ಕರೋನಾ ಪ್ರೇರಿತ ಲಾಕ್ಡೌನ್ ಕಾರಣದಿಂದ ದೇಶದಾದ್ಯಂತ ಉದ್ಯಮಗಳು ಸ್ಥಗಿತಗೊಂಡಿದ್ದರಿಂದ ಉದ್ಯಮಿಗಳು ಇನ್ನಿಲ್ಲದ ಸಂಕಷ್ಟಕ್ಕೆ ಸಿಲುಕಿದ್ದರು. ಇದರಿಂದಾಗಿ 2020ರಲ್ಲಿ ಸುಮಾರು 11,716 ಉದ್ಯಮಿಗಳು ಆತ್ಮಹತ್ಯೆಯ ಹಾದಿ ತುಳಿದಿದ್ದಾರೆಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ವರದಿ ನೀಡಿದೆ. ಈ ಪಟ್ಟಿಯಲ್ಲಿ ಕರ್ನಾಟಕ ಮೊದಲನೇ ಸ್ಥಾನದಲ್ಲಿರುವುದು ರಾಜ್ಯದ ಆರ್ಥಿಕ ಪರಿಸ್ಥಿತಿಗೆ ಹಿಡಿದ ಕೈಗನ್ನಡಿ.
2019ಕ್ಕೆ ತುಲನೆ ಮಾಡಿದರೆ, ಆತ್ಮಹತ್ಯೆ ಮಾಡಿಕೊಂಡ ಉದ್ಯಮಿಗಳ ಸಂಖ್ಯೆಯಲ್ಲಿ 29%ದಷ್ಟು ಏರಿಕೆಯಾಗಿದೆ.
2019ರಲ್ಲಿ 9,052 ಜನರು ಆತ್ಮಹತ್ಯೆ ಮಾಡಿಕೊಂಡಿದ್ದರು. ಉದ್ಯಮಿಗಳ ವರ್ಗದಲ್ಲಿ ಬರುವಂತಹ ಬೃಹತ್ ವ್ಯಾಪಾರಿಗಳಲ್ಲಿ ಅತೀ ಹೆಚ್ಚು ಜನರು ಆತ್ಮಹತ್ಯೆಗೆ ಶರಣಾಗಿದ್ದಾರೆ. 2019ರಲ್ಲಿ 2,906 ಬೃಹತ್ ವ್ಯಾಪಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರೆ, 2020ರಲ್ಲಿ 4,356 ವ್ಯಾಪಾರಿಗಲು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು 4,226 ಸಣ್ಣ ಪ್ರಮಾಣದ ವ್ಯಾಪಾರಿಗಳು ಆತ್ಮಹತ್ಯೆಯ ಹಾದಿಯನ್ನು ತುಳಿದಿದ್ದಾರೆ.
ಕರ್ನಾಟಕದಲ್ಲಿ ಅತೀ ಹೆಚ್ಚು ಜನ ಉದ್ಯಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2020ರಲ್ಲಿ 1,772 ಜನರು ಸಾವಿನ ಕದ ತಟ್ಟಿದ್ದಾರೆ. 2019ರ ಸಂಖ್ಯೆಗೆ ತುಲನೆ ಮಾಡಿದರೆ, 2020ರಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆಯು 103% ಏರಿಕೆ ಕಂಡಿದೆ. 2019ರಲ್ಲಿ 875 ಉದ್ಯಮಿಗಳು ಆತ್ಮಹತ್ಯೆಗೆ ಶರಣಾಗಿದ್ದರು.
ಮಹಾರಾಷ್ಟ್ರದಲ್ಲಿ 1,610, ತಮಿಳುನಾಡಿನಲ್ಲಿ 1,447 ಜನರು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಪ್ರಕರಣ ದಾಖಲಾಗಿದೆ. ಆತ್ಮಹತ್ಯೆ ಪ್ರಕರಣಗಳು ಏರಿಕೆಯಾಗಿರುವ ಕುರಿತು ವಿಶ್ಲೇಷಣೆ ನಡೆಸಿರುವ ಪ್ರೊ. ಪ್ರವೀಣ್ ಝಾ,“ಭಾರತದ ಬಹುತೇಕ ಉದ್ಯಮಿಗಳು ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ (MSMEs) ಹಂತದ ಉದ್ಯಮಗಳನ್ನು ನಡೆಸುತ್ತಾರೆ. ಕರೋನಾದಂತಹ ದೊಡ್ಡ ಮಟ್ಟದ ಆಘಾತಗಳನ್ನು ತಡೆಯುವ ಶಕ್ತಿ ಈ ಉದ್ಯಮಗಳಿಗೆ ಇರುವುದಿಲ್ಲ. ಸಣ್ಣ ಮಟ್ಟದ ತೊಂದರೆಗಳಿಂದಲೇ ಬಹುತೇಕ ಉದ್ಯಮಗಳು ಮುಚ್ಚುವ ಹಂತಕ್ಕೆ ತಲುಪುತ್ತವೆ. ಅಂತಹುದರಲ್ಲಿ ಕೋವಿಡ್ ನಿಜಕ್ಕೂ ದೊಡ್ಡ ಮಟ್ಟದ ಆಘಾತ,” ಎಂದು ಹೇಳಿದ್ದಾರೆ.
ಮುಂದುವರೆದು, ಆರ್ಥಿಕ ಸಂಕಷ್ಟ ಎದುರಾದ ಸಂದರ್ಭದಲ್ಲಿ ಅದನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿಯನ್ನು ಸಣ್ಣ ಉದ್ಯಮಗಳು ಹೊಂದಿರುವುದಿಲ್ಲ. ಭಾರತ ಸರ್ಕಾರವೂ ಅಲ್ಪ ಮಟ್ಟಿನ ಸಹಕಾರ ಮಾತ್ರ ನೀಡಿತು. ಅದು ಕೂಡಾ ತಡವಾಗಿ. ನೀಡಿದ ನೆರವು ಸಾಲದ ರೂಪದಲ್ಲಿ ಇತ್ತೇ ಹೊರತು ನೇರವಾದ ಹಣಕಾಸಿನ ನೆರವು ನೀಡಲಿಲ್ಲ, ಎಂದಿದ್ದಾರೆ.
ಆರ್ಥಿಕ ತಜ್ಞ ಅರುಣ್ ಕುಮಾರ್,‘ದಿ ಪ್ರಿಂಟ್’ಗೆ ನೀಡಿರುವ ಹೇಳಿಕೆಯಲ್ಲಿ, ಜನರು ಮನೆ ಬಿಟ್ಟು ಹೊರ ಹೋಗಿ ವಸ್ತುಗಳನ್ನು ಕೊಳ್ಳುವುದರ ಬದಲು ಆನ್ಲೈನ್ ಮೂಲಕ ಯಾವಾಗ ಆರ್ಡರ್ ಮಾಡುವುದನ್ನು ಹೆಚ್ಚಿಸಿಕೊಂಡರೋ, ಅದು ಸ್ಥಳೀಯ ಉದ್ಯಮಿಗಳಿಗೆ ಮಾರಕವಾಗಿ ಪರಿಣಮಿಸಿತು. ಬಹುತೇಕ ಉದ್ಯಮಗಳು ಅತೀ ಸಣ್ಣ ಹೂಡಿಕೆಯೊಂದಿಗೆ ಆರಂಭವಾಗುತ್ತವೆ. ಬಹಳ ಸಮಯ ಕೆಲಸವಿಲ್ಲದೇ ಕಳೆದರೆ, ಅವರ ಬಂಡವಾಳ ಬರಡಾಗುತ್ತಾ ಹೋಗುತ್ತದೆ. ನಯಾ ಪೈಸೆಯ ಆದಾಯವಿಲ್ಲದೇ ಕುಟುಂಬವನ್ನು ಸಾಕುವ ಹೊರೆಯಿಂದಾಗಿ ಹೆಚ್ಚಿನ ಆತ್ಮಹತ್ಯೆಗಳು ಸಂಭವಿಸಿರುವ ಸಾಧ್ಯತೆಯಿದೆ, ಎಂದು ಹೇಳಿದ್ದಾರೆ.
ನೋಟುಗಳ ಅಪನಗದೀಕರಣದ ಎರಡು ವರ್ಷಗಳ ಬಳಿಕ (2018) ಉದ್ಯಮಿಗಳ ಆತ್ಮಹತ್ಯೆಯ ಪ್ರಕರಣಗಳಲ್ಲಿ ಶೇ. ಮೂರರಷ್ಟು ಏರಿಕೆಯಾಗಿತ್ತು. ಈ ಸಂಖ್ಯೆ 2019ರಲ್ಲಿ ಶೇ. 13ಕ್ಕೆ ಮತ್ತೆ ಏರಿಕೆ ಕಂಡಿತ್ತು.
ದೇಶದ 94% ನೌಕರರಿಗೆ ಸಣ್ಣ ಮತ್ತು ಅತೀ ಸಣ್ಣ ಉದ್ಯಮಗಳೇ ಆಸರೆಯಾಗಿವೆ. ಲಾಕ್ಡೌನ್ ಕಾರಣದಿಂದ ಈ ಉದ್ಯಮಗಳು ಇನ್ನಿಲ್ಲದ ಪಾಡುಪಟ್ಟಿವೆ. ಸರ್ಕಾರದ ನೀತಿಗಳು, ಯೋಜನೆಗಳು ಈ ಉದ್ಯಮಗಳ ಪುನರ್ ಚೇತನಕ್ಕೆ ಸಹಕಾರಿಯಾಗದೇ ಇರುವುದು ಆತ್ಮಹತ್ಯೆಯಂತಹ ದುರಂತಗಳಿಗೆ ಎಡೆಮಾಡಿಕೊಟ್ಟಿದೆ.