ಕೆ.ಎಸ್.ಎಲ್.ಸ್ವಾಮಿ (ರವೀ) ನಿರ್ದೇಶನ ಮತ್ತು ನಿರ್ಮಾಣದ `ಮಿಥಿಲೆಯ ಸೀತೆಯರು’ ಸಿನಿಮಾ ಶೂಟಿಂಗ್ ಸಂದರ್ಭ. ನಾನು ಚಿತ್ರದ ಸಹನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದೆ. ಚಿತ್ರದಲ್ಲಿ ಶಂಕರ್ ನಾಗ್ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಅತಿಥಿ ಪಾತ್ರವೊಂದರಲ್ಲಿ ನಟಿಸಬೇಕಿತ್ತು. ಬೆಂಗಳೂರಿನ ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಶೂಟಿಂಗ್. ಶಂಕರ್ ನಾಗ್ ದೂರದ ಊರಿನಲ್ಲಿ ಮತ್ತೊಂದು ಚಿತ್ರೀಕರಣ ಮುಗಿಸಿಕೊಂಡು ಫ್ಲೈಟ್‌ನಿಂದ ಇಳಿದವರು ನೇರವಾಗಿ `ಮಿಥಿಲೆಯ ಸೀತೆಯರು’ ಸೆಟ್ಗೆ ಬಂದಿದ್ದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಮನೆಗೆ ಹೋದರೆ ಅರ್ಧ ದಿನ ವ್ಯಯವಾಗಿ ನಿರ್ಮಾಪಕರಿಗೆ ತೊಂದರೆಯಾಗುತ್ತದೆ ಎನ್ನುವ ಕಾಳಜಿ ಅವರದು. ಆದರೆ ಇಲ್ಲೊಂದು ಸಮಸ್ಯೆಯಿತ್ತು. ಪೋಲೀಸ್ ಅಧಿಕಾರಿಯಾದ್ದರಿಂದ ಅವರು ಗಡ್ಡ ತೆಗೆಯಲೇಬೇಕಿತ್ತು! ಏನು ಮಾಡಬೇಕೆಂದು ನಾವು ಚಿಂತಿಸುತ್ತಿರುವಾಗ, ಅವರೇ ಇದಕ್ಕೊಂದು ಐಡಿಯಾ ಸೂಚಿಸಿದರು. ಮೊದಲು ಯೋಜಿಸಿದಂತೆ ಪೊಲೀಸ್ ಸಮವಸ್ತ್ರದ ಮೇಲಿನ ಬಿಲ್ಲೆಯಲ್ಲಿ `ಕೆ.ಎಸ್.ಶಂಕರ್’ ಎನ್ನುವ ಇಂಗ್ಲಿಷ್ ಹೆಸರಿತ್ತು. ಶಂಕರ್ ನಾಗ್ ಅದನ್ನು `ಕೆ.ಎಸ್.ಷರೀಫ್’ ಎಂದು ತಿದ್ದಿಬಿಟ್ಟರು! ಅಲ್ಲಿಗೆ ಗಡ್ಡದ ಸಮಸ್ಯೆ ಬಗೆಹರಿಯಿತು.

ಪೆಟ್ರೋಲ್ ಬಂಕ್ ಬಳಿ ಶೂಟಿಂಗ್ ವೀಕ್ಷಿಸಲೆಂದು ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದರು. ಅಲ್ಲಿ ಅಕ್ಕಪಕ್ಕದಲ್ಲಿ ನಮಗೆ ಗೊತ್ತಿರುವ ಮನೆಗಳೂ ಇರಲಿಲ್ಲ. ಪೊಲೀಸ್ ಸಮವಸ್ತ್ರ ಧರಿಸಿ ಶಂಕರ್ ಶಾಟ್‌ಗೆ ಸಜ್ಜಾಗಬೇಕಿತ್ತು. ನಾವು ಎಲ್ಲಾದರೂ ಜಾಗ ಸಿಕ್ಕೀತೆಂದು ಹುಡುಕುತ್ತಿದ್ದರೆ, ಶಂಕರ್ ಸಹಾಯಕರನ್ನು ಕೂಗಿದರು. ಪಂಚೆಯೊಂದನ್ನು ಅಡ್ಡ ಹಿಡಿದುಕೊಳ್ಳುವಂತೆ ಅವರಿಗೆ ಹೇಳಿ ಅಲ್ಲೇ ಒಂದು ಮೂಲೆಯಲ್ಲಿ ಬಟ್ಟೆ ಬದಲಿಸಿಕೊಂಡರು!

ಪೊಲೀಸ್ ಅಧಿಕಾರಿಗೆ ನಿರ್ದೇಶಕರು ಜೀಪಿನ ವ್ಯವಸ್ಥೆಯನ್ನೇನೋ ಮಾಡಿದ್ದರು. ಕಾರಣಾಂತರಗಳಿಂದ ಜೀಪು ಕೂಡ ಬಂದಿರಲಿಲ್ಲ. ಕೊನೆಗೆ ಬುಲೆಟ್ ತರಿಸಲು ಅವರಿವರಲ್ಲಿ ವಿಚಾರಿಸತೊಡಗಿದಾಗ, ಅಲ್ಲಿಗೆ ಶಂಕರ್ ಬಂದರು. `ಪೊಲೀಸ್ ಅಧಿಕಾರಿ ಜೀಪು, ಬುಲೆಟಿನಲ್ಲೇ ಆಕಸ್ಮಿಕ ನಡೆದ ಘಟನೆಗೆ ಬರಬೇಕೆಂದೇನೂ ಇಲ್ಲ. ಯಾವುದಾದರೂ ಗಾಡಿ ಅಡ್ಜೆಸ್ಟ್ ಮಾಡೋಣ ಬಿಡಿ’ ಎಂದರು. ಆಗ ನನ್ನಲ್ಲೊಂದು ಕೆಂಪು ಕಲರ್ ರಾಜ್ದೂತ್ ಬೈಕ್ ಇತ್ತು. ಶಂಕರ್ ಅದನ್ನೇ ಬಳಕೆ ಮಾಡಿದರು. ಹೀಗೆ, ಅವರು ಸಮಯ ವ್ಯರ್ಥ ಮಾಡದೆ ತತ್‌ಕ್ಷಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ಸ್ವತಃ ನಿರ್ಮಾಪಕರೂ ಆದ್ದರಿಂದ ಅವರಿಗೆ ನಿರ್ಮಾಣದ ಸಂಕಷ್ಟಗಳು, ಸಮಯದ ಬೆಲೆಯ ಅರಿವಿತ್ತು.
ಚಿತ್ರ ಕೃಪೆ: ಪ್ರಗತಿ ಅಶ್ವಥ್ ನಾರಾಯಣ
Also Read: ಕನ್ನಡದಲ್ಲಿ ‘ಮಾಲ್ಗುಡಿ ಡೇಸ್‘; ಮುಖ್ಯವಾಹಿನಿಗೆ ಡಬ್ಬಿಂಗ್
Also Read: ‘ಮಾಲ್ಗುಡಿ’ ಎಂಬ ಕಾಲ್ಪನಿಕ ಹಳ್ಳಿಯಲ್ಲಿ ಬರಲಿದೆ ಮ್ಯೂಸಿಯಂ






