ಗಣಿಧಣಿ ಗಾಲಿ ಜನಾರ್ಧನ ರೆಡ್ಡಿ ಅವರಿಗೆ ರಾಜಕೀಯ ಪುನರ್ಜನ್ಮ ಲಭಿಸುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ. ಕೋರ್ಟ್ ಆದೇಶದಂತೆ ಮೂರು ಜಿಲ್ಲೆಗಳಿಗೆ ಜನಾರ್ಧನ ರೆಡ್ಡಿ ಕಾಲಿಡುವಂತಿರಲಿಲ್ಲ. ಆಂಧ್ರ ಪ್ರದೇಶದಲ್ಲಿರುವ ಕಡಪ, ಅನಂತಪುರ ಹಾಗೂ ಕರ್ನಾಟಕದ ಬಳ್ಳಾರಿ. ಈಗ ವಿಜಯನಗರ ಜಿಲ್ಲೆ ಹೊಸದಾಗಿ ರೂಪುಗೊಂಡಿದ್ದು, ಜನಾರ್ಧನ ರೆಡ್ಡಿ ಅವರ ರಾಜಕೀಯ ಭವಿಷ್ಯದಲ್ಲಿಯೂ ಹೊಸ ಮುನ್ನುಡಿ ಬರೆಯುವ ಸಾಧ್ಯತೆಗಳಿವೆ.
ಹೊಸ ಜಿಲ್ಲೆಯಾಗಿ ಇತ್ತೀಚಿಗೆ ರೂಪುಗೊಂಡಿರುವ ವಿಜಯನಗರಕ್ಕೆ ಜನಾರ್ಧನ ರೆಡ್ಡಿ ಭೇಟಿ ನೀಡಬಹುದೇ ಎಂಬ ಕುರಿತು ಭಾರೀ ಚರ್ಚೆಗಳು ನಡೆಯುತ್ತಿವೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ 2011ರಲ್ಲಿ ಜೈಲು ಪಾಲಾಗಿದ್ದ ರೆಡ್ಡಿ, ನಂತರದ ನಾಲ್ಕು ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದರು. 2015ರಲ್ಲಿ ಜಾಮೀನಿನ ಬಿಡುಗಡೆಯಾಗಿದ್ದರು. ಈಗ ವಿಜಯನಗರ ಬಳ್ಳಾರಿಯಿಂದ ವಿಭಜನೆಗೊಂಡ ನಂತರ ವಿಜಯನಗರದಲ್ಲಿ ತಮ್ಮ ರಾಜಕೀಯ ಪಯಣ ಮುಂದುವರೆಸಲು ಯಾವುದೇ ಕಾನೂನಿನ ತೊಡಕುಗಳಿರುವುದಿಲ್ಲ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಹೊಸಪೇಟೆಯಲ್ಲಿ ತಮ್ಮ ವಹಿವಾಟುಗಳನ್ನು ಹೊಂದಿರುವ ಜನಾರ್ಧನ ರೆಡ್ಡಿ ಅವರು ಇಲ್ಲಿಯವರೆಗೆ ಹೊಸಪೇಟೆಯ ಅತೀ ಹತ್ತಿರದ ಜಿಲ್ಲಾ ಕೇಂದ್ರವಾಗಿದ್ದ ಚಿತ್ರದುರ್ಗಕ್ಕೆ ಭೇಟಿ ನೀಡುತ್ತಿದ್ದರು. ಈಗ ಹೊಸಪೇಟೆ ವಿಜಯನಗರ ಜಿಲ್ಲೆಯ ನೂತನ ಕೇಂದ್ರವಾಗಿ ಘೋಷಿಸಲಾಗಿದೆ. ಹೀಗಾಗಿ ಖುದ್ದು ಹೊಸಪೇಟೆಗೆ ಭೇಟಿ ನೀಡುವ ಅವಕಾಶ ಜನಾರ್ಧನ ರೆಡ್ಡಿ ಅವರಿಗೆ ಲಭಿಸಲಿದೆ.
ಈ ಕುರಿತಾಗಿ ಪ್ರತಿಧ್ವನಿಯೊಂದಿಗೆ ಮಾತನಾಡಿರುವ ಹಿರಿಯ ಸಾಮಾಜಿಕ ಹೋರಾಟಗಾರರಾದ ಬಸವರಾಜ ಸೂಲಿಭಾವಿ ಅವರು, ವಿಜಯನಗರಕ್ಕೆ ಜನಾರ್ಧನ ರೆಡ್ಡಿ ಪ್ರವೇಶ ಪಡೆದರೆ ಅದು ಅಖಂಡ ಬಳ್ಳಾರಿಯ ಹಿತಾಸಕ್ತಿಗೆ ಧಕ್ಕೆ ಉಂಟಾಗಲಿದೆ. ತಾಂತ್ರಿಕವಾಗಿ ನ್ಯಾಯಾಲಯದ ಆದೇಶ ಅವರಿಗೆ ಅನುಕೂಲ ಆಗುವ ರೀತಿಯಲ್ಲಿಯೇ ಇದೆ. ಆದರೆ, ಇದರ ವಿರುದ್ದ ಸಾರ್ವಜನಿಕರೇ ನ್ಯಾಯಾಲಯಕ್ಕೆ ಅರ್ಜಿಯನ್ನು ಹಾಕಬೇಕು.
“ಈ ಹಿಂದೆ ದೂರ ನಿಂತು ನಡೆಸುತ್ತಿದ್ದಂತಹ ವ್ಯವಹಾರಗಳು ಇನ್ನು ಮುಂದೆ ಹತ್ತಿರದಿಂದಲೇ ನಡೆಸುವ ಸಾಧ್ಯತೆಯಿದೆ. ಅವರು ವಿಜಯನಗರ ಜಿಲ್ಲೆಗೆ ಬಂದಲ್ಲಿ, ಈ ಹಿಂದೆ ನಡೆಯುತ್ತಿದ್ದಂತಹ ಅಕ್ರಮ ಗಣಿಗಾರಿಕೆ ಹಾಗೂ ಇತರ ಚಟುವಟಿಕೆಗಳು ಇನ್ನಷ್ಟು ತೀವ್ರಗೊಳ್ಳಲಿವೆ,” ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಅಕ್ರಮ ಗಣಿಗಾರಿಕೆಯ ವಿರುದ್ದ ನಿರಂತರವಾಗಿ ಹೋರಾಟ ನಡೆಸಿದ್ದ ಸಾಮಾಜಿಕ ಹಾಗೂ ರಾಜಕೀಯ ಕಾರ್ಯಕರ್ತ ಎಸ್ ಆರ್ ಹಿರೇಮಠ್ ಅವರು, ಸುಪ್ರೀಂಕೋರ್ಟ್ ಆದೇಶ ವಿಜಯನಗರ ಸೇರಿದಂತೆ ಸಂಪೂರ್ಣ ಬಳ್ಳಾರಿಗೆ ನೀಡಲಾದಂತಹ ಆದೇಶ. ಅವರು ಅಕ್ರಮ ಗಣಿಕಾರಿಕೆಯಲ್ಲಿ ತೊಡಗಬಾರದು ಎಂಬ ಉದ್ದೇಶವನ್ನು ಇಟ್ಟುಕೊಂಡು ನಾವು ಹೋರಾಟ ಮಾಡಿದ್ದೆವು ಎಂದಿದ್ದಾರೆ.

“ಈ ವಿಚಾರವನ್ನು ಹಿರಿಯ ವಕೀಲರಾದ ಪ್ರಶಾಂತ್ ಭೂಷಣ್ ಅವರೊಂದಿಗೆ ಚರ್ಚಿಸುತ್ತೇವೆ. ಕೋರ್ಟ್ ಆದೇಶವನ್ನು ಮತ್ತೆ ಪರಿಶೀಲಿಸುತ್ತೇವೆ. ಅಗತ್ಯ ಬಿದ್ದಲ್ಲಿ ಮತ್ತೆ ಸುಪ್ರಿಂಕೋರ್ಟ್ ಕದ ತಟ್ಟಲಾಗುವುದು,” ಎಂದು ಅವರು ಪ್ರತಿಧ್ವನಿಯೊಂದಿಗೆ ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಒಟ್ಟಿನಲ್ಲಿ ಜನಾರ್ಧನ ರೆಡ್ಡಿ ಅವರು ಮತ್ತೆ ರಾಜಕೀಯಕ್ಕೆ ಪ್ರವೇಶ ಪಡೆಯುವ ಕನಸು ನನಸಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಅವರ ರಾಜಕೀಯ ಮರುಪ್ರವೇಶವನ್ನು ವಿರೋಧಿಸುತ್ತಿರುವ ಸಾಮಾಜಿಕ ಹೋರಾಟಗಾರರು ಮುಂದೆ ಯಾವ ರೀತಿ ತಮ್ಮ ಯೋಜನೆಗಳನ್ನು ರೂಪಿಸಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.