ಕೆಲವು ದಿನಗಳ ಹಿಂದೆ ಚಿತ್ರದುರ್ಗದ ಜೋಗಿಮಟ್ಟಿಯಲ್ಲಿ ಸೆರೆಹಿಡಿದ ಆನೆ, ಕ್ಯಾಂಪ್‌ಗಳಲ್ಲಿ ಪಳಗಿಸಿದ ಆನೆಗಿಂತಲೂ ಸೌಮ್ಯ ಸ್ವಭಾವದ್ದು, ಹೆಚ್ಚೆಂದರೆ ಇಪ್ಪತ್ತು ವರ್ಷ ವಯಸ್ಸು, ನಿರರ್ಗಳವಾಗಿ ಸುತ್ತುವುದಕ್ಕೆ ಹೋಗಿ ಅನಾಯಾಸವಾಗಿ ಸಕ್ರೆಬೈಲಿನಲ್ಲಿ ಬಂಧಿಯಾಯ್ತು, ಭದ್ರಾ ಸಂರಕ್ಷಿತ ವಲಯದಿಂದ ಚಿತ್ರದುರ್ಗ ಗಡಿಯ ಜೋಗಿಮಟ್ಟಿ ಅರಣ್ಯದಲ್ಲಿ ನಿರಾಳವಾಗಿ ಬಂದ ಆನೆಯನ್ನ ಕಂಡ ಜನರು ಅಧಿಕಾರಿಗಳಿಗೆ ದೂರು ನೀಡಿದ್ರು, ಅಲ್ಲಿ ಮಟ್ಟಿ ಮುರಿದಿದೆ, ಇಲ್ಲಿ ಸೊಪ್ಪು ತಿಂದಿದೆ, ಹೆಜ್ಜೆ ಗುರುತುಗಳು ನೋಡಿ ಎಂದು ಅದರ ಜಾಡು ಹಿಡಿದು ಹೊರಟರು ಅದು ಸಾಗುತ್ತಲೇ ಇತ್ತು, ಅಲ್ಲಲ್ಲಿ ಜೋಳ ತಿಂದು, ಬೇಲಿ ಮುರಿದು ಕಣ್ಮರೆಯಾಗುತ್ತಿತ್ತು, ಒಂದೇ ರಾತ್ರಿಯಲ್ಲಿ ಹದಿನೈದು ಇಪ್ಪತ್ತು ಕಿಲೋಮೀಟರ್ ಸಾಗಿತ್ತು, ಕೊನೆಗೆ ಅಹೋಬಲ ನರಸಿಂಹಸ್ವಾಮಿ ದೇಗುಲದ ಸಮೀಪದ ಅರಣ್ಯದಲ್ಲಿ ಅಧಿಕಾರಿಗಳಿಗೆ ಇದರ ಸುಳಿವು ಸಿಕ್ಕಿಬಿಡ್ತು.
ನಂದಿಪುರ ಎಂಬ ಗ್ರಾಮದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಆನೆಯನ್ನ ನಾಗರಹೊಳೆ ಹಾಗೂ ಸಕ್ರೆಬೈಲ್‌ನಿಂದ ತಂದ ಆನೆಗಳಿಂದ ಮಣಿಸಿ, ಅರಿವಳಿಕೆಗೆ ಮೈಯೊಡ್ಡುವಂತೆ ಮಾಡಲಾಯ್ತು, ಈಗ ಆ ಆನೆ ಸಕ್ರೆಬೈಲ್ ಬಿಡಾರ ಸೇರಿಕೊಂಡಿದೆ. ಇದರೊಂದಿಗೆ ಇಲ್ಲಿನ ಆನೆಗಳ ಸಂಖ್ಯೆ ಇಪ್ಪತ್ತೈದಕ್ಕೇರಿದೆ. ಜೋಗಿಮಟ್ಟಿ ಆನೆ ಸ್ವಲ್ಪವೂ ತೊಂದರೆ ನೀಡದೇ ಲಾರಿ ಏರಿ, ಇಳಿದು ಕ್ರಾಲ್‌ನಲ್ಲಿ ಸೇರಿ ತನಗೇನು ಅರಿವಿಲ್ಲದ ನಿಂತುಬಿಡುತ್ತೆ. ಪಕ್ಕದಲ್ಲಿಯೇ ಇರುವ ಆನೆ ಅದರೊಂದಿಗೆ ನಡೆಸುವ ಮೂಖ ಸಂಭಾಷಣೆ ನೋಡಿದರೆ, ನೀನು ಇಲ್ಲಿಗೆ ಬಂದು ಬಂಧಿಯಾದೆ ಎಂಬಂತೆ ಕಾಣುತ್ತೆ.
ಹೆಚ್ಚೆಂದರೆ ಹದಿನೈದು ಆನೆಗಳನ್ನ ಸಾಕಬಹುದಾದ ಈ ಕ್ಯಾಂಪ್‌ನಲ್ಲಿ ಇಪ್ಪತ್ತೈದು ಆನೆಗಳಾಗಿವೆ, ಇಷ್ಟೊಂದು ಆನೆಗಳನ್ನ ಕೂಡಿಹಾಕುವ ಅಗತ್ಯತೆ ಏನಿದೆ, ಇಪ್ಪತ್ತರ ಹರೆಯದ ಆನೆಯನ್ನ ಕ್ಯಾಂಪ್‌ನಲ್ಲಿ ಐವತ್ತು ವರ್ಷ ಸರ್ಕಾರದ ಹಣದಲ್ಲಿ ಸಾಕಬೇಕು, ಪ್ರತೀ ಆನೆಗೆ ಕಾವಾಡಿ, ಮಾವುತ ಅಂತ ಸಾಕಷ್ಟು ಸಿಬ್ಬಂದಿಗಳು ಬೇಕು, ಕಾಡಾನೆ ಪಳಗಿಸಲು ಕನಿಷ್ಟ ಎರಡು ಆನೆಗಳನ್ನ ನಿಯೋಜಿಸಬೇಕು, ಅವುಗಳಿಗೆ ಮೇವು ಅಂತ ಪ್ರತೀ ತಿಂಗಳು ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕು, ವೈದ್ಯಕೀಯ ವೆಚ್ಚವೂ ದುಬಾರಿ, ಹರ್ಪಿಸ್ ತರಹದ ವೈರಸ್ ದಾಳಿ ಇಟ್ಟರೆ ಕ್ಯಾಂಪ್‌ಗಳಲ್ಲಿ ಆನೆಗಳೇ ಖಾಲಿಯಾಗುತ್ತವೆ.
ತಾತ್ಕಾಲಿಕವಾಗಿ ಆನೆಗಳನ್ನ ಇಡಬಹುದಾದ ಜಾಗದಲ್ಲಿ ಹಿಂಡನ್ನ ತಂದು ಬಿಟ್ಟರೆ ಮುಂದೆ ಆನೆ ಸಂತತಿಗಳೇ ನಾಶವಾಗಬಹುದು ಎಂಬ ಆತಂಕವನ್ನ ರಾಜ್ಯ ಉಚ್ಛನ್ಯಾಯಾಲಯ ಸರ್ಕಾರಕ್ಕೆ ತರಾಟೆಗೆ ತೆಗೆದುಕೊಳ್ಳುವ ಮೂಲಕ ಹೊರಹಾಕಿತ್ತು, ನೀಲಗಿರಿ ಪರ್ವತದಂಚಿನಲ್ಲಿ ಆನೆ ಕಾರಿಡಾರ್‌ಗಳ ಜಾಗವನ್ನ ಆಕ್ರಮಿಸಿಕೊಂಡಿದ್ದ ಹೋಟೆಲ್ ಹಾಗೂ ರೆಸಾರ್ಟ್‌ಗಳನ್ನ ತೆರವುಗೊಳಿಸುವಂತೆ ತಮಿಳುನಾಡು ಸರ್ಕಾರಕ್ಕೆ ಸರ್ವೋಚ್ಛ ನ್ಯಾಯಾಲಯ ಸೂಚಿಸಿತ್ತು. ಆದರೆ ಕಾರಿಡಾರ್ ಹಿಡಿದು ಹಾದಿತಪ್ಪುವ ಆನೆಗಳನ್ನ ಕ್ಯಾಂಪ್‌ಗಳಲ್ಲಿ ಕೂಡುವುದು ಮಾತ್ರ ಮುಗಿಯುತ್ತಿಲ್ಲ.
ಸಕ್ರೆಬೈಲು ಆನೆಬಿಡಾರ ಆರಂಭವಾಗಿದ್ದು 1954ರಲ್ಲಿ, ಅಂದು ಆನೆಗಳನ್ನ ಪಳಗಿಸಿದರೆ ಸಾಕಷ್ಟು ಕೆಲಸಕ್ಕೆ ಉಪಯೋಗವಾಗುತ್ತಿದ್ದವು, ದಿಮ್ಮಿಗಳನ್ನ ಸಾಗಿಸಲು ಆನೆಗಳೇ ಆಸರೆಯಾಗಿದ್ದವು, ಆನೆಗಳನ್ನ ಕಂಡರೆ ಜನ ದೇವರಂತೆ ನೋಡುವ ಕಾಲ ಮರೆಯಾಯ್ತು, ಅರಣ್ಯ ಕ್ಷೀಣಿಸುತ್ತಾ, ಸಂರಕ್ಷಿತ ಅರಣ್ಯ ಪ್ರದೇಶದೊಳಗೆ ಗುಂಪು ಕಟ್ಟಿಕೊಂಡು ತಿರುಗುವ ಆನೆಗಳಲ್ಲಿ ಕೆಲವು ಕಾರಿಡಾರ್ ನಲ್ಲಿ ಸಂಚರಿಸಿ ಹೊರ ಬರುತ್ತಿವೆ, ಅವುಗಳನ್ನ ಕಾಡಿಗೆ ಅಟ್ಟಿದರೂ ವಿರಳ ಅರಣ್ಯದಾಚೀಚೆ ರೈತರ ಜಮೀನಿಗೆ ಲಗ್ಗೆ ಇಡುತ್ತಲೇ ಇರುತ್ತವೆ, ಹಾಗಾಗಿ ಮೇಲಧಿಕಾರಿಗಳ ನಿರ್ದೇಶನ ಹಾಗೂ ರಾಜಕಾರಣಿಗಳ ಕಾಟಕ್ಕೆ ಅವುಗಳು ಕ್ಯಾಂಪ್ ಸೇರುತ್ತವೆ.
ಹೀಗೆ ಸೇರಿದ ಆನೆಗಳು ಮುಂದೆ ನರಕ ಅನುಭವಿಸುತ್ತವೆ. ಶಿವಮೊಗ್ಗ ವ್ಯಾಪ್ತಿಯ ಆನೆಗಳನ್ನ ತಂದು ಕ್ರಾಲ್‌ನಲ್ಲಿ ಇಡುವುದಾದರೆ ಸರಿ ಆದರೆ, ಭದ್ರಾ ತರಹದ ಗೋಂಡಾರಣ್ಯದ ಆಸುಪಾಸಿನಲ್ಲಿ ಸುಳಿದಾಡುವ ಆನೆಗಳನ್ನೆಲ್ಲಾ ತಂದು ತುಂಬಿಸುವುದು ಸರಿಯಲ್ಲ ಎಂಬುದನ್ನ ಸ್ವತಃ ಶಿವಮೊಗ್ಗ ವನ್ಯಜೀವಿ ವಿಭಾಗದ ಉಪಸಂರಕ್ಷಣಾಧಿಕಾರಿ ನಾಗರಾಜ್ ಒಪ್ಪಿಕೊಳ್ಳುತ್ತಾರೆ. ರಾಜ್ಯಾದ್ಯಂತ ವನ್ಯಜೀವಿ ವಿಭಾಗದಲ್ಲಿ ಕೆಲಸ ಮಾಡಿ ಅಪಾರ ಅನುಭವವಿರುವ ನಾಗರಾಜ್, ಮೇಲಧಿಕಾರಿಗಳ ಜೊತೆ ಚರ್ಚಿಸಿ ಜೋಗಿಮಟ್ಟಿಯಲ್ಲಿ ಸೆರೆಸಿಕ್ಕ ಆನೆಯನ್ನ ಸಂರಕ್ಷಿತ ಅರಣ್ಯಕ್ಕೆ ಪುನಃ ಬಿಡುವ ಯೋಚನೆಯಲ್ಲೂ ಇದ್ದಾರೆ, ಆದರೆ ಕ್ಯಾಂಪ್‌ನಲ್ಲಿ ಈಗಿರುವ ಆನೆಗಳನ್ನೂ ಕಡಿಮೆಗೊಳಿಸುವ ಕೆಲಸವೂ ಆಗಬೇಕಿದೆ.