ ಮೂಲಕ ನಗೆ ಚೆಲ್ಲೋಣ, ಪಟಾಕಿಯಿಂದಾಗುವ ಅನಾಹುತಗಳನ್ನ ತಡೆಯೋಣ ಅನ್ನೋದೇ ನಮ್ಮ ಆಶಯ.