ಫೆಬ್ರುವರಿ 1ನೇ ತಾರೀಕಿನಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಮೂರನೇ ಬಜೆಟ್ ಅನ್ನು ಮಂಡಿಸಲಿದ್ದಾರೆ. ಈಗಾಗಲೇ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆಗಳು ಹುಟ್ಟಿಕೊಂಡಿವೆ. ಕಳೆದ ಎರಡು ಮೂರು ವರ್ಷಗಳಿಂದ ನೆಲಕಚ್ಚಿರುವ ಆರ್ಥಿಕತೆ, ಕರೋನಾದಿಂದ ಆತಂಕಕ್ಕೆ ಒಳಗಾಗಿರುವ ಬಡ ಕುಟುಂಬಗಳಿಗೆ ಸಿಹಿ ಸುದ್ದಿ ನೀಡಲಿದ್ದಾರೆಯೇ ಎಂಬ ಕುರಿತು ಚರ್ಚೆಗಳು ನಡೆಯುತ್ತಿವೆ.
ಆದರೆ, ಇವೆಲ್ಲದರ ಹೊರತಾಗಿ ಕೇಂದ್ರ ಬಜೆಟ್ ಚರಿತ್ರೆಯಲ್ಲಿ ಕೆಲವು ಐತಿಹಾಸಿಕ ಹಾಗೂ ಎಲ್ಲರೂ ತಿಳಿದಿರಲೇಬೇಕಾದ ಪ್ರಮುಖ 15 ಅಂಶಗಳು ಇಲ್ಲಿವೆ.
1. ಈವರೆಗೆ ಅತೀ ಹೆಚ್ಚು ಬಜೆಟ್ ಮಂಡಿಸಿದ ಕೀರ್ತಿ ಮೊರಾರ್ಜಿ ದೆಸಾಯಿ ಅವರಿಗೆ ಸಲ್ಲುತ್ತದೆ. ಅವರು ತಮ್ಮ ಜೀವನದಲ್ಲಿ 10 ಬಾರಿ ಬಜೆಟ್ ಮಂಡಿಸಿದ್ದಾರೆ. ಇವರ ನಂತರದ ಸ್ಥಾನ ಪಿ ಚಿದಂಬರಂ ಅವರಿಗೆ ಸಲ್ಲುತ್ತದೆ. ಅವರು ಒಟ್ಟು 9 ಬಜೆಟ್‌ಗಳನ್ನು ಮಂಡಿಸಿದ್ದಾರೆ.
2. 1955ರವರೆಗೆ ಬಜೆಟ್ ಪ್ರತಿಗಳನ್ನು ಕೇವಲ ಇಂಗ್ಲೀಷ್‌ನಲ್ಲಿ ಮುದ್ರಿಸಲಾಗುತ್ತಿತ್ತು. ಅಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು, ಇಂಗ್ಲೀಷ್ ಮತ್ತು ಹಿಂದಿ ಎರಡೂ ಭಾಷೆಗಳಲ್ಲೂ ಬಜೆಟ್ ಪ್ರತಿಗಳನ್ನು ಮುದ್ರಿಸುವ ನಿರ್ಧಾರವನ್ನು ಕೈಗೊಂಡಿತ್ತು.
3. ಸ್ವತಂತ್ರ ಭಾರತದ ಮೊತ್ತ ಮೊದಲ ಬಜೆಟ್ ಮಂಡಿಸಿದ ಕೀರ್ತಿ ಆರ್ ಕೆ ಶಣ್ಮುಖನ್ ಚೆಟ್ಟಿ ಅವರಿಗೆ ಸಲ್ಲುತ್ತದೆ. ಸ್ವತಂತ್ರ ಪೂರ್ವ ಭಾರತದ ಮೊತ್ತ ಮೊದಲ ಬಜೆಟ್ ಮಂಡಿಸಿದ್ದು ಸ್ಕಾಟ್ಲೆಂಡ್‌ನ ಜೇಮ್ಸ್ ವಿಲ್ಸನ್
4. ಸ್ವತಂತ್ರ ಭಾರತದಲ್ಲಿ ಮೊತ್ತ ಮೊದಲು ಬಜೆಟ್ ಮಂಡಿಸಿದ ಪ್ರಧಾನ ಮಂತ್ರಿ ಎಂಬ ಕೀರ್ತಿ ಜವಹರ್ ಲಾಲ್ ನೆಹರೂ ಅವರಿಗೆ ಸಲ್ಲುತ್ತದೆ. 1958-59ರಲ್ಲಿ ಬಜೆಟ್ ಮಂಡಿಸಿದ್ದರು.
5. 2017ರವರೆಗೆ ರೈಲ್ವೇ ಬಜೆಟ್ ಅನ್ನು ಪ್ರತ್ಯೇಕವಾಗಿ ಮಂಡಿಸಲಾಗುತ್ತಿತ್ತು. ಆ ನಂತರ ರೈಲ್ವೇ ಬಜೆಟ್ ಅನ್ನು ಪ್ರಧಾನ ಬಜೆಟ್‌ನೊಂದಿಗೆ ವಿಲೀನಗೊಳಿಸಲಾಗಿತ್ತು. ಸುರೇಶ್ ಪ್ರಭು ಅವರು ರೈಲ್ವೇ ಬಜೆಟ್ ಮಂಡಿಸಿದ ಕೊನೇಯ ಸಚಿವರಾಗಿದ್ದರು.
6. ಭಾರತದ ಇತಿಹಾಸದಲ್ಲಿ ಕೇವಲ ಇಬ್ಬರು ಮಹಿಳೆಯರು ಮಾತ್ರ ಈವರೆಗೆ ಬಜೆಟ್ ಮಂಡಿಸಿದ್ದಾರೆ. 1970ರಲ್ಲಿ ಮೊತ್ತ ಮೊದಲ ಬಾರಿಗೆ ಇಂದಿರಾ ಗಾಂಧಿ ಅವರು ಬಜೆಟ್ ಮಂಡಿಸಿದ್ದರು. ಆ ನಂತರ 2019ರಲ್ಲಿ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಿದ್ದರು.
7. 2000 ಇಸವಿಯ ವರೆಗೆ ಕೆಂದ್ರ ಬಜೆಟ್ ಅನ್ನು ಫೆಬ್ರುವರಿಯ ಕೊನೆಯ ಕೆಲಸದ ದಿನದಂದು ಸಂಜೆ 5 ಗಂಟೆಗೆ ಮಂಡಿಸಲಾಗುತ್ತಿತ್ತು. 2001ರಲ್ಲಿ ಅಂದಿನ ವಿತ್ತ ಸಚಿವರಾಗಿದ್ದ ಯಶ್ವಂತ್ ಸಿನ್ಹಾ ಅವರು ಈ ಸಮಯವನ್ನು ಪೂರ್ವಾಹ್ನ 11 ಗಂಟೆಗೆ ಬದಲಾಯಿಸಿದರು.
8. ಈವರೆಗೆ ಅತೀ ಹೆಚ್ಚು ಸಮಯ ಬಜೆಟ್ ಭಾಷಣ ಮಾಡಿದ ಸಚಿವರು ನಿರ್ಮಲಾ ಸೀತಾರಾಮನ್. 2020-21ರ ಬಜೆಟ್ ಅನ್ನು ಮಂಡಿಸುವಾಗ ಅವರು 160 ನಿಮಿಷಗಳನ್ನು ಬಳಸಿಕೊಂಡಿದ್ದರು. ಈ ನಂತರದ ಸ್ಥಾನ ಅರುಣ್ ಜೇಟ್ಲಿ ಅವರಿಗೆ ಸಲ್ಲುತ್ತದೆ. 2014ರಲ್ಲಿ ಅವರು 150 ನಿಮಿಷಗಳವರೆಗೆ ಬಜೆಟ್ ಭಾಷಣ ಮಂಡಿಸಿದ್ದರು.
9. 1950ರವರೆಗೆ ಬಜೆಟ್ ಅನ್ನು ರಾಷ್ಟ್ರಪತಿ ಭವನದಲ್ಲಿ ಮುದ್ರಿಸಲಾಗುತ್ತಿತ್ತು. ಆ ವರ್ಷದ ಬಜೆಟ್ ಸೋರಿಕೆಯಾದ ಕಾರಣಕ್ಕೆ, ನಂತರ ನವ ದೆಹಲಿಯ ಮಿಂಟೋ ರಸ್ತೆಯಲ್ಲಿರುವ ಮುದ್ರಣಾಲಯದಲ್ಲಿ ಬಜೆಟ್ ಅನ್ನು ಮುದ್ರಿಸಲಾಗಿತ್ತು. 1980ರಲ್ಲಿ ನವದೆಹಲಿಯ ನಾರ್ತ್ ಬ್ಲಾಕ್‌ನಲ್ಲಿ ಸರ್ಕಾರಿ ಮುದ್ರಣಾಲಯವನ್ನು ಸ್ಥಾಪಿಸಲಾಯಿತು.
10. 1973-74ರ ಬಜೆಟ್ ಅನ್ನು ಭಾರತದ ಇತಿಹಾಸದಲ್ಲಿಯೇ ʼಕಪ್ಪು ಬಜೆಟ್ʼ ಎಂದು ಕರೆಯಲಾಗುತ್ತದೆ. ಏಕೆಂದರೆ, ಆ ವರ್ಷ ಭಾರತವು ರೂ. 550 ಕೋಟಿಯಷ್ಟು ವಿತ್ತೀಯ ಕೊರತೆ ಎದುರಿಸಿತ್ತು. ಈ ಬಜೆಟ್ ಮಂಡಿಸಿದ ಅಪಕೀರ್ತಿ ಯಶವಂತ್ ರಾವ್ ಬಿ ಚವ್ಹಾಣ್ ಅವರಿಗೆ ಸಂದಿದೆ.
11. ಬಜೆಟ್‌ನಲ್ಲಿ ಸೇವಾ ತೆರಿಗೆ ಎಂಬ ಅಂಶವನ್ನು ಮೊದಲ ಬಾರಿಗೆ ಜಾರಿಗೆ ತಂದವರು ಮಾಜಿ ಪ್ರಧಾನಿ ಮನಮೋಹನ ಸಿಂಗ್
12. ಈವರೆಗೆ ಬಜೆಟ್ ಮಂಡಿಸದ ಏಕೈಕ ವಿತ್ತ ಸಚಿವರೆಂದರೆ, ಕೆ ಸಿ ನೋಗಿ. ಅವರು ಕೇವಲ 35 ದಿನಗಳಿಗೆ ವಿತ್ತ ಸಚಿವರಾಗಿದ್ದರು.
13. ಸ್ವತಂತ್ರ ಭಾರತದ ಮೊತ್ತ ಮೊದಲ ಬಜೆಟ್‌ನಲ್ಲಿ ವಾರ್ಷಿಕ 171.15 ಕೋಟಿಯಷ್ಟು ಗಳಿಕೆಯಾಗಬೇಕು ಎಂದು ನಿರ್ಧರಿಸಲಾಗಿತ್ತು.
14. ಈಗ ಸಾಕಷ್ಟು ಚರ್ಚೆಗೆ ಒಳಗಾಗಿರುವ GSTಯನ್ನು ಮೊತ್ತ ಮೊದಲ ಬಾರಿಗೆ ಬಜೆಟ್‌ನಲ್ಲಿ ಪರಿಚಯಿಸಿದವರು ಪಿ ಚಿದಂಬರಂ. ಫೆಬ್ರುವರಿ 28, 2006ರಲ್ಲಿ ಏಕರೂಪಿ ತೆರಿಗೆ ವ್ಯವಸ್ಥೆಯ ಕುರಿತು ಅವರು ಮಾತನಾಡಿದ್ದರು.
15. ಬಜೆಟ್ ಕುರಿತ ಎಲ್ಲಾ ಕೆಲಸಗಳು ಮುಗಿದ ನಂತರ, ಬಜೆಟ್ ಅನ್ನು ಮುದ್ರಣಕ್ಕೆ ಕಳಿಸುವ ಸಮಯದಲ್ಲಿ ವಿತ್ತ ಸಚಿವಾಲಯದ ಎಲ್ಲಾ ನೌಕರರೊಂದಿಗೆ ಹಲ್ವಾ ಸಂಭ್ರಮ ನಡೆಸಲಾಗುತ್ತದೆ.
ಈ ಎಲ್ಲಾ ಅಚ್ಚರಿಯ ವಿಚಾರಗಳೊಂದಿಗೆ ಭಾರತದ ಪ್ರಜೆಗಳು ಒಂದು ಉತ್ತಮ ಹಾಗೂ ಜನಸ್ನೇಹಿ ಬಜೆಟ್ ಅನ್ನು ಎದುರುನೋಡುತ್ತಿದ್ದಾರೆ.