150 ಪ್ಯಾಸೆಂಜರ್ ರೈಲುಗಾಡಿಗಳನ್ನು ಓಡಿಸಲು ಅನುವಾಗುವಂತೆ ಕನಿಷ್ಠ ಪಕ್ಷ ನೂರು ರೇಲ್ವೆ ಮಾರ್ಗಗಳನ್ನು ಗುತ್ತಿಗೆ ಆಧಾರದ ಮೇಲೆ ಖಾಸಗಿಯವರಿಗೆ ವಹಿಸಲು ಕೇಂದ್ರ ಸರ್ಕಾರ ಮುಂದಾಗತೊಡಗಿದೆ. ಈ ತಿಂಗಳ ಅಂತ್ಯದಲ್ಲಿ ನಡೆಯುವ ಸಾರ್ವಜನಿಕ-ಖಾಸಗಿ ಪಾಲುದಾರಿಕೆ ಮೌಲ್ಯಮಾಪನ ಸಮಿತಿಯ ಸಭೆಯಲ್ಲಿ ಈ ಪ್ರಸ್ತಾವ ಚರ್ಚೆಗೆ ಬರಲಿದೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ.
150 ಪ್ರಯಾಣಿಕರ ರೈಲುಗಾಡಿಗಳು ಎಂದರೆ ದೇಶದ ಒಟ್ಟು ರೇಲ್ವೆ ಕಾರ್ಯಾಚರಣೆಯ ಶೇ.5ರಷ್ಟು ಮಾತ್ರ ಎಂಬುದು ಸರ್ಕಾರಿ ಅಂದಾಜು.
ಈ ಪ್ರಸ್ತಾವದಿಂದ 22 ಸಾವಿರ ಕೋಟಿ ರುಪಾಯಿಗಳಿಗೂ ಹೆಚ್ಚು ಖಾಸಗಿ ಬಂಡವಾಳ ರೇಲ್ವೆಗೆ ಹರಿದು ಬರುವ ನಿರೀಕ್ಷೆಯಿರುವ ಈ ಪ್ರಸ್ತಾವವನ್ನು ರೇಲ್ವೆ ಮಂಡಳಿಯು ವ್ಯಾಪಕ ಸಮಾಲೋಚನೆಗಳ ನಂತರ ಅಂತಿಮಗೊಳಿಸಿದೆ.
ದೂರಸಂಪರ್ಕ ಮತ್ತು ನಾಗರಿಕ ವಿಮಾನಯಾನ ವಲಯಗಳಲ್ಲಿ ಈಗಾಗಲೆ ಆಗಿರುವಂತೆ ಪ್ರಯಾಣಿಕರ ರೈಲುಗಾಡಿಗಳ ಕಾರ್ಯಾಚರಣೆಯಲ್ಲೂ ಖಾಸಗಿ ವಲಯದ ಪ್ರವೇಶ ಅನಿವಾರ್ಯ ಎಂಬುದು ಸರ್ಕಾರದ ನಿಲುವು. ಐ.ಆರ್.ಸಿ.ಟಿ..ಸಿ. ನಡೆಸುವ ದೇಶದ ಮೊದಲ ಖಾಸಗಿ ರೈಲುಗಾಡಿ ತೇಜಸ್ ಎಕ್ಸ್ಪ್ ಪ್ರೆಸ್ ಗೆ ಕೆಲವು ರಿಯಾಯಿತಿಗಳನ್ನು ನೀಡಲಾಗಿದೆ. ಅದು ಸರ್ಕಾರಿ ಉದ್ಯಮವಾಗಿದ್ದು ಹೊಸ ವ್ಯಾಪಾರ ಮಾದರಿಯ ಪ್ರಾಯೋಗಿಕ ಕಾರ್ಯಾಚರಣೆಯಾಗಿರುವುದೇ ಈ ರಿಯಾಯಿತಿಗಳಿಗೆ ಕಾರಣ. ಈ ರಿಯಾಯತಿಗಳನ್ನು ಖಾಸಗಿಯವರಿಗೆ ನೀಡುವುದು ಸಾಧ್ಯವಿಲ್ಲ ಎನ್ನಲಾಗಿದೆ.
ತಾವು ಓಡಿಸುವ ಪ್ರಯಾಣಿಕರ ರೈಲುಗಾಡಿಗಳ ಪ್ರಯಾಣದರಗಳು ಮತ್ತು ನಿಲುಗಡೆಗಳನ್ನು ತಾವೇ ನಿರ್ಧರಿಸುವ ಸ್ವಾತಂತ್ರ್ಯವನ್ನು ಖಾಸಗಿಯವರಿಗೆ ನೀಡಲಾಗುತ್ತದೆ. ಪಾರ್ಸೆಲ್ ಗಳನ್ನೂ ಅವರು ತಾವು ನಿರ್ಧರಿಸಿದ ದರಗಳ ಮೇರೆಗೆ ರವಾನಿಸಬಹುದಾಗಿದೆ. ರೇಲ್ವೆ ಟರ್ಮಿನಲ್ ಗಳ ಬಳಕೆ, ವಿದ್ಯುತ್ ವೆಚ್ಚ, ರೈಲುಗಾಡಿಯ ರವಾನೆ, ಹಳಿಗಳ ನಿರ್ವಹಣೆ, ಸಿಗ್ನಲಿಂಗ್ ಮತ್ತು ಸಿಬ್ಬಂದಿ ವೆಚ್ಚದ ಶೇ.25ರಷ್ಟನ್ನು ಅವರು ಭರಿಸಬೇಕಿದೆ. ಈ ಎಲ್ಲ ವೆಚ್ಚ ಭರಿಸುವುದರ ಜೊತೆಗೆ ಪ್ರಯಾಣದರ ಮತ್ತು ಇತರೆ ಆದಾಯದಲ್ಲಿ ರೇಲ್ವೆಗೆ ಪಾಲು ನೀಡಬೇಕಿರುತ್ತದೆ.
ಅರ್ಹ ಉದ್ಯಮಿಗಳಿಗೆ ಈ ರೈಲು ಮಾರ್ಗಗಳನ್ನು 35 ವರ್ಷಗಳ ಗುತ್ತಿಗೆಗೆ ನೀಡಲಾಗುವುದು. ಕಳೆದ ಐದು ವರ್ಷಗಳಲ್ಲಿ ಉದ್ಯಮ ಇಲ್ಲವೇ ರೇಲ್ವೆ ಮೂಲಸೌಕರ್ಯಗಳಲ್ಲಿ 2,700 ಕೋಟಿ ರುಪಾಯಿಗಳನ್ನು ತೊಡಗಿಸಿರುವವರು ಮತ್ತು 450 ಕೋಟಿ ರುಪಾಯಿಗಳ ನಿವ್ವಳ ಸಂಪತ್ತನ್ನು ಹೊಂದಿದವರು ಈ ಗುತ್ತಿಗೆಗಳನ್ನು ಪಡೆಯಲು ಅರ್ಹರು.
ಟೂರ್ ಆಪರೇಟರುಗಳು, ವಿಮಾನಯಾನ ಕಂಪನಿಗಳು, ರೋಲಿಂಗ್ ಸ್ಟಾಕ್ ಕಂಪನಿಗಳು ಖಾಸಗಿ ರೇಲುಗಾಡಿಗಳನ್ನು ಓಡಿಸಲು ಮುಂದೆ ಬರುವ ನಿರೀಕ್ಷೆ ಇದೆ. ಪ್ರತಿಯೊಬ್ಬರಿಗೆ ಕನಿಷ್ಠ 12 ಮತ್ತು ಗರಿಷ್ಠ 30 ರೈಲುಗಾಡಿಗಳನ್ನು ನೀಡಲಾಗುವುದು. ಪ್ರತಿಯೊಂದು ರೈಲುಗಾಡಿಯಲ್ಲಿ ವಿಶ್ವದರ್ಜೆಯ ಕನಿಷ್ಠ 16 ಕೋಚ್ ಗಳು ಇರಲೇಬೇಕು.