ಹೈದರಾಬಾದ್ ;ಪೊಲೀಸರು ನಡೆಸಿದ ಪತ್ರಿಕಾಗೋಷ್ಠಿಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಮೇಜಿನ ಮೇಲೆ ಚಿನ್ನದ ಆಭರಣಗಳನ್ನು ಹಾಕಿರುವುದನ್ನು ವೀಡಿಯೊ ತೋರಿಸುತ್ತದೆ. ತಿರುಪತಿ ಬಾಲಾಜಿ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ ಅರ್ಚಕರ ನಿವಾಸದ ಮೇಲೆ ಆದಾಯ ತೆರಿಗೆ ದಾಳಿ ನಡೆಸಿ 128 ಕೆಜಿ ಚಿನ್ನ, 150 ಕೋಟಿ ನಗದು, 77 ಕೋಟಿ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.
ತಿರುಪತಿ ಮಂದಿರಕ್ಕೆ 16 ಪೂಜಾರಿಗಳಲ್ಲಿ ಒಬ್ಬ ಪೂಜಾರಿ ಮನೆ ಮೇಲೆ ಇನ್ ಕಂ ಟ್ಯಾಕ್ಸ್ ಇಲಾಖೆ ಅಧಿಕಾರಿಗಳು ಧಾಳಿ ನಡೆಸಿ 128 ಕೆ ಜಿ ಚಿನ್ನಾಭರಣ, 150 ಕೋಟಿ ರೂ ನಗದು ಸಿಕ್ಕಿದೆ. ಈ ಮಾಹಿತಿಯನ್ನು ಏ ಅಹ್ಮದ್ ಎಂಬ ಬಳಕೆದಾರರು 2022 ರಲ್ಲಿಯೇ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು ದೇವಾಲಯದ ಒಳಭಾಗವನ್ನು ಮಾತ್ರ ಸ್ವಚ್ಛಗೊಳಿಸುವ ಮೇಲ್ಜಾತಿಯವರ ಗುಣಲಕ್ಷಣಗಳು, ಕೆಳಜಾತಿಯವರು ದೇವಾಲಯದ ಹೊರಗೆ ಮಾತ್ರ ಗುಡಿಸುತ್ತಾರೆ ಎಂಬ ಒಕ್ಕಣೆಯೊಂದಿಗೆ ಹಂಚಿಕೊಂಡಿದ್ದರು. ಈ ವೀಡಿಯೋ ಟ್ವಿಟ್ಟರ್, ವಾಟ್ಸ್ಪ್ ಮತ್ತು ಫೇಸ್ಬುಕ್ನಲ್ಲಿ ಲಕ್ಷಗಟ್ಟಲೆ ಬಾರಿ ಹಂಚಿಕೆ ಆಗಿತ್ತು.
ಕಳೆದ ಕೆಲ ದಿನಗಳಿಂದ ಕರ್ನಾಟಕದ ವಾಟ್ಸ್ಅಪ್ ಗ್ರೂಪ್ ಗಳಲ್ಲಿಯೂ ಇದನ್ನು ಹಂಚಿಕೆ ಮಾಡಿ ಒಬ್ಬರ ಬಳಿಯೇ ಇಷ್ಟು ಸಿಕ್ಕಿರಬೇಕಾದರೆ ಇನ್ನುಳಿದ 15 ಜನರ ಮನೆಯಲ್ಲಿ ಎಷ್ಟಿರಬಹುದು ? ಇಷ್ಟು ಮೇಲ್ನೋಟಕ್ಕೆ ಸಿಕ್ಕಿರಬೇಕಾದರೆ ಅಡಗಿಸಿಟ್ಟುವುದು ಎಷ್ಟಿರಬಹುದು ಎಂದು ಪ್ರಶ್ನೆ ಹಾಕಿ ಹಿಂದೂಗಳು ದಾನ ಮಾಡುವಾಗ ಯೋಚಿಸಿ ಎಂದೂ ಸಲಹೆ ನೀಡಲಾಗಿದೆ.
FACT CHECK:ಆದರೆ ಈ ಕುರಿತು ಪ್ರತಿಧ್ವನಿ ತಂಡವು ಫ್ಯಾಕ್ಟ್ ಚೆಕ್ ನಡೆಸಿದಾಗ ಈ ಪೋಲೀಸರ ವೀಡಿಯೋ ಡಿಸೆಂಬರ್ 21, 2021 ರಂದು ಪೋಲೀಸರು 16 ಕೆಜಿ ಚಿನ್ನಾಭರಣಗಳನ್ನು ವಶಪಡಿಸಿಕೊಂಡ ಸುದ್ದಿ ಆಗಿದೆ.
ಅಪರಿಚಿತ ದುಷ್ಕರ್ಮಿಗಳು ಜೋಸಲುಕ್ಕಾಸ್ ಜ್ಯುವೆಲ್ಲರಿ ಅಂಗಡಿಯ ಗೋಡೆಗೆ ರಂಧ್ರ ಮಾಡಲು ಡ್ರಿಲ್ ಬಳಸಿಕೊಂಡು ಲೂಟಿ ಮಾಡಿ ಚಿನ್ನಾಭರಣವನ್ನು ಸ್ಮಶಾನದಲ್ಲಿ ಬಚ್ಚಿಟ್ಟಿದ್ದರು. ಮುಖ್ಯ ಆರೋಪಿ ಪಾಳ್ಯಂ ಗ್ರಾಮದ ನಿವಾಸಿ ಕೆ.ರಾಮನ್ (23) ಎಂಬಾತನು ಇತರ ಈರ್ವರು ಸಹಚರರೊಂದಿಗೆ ಮುಖಕ್ಕೆ ಕಪ್ಪು ಮಾಸ್ಕ್ ಧರಿಸಿ ಅಂಗಡಿಯೊಳಗೆ ಇರಿಸಲಾಗಿದ್ದ ಎಲ್ಲಾ 12 ಸಿಸಿಟಿವಿ ಕ್ಯಾಮೆರಾಗಳಿಗೆ ಕಪ್ಪು ಬಣ್ಣವನ್ನು ಎರಚಿದ್ದನು ಹೀಗಾಗಿ ಪೋಲೀಸರಿಗೆ ಸಿಸಿಟಿವಿ ಚಿತ್ರ ಲಭ್ಯವಾಗಿರಲಿಲ್ಲ.ಬೆಳಗ್ಗೆ ಶೋರೂಂ ತೆರೆದಾಗ ಕಳ್ಳತನವಾಗಿರುವ ಬಗ್ಗೆ ನೌಕರರು ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಹೀಗಾಗಿ ವೈರಲ್ ವೀಡಿಯೋ ಮತ್ತು ಮಾಹಿತಿ ಸಂಪೂರ್ಣ ಸುಳ್ಳಾಗಿದೆ. ಒಂದು ವೇಳೆ ಅರ್ಚಕರ ಮನೆಯಲ್ಲಿ ಇಷ್ಟೊಂದು ಆಸ್ತಿ ಸಿಕ್ಕಿದ್ದಿದ್ದರೆ ರಾಷ್ಟ್ರಮಟ್ಟದಲ್ಲಿಯೇ ದೊಡ್ಡ ಸುದ್ದಿ ಆಗುತಿತ್ತು ಮತ್ತು ಯಾವುದೇ ವೃತ್ತ ಪತ್ರಿಕೆಗಳಲ್ಲೂ ಈ ಸುದ್ದಿ ಪ್ರಟವಾಗಿಲ್ಲ ಎಂಬುದನ್ನು ಗಮನಿಸಿ.ಜಾಲತಾಣ ಬಳಕೆದಾರರು ಯಾವುದೇ ಮಾಹಿತಿ ಹಂಚಿಕೊಳ್ಳುವಾಗ ಪತ್ರಿಕೆ , ಟಿವಿಗಳ ವಿಶ್ವಾಸಾರ್ಹ ವೆಬ್ ಸೈಟ್ ಗಳನ್ನು ಶೋಧಿಸಿದಾಗ ಸತ್ಯಾಂಶ ತಿಳಿಯುತ್ತದೆ ಮತ್ತು ಸುಳ್ಳು ಮಾಹಿತಿ ಹಂಚಿಕೆಗೆ ಕಡಿವಾಣ ಹಾಕಬಹುದು.