ಬಹುನಿರೀಕ್ಷಿತ ಹೈದರಾಬಾದ್ ಮಹಾನಗರ ಪಾಲಿಕೆ(GHMC) ಮತದಾನ ಎಣಿಕೆ ಪ್ರಕ್ರಿಯೆ ಶುರುವಾಗಿದೆ. ಚುನಾವಣೆಗೆ ರಾಜಕೀಯ ಪಕ್ಷಗಳ ಅಬ್ಬರದ ಪ್ರಚಾರ ನಡೆದಿದ್ದು, ಕೊನೆಯ ಸುತ್ತಿನ ಪ್ರಚಾರಕ್ಕೆ ಕೇಂದ್ರ ಬಿಜೆಪಿ ನಾಯಕರೇ ಆಗಮಿಸಿ ಜನಸೇನಾ-ಬಿಜೆಪಿ ಮೈತ್ರಿಯನ್ನು ಗೆಲ್ಲಿಸಲು ಯತ್ನಿಸಿದ್ದರು. ಅಚ್ಚರಿ ಅಂದರೆ ಹೈದರಾಬಾದ್ ಮಹಾನಗರ ಪಾಲಿಕೆ ಗೆಲ್ಲಲು ಬಿಜೆಪಿ, ಹೈದರಾಬಾದ್ ಹೆಸರು ಬದಲಾವಣೆ ಟ್ರಂಪ್ ಕಾರ್ಡ್ ಪ್ಲೇ ಮಾಡಿತ್ತು. ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಹೈದರಾಬಾದ್ ಹೆಸರನ್ನು ಭಾಗ್ಯನಗರ ಎಂದು ಬದಲಾಯಿಸುವುದಾಗಿ ಘೋಷಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಯುವ ಕಾರ್ಯದರ್ಶಿ, ಸಂಸದ ತೇಜಸ್ವಿ ಸೂರ್ಯ ನಂತರ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ವಿಷಯ ಪ್ರಸ್ತಾಪಿಸಿದ್ದರು. ಈಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಇದನ್ನೇ ಪುನರುಚ್ಚರಿಸಿದ್ದರು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಟಿಆರ್‌ಎಸ್ ಮತ್ತು ಎಐಎಂಐಎಂ ದುರಾಡಳಿತ ಕೊನೆಗೊಳಿಸಬೇಕಿದೆ. ಹಾಗಾಗಿ ಜನಸೇನಾ-ಬಿಜೆಪಿ ಮೈತ್ರಿಗೆ ಮತ ನೀಡಿ. ಡಿಸೆಂಬರ್ 1ನೇ ತಾರೀಕು ನಿಮ್ಮ ಮತಗಳು ಬಿಜೆಪಿಗೆ ಚಲಾಯಿಸಿ ಲೂಟಿಕೋರರಿಂದ ಹೈದರಾಬಾದ್ ಮುಕ್ತಗೊಳಿಸಿ ಭಾಗ್ಯನಗರವನ್ನಾಗಿಸಿ ಎಂದು ಬಿಜೆಪಿ ನಾಯಕರು ಪ್ರಚಾರ ಕಾರ್ಯಕ್ರಮದಲ್ಲಿ ಜನರ ಮುಂದಿಟ್ಟಿದ್ದರು.
ಫೈಜಾಬಾದ್ ಬದಲಾಯಿಸಿ ಅಯೋಧ್ಯಾ ಎಂದು ಹೆಸರಿಡಲಾಗಿದೆ. ಅಲಹಾಬಾದ್ ಬದಲಾಯಿಸಿ ಪ್ರಯಾಗ್ ರಾಜ್ ಎಂದು ನಾಮಕರಣ ಮಾಡಲಾಗಿದೆ. ಇದೇ ರೀತಿ ಹೈದರಾಬಾದ್ ಹೆಸರು ಭಾಗ್ಯನಗರ ಎಂದು ಯಾಕೇ ಬದಲಾಯಿಸಬಾರದು ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಪ್ರಶ್ನಿಸಿದ್ದರು. ಇನ್ನೊಂದೆಡೆ ಹೈದರಾಬಾದ್‌ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ನಿಜಾಮ್ ಸಂಸ್ಕೃತಿಯಿಂದ ಮುಕ್ತವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದರು.
ಬಿಜೆಪಿ ನಾಯಕರ ಹೇಳಿಕೆಗೆ ಸಿಎಂ ಕೆಸಿಆರ್ ಮತ್ತು ಓವೈಸಿ ಕೆಂಡಕಾರಿದ್ದಾರೆ. ಯಾವುದೇ ಕಾರಣಕ್ಕೂ ಹೈದರಾಬಾದ್ ಹೆಸರನ್ನು ಬದಲಾಯಿಸಲು ಬಿಡುವುದಿಲ್ಲ. ಯಾರಾದರೂ ನಗರದ ಹೆಸರು ಬದಲಾಯಿಸಲು ಯತ್ನಿಸಿದರೇ ಅವರ ಸಂತತಿಯೇ ನಶಿಸಿ ಹೋಗುತ್ತದೆಯೇ ಎಂದು ಟಾಂಗ್ ನೀಡಿದ್ದಾರೆ.
ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ ಮೇಲೆ ಬಿಜೆಪಿ ಹದ್ದಿನ ಕಣ್ಣು ಬಿದ್ದಿದೆ. ತೆಲಂಗಾಣ ವಿಧಾನಸಭೆಯ ಉಪ ಚುನಾವಣೆಯಲ್ಲಿ ಅಚ್ಚರಿ ಗೆಲುವು ಸಾಧಿಸಿರುವ ಬಿಜೆಪಿ, ಹೇಗಾದರೂ ಸರಿ ಮಹಾನಗರ ಪಾಲಿಕೆ ಚುನಾವಣೆ ಕೂಡ ಗೆಲ್ಲಲೇಬೇಕು ಎಂದು ಹೊರಟಿದೆ. ಈ ಮೂಲಕ ಸ್ಥಳೀಯ ಮಟ್ಟದಲ್ಲಿ ಪಕ್ಷ ಬಲಗೊಳಿಸುವ ಗುರಿ ಬಿಜೆಪಿಯದ್ದು.
2016ರಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ 150ರ ಪೈಕಿ 99 ಸ್ಥಾನಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಈ ಬಾರಿ ಗ್ರೇಟರ್ ಹೈದರಾಬಾದ್ ಮುನ್ಸಿಪಾಲ್ ಕಾರ್ಪೊರೇಷನ್ ಚುನಾವಣೆ ಗೆಲ್ಲಲ್ಲು ಟಿಆರ್‌ಎಸ್, ಕಾಂಗ್ರೆಸ್, ಬಿಜೆಪಿ, ಎಐಎಂಐಎಂ ಕೂಡ ಸೆಣಸಾಡುತ್ತಿವೆ.
150 ಸದಸ್ಯರ ಆಯ್ಕೆಗಾಗಿ ಡಿಸೆಂಬರ್ 1ರಂದು ಮತದಾನದ ನಡೆಯಲಿದೆ. ಡಿಸೆಂಬರ್ 4ರಂದು ಮತ ಎಣಿಕೆಯಾಗಲಿದೆ. ಗ್ರೇಟರ್ ಹೈದರಾಬಾದ್ ಮುನ್ಸಿಪಾಲ್ ಕಾರ್ಪೊರೇಷನ್ ವ್ಯಾಪ್ತಿಗೆ 20 ವಿಧಾನಸಭಾ ಕ್ಷೇತ್ರಗಳು ಬರಲಿದ್ದು, 74 ಲಕ್ಷ ಮತದಾರರು ಇದ್ದಾರೆ.