ಕೃಷಿ ಕಾಯ್ದೆಗಳ ವಿರುದ್ದ ಕಳೆದ 64 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಗೆ ಕಿವಿಗೊಡದ ಸರ್ಕಾರವನ್ನು ವಿಪಕ್ಷಗಲು ತರಾಟೆಗೆ ತೆಗೆದುಕೊಂಡಿವೆ. ಕೇಂದ್ರ ಸರ್ಕಾರದ ಈ ಸಂವೇದನಾರಹಿತ ನಡವಳಿಕೆಯನ್ನು ಖಂಡಿಸಿ ಪ್ರಮುಖ ವಿಪಕ್ಷಗಳು ರಾಷ್ಟ್ರಪತಿಗಳ ಭಾಷಣವನ್ನು ಬಹಿಷ್ಕರಿಸಲಿವೆ.
ಈ ಕುರಿತಾಗಿ ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ವಿಪಕ್ಷ ನಾಯಕರು, ರಾಜ್ಯೋತ್ಸವ ದಿನದಂದು ನಡೆದ ಅಹಿತಕರ ಘಟನೆಗಳ ಕುರಿತಾಗಿ ಸರ್ಕಾರವು ಸಮಗ್ರವಾದ ತನಿಖೆಯನ್ನು ಕೈಗೊಳ್ಳಬೇಕು. ಈ ಘಟನೆಗೆ ಕಾರಣವಾದವರ ವಿರುದ್ದ ಕ್ರಮ ಕೈಗೊಳ್ಳಬೇಕು. ತನಿಖೆಯು ನಿಷ್ಪಕ್ಷಪಾತವಾಗಿ ನಡೆದಲ್ಲಿ, ಈ ಘಟನೆಗಳ ಹಿಂದೆ ಸರ್ಕಾರದ ಕೈವಾಡವಿರುವುದು ಖಂಡಿತ ಬಯಲಿಗೆ ಬರುತ್ತದೆ ಎಂದಿದ್ದಾರೆ.
“ಮೂರು ಕೃಷಿ ಕಾಯ್ದೆಗಳು ರಾಜ್ಯ ಸರ್ಕಾರಗಳ ಹಕ್ಕುಗಳನ್ನು ಕಸಿದುಕೊಳ್ಳುತ್ತವೆ. ಇದು ಒಕ್ಕೂಟ ವ್ಯವಸ್ಥೆಗೆ ವಿರುದ್ದವಾಗಿದೆ. ಇವುಗಳನ್ನು ವಾಪಾಸ್ ಪಡೆಯದಿದ್ದಲ್ಲಿ, ದೇಶದ ಆಹಾರ ಭದ್ರತೆಯು ನೆಲಕಚ್ಚಲಿದೆ,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಕಾಯ್ದೆಗಳ ವಾಪಾಸಾತಿಗೆ ರೈತ ಒಕ್ಕೂಟವು ಕಳೆದ 61 ದಿನಗಳಿಂದ ಪ್ರತಿಭಟನೆ ನಡೆಸುತ್ತಿದೆ. ಆದರೆ, ಸರ್ಕಾರವು ಹಠಮಾರಿ ಧೋರಣೆಯನ್ನು ತಾಳಿದೆ. ಇದು ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವಂತಹ ವಿಚಾರ. ಈ ಬೆಳವಣಿಗೆಗಳಿಂದ ಮನನೊಂದು, ಈ ಕೆಳಕಂಡ ಪಕ್ಷಗಳ ಮುಖಂಡರು ಕೃಷಿ ಕಾಯ್ದೆಗಳನ್ನು ವಾಪಾಸ್ ಪಡೆಯಬೇಕೆಂದು ಆಗ್ರಹಿಸುತ್ತೇವೆ ಎಂದು ಜಂಟಿ ಪತ್ರಿಕಾ ಹೇಳಿಕೆಯನ್ನು ತಿಳಿಸಲಾಗಿದೆ.
ಇನ್ನು, ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲವಾಗಿ ಶುಕ್ರವಾರ ನಡೆಯಲಿರುವ ಜಂಟಿ ಸದನ ಸಭೆಯನ್ನು ಬಹಿಷ್ಕರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಜಂಟಿ ಪತ್ರಿಕಾ ಹೇಳಿಕೆಗೆ ಕಾಂಗ್ರೆಸ್, ಎನ್ಸಿಪಿ, ಡಿಎಂಕೆ, ಎಸ್ಪಿ, ಶಿವಸೇನೆ, ಆರ್ಜೆಡಿ, ಸಿಪಿಐ, ಸಿಪಿಐಎಂ, ಪಿಡಿಪಿ ಸೇರಿದಂತೆ ಇತರ ವಿಪಕ್ಷಗಳ ಮುಖಂಡರು ಸಹಿ ಹಾಕಿದ್ದಾರೆ.