ಜನವರಿ 25 ರಂದು ಭಾರತವು ರಾಷ್ಟ್ರೀಯ ಮತದಾರರ ದಿನವೆಂದು ಆಚರಿಸುತ್ತದೆ. 1950 ರಲ್ಲಿ ಭಾರತದಲ್ಲಿ ಚುನಾವಣಾ ಆಯೋಗವನ್ನು ಸ್ಥಾಪಿಸಲಾಯಿತು. 2011 ರಿಂದ ಭಾರತೀಯ ಚುನಾವಣಾ ಆಯೋಗವು(ಇಸಿಐ) ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲು ಆರಂಭಿಸಿತ್ತು. ಜನವರಿ 25 2021 ರಲ್ಲಿ ದೇಶವು 11 ನೇ ರಾಷ್ಟೀಯ ಮತದಾರರ ದಿನವನ್ನ ಆಚರಿಸುತ್ತಿದೆ.
ನವದೆಹಲಿಯ ಅಶೋಕ್ ಹೋಟೆಲ್ನಲ್ಲಿ ನಡೆಯಲಿರುವ 11 ನೇ ಮತದಾರರ ದಿನಾಚರಣೆಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಉದ್ಘಾಟಿಸಲಿದ್ದಾರೆ.
ಜನವರಿ25 ರ ಮತದಾರರ ದಿನದ ಶುಭಾಶಯ ಕೋರುತ್ತಾ, ಮತದಾರರ ಹಕ್ಕು, ಜಾಗರೂಕತೆ, ಸುರಕ್ಷಿತ, ಸಬಲೀಕರಣ ಮತ್ತು ಜವಾಬ್ದಾರಿಯನ್ನು ನೆನಪಿಸುತ್ತಾ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸುತ್ತೇವೆ ಎಂದು ಭಾರತದ ಮುಖ್ಯ ಚುನಾವಣಾ ಆಯುಕ್ತ ಸುನಿಲ್ಕುಮಾರ್ ಅರೋರಾ ವಿಡಿಯೋ ಸಂದೇಶದ ಮೂಲಕ ರಾಷ್ಟ್ರದ ಜನತೆಗೆ ತಿಳಿಸಿದ್ದಾರೆ.
ದೇಶದಲ್ಲಿ ಚುನಾವಣೆಗಳು ಮುಕ್ತ ನ್ಯಾಯಸಮ್ಮತವಾಗಿ ಮತ್ತು ಎಲ್ಲರನ್ನೂ ಒಳಗೊಂಡು, ಭಾಗವಹಿಸುವ ಆಯಾಮವನ್ನು ಒಳಗೊಂಡಿದೆ. ಸಾಂಕ್ರಾಮಿಕ ರೋಗ ಕೋವಿಡ್ ಸಮಯದಲ್ಲಿ ಸಮತೋಲನವಾಗಿ, ಸುರಕ್ಷಿತವಾಗಿ, ಮತದಾನ ನಡೆಸಲು ನಮಗೆ ಸವಾಲಾಗಿತ್ತು. ಸಾಕಷ್ಟು ಶ್ರಮವಹಿಸಿದ್ದೆವು. ಈ ವೇಳೆ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಚಲಾಯಿಸಿದ್ದರು. ಇಸಿಐ ನ ಮೇಲೆ ಮತದಾರರಿಟ್ಟ ನಂಬಿಕೆ ಪ್ರದರ್ಶನವಾಯಿತು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಮತದಾರರಿಗೆ ಮೀಸಲಾಗಿರುವ ಈ ದಿನದಂದು ದೇಶದ ಮತದಾರರಲ್ಲಿ ಜಾಗೃತಿ ಮೂಡಿಸುವುದು, ಚುನಾವಣಾ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ಮತ್ತು ಮತದಾನದಲ್ಲಿ ಭಾಗವಹಿಸಲು ಉತ್ತೇಜನ ನೀಡುವುದು. ಎನ್ವಿಡಿ ಕಾರ್ಯಕ್ರಮದಲ್ಲಿ ಹೊಸ ಮತದಾರರಿಗೆ ಮತದಾರರ ಚೀಟಿ ನೀಡಿ ಸನ್ಮಾನಿಸುವುದು, ಹಾಗು ಚುನಾವಣಾ ಆಯೋಗಕ್ಕೆ ಸಂಬಂಧಿಸಿದಂತೆ ಐಟಿ ವಿಭಾಗದಲ್ಲಿ ಕೆಲಸ ನಿರ್ವಹಿಸಿದವರಿಗೆ, ಕೋವಿಡ್ ಸಮಯದಲ್ಲಿ ಚುನಾವಣಾ ನಿರ್ವಾಹಣೆಯಲ್ಲಿ ಉತ್ತಮ ಕೆಲಸ ಮಾಡಿದವರಿಗೆ ಮತ್ತು ಮತದಾರರ ಜಾಗೃತಿ ಕಾರ್ಯಕ್ರಮಗಳಲ್ಲಿ ಶ್ರಮಿಸಿದವರಿಗೆ ಈ ದಿನದಂದು ರಾಷ್ಟೀಯ ಪ್ರಶಸ್ತಿನೀಡಿ ಗೌರವಿಸಲಾಗುತ್ತದೆ ಎಂದಿದ್ದಾರೆ.