ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೇ 21ರ ಸಂಜೆ ಐದು ಗಂಟೆಗೆ ಹೊರಡಿಸಿದ ಕರೋನಾ ಸೋಂಕಿನ ಅಂಕಿ ಅಂಶದ ಪ್ರಕಾರ ಕಳೆದ 24 ಗಂಟೆಗಳಲ್ಲಿ 143 ಹೊಸ ಕರೋನಾ ಪ್ರಕರಣಗಳು ದಾಖಲಾಗಿವೆ. ಒಟ್ಟು ಕರೋನಾ ಸೋಂಕಿತರ ಸಂಖ್ಯೆ 1605 ಕ್ಕೇರಿದೆ. ಇದುವರೆಗೂ ರಾಜ್ಯದಲ್ಲಿ 571 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ.
ರಾಜ್ಯದಲ್ಲಿ ಸಕ್ರಿಯವಾಗಿರುವ 992 ಪ್ರಕರಣಗಳಲ್ಲಿ 983 ಮಂದಿ ಕರೋನಾ ಸೋಂಕಿತರಿಗೆ ಗೊತ್ತುಪಡಿಸಿದ ಸಾಮಾನ್ಯ ವಾರ್ಡುಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆರೋಗ್ಯ ಸ್ಥಿತಿ ಗಂಭೀರವಾಗಿರುವ 09 ಮಂದಿಯನ್ನು ತೀವ್ರ ನಿಗಾ ಘಟಕದಲ್ಲಿರಿಸಲಾಗಿದೆ. ರಾಜ್ಯದಲ್ಲಿ ಕರೋನಾ ಸೋಂಕಿನಿಂದಾಗಿ 42 ಮಂದಿ ಅಸುನೀಗಿದ್ದಾರೆಂದು ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.
ಇಂದು ಬಾಗಲಕೋಟೆಯಿಂದ 06 ಮಂದಿ ಸೋಂಕಿತರು ಚೇತರಿಸಿಕೊಂಡು ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ. ದಾವಣಗೆರೆಯಲ್ಲಿ 05, ದಕ್ಷಿಣ ಕನ್ನಡದಲ್ಲಿ 03 ಹಾಗೂ ಮಂಡ್ಯದಲ್ಲಿ ಒಂದು ವ್ಯಕ್ತಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.









