ಪ್ರಪಂಚದ ಬಹುತೇಕ ದೇಶಗಳನ್ನು ಭಾದಿಸಿದ ಕೊರೋನಾವು ಪ್ರತಿ ದೇಶದ ಆರ್ಥಿಕತೆಯ ಮೇಲೆ, ಜನಜೀವನದ ಮೇಲೆ, ಬದುಕಿನ ಮೇಲೆ ಬೀರಿದ ಪ್ರಭಾವ ಅಷ್ಟಿಷ್ಟಲ್ಲ. ಈ ಆರ್ಥಿಕ ಕುಸಿತವನ್ನು ಸರಿದೂಗಿಸಲು ಅಮೆರಿಕದಂತಹ ಮುಂದುವರಿದ ದೇಶಕ್ಕೆ ಕನಿಷ್ಠ ಒಂದು ದಶಕ ಬೇಕು. ಇನ್ನು ಅಸಮರ್ಪಕ ನಿರ್ವಹಣೆ, ಅವೈಜ್ಞಾನಿಕ ಲಾಕ್ಡೌನ್ನಿಂದಾಗಿ ಭಾರತದ ಆರ್ಥಿಕತೆ ಕುಸಿತದ ಗೆರೆದಾಟಿ ಹಿಂಜರಿತದತ್ತ ದಾಪುಗಾಲು ಹಾಕುತ್ತಿದೆ. ಜಿಡಿಪಿ ಶೇಕಡಾ ಐದಕ್ಕೆ ಕುಸಿದಿದೆ, ಪ್ರಾತಿನಿಧಿಕ ಜಿಡಿಪಿಯು ಕಳೆದ ಹದಿನೈದು ವರ್ಷಗಳಲ್ಲಿ ಕನಿಷ್ಠ ಮಟ್ಟಕ್ಕೆ ಇಳಿದಿದೆ. 2020ರಲ್ಲಿ ಸುಮಾರು ನಾಲ್ಕು ಕೋಟಿ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಲಕ್ಷಾಂತರ ಜನರು ವೇತನ ಪಡೆದುಕೊಂಡಿಲ್ಲ. ಹೋಟೆಲ್ಗಳು ನಷ್ಟ ಅನುಭವಿಸುತ್ತಿವೆ. ಜನರ ಖರೀದಿ ಸಾಮರ್ಥ್ಯ ಇಳಿದಿದೆ. ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಜನರಲ್ಲಿ ಜಾಗೃತಿ ಮೂಡಿಸಿದ ಆಶಾ ಕಾರ್ಯಕರ್ತರ, ಅಂಗನವಾಡಿ ಸಿಬ್ಬಂದಿಗಳ ವೇತನವನ್ನೇ ಇನ್ನೂ ಪಾವತಿ ಮಾಡಿಲ್ಲ.
ಕರೋನಾ ಸಮರದಲ್ಲಿ ಹೋರಾಡುತ್ತಿರುವ ಸರ್ಕಾರಿ ವೈದ್ಯರು, ಸಿಬ್ಬಂದಿಗಳು ಬೇತನ ದೊರಕಿಲ್ಲವೆಂದು ಧರಣಿ ಕೂರುತ್ತಿದ್ದಾರೆ. ರೋಗಿಗಳು ಸಕಾಲದಲ್ಲಿ ವೆಂಟಿಲೇಟರ್ ಸಿಗದೆ, ವಾರ್ಡ್ ಸಿಗದೆ, ಆಸ್ಪತ್ರೆಯಿಂದ ಆಸ್ಪತ್ರೆಗೆ ಎಡತಾಕುತ್ತಿದ್ದಾರೆ. ಕರೊನಾ ನಿರ್ವಹಣೆಗಾಗಿ ಬೊಕ್ಕಸದಲ್ಲಿ ಹಣವಿಲ್ಲವೆಂದು ಪಿಎಂ ಕೇರ್ಸ್ ಸ್ಥಾಪಿಸಿದ ನರೇಂದ್ರ ಮೋದಿಯವರು ಜನತೆಯಿಂದ ಅಪಾರ ದೇಣಿಗೆ ಕೇಳಿದ್ದರು. ಅದರ ಲೆಕ್ಕ ಪತ್ರವೇ ಇನ್ನೂ ಬಿಡುಗಡೆಯಾಗಿಲ್ಲ. ವಿಪತ್ತಿನ ಸಂದರ್ಭದಲ್ಲೂ ಈ ಸರ್ಕಾರ ದೇಣಿಗೆ ಬಯಸಿತ್ತು ಅಂದರೆ ಬೊಕ್ಕಸದಲ್ಲಿ ಹಣದ ಕೊರತೆ ಇರಲೇಬೇಕು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿರುವ ಹೆಚ್ಚುವರಿ ಮೀಸಲು ಲಾಂಭಾಶದಲ್ಲಿ 1.70 ಲಕ್ಷ ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ಈಗಾಗಲೇ ತನ್ನ ಬೊಕ್ಕಸಕ್ಕೆ ಪಡೆದಿದೆ. ದೇಶದ ಆರ್ಥಿಕ ಚೇತರಿಕೆಗೆ ಈ ಮೊತ್ತ ಬಳಸಲಾಗುತ್ತದೆ ಎಂದು ವಿತ್ತ ಸಚಿವೆ ಹೇಳಿಕೆ ನೀಡಿದ್ದಾರೆ. ಆದರೆ ಅದು ಎಷ್ಟು ಕಾರ್ಯ ಸಾಧ್ಯ, ಎಷ್ಟು ಕಾರ್ಯರೂಪಕ್ಕೆ ಬಂದಿದೆ ಎಂದು ಕೇಳಿದರೆ ಸರ್ಕಾರದ ಬಳಿಯೇ ಉತ್ತರವಿಲ್ಲ.
ಇನ್ನು ರಾಜ್ಯಗಳಿಗೆ ಸಕಾಲದಲ್ಲಿ ಹಂಚುತ್ತೇವೆ ಎಂದು ಸಂಗ್ರಹಿಸಿದ ಜಿ.ಎಸ್.ಟಿಯ ಕಥೆಯೇ ಬೇರೆ. “ರಾಜ್ಯಗಳಿಗೆ ಕೊಡಬೇಕಾಗಿರುವ ಜಿಎಸ್ ಟಿ ಪಾಲು 2.35 ಲಕ್ಷ ಕೋಟಿ ಹಣವನ್ನು ನೀಡಲು ಕೇಂದ್ರಕ್ಕೆ ಸಾಧ್ಯವಿಲ್ಲ. ಆ ಹಿನ್ನೆಲೆಯಲ್ಲಿ ರಾಜ್ಯಗಳು ತಮ್ಮ ಖರ್ಚುವೆಚ್ಚ ನಿಭಾಯಿಸಲು ಆದಾಯ ಕ್ರೋಡೀಕರಣಕ್ಕೆ ಕೇಂದ್ರ ಎರಡು ಆಯ್ಕೆಗಳನ್ನು ನೀಡುತ್ತಿದೆ. ಒಂದು ಜಿಎಸ್ ಟಿ ಪಾಲು ಒಟ್ಟು ಮೊತ್ತದ ಪೈಕಿ 97 ಸಾವಿರ ಕೋಟಿ ರೂ.ಗಳನ್ನು ಆರ್ ಬಿಐ ಸಹಮತದೊಂದಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಬಹುದು. ಮತ್ತೊಂದು ಆಯ್ಕೆ; ಬಾಕಿ ಇರುವ ಸಂಪೂರ್ಣ 2.35 ಲಕ್ಷ ಕೋಟಿ ರೂ.ವನ್ನು ವಿಶೇಷ ವ್ಯವಸ್ಥೆಯಡಿ ಸಾಲ ಪಡೆಯುವುದು” ಎಂದು ಸ್ವತಃ ವಿತ್ತ ಸಚಿವರೇ ಹೇಳಿಕೆ ನೀಡಿದ್ದರು. ಈಗಾಗಲೇ ಕರೋನಾ ನೆಪದಲ್ಲಿ ದೇಶದ ಎಲ್ಲಾ ಸಂಸದರಿಂದ ಸಂಸದರ ನಿಧಿಯನ್ನು ‘ಪಿ.ಎಂ ಕೇರ್ಸ್’ ಗೆ ಪಡೆದುಕೊಂಡಿದ್ದ ಪ್ರಧಾನಿ ಜಿ.ಎಸ್.ಟಿಯ ಪಾಲನ್ನು ರಾಜ್ಯ ಸರ್ಕಾರಗಳಿಗೆ ನೀಡದೆ ವಂಚಿಸಿದ್ದರು. ಬಿಜೆಪಿಯೇತರ ಸರ್ಕಾರ ಇರುವ ರಾಜ್ಯಗಳು ಕೇರಳದ ಹಣಕಾಸು ಮಂತ್ರಿಯ ನೇತೃತ್ವದಲ್ಲಿ ಪ್ರತಿಭಟನೆಗೆ ಸಿದ್ಧತೆಯನ್ನೂ ಮಾಡಿದ್ದರು.
ಇನ್ನು ಕಳೆದ ಎಪ್ಪತ್ತು ವರ್ಷಗಳಲ್ಲಿ ಅತಿ ಹೆಚ್ಚು ಚಳಿ ಇರುವ ಈ ನವೆಂಬರ್ ಡಿಸೆಂಬರ್ನಲ್ಲೂ ಈ ದೇಶದ ರೈತರು ತಮ್ಮ ಹಕ್ಕಿಗಾಗಿ ಹೋರಾಡುತ್ತಾ ಪ್ರತಿಭಟನೆ ಮಾಡುತ್ತಿದ್ದಾರೆ. ದೆಹಲಿಯ, ಹರ್ಯಾಣಾದ, ಪಂಜಾಬಿನ ಗಡಿಗಳಿಂದ ಪ್ರತಿದಿನ ತೀವ್ರ ಅಸ್ವಸ್ಥರಾಗಿರುವ ಪ್ರತಿಭಟನಾ ನಿರತರ ವರದಿಗಳು ಬರುತ್ತಲೇ ಇವೆ. ಸರ್ಕಾರ ರೈತರ ಅಳಲನ್ನು ಕೇಳಲು, ಅವರ ಬೇಡಿಕೆಗಳನ್ನು ಆಲಿಸಲು ಇನ್ನೂ ಪ್ರಾಮಾಣಿಕ ಪ್ರಯತ್ನ ಮಾಡಿಯೇ ಇಲ್ಲ.ಈ ದೇಶದ ಅತ್ಯಂತ ದೊಡ್ಡ ವೃತ್ತಿ ಸಮುದಾಯವೊಂದು ಸಂಕಷ್ಟದಲ್ಲಿರುವಾಗ ಕನಿಷ್ಠ ಅವರ ನೋವನ್ನು ಕೇಳಿಸಿಕೊಳ್ಳಬೇಕು ಎನ್ನುವ ಕರ್ತವ್ಯ ಪ್ರಜ್ಞೆಯೂ ಸರ್ಕಾರಕ್ಕಿಲ್ಲ.
ಇನ್ನು ಲಾಕ್ಡೌನ್ ಕಾಲದಲ್ಲಿ ಕಾಲ್ನಡಿಗೆಯಲ್ಲಿ ಊರು ತಲುಪಿದವರ, ಮಧ್ಯೆ ಪ್ರಾಣ ಕಳೆದುಕೊಂಡವರ, ತೀವ್ರ ಅಸ್ವಸ್ಥರಾದವರ, ಪೊಲೀಸ್ ದೌರ್ಜನ್ಯಕ್ಕೆ ಒಳಗಾದವರ, ಅಸಂಘಟಿತ ಕಾರ್ಮಿಕರ, ಶ್ರಮಜೀವಿಗಳ ಸಂಖ್ಯೆಯೇ ಸರ್ಕಾರದ ಬಳಿ ಲಭ್ಯವಿಲ್ಲ. ಸ್ವತಂತ್ರ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯ ಪ್ರಕಾರ ಮಾರ್ಚ್ 19ರಿಂದ ಜುಲೈ4ರ ವರೆಗೆ ಸಾವಿರಕ್ಕಿಂತಲು ಹೆಚ್ಚಿನ ವಲಸೆ ಕಾರ್ಮಿಕರು ತಮ್ಮ ಪ್ರಯಾಣದ ಮಧ್ಯೆ ಪ್ರಾಣ ಕಳೆದುಕೊಂಡಿದ್ದಾರೆ.
ಇಂತಹ ಅತೀವ ಬಿಕ್ಕಟ್ಟಿನ ಸಮಯದಲ್ಲಿ ಸರ್ಕಾರ 971 ಕೋಟಿ ಖರ್ಚು ಮಾಡಿ ಹೊಸ ಸಂಸತ್ ಭವನ ನಿರ್ಮಿಸಲು ಹೊರಟದ್ದು ಯಾವ ಪುರುಷಾರ್ಥಕ್ಕೆ? ಯಾರನ್ನು ಮೆಚ್ಚಿಸಲು? ಈ ಸರ್ಕಾರದ ಆದ್ಯತೆಗಳೇನು? ಈ ದೇಶದ ಬಡವನಿಗೊಂದು ಸೂರನ್ನೂ ಕಲ್ಪಿಸಲು ಸಾಧ್ಯವಿಲ್ಲದ, ಉಚಿತ ಚಿಕಿತ್ಸೆ ನೀಡಲು ಹಣವಿಲ್ಲವೆನ್ನುವ ಸರ್ಕಾರಕ್ಕೆ ಈ ಆಡಂಬರ ಯಾಕೆ? ರೈತರ ಸಮಸ್ಯೆಗಳು, ಕೆಲಸ ಕಳೆದುಕೊಂಡ ಮಧ್ಯಮ ವರ್ಗದ ಗೋಳು, ವಲಸೆ ಕಾರ್ಮಿಕರ ಹಸಿವು, ನಿರುದ್ಯೋಗ, ಹೀಗೆ ಹತ್ತು ಹಲವು ಸಮಸ್ಯೆಗಳು ಹಾಸಿ ಹೊದೆಯುವಷ್ಟಿರುವಾಗ ಸರ್ಕಾರ ಮತದಾರರ ಗಮನವನ್ನು ಬೇರೆಡೆ ಸೆಳೆಯಲು ಹೊಸ ಸಂಸತ್ ಭವನದ ನಿರ್ಮಾಣ ಎನ್ನುವ ಯೋಜನೆ ರೂಪಿಸಿದೆ. ಪ್ರಧಾನಿ ಮತ್ತು ಪ್ರಧಾನಿ ಕಾರ್ಯಾಲಯದ ಸಲಹೆಗಾರರು ನಿಜದ ಸಮಸ್ಯೆಗಳ ಬಗ್ಗೆ ಇಷ್ಟೊಂದು ಅಸೂಕ್ಷ್ಮರಾಗುವುದು ಇದೇ ಮೊದಲ ಬಾರಿಯೇನೋ.
ಕೋವಿಡ್ ಮುಕ್ತ ಅಥವಾ ಕೋವಿಡ್ನೊಂದಿಗಿನ 2021ಕ್ಕೆ ಸರ್ಕಾರದ ಬಳಿ ಇರುವ ಕಾರ್ಯಯೋಜನೆಗಳಾವುದು? ಕೋವಿಡ್ ವ್ಯಾಕ್ಸಿನ್ ಕಂಡುಹಿಡಿಯಲು ಸರ್ಕಾರ ಮೀಸಲಿಟ್ಟಿರುವ ಹಣ ಎಷ್ಟು? ಅದರಲ್ಲಿ ಎಷ್ಟು ಪ್ರಗತಿ ಸಾಧಿಸಿದೆ. ಇತರ ದೇಶಗಳು ವ್ಯಾಕ್ಸಿನ್ ಕಂಡುಹಿಡಿದರೆ ಅದನ್ನು ಭಾರತಕ್ಕೆ ತರುವಲ್ಲಿ ಸರ್ಕಾರ ಹಾಕುತ್ತಿರುವ ಶ್ರಮ ಎಷ್ಟು? ಯಾವುದರ ಬಗ್ಗೆಯೂ ಒಂದಿಷ್ಟೂ ಮಾತಾಡದ ಸರ್ಕಾರ ಹೊಸ ಸಂಸತ್ ಭವನ, ಅದರ ಸಾಂಸ್ಕೃತಿಕ ಹಿನ್ನೆಲೆಯ ಬಗ್ಗೆ ಗಂಟೆ ಗಟ್ಟಲೆ ಮಾತಾಡುತ್ತಿದೆ.
ನಮ್ಮ ಬೆಂಗಳೂರಿನ ಸಂಸದರು ಅತ್ಯಂತ ಹೆಮ್ಮೆಯ ಧ್ವನಿಯಲ್ಲಿ ಶಂಕುಸ್ಥಪಾನೆಯ ಪೂಜಾ ವಿಧಿ ನೆರವೇರಿಸಿದ್ದು ಕರ್ನಾಟಕದ ಪುರೋಹಿತರು ಎಂದು ಭಾಷಣ ಮಾಡುತ್ತಾರೆ. ಮತ್ತು ಒಂದು ದೊಡ್ಡ ಸಂಖ್ಯೆಯ ಜನ ಅದರಲ್ಲೂ ಯುವ ಜನ ಇಂತಹ ತಿಳಗೇಡಿತನವನ್ನು ಬೆಂಬಲಿಸುತ್ತಿದ್ದಾರೆ. ಭಾರತದಂತಹ ಬಹುತ್ವದ ದೇಶದಲ್ಲಿ ಇಂತಹ ಬೆಳವಣಿಗೆಗಳೇ ಕಳವಳಕಾರಿ.