ಚಿಲುಮೆ ಶೈಕ್ಷಣಿಕ ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ – ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ -2023ರ ಕಾರ್ಯಚಟುವಟಿಕೆಗೆ ನೀಡಿದ್ದ ಅನುಮತಿಯನ್ನು ದುರುಪಯೋಗಗೊಂಡಿರುವ ಬಗ್ಗೆ ಹಾಗೂ ಚಿಲುಮೆ ಸಂಸ್ಥೆ ಮತದಾರರ ದತ್ತಾಂಶವನ್ನು ಅನಧಿಕೃತವಾಗಿ ಕದ್ದಿರುವ ಬಗ್ಗೆ ಪ್ರತಿಧ್ವನಿ ಮತ್ತು TheNewsMinute ಜಂಟಿ ತನಿಖಾ ವರದಿ ಪ್ರಕಟಿಸಿದ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತನಿಖೆಗೆ ಒತ್ತಾಯಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್ ರಾಜ್ಯ ಸರ್ಕಾರವೇ ಮತದಾರರ ಮಾಹಿತಿ ಕಳುವು ಮಾಡಿರುವ ಕುರಿತು ಉನ್ನತ ಮ್ಟದ ತನಿಖೆಗೆ ಆದೇಶಿಸಿದಿದ್ದರೆ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಎಂದು ರಾಜ್ಯ ಬಿಜೆಪಿ ಸರ್ಕಾರವನ್ನ ಎಚ್ಚರಿಸಿದ್ದಾರೆ.
ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ರಾಜ್ಯದ ಮುಖ್ಯ ಚುನಾವಣಾಧಿಕಾರಿ ವಿಭಾಗೀಯ ಅಧಿಕಾರಿಗಳಿಗೆ ಆದೇಶಿಸಿರುವ ಬಗ್ಗೆ ನಮಗೆ ಮಾಹಿತಿ ಲಭಿಸಿದೆ. ಆದರೆ, ಇದು ವಿಭಾಗೀಯ ಅಧಿಕಾರಿಗಳ ಹಂತದಲ್ಲಿ ನಡೆಸಬೇಕಾಗಿರುವ ಪ್ರಕರಣ ಅಲ್ಲ. ಈ ಬಗ್ಗೆ ಶನಿವಾರ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿ ಉನ್ನತಮಟ್ಟದ ತನಿಖೆಗೆ ಆಗ್ರಹಿಸಲಾಗುವುದು ಎಂದು ತಿಳಿಸಿದ್ದಾರೆ.

ಮತದಾನದ ಜಾಗೃತಿ ಹೆಸರಿನಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲಿ ಸಾವಿರಾರು ಮತದಾರರ ಮಾಹಿತಿ ಕಳುವು ಮತ್ತು ಮತದಾರರ ಪಟ್ಟಿಯಿಂದ ಕೈ ಬಿಟ್ಟಿರುವ ಬಗ್ಗೆ ಈಗಾಗಲೇ ಅನೇಕ ದೂರುಗಳು ಕೇಳಿ ಬಂದಿವೆ. ಈ ತಂಡದಲ್ಲಿದ್ದ ಕೆಲವರು ರಾಜಕಾರಣಿಗಳನ್ನು ಸಂಪರ್ಕಿಸಿ ಗೆಲ್ಲಿಸುವ ಬಗ್ಗೆ ಕೋಟ್ಯಂತರ ರೂಪಾಯಿ ಆಮಿಷವೊಡ್ಡಿರುವ ಬಗ್ಗೆ ಮಾಹಿತಿ ಬಂದಿದೆ ಈ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಅಕ್ರಮದ ಬಗ್ಗೆ ಮುಖ್ಯಮಂತ್ರಿಗಳು ಲಘುವಾಗಿ ಮಾತನಾಡಿದ್ದಾರೆ ಅವರ ಅಧೀನದಲ್ಲೇ ಈ ಅಕ್ರಮ ನಡೆದಿದೆ. ಪಾಲಿಕೆ ಆಯುಕ್ತರು ಇದನ್ನು ಒಪ್ಪಿಕೊಂಡಿದ್ದಾರೆ. ಆದರೆ ಅಕ್ರಮ ಎಸಗಿದವರ ವಿರುದ್ದ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ.