ಹಾವೇರಿ ಜಿಲ್ಲೆಯ ಬ್ಯಾಡಗಿ ಬಳಿ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಕಲಬುರಗಿ ಜಿಲ್ಲೆ ಚಿಂಚೋಳಿಯ ಮಾಯಮ್ಮ ದೇವಿ ದರ್ಶನ ಮುಗಿಸಿಕೊಂಡು ವಾಪಸ್ ಆಗ್ತಿದ್ದಾಗ ನಿಂತಿದ್ದ ಲಾರಿಗೆ ಟಿಟಿ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ಟಿಟಿಯಲ್ಲಿದ್ದ ಮಕ್ಕಳು ಸೇರಿ 17 ಜನರ ಪೈಕಿ 13 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸುಭದ್ರಾಬಾಯಿ, ಮಂಜುಳಾ, ಆದರ್ಶ, ಆರ್ಯ, ವಿಶಾಲಾಕ್ಷಿ, ರೂಪಾಬಾಯಿ, ನಂದನ್, ಅಂಜಲಿ, ನಾಗೇಶ್ವರ ರಾವ್, ಅರುಣ್ ಕುಮಾರ್, ಮಂಜುಳಾ ಬಾಯಿ, ಭಾಗ್ಯಲಕ್ಷ್ಮಿ ಮೃತರು. ಡಿಕ್ಕಿ ರಭಸಕ್ಕೆ ಟಿಟಿಯಲ್ಲಿದ್ದ ಜನರು ಶವವಾಗಿ ಹೊರಗೆ ಬಿದ್ದಿದ್ದಾರೆ.
ಮೃತರು ಶಿವಮೊಗ್ಗ ಜಿಲ್ಲೆಯ ಎಮ್ಮೆಹಟ್ಟಿ ಗ್ರಾಮದ ಸುತ್ತಮುತ್ತಲ ಗ್ರಾಮದವರಾಗಿದ್ದಾರೆ. ಸಾವನ್ನಪ್ಪಿದವರಲ್ಲಿ ಎರಡು ಕುಟುಂಬದ ತಲಾ ನಾಲ್ವರು ಸೇರಿದ್ದಾರೆ. ಭೀಕರ ಅಪಘಾತದಲ್ಲಿ ಇನ್ನೂ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅರ್ಪಿತಾ, ಪರಶುರಾಮ್, ಪುಣ್ಯಾ ಭಾಯಿ ಹಾಗೂ 12 ವರ್ಷದ ಗೌತಮ್ ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗ್ತಿದೆ.
ಅಪಘಾತದಲ್ಲಿ ಸಾವನ್ನಪ್ಪಿದವರ ಪಾರ್ಥಿವ ಶರೀರಗಳನ್ನು ಮರಣೋತ್ತರ ಪರೀಕ್ಷೆ ಬಳಿಕ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಎಮ್ಮೆಗಟ್ಟಿ ಗ್ರಾಮಕ್ಕೆ ತೆಗೆದುಕೊಂಡು ಹೋಗಲಾಗಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇಡೀ ಗ್ರಾಮಕ್ಕೆ ಗ್ರಾಮವೇ ಶೋಕ ಸಾಗರದಲ್ಲಿ ಮುಳುಗಿದ್ದು, ಗ್ರಾಮಕ್ಕೆ ಭೇಟಿ ನೀಡಿದ್ದ ಸಂಸದ ರಾಘವೇಂದ್ರ, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಸಾರ್ವಜನಿಕ ದರ್ಶನದ ಬಳಿಕ ಗ್ರಾಮದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.