ರಾಮನಗರ : ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸಿದ್ದು ರಾಜ್ಯ ರಾಜಕಾರಣದಲ್ಲಿ ಬೆಳವಣಿಗೆಗಳ ಪರ್ವವೇ ನಡೆಯುತ್ತಿದೆ. ಪಕ್ಷದ ಟಿಕೆಟ್ಗಾಗಿ ರಾಜಕೀಯ ನಾಯಕರು ವರಿಷ್ಠರೆದುರು ದುಂಬಾಲು ಬೀಳ್ತಿದ್ದಾರೆ. ಟಿಕೆಟ್ನಿಂದ ವಂಚಿತರಾದವರು ಪಕ್ಷಾಂತರ ಮಾಡುವ ಮೂಲಕ ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ. ಈ ಎಲ್ಲದರ ನಡುವೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಇಂದು ಹೊಸ ಬಾಂಬ್ ಸಿಡಿಸಿದ್ದಾರೆ.
ರಾಮನಗರದಲ್ಲಿ ಇಂದು ಈ ವಿಚಾರವಾಗಿ ಮಾತನಾಡಿದ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಕಾಂಗ್ರೆಸ್ನಿಂದ 15 ಮಂದಿ ನಾಯಕರು ಜೆಡಿಎಸ್ ಸೇರ್ಪಡೆಯಾಗುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ಹಿಂದೆ ಜೆಡಿಎಸ್ ಪಕ್ಷವನ್ನು ಮುಳುಗಿಸೋಕೆ ಕಾಂಗ್ರೆಸ್ ಯತ್ನಿಸಿತ್ತು. ಆದರೆ ಈಗ ಅವರ ಪಕ್ಷದವರೇ ನಮ್ಮ ಪಕ್ಷಕ್ಕೆ ಬರ್ತಿದ್ದಾರೆ ಎಂದು ಹೇಳಿದ್ದಾರೆ.

ರಘು ಆಚಾರ್ ಜೊತೆಯಲ್ಲಿ ಈಗಾಗಲೇ ಮಾತುಕತೆ ಮುಗಿದಿದೆ. ಶೀಘ್ರದಲ್ಲಿಯೇ 15 ಮಂದಿ ಘಟಾನುಘಟಿ ನಾಯಕರು ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ. ಕಾಂಗ್ರೆಸ್ ಜೆಡಿಎಸ್ ಪಕ್ಷದ ನಾಯಕರನ್ನು ಸೆಳೆದುಕೊಳ್ಳೋಕೆ ಯತ್ನಿಸಿತ್ತು. ಆದರೀಗ ಕಾಂಗ್ರೆಸ್ ಪಕ್ಷದ ನಾಯಕರೇ ನಮ್ಮ ಪಕ್ಷಕ್ಕೆ ಬರ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.












