ಬೆಂಗಳೂರಿನ ಬಂಡೆಪಾಳ್ಯದಲ್ಲಿ ಇಬ್ಬರು ಮಹಿಳಾ ಟೈಲರ್ಗಳ ಮನೆಗಳಲ್ಲಿ 16 ವರ್ಷದ ಬಾಲಕಿಯ ಮೇಲೆ ಆರು ದಿನಗಳ ಕಾಲ ಅತ್ಯಾಚಾರವೆಸಗಲಾಗಿದೆ. ಬಾಲಕಿಯ ಆರೋಗ್ಯ ಹಠಾತ್ ಕ್ಷೀಣಿಸುತ್ತಿರುವುದನ್ನು ಗಮನಿಸಿದ ಬಾಲಕಿಯ ತಾಯಿ ಆಕೆಯನ್ನು ವೈದ್ಯರ ಬಳಿ ಕರೆದೊಯ್ದಾಗ ಘಟನೆ ಬೆಳಕಿಗೆ ಬಂದಿದ್ದು, ಘಟನೆಗೆ ಸಂಬಂಧಿಸಿದಂತೆ ಆರು ಜನರನ್ನು ಬಂಧಿಸಲಾಗಿದೆ. ಬಾಲಕಿಯ ಮೇಲೆ ಪದೇ ಪದೇ ಅತ್ಯಾಚಾರ ನಡೆದಿರುವುದನ್ನು ವೈದ್ಯಕೀಯ ವರದಿಗಳು ದೃಢಪಡಿಸಿವೆ.
ತಾಯಿಯ ದೂರಿನ ಆಧಾರದ ಮೇಲೆ, ಎಚ್ಎಸ್ಆರ್ ಲೇಔಟ್ ಪೊಲೀಸರು ಇಬ್ಬರು ಮಹಿಳೆಯರು ಸೇರಿದಂತೆ ಆರೋಪಿಗಳ ವಿರುದ್ಧ ಪೋಕ್ಸೊ ಕಾಯ್ದೆ ಮತ್ತು ಐಪಿಸಿ 376 (ಅತ್ಯಾಚಾರ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳಾದ ರಾಜೇಶ್ವರಿ, ಕೇಶವ ಮೂರ್ತಿ, ಕಲಾವತಿ, ರಫೀಕ್, ಶರತ್ ಮತ್ತು ಸತ್ಯ ರಾಜು ಎಂಬುವವರನ್ನು ಅರೆಸ್ಟ್ ಮಾಡಿದ್ದು ಇವರೆಲ್ಲ 30 ರ ಆಸುಪಾಸಿವ ವಯಸ್ಸಿನವರಾಗಿದ್ದಾರೆ ಮತ್ತು ಬಂಡೆಪಾಳ್ಯ ಮತ್ತು ಸುತ್ತಮುತ್ತಲಿನ ನಿವಾಸಿಗಳಲಾಗಿದ್ದಾರೆ ಎಂದು ತಿಳಿದುಬಂದಿದೆ. ಶಾಲೆ ಮುಗಿಸಿ ಟೈಲರಿಂಗ್ ಕಲಿಯಲು ಮನೆಗೆ ಬರುತ್ತಿದ್ದ ಬಾಲಕಿಯ ಮನೆಯ ಸಮೀಪವೇ ರಾಜೇಶ್ವರಿ ಮತ್ತು ಕಲಾವತಿ ವಾಸವಾಗಿದ್ದರು.
ಬಾಲಕಿಯ ಪ್ರಕಾರ, ಫೆಬ್ರವರಿ 28 ರಂದು ಮಧ್ಯಾಹ್ನ ರಾಜೇಶ್ವರಿ ಹುಡುಗಿಯನ್ನು ಹೊರಗೆ ಕರೆದೊಯ್ದಳು. “ನಾನು ನನ್ನ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದೆ ಮತ್ತು ನನ್ನ ಪೋಷಕರು ಕೆಲಸಕ್ಕಾಗಿ ಹೊರಗೆ ಹೋಗಿದ್ದರು. ನನ್ನ ತಾಯಿ ನನಗಾಗಿ ಕಾಯುತ್ತಿದ್ದಾಳೆ ಎಂದು ರಾಜೇಶ್ವರಿ ನನ್ನ ಮನೆಗೆ ಬಂದು ನನ್ನನ್ನು ತನ್ನ ಮನೆಗೆ ಕರೆದುಕೊಂಡು ಹೋದಳು. ಅಲ್ಲಿ, ಅವಳು ನನಗೆ ಹಣ್ಣಿನ ರಸವನ್ನು ಕೊಟ್ಟಳು. ಅದನ್ನು ಕುಡಿದ ನಂತರ ನಾನು ಪ್ರಜ್ಞೆ ತಪ್ಪಿ ಬಿದ್ದೆ. ನನಗೆ ಮತ್ತೆ ಪ್ರಜ್ಞೆ ಬಂದಾಗ, ನಾನು ಹಾಸಿಗೆಯ ಮೇಲೆ ಮಲಗಿರುವುದನ್ನು ಕಂಡುಕೊಂಡೆ ಮತ್ತು ನನ್ನ ಕಾಲುಗಳು ಮತ್ತು ನನ್ನ ದೇಹದ ಇತರ ಭಾಗಗಳಲ್ಲಿ ರಕ್ತದ ಕಲೆಗಳು ಇದ್ದವು, ”ಎಂದು ಹುಡುಗಿ ಹೇಳಿದರು.
ಏನಾಯಿತು ಎಂಬುದನ್ನು ಬಹಿರಂಗಪಡಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ರಾಜೇಶ್ವರಿ ಎಚ್ಚರಿಸಿದ್ದಾರೆ. “ನಂತರ ರಾಜೇಶ್ವರಿ ನನ್ನನ್ನು ಕಲಾವತಿಯ ಮನೆಗೆ ಕರೆದೊಯ್ದಳು, ಅಲ್ಲಿ ಬೇರೆ ಬೇರೆ ದಿನಗಳಲ್ಲಿ ನನ್ನ ಮೇಲೆ ಅತ್ಯಾಚಾರವೆಸಗಲಾಯಿತು. ದೈಹಿಕ ಮತ್ತು ಮಾನಸಿಕ ಹಿಂಸೆಯಿಂದ ನನ್ನ ಅನಾರೋಗ್ಯದ ಹೊರತಾಗಿಯೂ, ರಾಜೇಶ್ವರಿ ಮತ್ತು ಕಲಾವತಿ ನನ್ನನ್ನು ಅವರ ಮನೆಗೆ ನಿಯಮಿತವಾಗಿ ಭೇಟಿ ನೀಡುವಂತೆ ಒತ್ತಾಯಿಸುತ್ತಿದ್ದರು, ”ಎಂದು ಬಾಲಕಿ ಆರೋಪಿಸಿದ್ದಾರೆ.
ಮಾರ್ಚ್ 6 ರಂದು ರಾಜೇಶ್ವರಿ ಬಾಲಕಿಯನ್ನು ತನ್ನ ಮನೆಗೆ ಬರುವಂತೆ ಹೇಳಿದ್ದಳು ಎನ್ನಲಾಗಿದೆ. “ಆ ದಿನ, ಹುಡುಗಿಯ ತಾಯಿ ಮನೆಯಲ್ಲಿದ್ದಳು ಮತ್ತು ತನ್ನ ಮಗಳು ತೊಂದರೆಗೀಡಾಗಿರುವುದನ್ನು ಗಮನಿಸಿದ್ದಾರೆ. ನಂತರ ಆಕೆಯ ಬಟ್ಟೆಯ ಮೇಲೆ ರಕ್ತದ ಕಲೆಗಳು ಕಂಡುಬಂದಿದ್ದು, ವಿಚಾರಿಸಿದಾಗ ಬಾಲಕಿ ಎಲ್ಲವನ್ನೂ ಬಹಿರಂಗಪಡಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಅದೇ ದಿನ ರಾತ್ರಿ ತಾಯಿ ದೂರು ದಾಖಲಿಸಿದ್ದರು. ದುಷ್ಕರ್ಮಿಗಳ ಪತ್ತೆಗೆ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿತ್ತು.
ದೂರಿ ನೀಡಿರುವುದನ್ನು ತಿಳಿದ ರಾಜೇಶ್ವರಿ ಮತ್ತು ಕಲಾವತಿ ನಗರ ಬಿಟ್ಟು ಓಡಿ ಹೋಗಿದ್ದಾರೆ. ಮಾರ್ಚ್ 7 ರಂದು ಸಂಜೆ ನಗರದ ಹೊರವಲಯದಲ್ಲಿ ನಾವು ಅವರನ್ನು ಹಿಡಿದಿದ್ದೇವೆ ಮತ್ತು ವಿಚಾರಣೆಯ ನಂತರ ನಾಲ್ವರ ವಿವರಗಳನ್ನು ಸಂಗ್ರಹಿಸಿದ್ದೇವೆ. ನಾವು ಅವರನ್ನು ಒಬ್ಬೊಬ್ಬರಾಗಿ ಬಂಧಿಸಿ ಮಾರ್ಚ್ 8 ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದೇವೆ. ಅವರು ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೊಸೂರಿನ ಕೇಶವ ಮೂರ್ತಿ ಆಟೋಮೊಬೈಲ್ ಸಂಸ್ಥೆಯೊಂದರಲ್ಲಿ ಜನರಲ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಸತ್ಯರಾಜು ಕೋರಮಂಗಲದ ಗುತ್ತಿಗೆದಾರ. ಯಲಹಂಕದ ಶರತ್ ಮತ್ತು ಬೇಗೂರಿನ ರಫೀಕ್ ಉದ್ಯಮಿಯಾಗಿದ್ದಾನೆ. ರಾಜೇಶ್ವರಿ ಮತ್ತು ಕಲಾವತಿ ಲೈಂಗಿಕ ಕಾರ್ಯಕರ್ತೆಯರಾಗಿದ್ದು, ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಬಳಿಕ ಪುರುಷರಿಂದ ಹಣ ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
(ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನಗಳ ಪ್ರಕಾರ ಆಕೆಯ ಗೌಪ್ಯತೆಯನ್ನು ರಕ್ಷಿಸಲು ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸಲಾಗಿಲ್ಲ)