ಭಾರತದ 12 ಸಾವಿರ ವರ್ಷಗಳ ಇತಿಹಾಸ, ಸಂಸ್ಕೃತಿ ಮತ್ತು ಜಗತ್ತಿನ ಇತರ ಸಂಸ್ಕೃತಿಗಳೊಂದಿಗಿನ ಸಂಪರ್ಕದ ಬಗ್ಗೆ ಅಧ್ಯಯನ ನಡೆಸಲು ಕೇಂದ್ರ ಸರ್ಕಾರ 16 ಸದಸ್ಯರ ತಜ್ಞರ ಸಮಿತಿ ರಚಿಸಿದ್ದು, ಆ ಸಮಿತಿಯಲ್ಲಿ ದಕ್ಷಿಣ ಭಾರತೀಯರಾಗಲಿ, ಮಹಿಳೆಯರಾಗಲಿ ಇಲ್ಲದಿರುವುದನ್ನು ಕರ್ನಾಟಕ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಖಂಡಿಸಿದ್ದಾರೆ.
ಸಮಿತಿ ರಚಿಸಿರುವ ಕೇಂದ್ರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಕುಮಾರಸ್ವಾಮಿ ಸಮಿತಿಯ ಪುನರಚನೆ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ಕುರಿತಂತೆ ಸರಣಿ ಟ್ವೀಟ್ ಮಾಡಿದ ಎಚ್ ಡಿ ಕೆ, ಭಾರತದ 12 ಸಾವಿರ ವರ್ಷಗಳ ಇತಿಹಾಸ, ಸಂಸ್ಕೃತಿ ಮತ್ತು ಜಗತ್ತಿನ ಇತರ ಸಂಸ್ಕೃತಿಗಳೊಂದಿಗಿನ ಸಂಪರ್ಕದ ಬಗ್ಗೆ ಅಧ್ಯಯನ ನಡೆಸಲು ಕೇಂದ್ರ ಸರ್ಕಾರ 16 ಸದಸ್ಯರ ತಜ್ಞರ ಸಮಿತಿ ರಚಿಸಿದೆ. ಆದರೆ ಇದರಲ್ಲಿ ಕನ್ನಡಿಗರಾಗಲಿ, ದ್ರಾವಿಡ ಪರಂಪರೆಯ ಜ್ಞಾನವಿರುವ ದಕ್ಷಿಣ ಭಾರತೀಯರಾಗಲಿ, ಮಹಿಳೆಯರಾಗಲಿ ಇಲ್ಲವೇ ಇಲ್ಲವಾಗಿರುವುದು ದುರದೃಷ್ಟಕರ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಕನ್ನಡಿಗ ಪ್ರತಿನಿಧಿಗಳೇ ಇಲ್ಲದೇ ಕರ್ನಾಟಕದ ಚರಿತ್ರೆ, ಪರಂಪರೆಯ ನಿಷ್ಪಕ್ಷಪಾತ ಅಧ್ಯಯನ ಸಾಧುವೆ? ದಕ್ಷಿಣ ಭಾರತೀಯರಿಲ್ಲದೇ ಒಟ್ಟು ಭಾರತದ ಇತಿಹಾಸ ಅಧ್ಯಯನಕ್ಕೆ ಒಳಪಡುವುದಾದರೂ ಹೇಗೆ? ಈ ದೇಶವನ್ನು ಅಂಬೆಗೆ ಹೋಲಿಸಿದವರು ನಾವು. ಹೆಣ್ಣನ್ನು ಪೂಜಿಸುವ ದೇಶದ ಸಂಸ್ಕೃತಿ ಅಧ್ಯಯನ ಮಾಡುವ ಸಮಿತಿಯಲ್ಲಿ ಮಹಿಳೆಗೆ ಸ್ಥಾನವೇ ಇಲ್ಲವಾಗಿದ್ದು ಹೇಗೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಅಲ್ಲದೆ, ಇತಿಹಾಸ, ಸಂಸ್ಕೃತಿ ವಿಚಾರವಾಗಿ ಪೂರ್ವಾಗ್ರಹಗಳನ್ನು ಹೊಂದಿರುವಂತೆ ಕಾಣುವ,ಉತ್ತರ ಭಾರತೀಯರೇ ತುಂಬಿರುವ ಈ ಸಮಿತಿ ನಡೆಸುವ ಅಧ್ಯಯನದ ವಸ್ತುನಿಷ್ಠತೆ ಬಗ್ಗೆ ಅನುಮಾನಗಳು ದಟ್ಟವಾಗಿವೆ. ಸಮಿತಿಯ ಪುನಾರಚನೆ ಮಾಡುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೂಡಲೇ ನಿರ್ಧಾರ ಕೈಗೊಳ್ಳಲ್ಲಿ ಎಂದು ಆಗ್ರಹಿಸಿದ್ದಾರೆ.