ಮಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿರುವ 12 ಮಂದಿ ವಿದ್ಯಾರ್ಥಿಗಳನ್ನು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಕೇಂದ್ರಿಯ ಅಪರಾಧ ದಳ(CCB) ಅಧಿಕಾರಿಗಳು ವಿಶೇಷ ತನಿಖೆ ನಡೆಸಿ ಬಂಧಿಸಿದ್ದಾರೆ.
ನಗರದ ವೆಲೆನ್ಸಿಯಾದ ಸೂಟರ್ಪೇಟೆ ಮೂರನೇ ಕ್ರಾಸಿನ ವಸತಿ ಸಮುಚ್ಚಯದಲ್ಲಿ ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಇನ್ಸ್ಪಟಕ್ಟರ್ ಮಹೇಶ್ ಹಾಗೂ ರಾಜೇಂದ್ರ ನೇತೃತ್ವದ ತಂಡ ದಾಳಿ ಮಾಡಿ 20 ಸಾವಿರ ಮೌಲ್ಯದ 900 ಗ್ರಾಂ ಗಾಂಜಾ, 4,500 ಸಾವಿರ ನಗದು, 11 ಮೊಬೈಲ್ ಪೋನ್ ಹಾಗು ಡಿಜಿಟಲ್ ತಕ್ಕಡಿಯನ್ನು ವಶಕ್ಕೆ ಪಡೆದಿದ್ದಾರೆ.
ಕೇರಳದ ಕಣ್ಣೂರು ಮೂಲದ ಶಾಣೂಫ್ ಅಬ್ದುಲ್ ಗಫೂರ್(21), ಮೊಹಮ್ಮದ್ ರಸೀನ್(22), ಅಮಲ್(21), ಅಭಿಷೇಕ್(21), ನಿದಾಲ್(21), ಮೊಹ,,ದ್ ರಿಶಿನ್(22), ಗೋಕುಲ ಕೃಷ್ಣನ್(22), ಆನಂದ್(19), ಅನಂತು(18), ಶಾಹಿದ್(22), ಫಹಾದ್ ಹಬೀಬ್(22), ರುಜಿನ್ ರಿಯಾಜ್(22) ಬಂಧಿತರು.

ಆರೋಪಿಗಳು ಮಾದಕ ದ್ರವ್ಯ ಸೇವಿಸಿರುವುದನ್ನು ಖಚಿತಪಡಿಸಿಕೊಳ್ಳಲು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ 11 ಮಂದಿ ಗಾಂಜಾ ಸೇವಿಸಿರುವುದು ದೃಢವಾಗಿದೆ. ಸಿಕ್ಕಿ ಬಿದ್ದಿರುವ ಎಲ್ಲಾ ವಿದ್ಯಾರ್ಥಿಗಳು ಬಿಬಿಎ, ಬಿಸಿಎ ಹಾಗು ಫೋರೆನ್ಸಿಕ್ ಸೈನ್ಸ್ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಆರೋಪಿಗಳ ವಿರುದ್ದ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮಾದಕ ವಸ್ತುಗಳ ಜಾಲದಲ್ಲಿ ಮತ್ತಷ್ಟು ಯುವಕರು ಹಾಗೂ ವಿದ್ಯಾರ್ಥಿಗಳು ಭಾಗಿಯಾಗಿರುವ ಶಂಕೆಯನ್ನ ಪೊಲೀಸರು ವ್ಯಕ್ತಪಡಿಸಿದ್ದಾರೆ.