ಇತ್ತೀಚೆಗಿನ ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ನೇತೃತ್ವದ ಟಿಆರ್ಎಸ್ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆಯಾದರೂ ಹೈದರಾಬಾದ್ ಪಾಲಿಕೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ತನ್ನ ಹಿಂದುತ್ವ ರಾಜಕಾರಣದ ಮೂಲಕ ಗಮನಾರ್ಹ ಸಾಧನೆ ಮಾಡಿದೆ ಎಂಬುದು ಮಾತ್ರ ವಾಸ್ತವ. ಬಿಜೆಪಿಯೂ ಈ ಹಿಂದಿನ ಚುನಾವಣೆಗಳಿಗಿಂತ ಈಗ ಅತೀ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಹೈದರಾಬಾದ್ನಲ್ಲಿ ತನ್ನ ನೆಲೆಯನ್ನು ಗಟ್ಟಿಮಾಡಿಕೊಂಡಿರುವ ಬಿಜೆಪಿಯ ಕಣ್ಣು ಈಗ ಮುಂದಿನ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆ ಮೇಲೆ ಬಿದ್ದಿದೆ. ಮುಂದಿನ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಈಗಿನಿಂದಲೇ ತಯಾರಿ ಶುರು ಮಾಡಿದೆ.
ಪಾಲಿಕೆ ಚುನಾವಣೆಯಲ್ಲಿ ಟಿಆರ್ಎಸ್ 55, ಬಿಜೆಪಿ 48, ಎಐಎಂಐಎಂ 44, ಕಾಂಗ್ರೆಸ್ 02 ಮತ್ತು ಪಕ್ಷೇತರ ಅಭ್ಯರ್ಥಿ 1 ಸ್ಥಾನ ಗೆದ್ದಿದ್ದಾರೆ. ಟಿಆರ್ಎಸ್ ಮತ್ತು ಬಿಜೆಪಿ ನಡುವೆ ಕೇವಲ 7 ಸ್ಥಾನಗಳ ವ್ಯತ್ಯಾಸ ಕಂಡುಬಂದರೂ ಒಟ್ಟಾರೆ ಮತಗಳಿಕೆಯಲ್ಲಿ ಕೇವಲ 10 ಸಾವಿರ ಮತಗಳು ಮಾತ್ರ ವ್ಯತ್ಯಾಸ. ಟಿಆರ್ಎಸ್ 12.06 ಲಕ್ಷ (35.81%) ಮತಗಳನ್ನು ಪಡೆದರೆ ಬಿಜೆಪಿ 11.95 ಲಕ್ಷ (35.56%) ಮತಗಳನ್ನು ತನ್ನದಾಗಿಸಿಕೊಂಡಿದೆ. ಹೀಗಾಗಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಟಿಆರ್ಎಸ್ಗಿಂತ ಬಿಜೆಪಿ ಕೇವಲ ಒಂದೆಜ್ಜೆ ಮಾತ್ರ ಹಿಂದಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಬಿಜೆಪಿಯೂ ಹೈದರಾಬಾದ್ ಪಾಲಿಕೆ ಚುನಾವಣೆ ಗೆಲ್ಲಲ್ಲು ಸಾಕಷ್ಟು ತಂತ್ರ ಹೆಣೆದಿತ್ತು. ಪಕ್ಷದ ಅಭ್ಯರ್ಥಿಗಳ ಪರವಾಗಿ ರಾಷ್ಟ್ರೀಯ ಬಿಜೆಪಿ ನಾಯಕರನ್ನು ಕರೆಸಿ ಅತ್ಯಂತ ಬಿರುಸಿನ ಪ್ರಚಾರ ಮಾಡಿಸಿತ್ತು. ತಾವು ಅಧಿಕಾರಕ್ಕೆ ಬಂದರೆ ಹೈದರಾಬಾದ್ ಹೆಸರನ್ನು ಭಾಗ್ಯನಗರ ಎಂದು ಮರುನಾಮಕರಣ ಮಾಡುವುದಾಗಿ ಘೋಷಿಸಿತು. ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಈ ವಿಚಾರ ಪದೇ ಪದೇ ಪುನರುಚ್ಚರಿಸಿದ್ದರು.
ಮೊದಲೇ ಸಿಎಂ ಕೆಸಿಆರ್ ಸರ್ಕಾರದ ಮೇಲೆ ಆಡಳಿತ ವಿರೋಧಿ ಅಲೆ ಇತ್ತು. ಇತ್ತೀಚೆಗೆ ಹೈದರಾಬಾದ್ನಲ್ಲಿ ಉಂಟಾದ ಪ್ರವಾಹವೂ ಜನರನ್ನು ಟಿಆರ್ಎಸ್ ಸರ್ಕಾರದ ವಿರುದ್ಧ ಕೆರಳಿಸಿತ್ತು. ಇದರೊಂದಿಗೆ ಬಿಜೆಪಿಯ ಹಿಂದುತ್ವ ರಾಜಕಾರಣವೂ ಟಿಆರ್ಎಸ್ ವಿರುದ್ಧ ಮತ ಹಾಕುವಂತೆ ಮಾಡಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಸಾಕ್ಷಿಯೇ ಇತ್ತೀಚೆಗೆ ಭಾರೀ ಮಳೆ ಮತ್ತು ಪ್ರವಾಹದಿಂದ ತತ್ತರಿಸಿದ ಸರೂರ್ನಗರ, ಹಯಾತ್ನಗರ, ಗಡಿಯನ್ನಾರಂ, ನಾಗೋಲ್, ಮೂಸರಂಬಾಗ್, ಅಂಬರ್ಪೆಟ್, ರಾಮಂತಪುರ, ಉಪ್ಪಲ್, ಕವಡಿಗುಡ, ಗಾಂಧಿನಗರ ಮತ್ತು ಮೈಲಾರ್ದೇವ್ಪಲ್ಲಿ ಪ್ರದೇಶಗಳಲ್ಲಿ ಬಿಜೆಪಿ ಗೆದ್ದಿರುವುದು.
ಇನ್ನೊಂದು ಕುತೂಹಲಕಾರಿ ಸಂಗತಿಯೆಂದರೆ ಪ್ರತ್ಯೇಕ ತೆಲಂಗಾಣ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ರಾಮ್ನಗರ, ಗಾಂಧಿನಗರ, ಕಚಿಗುಡ, ನಲ್ಲಕುಂತ, ಬಾಗ್ ಅಂಬರ್ಪೇಟೆ, ಮುಶೀರಬಾದ್ ಮುಂತಾದ ಪ್ರದೇಶಗಳನ್ನು ಟಿಆರ್ಎಸ್ ಭದ್ರಕೋಟೆ ಎಂದು ಕರೆಯಲಾಗುತ್ತಿತ್ತು. ಇಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು ಮಾತ್ರ ಮುಂಬರುವ ತೆಲಂಗಾಣ 2023 ವಿಧಾನಸಭಾ ಚುನಾವಣೆ ಗೆಲ್ಲಲು ಅಡಿಪಾಯ ಎನ್ನಬಹುದು.
ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕರ್ನಾಟಕವಾಯ್ತು, ತೆಲಂಗಣವಾಯ್ತು ಈಗ ಪಶ್ಚಿಮ ಬಂಗಾಳ, ಒಡಿಶಾ, ಆಂಧ್ರ ಪ್ರದೇಶ, ತಮಿಳು ನಾಡು, ಕೇರಳದಲ್ಲಿ ಬಿಜೆಪಿ ನೆಲೆಯನ್ನು ಭದ್ರಪಡಿಸಿಕೊಳ್ಳಬೇಕಿದೆ. ಈಗ ದಕ್ಷಿಣ ಭಾರತದತ್ತ ಗಮನಹರಿಸುತ್ತಿದೆ. ಕರ್ನಾಟಕ ಹೊರತುಪಡಿಸಿದೇ ಇನ್ನುಳಿದ ಉಳಿದ ರಾಜ್ಯಗಳಲ್ಲಿ ಬಿಜೆಪಿ ಅಷ್ಟಕ್ಕಷ್ಟೆ.
ಮುಂದಿನ ವರ್ಷ ತಮಿಳುನಾಡಿನಲ್ಲಿ ಚುನಾವಣೆ ನಡೆಯಲಿದೆ. ಇದಕ್ಕಾಗಿ ಬಿಜೆಪಿ ಭಾರೀ ಸಿದ್ಧತೆ ನಡೆಸಿದೆ. ಇದರ ಭಾಗವಾಗಿ ತಮಿಳುನಾಡಿನಲ್ಲಿ ಚಿತ್ರನಟಿ ಖುಷ್ಬೂ ಸುಂದರ್ ಅವರು ಕಾಂಗ್ರೆಸ್ ತೊರೆದು, ಬಿಜೆಪಿ ಸೇರಿದ್ದಾರೆ. ರಾಜ್ಯದಲ್ಲಿ ಮೈತ್ರಿಪಕ್ಷವಾದ ಎಐಎಡಿಎಂಕೆ ಜತೆಗಿದ್ದ ವೈಮನಸ್ಸನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸ್ವತಃ ಮಾತುಕತೆ ನಡೆಸಿ ಬಗೆಹರಿಸಿದ್ದಾರೆ. ರಾಜ್ಯದ ವಿಧಾನಸಭಾ ಚುನಾವಣೆಯನ್ನು ತನ್ನೆಲ್ಲಾ ಶಕ್ತಿಯನ್ನು ಬಳಸಿ ಬಿಜೆಪಿ ಎದುರಿಸಲಿದೆ ಎನ್ನುತ್ತಾರೆ ತಜ್ಞರು.