ಕರೋನಾ ಸೋಂಕು ಹಾಗೂ ರಾಜ್ಯ ಎದುರಿಸುತ್ತಿರುವ ಆರ್ಥಿಕ ಮುಗ್ಗಟ್ಟಿನ ನಡುವೆ ಈ ಬಾರಿಯ ಮುಂಗಾರು ಅಧಿವೇಶನ ನಡೆಯುವ ದಿನ ಹತ್ತಿರ ಬರುತ್ತಿದೆ. ಸುಮಾರು ಹತ್ತು ದಿನಗಳ ಕಾಲ ನಡೆಯಲಿರುವ ಮುಂಗಾರು ಅಧೀವೇಶನದಲ್ಲಿ ಸಾಕಷ್ಟು ಚರ್ಚೆಗಳು ನಡೆಯಬೇಕಾದ ಅಗತ್ಯವಿದೆ. ಆದರೆ, ನಿಜವಾಗಿಯೂ ಈ ಬಾರಿಯ ಅಧಿವೇಶನದ ಉದ್ದೇಶ ಪೂರ್ಣಗೊಳ್ಳುವುದೇ ಎಂಬುದನ್ನು ಕೂಡಾ ನೋಡಬೇಕಾಗಿದೆ.
ಈ ಬಾರಿ ಸುಮಾರು 30 ಮಸೂದೆಗಳು ಅಧಿವೇಶನದ ಸಂದರ್ಭದಲ್ಲಿ ಮಂಡಿಸಲಾಗುವ ಸಂಭವಗಳಿವೆ ಎಂದು ವರದಿಯಾಗಿದೆ. ಇರುವ ಕೇವಲ ಹತ್ತು ದಿನಗಳಲ್ಲಿ 30 ಮಸೂದೆಗಳ ಕುರಿತು ವಿಸ್ತೃತವಾದ ಚರ್ಚೆ ನಡೆಯಲು ಸಾಧ್ಯವೇ? ಇಂತಹ ಒಂದು ಪ್ರಶ್ನೆ ಹುಟ್ಟದೇ ಇರಲಾರದು. ಸೆಪ್ಟೆಂಬರ್ 21ರಿಂದ ಸೆಪ್ಟೆಂಬರ್ 30ರವರೆಗೆ ನಡೆಯಲಿರುವ ಅಧಿವೇಶನದಲ್ಲಿ ಬಿರುಸಿನ ಚರ್ಚೆ ನಡೆಯುವುದಂತೂ ಶತಸಿದ್ದ. ಏಕೆಂದರೆ, ವಿರೋಧ ಪಕ್ಷಕ್ಕೆ ಈ ಬಾರಿ ಸರ್ಕಾರವನ್ನು ಪ್ರಶ್ನಿಸಲು ಸಾಕಷ್ಟು ವಿಚಾರಗಳಿರುವುದರಿಂದ, ಅಧಿವೇಶನದಲ್ಲಿ ಮಸೂದೆಗಳ ಕುರಿತು ಚರ್ಚೆ ನಡೆಯುವುದೇ ಇಲ್ಲವೇ ಎಂಬುದು ಮಾತ್ರ ಕಾದು ನೋಡಬೇಕಾದ ವಿಚಾರ.
ಕೋವಿಡ್-19 ಸೋಂಕನ್ನು ನಿರ್ವಹಿಸುವಲ್ಲಿ ಸರ್ಕಾರ ಮಾಡಿದ ಎಡವಟ್ಟುಗಳು ಹಾಗೂ ವಿವಧ ಇಲಾಖೆಯಲ್ಲಿ ನಡೆದಿರುವಂತಹ ಅವ್ಯವಹಾರಗಳ ಕುರಿತು ಈಗಾಗಲೇ, ಕಾಂಗ್ರೆಸ್ ಪ್ರಶ್ನೆ ಎತ್ತಿದ್ದು, ಇದು ವಿಧಾನಸಭೆಯಲ್ಲಿಯೂ ಮಾರ್ದನಿಸುವ ಎಲ್ಲಾ ಸಾಧ್ಯತೆಗಳೂ ಇವೆ. ಈಗಾಗಲೇ, ಕಾಂಗ್ರೆಸ್ ಪಕ್ಷದ ಮುಖಂಡರು ಸರ್ಕಾರಕ್ಕೆ ಪತ್ರ ಬರೆದರೂ ಅದಕ್ಕೆ ಉತ್ತರ ನೀಡುವ ಗೋಜಿಗೆ ಹೋಗದ ಸಚಿವರು, ಯಾವುದೇ ರೀತಿಯ ಅವ್ಯವಹಾರ ನಡೆದೇ ಇಲ್ಲ ಎಂದು ಉತ್ತರ ನೀಡಿದ್ದಾರೆ. ಆದರೆ, ಈ ಕುರಿತಾಗಿ ಉತ್ತರ ಪಡೆದೇ ತೀರುತ್ತೇವೆ ಎಂಬ ಹಠ ಕಾಂಗ್ರೆಸ್ ಮುಖಂಡರದ್ದು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ಬಾರಿಯ ಅಧಿವೇಶನದಲ್ಲಿ, ಕೋವಿಡ್ ನಿರ್ವಹಣೆಯ ವಿಚಾರವಂತೂ ಸುದ್ದಿ ಮಾಡುವುದು ಖಚಿತ. ಅದರೊಂದಿಗೆ, ರಾಜ್ಯ ಎದುರಿಸುತ್ತಿರುವ ಆರ್ಥಿಕ ಮುಗ್ಗಟ್ಟಿನ ಕುರಿತಾಗಿಯೂ ವಿಸ್ತೃತವಾದ ಚರ್ಚೆ ನಡೆಯಬೇಕಾಗಿದೆ. ಈಗಾಗಲೇ, ಕೇಂದ್ರದಿಂದ ರಾಜ್ಯಗಳಿಗೆ ಹೆಚ್ಚಿನ ಜಿಎಸ್‌ಟಿ ಪಾಲು ದೊರೆಯುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮನ್, ರಾಜ್ಯಗಳಿಗೆ ಸಾಲ ನೀಡಲು ಶಿಫಾರಸ್ಸು ಮಾಡುವುದಾಗಿ ಹೇಳಿದ್ದಾರೆ. ಆದರೆ, ಈಗಾಗಲೇ ಸಾಕಷ್ಟು ಸಾಲದ ಹೊರೆ ಹೊರುತ್ತಿರುವ ರಾಜ್ಯ ಮತ್ತಷ್ಟು ಸಾಲ ಮಾಡಲು ಮುಂದಾಗುತ್ತಾರೆಯೇ? ಅಥವಾ ಬೇರೆ ಯಾವುದಾದರೂ ಮೂಲಗಳಿಂದ ಹಣ ಸಂಗ್ರಹಿಸುವ ದಾರಿ ಹುಡುಕುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.
ಆರ್ಥಿಕ ಮುಗ್ಗಟ್ಟು ಎದುರಿಸಲು ಈಗಾಗಲೇ ಸರ್ಕಾರ ಜಾರಿಗೆ ತಂದಿರುವ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಯೂ ಕೂಡಾ ಸಾಕಷ್ಟು ಸದ್ದು ಮಾಡುವ ಸೂಚನೆಯಿದೆ. ಈಗಾಗಲೇ, ರಾಜ್ಯಾದ್ಯಾಂತ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ ವಿರುದ್ದ ʼನಮ್ಮ ಭೂಮಿ ನಮಗಿರಲಿ, ಅನ್ಯರಿಗಲ್ಲʼ ಅಭಿಯಾನ ಆರಂಭವಾಗಿದ್ದು, ಇದರ ಕುರಿತು ವಿರೋಧ ಪಕ್ಷಗಳು ಕೂಡಾ ದನಿ ಎತ್ತುವ ನಿರೀಕ್ಷೆಯಿದೆ. ಬೆಂಗಳೂರಿನಲ್ಲಿ ನಡೆದ ಗಲಭೆ, ಕೊಡಗು ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಉಂಟಾಗಿದ್ದ ನೆರೆ ಪರಿಸ್ಥಿತಿ ಕುರಿತು ಕೂಡಾ ಚರ್ಚೆಯಾಗಬೇಕಾದ ಅಗತ್ಯವಿದೆ.
ಈ ಬಾರಿಯ ಹತ್ತು ದಿನಗಳ ಕಲಾಪದಲ್ಲಿ ವಾರಾಂತ್ಯವೂ ಕಲಾಪ ನಡೆಸುವ ಸಂಭವವಿದೆ. ಏಕೆಂದರೆ, ಬಹಳಷ್ಟು ವಿಚಾರಗಳು ಹಾಗೂ ಮಸೂದೆಗಳ ಕುರಿತು ಚರ್ಚೆ ನಡೆಸುವ ಅಗತ್ಯವಿರುವಾಗ, ವಾರಾಂತ್ಯದ ರಜೆ ನೀಡಿದರೆ, ಇರುವ ಹತ್ತು ದಿನಗಳಲ್ಲಿ ಎರಡು ದಿನ ಸುಖಾಸುಮ್ಮನೆ ವ್ಯಯವಾಗುತ್ತವೆ. ಹಾಗಾಗಿ ಈ ಬಾರಿ ಶನಿವಾರ ಮತ್ತು ಭಾನುವಾರವೂ ಅಧಿವೇಶನ ನಡೆಸಬೇಕು ಎಂಬುದು ವಿಪಕ್ಷ ನಾಯಕರ ಆಗ್ರಹವೂ ಆಗಿದೆ.
ಈ ಕುರಿತಾಗ ಮಾತನಾಡಿರುವ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಜೆ ಸಿ ಮಾಧುಸ್ವಾಮಿ, ಈ ಬಾರಿ ಚರ್ಚೆಗೆ ಬರಲಿರುವ 30 ಮಸೂದೆಗಳಲ್ಲಿ 18-20 ಸುಗ್ರೀವಾಜ್ಞೆಗಳು ಇರಲಿವೆ. ಇವುಗಳ ಕುರಿತು ಹೆಚ್ಚಿನ ಚರ್ಚೆಯ ಅಗತ್ಯವಿಲ್ಲ. “ಹೆಚ್ಚಿನ ಮಸೂದೆಗಳು ಸಣ್ಣ-ಪುಟ್ಟ ಮಸೂದೆಗಳಾಗಿವೆ. ಇವುಗಳ ಕುರಿತು ಹೆಚ್ಚಿನ ಚರ್ಚೆ ನಡೆಸುವ ಅಗತ್ಯವಿರುವುದಿಲ್ಲ. ನಾಲ್ಕೈದು ಮಸೂದೆಗಳು, ಅಂದರೆ, ಎಪಿಎಂಸಿ ಕಾಯ್ದೆ ತಿದ್ದುಪಡಿ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಹಾಗೂ ಕಾರ್ಮಿಕ ಕಾಯ್ದೆ ತಿದ್ದುಪಡಿಯಂತಹ ಮಸೂದೆಗಳು ವಿಸ್ತೃತವಾಗಿ ಚರ್ಚೆಯಾಗಲಿವೆ,” ಎಂದು ʼಟೈಮ್ಸ್ ಆಫ್ ಇಂಡಿಯಾʼಗೆ ನೀಡಿರುವ ಹೇಳಿಕೆಯಲ್ಲಿ ಹೇಳಿದ್ದಾರೆ.
ಒಟ್ಟಿನಲ್ಲಿ, ಈ ಬಾರಿಯ ಅಧಿವೇಶನ ಸಾಕಷ್ಟು ಕುತೂಹಲಭರಿತವಾಗಿರುವುದಂತೂ ನಿಜ. ಬೇಸಿಗೆ ಕಾಲದ ಅಧಿವೇಶನವು ಕೋವಿಡ್ ಕಾರಣದಿಂದಾಗಿ ಮೊಟಕುಗೊಂಡ ನಂತರ, ಸಾಕಷ್ಟು ಬೆಳವಣಿಗೆಗಳು ನಡೆದಿದ್ದು ಅವುಗಳ ಕುರಿತು ಕಾವೇರಿದ ಚರ್ಚೆಗಲು ನಡೆಯುವಂತಹ ಸಂಭವವಿದೆ. ಇದರೊಂದಿಗೆ, ರಾಜ್ಯದ ರೈತ ಹಾಗೂ ಕಾರ್ಮಿಕರ ಹಿತ ಕಾಪಾಡುವಂತಹ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಹಾಗೂ ಕಾರ್ಮಿಕ ಕಾಯ್ದೆ ತಿದ್ದುಪಡಿಗಳ ಕುರಿತು ಕೂಲಂಕುಷವಾಗಿ ಚರ್ಚೆ ನಡೆದಲ್ಲಿ ಮಾತ್ರ ಈ ಬಾರಿಯ ವಿಧಾನಸಭೆ ಅಧಿವೇಶನ ಸಾರ್ಥಕತೆ ಕಾಣುವುದು.